ಗಾಂಜಾ ಮಾರಾಟ: ಮೂವರ ಬಂಧನ

Update: 2019-11-07 18:14 GMT

ಬೆಂಗಳೂರು, ನ.7: ಚಾಕೋಲೇಟ್ ಡಬ್ಬಗಳ ಅಡಿಯಲ್ಲಿಟ್ಟುಕೊಂಡು ಅಕ್ರಮವಾಗಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಮೂವರು ಅಂತರ್‌ರಾಜ್ಯ ಮಾದಕವಸ್ತು ಸಾಗಾಣಿಕೆದಾರರನ್ನು ವರ್ತೂರು ಪೊಲೀಸರು ಬಂಧಿಸಿದ್ದಾರೆ.

ಯಾರಿಗೂ ಅನುಮಾನ ಬಾರದಂತೆ ಮೇಲೆ ಚಾಕೋಲೇಟ್ ಡಬ್ಬಗಳನ್ನಿಟ್ಟುಕೊಂಡು, ಅಕ್ರಮವಾಗಿ ಗಾಂಜಾ ಸಾಗುತ್ತಿದ್ದರು. ಬಂಧಿತ ಆರೋಪಿಗಳಿಂದ 30 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು ಒಂದು ತಿಂಗಳಿನಿಂದ ಗಾಂಜಾ ಸಾಗಾಣಿಕೆದಾರರ ಬೆನ್ನು ಬಿದ್ದದ್ದ ಪೊಲೀಸರು ಆರೋಪಿಗಳ ಪತ್ತೆಗಾಗಿ ಸಿಗರೇಟ್ ಮಾರುವವರ ವೇಷ ಧರಿಸಿ ಕಾರ್ಯಾಚರಣೆ ನಡೆಸಿದ್ದರು.

ಅಂತಿಮವಾಗಿ ಬುಧವಾರ ಹಾಗೂ ಗುರುವಾರ ಪೊಲೀಸರು ನಡೆಸಿದ ಕಾರ್ಯಾಚರಣೆಯ ಶ್ರಮ ಫಲ ನೀಡಿದ್ದು, ಮೂವರು ಅಂತರ್‌ರಾಜ್ಯ ಗಾಂಜಾ ಸಾಗಾಣಿಕೆದಾರರು ಬಲೆಗೆ ಬಿದ್ದಿದ್ದಾರೆ.

ಶಿವಕುಮಾರ್ ಅಲಿಯಾಸ್ ಯರ್ಲಾ ಶಿವಕುಮಾರ್(34)ನನ್ನು ಬಂಧಿಸಿ 10 ಕೆ.ಜಿ.ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈತ ಆಂಧ್ರಪ್ರದೇಶ ಅನಂತಪುರ ಜಿಲ್ಲೆ ನೆಲಮಾಡ ಬಳಿಯ ರೆಡ್ಡಿವಾರಪಲ್ಲಿ ಗ್ರಾಮದವನಾಗಿದ್ದು, ಬುಧವಾರ ಸಂಜೆ ತನ್ನ ಏಜೆಂಟ್‌ಗೆ ಗಾಂಜಾ ಮಾರಾಟ ಮಾಡಲು ಬಂದಿದ್ದರು.

ಗುರುವಾರ ಬೆಳಗ್ಗೆ 8.30 ರ ಸುಮಾರಿನಲ್ಲಿ ಕಾರ್ಮೆಲಾರಂ ರೈಲ್ವೆ ಸ್ಟೇಷನ್ ಬಳಿ ಕಾರ್ಯಾಚರಣೆ ನಡೆಸಿದ ವರ್ತೂರು ಪೊಲೀಸರು ಏಜೆಂಟರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಒಡಿಶಾದ ಕಂದಮಾಲ ಜಿಲ್ಲೆಯ ಕನೂರಿಗಾನ್‌ನ ರತ್ನಾಕರ್ ಸಾಹು(41) ಮತ್ತು ಪಂಕಜ್ ಡಿಗಾಲ್ ಎಂಬ ಇಬ್ಬರನ್ನು ಬಂಧಿಸಿ 20 ಕೆ.ಜಿ.ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟಾರೆ ಮೂರು ಲಕ್ಷ ಮೌಲ್ಯದ 30 ಕೆ.ಜಿ.ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅಂದಾಜಿಸಲಾಗಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಹೆಚ್ಚಾಗಿದೆ ಎಂಬ ದೂರುಗಳಿದ್ದವು. ವೈಟ್‌ಫೀಲ್ಡ್, ವರ್ತೂರು, ಮಾರತಹಳ್ಳಿ, ಎಚ್‌ಎಸ್‌ಆರ್ ಲೇಔಟ್, ಮಡಿವಾಳ, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ಏಜೆಂಟ್‌ಗಳ ಮೂಲಕ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯಿದೆ. ಇದನ್ನಾಧರಿಸಿ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಾ, ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News