ಬ್ರಿಟಿಷ್ ಸರಕಾರ ಈ ದೇಶದಲ್ಲಿ ನಿಷ್ಕ್ರಿಯವಾಗಿದೆ

Update: 2019-11-07 18:39 GMT

ಈ ಮೊದಲೇ ಪ್ರಕಟಿಸಿದಂತೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಪುಣೆ, ನಾಸಿಕ್ ಜಿಲ್ಲೆ ಸೇರಿದಂತೆ ಇನ್ನಿತರ ಜಿಲ್ಲೆಗಳ ಸಮಾಜದ ಜನರ ವತಿಯಿಂದ ಆಯೋಜಿಸಿದ್ದ ಮಾನಪತ್ರ ಸನ್ಮಾನ ಮತ್ತು ದೇಣಿಗೆ ಸಮಾರಂಭ ಅತ್ಯಂತ ಸಡಗರ ಸಂಭ್ರಮ ಮತ್ತು ಅದ್ದೂರಿಯಿಂದ ಜರುಗಿದವು. ಮುಂಬೈನ ದಾಮೋದರ್ ಹಾಲ್‌ನ ಹಿಂದಿನ ಜಾಗದಲ್ಲಿ ಭವ್ಯ ಆಸನಗಳನ್ನು ಇರಿಸಿ ವೇದಿಕೆಯನ್ನು ರಾಜ ದರ್ಬಾರ್‌ನಂತೆ ಶೃಂಗರಿಸಲಾಗಿತ್ತು. ಈ ಸಮಾರಂಭಕ್ಕೆ ಪರ ಊರಿನಿಂದ ಜನರು ಆಗಮಿಸಿದ್ದರು. ಸರಿಸುಮಾರು 8-10 ಸಾವಿರ ಜನರ ಉಪಸ್ಥಿತಿ ಸಭೆಯಲ್ಲಿತ್ತು. ವೇದಿಕೆ ಮೇಲೆ ಡಾ. ಬಿ.ಆರ್.ಅಂಬೇಡ್ಕರ್, ಅಧ್ಯಕ್ಷ ರಾವ್‌ಬಹಾದ್ದೂರ್ ಬೋಲೆ ಮತ್ತು ಡಾ. ಸೋಳಂಕಿ ಆಸೀನರಾಗಿದ್ದರು.

ಅವರೊಂದಿಗೆ ಸಹಸ್ರಬುದ್ಧೆ, ದೇವರಾಯ ನಾಯಿಕ, ಭಾಯಿ ಪ್ರಧಾನ್, ಡಾ. ಪ್ರಧಾನ್, ಶ್ರೀಮತಿ ಸರಳಾಬಾಯಿ ಪ್ರಧಾನ್, ಪ್ರೊ. ಕಂಗಲೆ, ಶ್ರೀಮತಿ ಗೀತಾಬಾಯಿ ಕಂಗಲೆ, ಅಸವೇಕರ್, ಕವಳಿ, ಕಾಂಡಕೆ, ಬಾಯಿ ಚಿತ್ರೆ, ಕಮಲಾಕಾಂತ ಚಿತ್ರೆ, ರಣಖಾಂಬೆ, ಭಾವುರಾವ್ ಗಾಯಕವಾಡ್, ದಾನಿ, ಕಾಳೆ ಮತ್ತು ಜಾಧವ್ ಸೇರಿದಂತೆ ಇನ್ನಿತರರು ಇದ್ದರು. ಸಮಾರಂಭದ ನಿರ್ವಹಣೆಗಾಗಿ ಮಾಹಿಮ್ ಚಾಳ್, ನಾಯಗಾವ್, ಡಿಲಾಯಿಲ್ ರಸ್ತೆ, ಸೈತಾನ್ ಚೌಕಿ, ಫತ್ತರಬಂದರ್, ಕರಿರೋಡ್. ವಾಡಿಯಾ ಹಾಸ್ಪಿಟಲ್, ಸ್ಯಾಂಡಹರ್ಟ್ ರೋಡ್, ಕೋಳಿವಾಡಾ, ಕ್ಲಾರ್ಕ್ ರೋಡ್, ಅರ್ಥರ್ ರೋಡ್, ವಡಾಳ್, ಶಿವ, ಮಾತುಂಗಾ ಇತ್ಯಾದಿ ಸ್ಥಳಗಳಿಂದ ಸುಮಾರು 500ಕ್ಕೂ ಹೆಚ್ಚು ಸಮತಾ ಸೈನಿಕದಳ ಸ್ವಯಂಸೇವಕರು ನಿಯೋಜಿಸಲ್ಪಟ್ಟಿದ್ದರು.

