ನವೆಂಬರ್ 8: ದೇಶದ ಆರ್ಥಿಕತೆಯ ಬೆನ್ನಿಗೆ ಇರಿದ ದಿನ

Update: 2019-11-08 05:28 GMT

ಅನಿರೀಕ್ಷಿತವಾಗಿ ಟಿವಿಯಲ್ಲಿ ಬಂದು ‘500 ಮತ್ತು 1000 ರೂಪಾಯಿ ಮುಖ ಬೆಲೆಯ ನೋಟುಗಳು ನಿಷೇಧ ಮಾಡುತ್ತಿದ್ದೇನೆ’’ ಎಂದು ನರೇಂದ್ರ ಮೋದಿಯವರು ಘೋಷಿಸಿದಾಗ ದೇಶದ ದೊಡ್ಡ ಸಂಖ್ಯೆಯ ಜನರು ಅದರಲ್ಲೂ ಬಡವರು ಮತ್ತು ಮಧ್ಯಮವರ್ಗ ರೋಮಾಂಚನಗೊಂಡಿದ್ದರು. ‘ದೇಶದೊಳಗಿರುವ ಕಪ್ಪು ಹಣಗಳೆಲ್ಲ ಹೊರಬರುತ್ತವೆ’ ಎಂದು ಅವರು ನಿರೀಕ್ಷಿಸಿದ್ದರು. ದೇಶಕ್ಕೆ ಒಳ್ಳೆಯದಾಗುವುುದಾದರೆ ‘ಬ್ಯಾಂಕ್‌ನ ಮುಂದೆ ಕ್ಯೂ ನಿಲ್ಲುವುದಕ್ಕೆ ಸಿದ್ಧ’ ಎಂದು ಮೋದಿಯ ಜೊತೆ ಕೈ ಜೋಡಿಸಿದ್ದರು. ‘ಈ ದೇಶದ ಸೈನಿಕರು ಹಗಲು ರಾತ್ರಿ ಗಡಿ ಕಾಯುತ್ತಿರುವಾಗ, ನಾವು ನಮ್ಮ ದೇಶಕ್ಕಾಗಿ ಒಂದು ದಿನ ಕ್ಯೂನಲ್ಲಿ ನಿಲ್ಲುವುದು ಕಷ್ಟವೇ?’ ಎಂದು ತಮ್ಮ ತ್ಯಾಗವನ್ನು ಸೈನಿಕರ ಜೊತೆಗೆ ಸಮೀಕರಿಸಿಕೊಂಡು ಸಮಾಧಾನಿಸಿಕೊಂಡಿದ್ದರು. ಇನ್ನು ಕೆಲವೇ ದಿನಗಳಲ್ಲಿ ಈ ದೇಶದ ಅಂಬಾನಿ, ಅದಾನಿಯಂತಹ ಕುಳಗಳು ಬೀದಿಗೆ ಬೀಳುತ್ತವೆ. ಅವರಿಂದ ಖಜಾನೆಗೆ ತುಂಬಿಸಿದ ಹಣ ಬಡವರ ಖಾತೆಗೆ ಬಂದು ಬೀಳುತ್ತದೆ ಎನ್ನುವ ಭ್ರಮೆಯಲ್ಲಿ ದೇಶವಿತ್ತು.