ದಿವಾಕರ್ ನೇವಾಜಿ ಪಗರೆ ಅವರು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ ಎಸ್. ಕೆ. ಬೋಲೆ ಅವರ ಹೆಸರನ್ನು ಶಂಕರರಾವ್ ಲಿಂಬಾಜಿ ಓಝರಕರ್ ಅನುಮೋದಿಸಿದರು. ವಿಧಾನ ಪರಿಷತ್ ಸದಸ್ಯ ಎಸ್. ಕೆ. ಬೋಲೆ ಅಧ್ಯಕ್ಷ ಸ್ಥಾನ ಅಲಂಕರಿಸಿ ತಮ್ಮ ಪ್ರಾಸ್ತಾವಿಕದಲ್ಲಿ, ‘‘ಸೇರಿರುವ ಜನಸ್ತೋಮ ನೋಡಿದ ಮೇಲೆ ನಿಮ್ಮಲ್ಲಿ ಆಗಿರುವ ಜಾಗೃತಿ ನೋಡಿ ಸಂತಸವಾಗುತ್ತಿದೆ. ನಿಮ್ಮನ್ನು ದೀರ್ಘ ನಿದ್ರೆಯಿಂದ ಬಡಿದೆಬ್ಬಿಸಿದ ಶ್ರೇಯಸ್ಸು ಡಾ. ಅಂಬೇಡ್ಕರ್ ಅವರು ನಮ್ಮ ಸಮಾಜದಲ್ಲಿ ಜನ್ಮ ತಾಳಿದ್ದು ನಮ್ಮ ಸಮಾಜದ ಭಾಗ್ಯ, ಜಗತ್ತಿನ ಯಾವುದೇ ಭಾಗದಲ್ಲಿ ಮುಖಂಡರಾಗುವ ಅರ್ಹತೆ ಅವರಿಗೆ ಇದೆ. ಕೇವಲ ಅವರ ಗ್ರಂಥಾಲಯ ನೋಡಿದರೆ ಅವರ ಓದು ಯಾವ ಪ್ರಮಾಣದ್ದು ಎನ್ನುವುದನ್ನು ಕಲ್ಪನೆ ಮಾಡಿಕೊಳ್ಳಬಹುದು. ದುಂಡು ಮೇಜಿನ ಪರಿಷತ್ ಸಭೆಯ ವೇಳೆ ಸಂವಿಧಾನಕ್ಕೆ ಸಂಬಂಧಿಸಿದ ಅನೇಕ ಗ್ರಂಥಗಳನ್ನು ಅವರು ತಮ್ಮ ಸ್ವಂತ ಖರ್ಚಿನಿಂದ ಖರೀದಿಸಿದ್ದಾರೆ.

ಕೆಲವರು ಅವರದ್ದು ಜಾತಿವಾದಿ ದೃಷ್ಟಿಕೋನ ಎಂದು ಮಾಡುವ ಆರೋಪ ಶುದ್ಧ ಸುಳ್ಳು ಎನ್ನುವುದು ಸೈಮನ್ ಕಮಿಷನ್‌ಗೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟವಾಗಿದೆ. ರಾಷ್ಟ್ರವಾದಿ ಚಿಂತಕರು ಕೂಡ ಆ ಸಂದರ್ಭದಲ್ಲಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಿಗರ್ವಿಯಾಗಿರುವ ಅಂಬೇಡ್ಕರ್ ಅವರಿಗೆ ಸರಕಾರ ಜೆ. ಪಿ. ಪದವಿ ನೀಡುವುದಕ್ಕೆ ಮುಂದೆ ಬಂದರೂ ಅವರು ಅದನ್ನು ತಿರಸ್ಕರಿಸಿದ್ದರು. ದುಂಡು ಮೇಜಿನ ಪರಿಷತ್ತಿನ ಸಭೆಯಲ್ಲಿನ ಭಾಷಣ ಅವರ ನಿಸ್ಪಹತೆಗೆ ಸಾಕ್ಷಿಯಾಗಿದ್ದರೆ, ಮುಂಬೈ ಕೌನ್ಸಿಲ್‌ನಲ್ಲಿ ಅವರಂತಹ ಶ್ರೇಷ್ಠ ವಾಕ್ಪಟು ಸಿಗುವುದು ಅತ್ಯಂತ ವಿರಳ. ಮೂರೂ ದುಂಡು ಮೇಜಿನ ಪರಿಷತ್‌ಗೆ ಮತ್ತು ಈಗಿನ ಜಂಟಿ ಸಂಸದೀಯ ಸಮಿತಿಗೆ ಯಾವ ಪ್ರಯತ್ನ ಮಾಡದಿದ್ದರೂ ಅವರನ್ನು ಸೇರಿಸಿಕೊಳ್ಳುತ್ತಿರುವುದನ್ನು ಗಮನಿಸಿದರೆ ಅವರ ಅರ್ಹತೆ ಏನು ಎನ್ನುವುದು ಮನದಟ್ಟಾಗುತ್ತದೆ. ಇನ್ನು ಮುಂದೆಯೂ ಕೂಡ ಅವರ ಕಾರ್ಯಕ್ಷೇತ್ರವನ್ನು ಅರ್ಹತೆಯ ಆಧಾರದ ಮೇಲೆ ವಿಸ್ತರಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾರೆ ಎನ್ನುವುದರಲ್ಲಿ ನನಗೆ ಸಂಶಯ ಇಲ್ಲ’’ ಎಂದರು.

ನಾಸಿಕ್ ಜಿಲ್ಲೆಯ ವತಿಯಿಂದ ಪಿ.ಎಲ್. ಲೋಖಂಡೆ ಓದಿದ ಮಾನಪತ್ರವನ್ನು ಬೆಳ್ಳಿಯ ಪಾತ್ರೆಯಲ್ಲಿರಿಸಿ ಅಧ್ಯಕ್ಷರ ಮುಖಾಂತರ ಡಾ. ಅಂಬೇಡ್ಕರ್ ಅವರಿಗೆ 501 ರೂಪಾಯಿ ದೇಣಿಗೆಯೊಂದಿಗೆ ಸಮರ್ಪಿಸಲಾಯಿತು. ಇದರ ಬಳಿಕ ಪುಣೆ ಜಿಲ್ಲೆಯ ವತಿಯಿಂದ ಹರಿಭಾವು ಹನುಮಂತ ರೋಖಡೆ ಅವರು ಚಿನ್ನದ ಕಟ್ಟು ಹಾಕಿದ ಮಾನಪತ್ರ ಓದಿ ಅಧ್ಯಕ್ಷರ ಮುಖಾಂತರ ಹಸ್ತಾಂತರಿಸಿದರು.