ದುರದೃಷ್ಟವಶಾತ್ ಅಂತಹದೇನೂ ಸಂಭವಿಸಲೇ ಇಲ್ಲ. ನೋಟು ನಿಷೇಧವಾದಾಗ ಯಾವ ದೊಡ್ಡ ಶ್ರೀಮಂತರೂ ಬ್ಯಾಂಕ್‌ನ ಮುಂದೆ ಸರದಿ ಸಾಲಿನಲ್ಲಿ ನಿಲ್ಲಲೇ ಇಲ್ಲ. ಅಂದರೆ ದೇಶದೊಳಗೆ ಕಪ್ಪು ಹಣವೇ ಇದ್ದಿರಲಿಲ್ಲವೇ? ಇದ್ದಿದ್ದರೆ ಅವೆಲ್ಲವು ಎಲ್ಲಿಗೆ ಹೋದವು? ನೋಟು ನಿಷೇಧದಿಂದ ಬ್ಯಾಂಕ್‌ಗೆ ಬಂದು ಬಿದ್ದದ್ದು ಮಧ್ಯಮವರ್ಗ ತಮ್ಮ ಬೆವರು ಸುರಿಸಿ ಬಚ್ಚಿಟ್ಟ ಹಣ. ಅಗತ್ಯಕ್ಕಿರಲಿ ಎಂದು ಐದು ಲಕ್ಷವೋ, ಹತ್ತು ಲಕ್ಷವೋ ಮನೆಯೊಳಗೆ ಇಟ್ಟುಕೊಂಡವರು ಆ ನೋಟುಗಳ ಜೊತೆಗೆ ಬ್ಯಾಂಕ್ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಾಯಿತು. ತಮ್ಮದೇ ಹಣವನ್ನು ಪಡೆಯುವುದಕ್ಕೆ ಒಂದು ಸಣ್ಣ ಹೋರಾಟವೇ ನಡೆಸಬೇಕಾಯಿತು. ಎಟಿಎಂಗಳ ಮುಂದೆ ಜನರ ನೂಕು ನುಗ್ಗಲು, ಬ್ಯಾಂಕ್‌ಗಳ ಮುಂದೆ ಗದ್ದಲ ಇತ್ಯಾದಿಗಳು ದೇಶದಲ್ಲಿ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿಯನ್ನು ನಿರ್ಮಾಣ ಮಾಡಿತು. ಜನರ ಹಾಹಾಕಾರ ಹೆಚ್ಚಾದಾಗ ಸ್ವತಃ ಪ್ರಧಾನಿಯವರು ಮತ್ತೊಮ್ಮೆ ಟಿವಿಯ ಮುಂದೆ ಬಂದು ‘‘ನನಗೆ ಐವತ್ತು ದಿನ ಸಮಯ ಕೊಡಿ. ಎಲ್ಲ ಸರಿಯಾಗುತ್ತದೆ. ಇಲ್ಲವಾದರೆ ನನ್ನನ್ನು ಜೀವಂತ ಬೆಂಕಿ ಹಚ್ಚಿ ಕೊಂದುಬಿಡಿ’’ ಎನ್ನುವ ಹೇಳಿಕೆಯನ್ನು ನೀಡಿದರು. ಆದರೆ ಇದೀಗ ಮೂರು ವರ್ಷ ಸಂದಿದೆ. ನೋಟು ನಿಷೇಧವನ್ನು ಯಾವ ಕಾರಣಕ್ಕಾಗಿ ಮಾಡಲಾಯಿತು? ಇದರಿಂದ ದೇಶಕ್ಕಾದ ಲಾಭವೇನು? ದೇಶದ ಖಜಾನೆಗೆ ಬಂದ ಕಪ್ಪು ಹಣವೆಷ್ಟು? ನಷ್ಟವೆಷ್ಟು, ಲಾಭವೆಷ್ಟು? ಯಾವ ಪ್ರಶ್ನೆಗೂ ಅವರು ಈವರೆಗೆ ಉತ್ತರಿಸಿಲ್ಲ.