ಪುಣೆ ಜಿಲ್ಲೆ ವತಿಯಿಂದ ಕಾಣಿಕೆ ನೀಡುವ ಸಂದರ್ಭದಲ್ಲಿ ಶಾಂತಾರಾಮ್ ಅನಾಜಿ ಉಪಶಾಮ್, ಡಾ. ಅಂಬೇಡ್ಕರ್ ಅವರಿಗೆ ತಮ್ಮ ಕೆಲಸದಲ್ಲಿ ಅನುಕೂಲವಾಗಲಿ ಎಂದು ಹೇಳಿ ಅಧ್ಯಕ್ಷರ ಮುಖಾಂತರ ಡಾ.ಅಂಬೇಡ್ಕರ್ ಅವರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಹೇಳಿದರು. ಬಳಿಕ ನಾಯಗಾವ ಚಾಳ್ ವಾಸಿಗಳಿಂದ 19 ರೂಪಾಯಿ ನೀಡಿದ ವಿಠಲ ತಾನಾಜಿ ಸಾಕರೆ, ಸಮಯಾಭಾವದ ಕಾರಣ ಹೆಚ್ಚು ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿಲ್ಲ. ಹೀಗಾಗಿ ಡಾ. ಅಂಬೇಡ್ಕರ್ ಅವರು ನಮ್ಮ ಅಲ್ಪಕಾಣಿಕೆ ಸ್ವೀಕರಿಸಬೇಕು ಎಂದು ವಿನಂತಿಸಿದರು. ಟ್ರಾಮ್ ಕಂಪನಿ ಚಾಳ್‌ನ ಪಂಚರಿಂದ ಡಾ. ಅಂಬೇಡ್ಕರ್ ಅವರಿಗೆ 50 ರೂಪಾಯಿ ನೀಡಲಾಯಿತು. ಬೋರ್ ಸಂಸ್ಥಾನದ ಕೆಲವರು 17 ರೂಪಾಯಿ ದೇಣಿಗೆ ನೀಡಿದರು.

ಸಮತಾ ಸೈನಿಕ ದಳದ ವತಿಯಿಂದ ಡಾ.ಅಂಬೇಡ್ಕರ್ ಅವರಿಗೆ ಹಾರ ಸಮರ್ಪಿಸಿದ ಸಾಳವಿ ಅವರು ಅಂಬೇಡ್ಕರ್‌ರು ಸಮತಾ ಸೈನಿಕ ದಳದ ಸೈನಿಕರನ್ನು ಮಿಲಿಟರಿಗೆ ಸೇರಿಸುವ ಪ್ರಯತ್ನವನ್ನು ಮಾಡಬೇಕೆಂದು ವಿನಂತಿಸಿಕೊಂಡರು.

ಸನ್ಮಾನಕ್ಕುತ್ತರವಾಗಿ ಡಾ.ಅಂಬೇಡ್ಕರ್ ಅವರು ತಮ್ಮ ಭಾಷಣದಲ್ಲಿ..... ‘‘ಅಧ್ಯಕ್ಷರೇ, ಆತ್ಮೀಯ ಬಂಧು ಮತ್ತು ಭಗಿನಿಯರೇ, ಈ ಕಾರ್ಯಕ್ರಮ ತಾವೆಲ್ಲರೂ ಒಂದೇ ಸ್ಥಳದಲ್ಲಿ ಸೇರಿರುವುದು ನನಗೆ ತುಂಬ ಸಮಾಧಾನ ತಂದಿದೆ. ಒಂದು ವೇಳೆ ಈ ಮೊದಲೇ ತೀರ್ಮಾನಿಸಿದಂತೆ ವಿವಿಧ ಜಿಲ್ಲೆಯ ಜನರು ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮ ಮಾಡುವುದನ್ನು ತೀರ್ಮಾನಿಸಿದ್ದರೆ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ನನಗೆ ಅಸಾಧ್ಯದ ಮಾತು ಆಗಿತ್ತು. ಇಷ್ಟೊಂದು ಜನಸ್ತೋಮ ಇಲ್ಲಿ ಸೇರುವಂತಹ ಪ್ರಸಂಗ ಉದ್ಭವಿಸುತ್ತಿರಲಿಲ್ಲ. ಇನ್ನೊಂದು ವಿಷಯ ಎಂದರೆ ನಾಳೆ ತಾವೆಲ್ಲರೂ ಬಂದರಿಗೆ ಆಗಮಿಸಿ ಬೀಳ್ಕೊಡುವುದು ಬೇಡ, ಏಕೆಂದರೆ ನಾನು ಇಲ್ಲಿಯೇ ತಮ್ಮ ಹಾರೈಕೆ ಸ್ವೀಕರಿಸಿ ತೆರಳುತ್ತೇನೆ. ಬೀಳ್ಕೊಡುವ ಸಂದರ್ಭದಲ್ಲಿ ತಾವು ಮಾಡುವ ಗದ್ದಲ, ಜಯಕಾರದಿಂದ ನನಗೆ ಸಾಕಷ್ಟು ಗೊಂದಲ ಆಗುತ್ತದೆ. ನನ್ನೊಂದಿಗೆ ಹಡಗಿನಲ್ಲಿ ಪ್ರಯಾಣಿಸುವ ಇತರ ಪ್ರತಿನಿಧಿಗಳಿಗೂ ಸಂಕೋಚ ಆಗಬಹುದು. ಕೆಲವು ಪ್ರತಿನಿಧಿಗಳನ್ನು ಬೀಳ್ಕೊಡುವುದಕ್ಕೆ ನಾಲ್ಕು ಜನರೂ ಕೂಡ ಆಗಮಿಸಿರುವುದಿಲ್ಲ. ಆದರೆ ನಾನು ಮಾತ್ರ ಅದಕ್ಕೆ ಅಪವಾದ. ಏಕೆಂದರೆ ನನ್ನ ಬೀಳ್ಕೊಡುಗೆ ಸಂದರ್ಭದಲ್ಲಿ ಇರುವೆಗೂ ಜಾಗ ಸಿಗದಷ್ಟು ಜನರು ಬಂದರಿಗೆ ಆಗಮಿಸುತ್ತಾರೆ. ಬಡವರು ತಮ್ಮ ನಿತ್ಯ ಕೂಲಿ ಕೆಲಸ ಬಿಟ್ಟು ನನ್ನನ್ನು ಬೀಳ್ಕೊಡುವ ಅಗತ್ಯವಿಲ್ಲ. ಯಾವುದಾದರೂ ವಿಚಾರ ಪ್ರಸ್ತಾಪ ಮಾಡುವುದು ಇದ್ದರೆ ಇಲ್ಲಿಯೇ ಮಾಡಿ. ಮಾನಪತ್ರ ನೀಡಿರುವ ವಿವಿಧ ಜಿಲ್ಲೆಗಳ ಸಂಸ್ಥೆಯ ಪದಾಧಿಕಾರಿಗಳಿಗೆ ನಾನು ಆಭಾರಿಯಾಗಿದ್ದೇನೆ.

ಕಳೆದ ವಾರ ನಾನು ಅಹ್ಮದ್‌ನಗರ ಜಿಲ್ಲೆಯಲ್ಲಿ ಮಾಡಿದ ಭಾಷಣ ಇಷ್ಟು ತೀವ್ರತೆಯಲ್ಲಿ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸಿರಲಿಲ್ಲ. ಆದರೆ ನಿಮ್ಮೆಲ್ಲರಿಗೂ ಸಮಾಜಿಕ ಕೆಲಸಗಳ ಕುರಿತು ಅರಿವು ಮೂಡಿದ್ದರಿಂದ ಸಮಾಜಿಕ ಕೆಲಸ ಕಾರ್ಯಗಳಿಗೆ ಮತ್ತಷ್ಟು ವೇಗ ಬರಲಿದೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಮಾಡಿದ ಹಣ ಸಂಗ್ರಹಕ್ಕೆ ನಾನು ನಿಮ್ಮೆಲ್ಲರಿಗೆ ಆಭಾರಿಯಾಗಿದ್ದೇನೆ.

ಹಿಂದೆ ಮತ್ತು ಈಗ ನನಗೆ ಲಭಿಸಿರುವ ನಿಧಿಯನ್ನು ಸಾಮಾಜಿಕ ಕಾರ್ಯಗಳಿಗೆ ಉಪಯೋಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇನೆ. ಇದರ ಪ್ರಕಾರ ಸಮಾಜದ ಎಲ್ಲ ಜನರಿಗೆ ಜ್ಞಾನ ಲಭಿಸುವಂತಹ ಯೋಜನೆ ಮಾಡಬೇಕು ಎಂದು ಅನೇಕ ದಿನಗಳಿಂದ ವಿಚಾರ ಮಾಡುತ್ತಿದ್ದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಬೇಕು. ಹಾಗೆಯೇ ವಯಸ್ಕ ಸ್ತ್ರೀ-ಪುರುಷರಿಗೆ ಅತ್ಯುತ್ತಮ ಸುಧಾರಣೆಗಳಿಗೆ ಕಾರಣೀಭೂತರಾಗುವಂತಹ ಜ್ಞಾನ ಅವರಿಗೆ ನೀಡುವುದು ಅತ್ಯಗತ್ಯವಾಗಿದೆ. ಇಂತಹ ಜ್ಞಾನ ನೀಡುವ ನಾಲ್ಕಾಣೆ ವೌಲ್ಯದ ಪುಸ್ತಕ ಹೊರತರುವ ಸಂಸ್ಥೆ ಸ್ಥಾಪಿಸುವ ಉದ್ದೇಶ ನನ್ನಲ್ಲಿದ್ದು, ಇದಕ್ಕಾಗಿ ಇಲ್ಲಿಯವರೆಗೆ ದೊರೆತ ಹಣ ಉಪಯೋಗಿಸಲಾಗುವುದು ಎಂದು ಹೇಳಿದರು.

ದುಂಡು ಮೇಜಿನ ಪರಿಷತ್ತಿನ ವಿಷಯ ಈಗ ಹಳೆಯದಾಗಿರುವ ಕಾರಣ ಅದರ ಬಗ್ಗೆ ವಿಶೇಷ ಸಂಗತಿಗಳನ್ನು ಇಲ್ಲಿ ಉಲ್ಲೇಖಿಸುವ ಅಗತ್ಯ ಇಲ್ಲ ಎಂದು ಭಾವಿಸುತ್ತೇನೆ. ದುಂಡು ಮೇಜಿನ ಪರಿಷತ್ತಿನ ಮೂರು ಸಭೆಗಳು ಮುಗಿದು ಈಗ ಕೊನೆಯ ನಾಲ್ಕನೇ ಸಭೆ ನಡೆಯಲಿದ್ದು, ಈ ಕಾರಣಕ್ಕೆ ಯಾವುದೇ ಹೇಳಿಕೆ ನೀಡುವುದು ನನಗೆ ಇಷ್ಟವಿಲ್ಲ. ಒಂದು ವಿಷಯವಂತೂ ನಿಜ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅಸ್ಪಶ್ಯರ ಕೆಲಸ ನನ್ನ ಕೊರಳಿಗೆ ಸುತ್ತಿ ಹಾಕಿಕೊಂಡಿತ್ತು. ಬಹುಶಃ ಅದಿರದೇ ಹೋಗಿದ್ದರೆ ನನ್ನ ರಾಜಕಾರಣ ಬೇರೆಯದ್ದೇ ಆಗಿರುತ್ತಿತ್ತು. ಅಸ್ಪಶ್ಯರಿಗೆ ನೀಡಬೇಕಿರುವ ಹಕ್ಕುಗಳಿಗಾಗಿ ಬ್ರಿಟಿಷರೊಂದಿಗೆ ವಾದಕ್ಕೆ ಇಳಿದಿದ್ದರೆ ಗಾಂಧೀಜಿ ಅವರಿಂದ ನನಗೆ ಲಾಭವಾಗುತ್ತಿರಲಿಲ್ಲ. ಗಾಂಧೀಜಿ ಅವರೊಂದಿಗೆ ಕೈಜೋಡಿಸಿದ್ದರೆ ಬ್ರಿಟಿಷರು ಅಸ್ಪಶ್ಯರನ್ನು ಕೈಬಿಡುವಂತಹ ಆತಂಕದ ಪರಿಸ್ಥಿತಿ ಎದುರಿಸುತ್ತಿದ್ದ ಕಾರಣ ರಾಷ್ಟ್ರರಾಜಕಾರಣದತ್ತ ಗಮನ ಕೇಂದ್ರೀಕರಿಸಲು ಚಿಂತನೆ ಮಾಡುತ್ತಿದ್ದೆ. ಭಾರತದಲ್ಲಿ ಎಂತಹದ್ದೇ ಸ್ವರಾಜ್ ಬರಲಿ ಅದರಿಂದ ಅಸ್ಪಶ್ಯರಿಗೆ ಲಾಭವಾಗಲಿದೆ ಎಂದು ನನಗೆ ಆತ್ಮವಿಶ್ವಾಸ ಮೂಡಿದೆ. ಈ ವಿಚಾರದಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವುದಕ್ಕೆ ಪ್ರಯತ್ನಿಸುತ್ತೇನೆ, ಕೇವಲ ಅಸ್ಪಶ್ಯರ ಕೆಲಸಗಳ ಮೇಲೆ ಇನ್ನೂ ಹೆಚ್ಚಿನ ಗಮನ ನೀಡುವ ಅಗತ್ಯ ಇಲ್ಲವೆಂದು ಭಾವಿಸುತ್ತೇನೆ.