ನೋಟು ನಿಷೇಧ ಮತ್ತು ಆನಂತರದ ಆತುರಾತುರದಲ್ಲಿ ಮಾಡಿರುವ ಆರ್ಥಿಕ ಸುಧಾರಣೆಗಳು ಸಣ್ಣ ಉದ್ದಿಮೆಗಳನ್ನು ಸರ್ವನಾಶ ಮಾಡಿತು. ಗ್ರಾಮೀಣ ಮತ್ತು ನಗರಪ್ರದೇಶಗಳಲ್ಲಿ ನಿರುದ್ಯೋಗ ಹೆಚ್ಚಿತು. ಅಂದ ಹಾಗೆ ನೋಟು ನಿಷೇಧದ ಬಳಿಕ, ಬಿಜೆಪಿ ಜಗತ್ತಿನಲ್ಲೇ ಅತಿ ದೊಡ್ಡ ಶ್ರೀಮಂತ ಪಕ್ಷ ಎಂದು ಗುರುತಿಸಿಕೊಂಡಿದೆ. ಜೊತೆಗೆ ಅಮಿತ್ ಶಾ ಅವರ ಪುತ್ರನ ವ್ಯವಹಾರಗಳು ಕೂಡ ಲಾಭದಾಯಕವಾಗಿವೆ. ಆದರೆ ಅವರು ಮಾಡುತ್ತಿರುವ ವ್ಯವಹಾರಗಳು ಏನು? ಅವರ ಉದ್ದಿಮೆ ಈ ದೇಶದ ಎಷ್ಟು ಜನರಿಗೆ ಉದ್ಯೋಗಗಳನ್ನು ನೀಡುತ್ತಿವೆ ಎನ್ನುವುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಕಪ್ಪು ಹಣ ಬರಲಿಲ್ಲ ಎಂದಾಕ್ಷಣ ದೇಶದಲ್ಲಿ ಕಪ್ಪು ಹಣ ಇರಲಿಲ್ಲ ಎಂದು ಅರ್ಥವಲ್ಲ. ಈ ದೇಶದ ಮಠಗಳು, ದೇವಸ್ಥಾನಗಳು ಕಪ್ಪ್ಪು ಹಣದ ಸ್ವಿಸ್‌ಬ್ಯಾಂಕ್‌ಗಳು ಎಂದು ಹಿಂದೊಮ್ಮೆ ಆರ್ಥಿಕ ತಜ್ಞರು ಬಣ್ಣಿಸಿದ್ದರು. ಮಠ, ಮಂದಿರ, ವಿವಿಧ ಟ್ರಸ್ಟ್‌ಗಳ ಮೂಲಕ ಅತಿ ಹೆಚ್ಚು ಕಪ್ಪು ಹಣಗಳು ಬಿಳಿಯಾಗಿವೆ. ಈ ದೇಶದಲ್ಲಿ ಬಹುತೇಕ ಟ್ರಸ್ಟ್‌ಗಳಿರುವುದು ಕಪ್ಪು ಹಣವನ್ನು ಬಿಳಿ ಮಾಡುವುದಕ್ಕೆ. ಇದೇ ಸಂದರ್ಭದಲ್ಲಿ ನೋಟು ನಿಷೇಧಕ್ಕೆ ಮುನ್ನವೇ ಅದಾನಿ, ಅಂಬಾನಿಯಂತಹ ಉದ್ಯಮಿಗಳು ಭಾರೀ ಪ್ರಮಾಣದಲ್ಲಿ ಭೂ ವ್ಯವಹಾರಗಳನ್ನು ನಡೆಸಿದ್ದಾರೆ. ಅಮಿತ್ ಶಾ ಸೇರಿದಂತೆ ಹಲವು ರಾಜಕಾರಣಿಗಳ ಸಂಪರ್ಕಗಳಿರುವ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಬಿಳಿಯಾಗಿವೆ.

ನೋಟು ನಿಷೇಧದ ಮಾಹಿತಿ ಸೋರಿಕೆಯಾಗಿತ್ತು ಎನ್ನುವುದು ಬರೇ ಶಂಕೆ ಮಾತ್ರವಲ್ಲ. ನೋಟು ನಿಷೇಧದಂತಹ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ, ಆರ್ಥಿಕ ತಜ್ಞರ ಸಲಹೆಗಳನ್ನು ಪಡೆಯುವುದು ಅತ್ಯಗತ್ಯವಾಗಿತ್ತು. ಆದರೆ ಅಂತಹ ಮುತ್ಸದ್ದಿ ಆರ್ಥಿಕ ತಜ್ಞರೇ ನರೇಂದ್ರಮೋದಿಯ ಜೊತೆಯಲ್ಲಿ ಇರಲಿಲ್ಲ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ವೆತ್ತ ಆರ್ಥಿಕ ತಜ್ಞ ರಘುರಾಮ್ ರಾಜನ್ ಅವರ ಬದಲಿಗೆ ತಮ್ಮ ಮೂಗಿನ ನೇರಕ್ಕಿರುವ ಊರ್ಜಿತ್ ಪಟೇಲ್‌ರನ್ನು ಆರ್‌ಬಿಐ ಗವರ್ನರ್ ಆಗಿ ನೇಮಿಸಿ, ನೋಟು ನಿಷೇಧದಂತಹ ತೀರ್ಮಾವನ್ನು ತೆಗೆದುಕೊಳ್ಳಲಾಯಿತು. ಖಡಕ್ ಚಹಾ’ ಎಂದು ಮೋದಿ ಈ ಕ್ರಮವನ್ನು ಬಣ್ಣಿಸಿದ್ದರು. ಸಿ ದರ್ಜೆಯ ಪ್ರೇಕ್ಷಕರನ್ನು ಗುರಿ ಮಾಡಿ ತೆಗೆದ ‘ಟೈಗರ್ ಪ್ರಭಾಕರ್’ ನಾಯಕತ್ವದ ಮಾಸಾಲೆ ಸಿನೆಮಾದಂತಿತ್ತು ‘ನೋಟು ನಿಷೇಧ’. ಸರಕಾರ ಹೊರಡಿಸಿದ 2000 ರೂಪಾಯಿ ನೋಟುಗಳು ಇನ್ನೊಂದು ಪ್ರಮಾದವಾಗಿತ್ತು. ಈ ನೋಟು ಬ್ಯಾಂಕ್‌ಗಳಲ್ಲಿ ಚಲಾವಣೆಗೊಂಡ ಬೆನ್ನಿಗೇ, ಕೋಟಿ ಗಟ್ಟಲೆ ಖೋಟಾನೋಟುಗಳು ಪತ್ತೆಯಾದವು. ಕಪ್ಪು ಹಣ ಬರಲಿಲ್ಲ, ಭಯೋತ್ಪಾದನೆ ನಿಲ್ಲಲಿಲ್ಲ, ಡಾಲರ್ ಮುಂದೆ ರೂಪಾಯಿಯ ಬೆಲೆ ಹೆಚ್ಚಲಿಲ್ಲ, ತೈಲ ಬೆಲೆ ಇಳಿಯಲಿಲ್ಲ, ದಿನಸಿಗಳ ಬೆಲೆ ಏರುತ್ತಲೇ ಹೋಯಿತು. ನೋಟು ನಿಷೇಧ ಮೋದಿ ಆಡಳಿತದ ‘ಹಿಮಾಲಯನ್ ಬ್ಲಂಡರ್’ ಆಗಿತ್ತು.

ಇತ್ತೀಚೆಗೆ ನರೇಂದ್ರ ಮೋದಿ ಹಿರಿಯ ಐಎಎಸ್ ಅಧಿಕಾರಿಗಳ ಸಭೆಯಲ್ಲಿ ಗಂಭೀರ ಹೇಳಿಕೆಯೊಂದನ್ನು ನೀಡಿದರು. ‘‘ನನ್ನ ಮೊದಲ ಐದು ವರ್ಷಗಳನ್ನು ವ್ಯರ್ಥಗೊಳಿಸಿದಿರಿ. ಆದರೆ ಈ ಬಾರಿ ಅದಕ್ಕೆ ಅವಕಾಶ ನೀಡುವುದಿಲ್ಲ’’ ಎಂದು ಅವರು ಅಧಿಕಾರಿಗಳಿಗೆ ಛೀಮಾರಿ ಹಾಕಿದರು. ಈ ಮಾತುಗಳಲ್ಲಿ ಹಲವು ಧ್ವನಿಗಳಿವೆ. ಮುಖ್ಯವಾಗಿ ‘ತನ್ನ ನೇತೃತ್ವದ ಮೊದಲ ಐದು ವರ್ಷಗಳ ಆಡಳಿತ ವ್ಯರ್ಥವಾಗಿದೆ’ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಆದರೆ ಕಳೆದ ಐದು ವರ್ಷಗಳ ಆಡಳಿತದಲ್ಲಿ ಮೋದಿಯೇ ಸಕಲವೂ ಆಗಿ ಬಿಂಬಿತರಾಗಿದ್ದರು. ರಕ್ಷಣೆ, ವಿದೇಶಾಂಗ, ಆರ್ಥಿಕ ಸಹಿತ ಎಲ್ಲ ಖಾತೆಗಳನ್ನು ಮೋದಿಯೇ ಪರೋಕ್ಷವಾಗಿ ನಿರ್ವಹಿಸುತ್ತಿದ್ದರು. ಇದೀಗ ಮೋದಿ ‘ವೈಫಲ್ಯಗಳನ್ನು’ ಅಧಿಕಾರಿಗಳ ತಲೆಗೆ ಕಟ್ಟಿ ತನಗೆ ತಾನೇ ಕ್ಲೀನ್‌ಚಿಟ್ ಕೊಡಲು ಹೊರಟಿದ್ದಾರೆ. ಕಳೆದ ಐದುವರ್ಷಗಳ ಆಡಳಿತದ ಪ್ರಮುಖ ನಿರ್ಧಾರ ‘ನೋಟು ನಿಷೇಧ’ವೇ ಆಗಿತ್ತು. ತನ್ನ ಹೇಳಿಕೆಯ ಮೂಲಕ ಮೋದಿಯವರು ಪರೋಕ್ಷವಾಗಿಯಾದರೂ ‘ನೋಟು ನಿಷೇಧ ವ್ಯರ್ಥವಾಗಿದೆ’ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಒಂದು ದೇಶವನ್ನು ಆಳುವ ಪ್ರಧಾನಿ ಯೋಗ್ಯ ಅಧಿಕಾರಿಗಳನ್ನು ಹೊಂದುವುದು ಅತ್ಯುತ್ತಮ ಆಡಳಿತಕ್ಕೆ ಅನಿವಾರ್ಯವಾಗಿದೆ. ಅನುಪಯುಕ್ತ ಅಧಿಕಾರಿಗಳನ್ನು ತಮ್ಮ ಅಕ್ಕಪಕ್ಕದಲ್ಲಿಟ್ಟುಕೊಂಡು ‘ಅಧಿಕಾರಿಗಳು ನನ್ನ ಐದು ವರ್ಷಗಳ ಆಡಳಿತವನ್ನು ವ್ಯರ್ಥಗೊಳಿಸಿದರು’ ಎಂದು ಆರೋಪಿಸುವುದರಲ್ಲಿ ಏನು ಅರ್ಥವಿದೆ?

ನೋಟು ನಿಷೇಧ ಸ್ವತಂತ್ರ ಭಾರತದ ಅತಿ ದೊಡ್ಡ ಹಗರಣವಾಗಿದೆ. ಸಂಘಪರಿವಾರ, ಕಾರ್ಪೊರೇಟ್ ವಲಯದ ನಿರ್ದಿಷ್ಟ ಕೆಲವು ಶಕ್ತಿಗಳು ಸರಕಾರವನ್ನು ಬಳಸಿಕೊಂಡು ನಡೆಸಿದ ಹಗರಣ ಇದು. ಬೆರಳೆಣಿಕೆಯ ಜನರಿಗಾಗಿ ಇಡೀ ದೇಶದ ಹಿತಾಸಕ್ತಿಯನ್ನು ಈ ಮೂಲಕ ಬಲಿಕೊಡಲಾಗಿದೆ. ದೇಶದ ಆರ್ಥಿಕತೆಯ ಬೆನ್ನಿಗೆ ಹಾಡಹಗಲೇ ಇರಿಯಲಾಗಿದೆ. ಇರಿದವರೇ ಇದೀಗ ಮೊಸಳೆ ಕಣ್ಣೀರು ಸುರಿಸುತ್ತಾ ಅದಕ್ಕೆ ಚಿಕಿತ್ಸೆ ನೀಡುವ ನಾಟಕವಾಡುತ್ತಿದ್ದಾರೆ. ಇಂತಹ ನಾಟಕಗಳು ಆರ್ಥಿಕತೆಗೆ ಚೇತರಿಕೆಯನ್ನು ತಂದೀತು ಎಂದು ನಂಬುವುದು ಹೇಗೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News