ಅಸ್ಪೃಶ್ಯರಿಗೆ ಕೇವಲ ರಾಜಕೀಯ ಅಧಿಕಾರ ಲಭಿಸಿದರೂ ಉಪಯೋಗವಿಲ್ಲ. ಅದು ಕೈಯಲ್ಲಿದ್ದು ಆಡಳಿತ ಬ್ರಿಟಿಷರ ಕೈಯಲ್ಲಿದ್ದರೆ 15,20, ಇಲ್ಲವೇ 25 ಸ್ಥಾನಗಳ ಪ್ರಾತಿನಿಧಿತ್ವ ಲಭಿಸಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಪಂಕ್ತಿ ಭೋಜನದಲ್ಲಿ ಕುಳಿತುಕೊಳ್ಳುವ ಹಕ್ಕು ದೊರೆತ ಮೇಲೆ ನಮಗೆ ತೃಪ್ತಿಯಾಗುವಷ್ಟು ಅನ್ನ ಲಭಿಸುತ್ತದೋ ಇಲ್ಲವೋ ಎನ್ನುವುದರತ್ತ ಗಮನ ಹರಿಸಬೇಕಾಗುತ್ತದೆ. ಅದೇ ರೀತಿ ಬ್ರಿಟಿಷ್ ಸರಕಾರದಿಂದ ಈ ದೇಶಕ್ಕೆ ವಿಶೇಷ ಸೌಲಭ್ಯಗಳು ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ನಾನು ವಾದ ಮಂಡಿಸಲಿದ್ದೇನೆ. ವಿದೇಶಗಳಿಗೆ ಭೇಟಿ ನೀಡಿ ಮರಳುವ ನಮ್ಮ ಜನರು ನಮ್ಮ ದೇಶದಲ್ಲಿರುವ ಬಡತನ, ಇಲ್ಲಿನ ಅನಾರೋಗ್ಯ ಪೀಡಿತ ಜನರನ್ನು ನೋಡಿ ಕಂಗಾಲಾಗುತ್ತಾರೆ. ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಬಡಜನತೆ ಇದ್ದರೂ ಅದನ್ನು ಬಗೆಹರಿಸಲು ಇಲ್ಲಿ ಒಂದೇ ಒಂದು ವ್ಯವಸ್ಥೆ ಇಲ್ಲ. ಇದನ್ನೆಲ್ಲ ನೋಡಿದರೆ ಇಂಗ್ಲೆಂಡ್‌ನಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಆರ್ಥಿಕ ಸಾಮರ್ಥ್ಯವಿಲ್ಲದ ಬಡ ರೋಗಿಗಳಿಗೆ ಅಲ್ಲಿ ಸರಕಾರವೇ ವೈದ್ಯಕೀಯ ಸೇವೆ ನೀಡುತ್ತದೆ. ಒಂದು ವೇಳೆ ವ್ಯಕ್ತಿಯೊಬ್ಬ ನಿರುದ್ಯೋಗಿಯಾದರೂ ಅಂತಹ ವ್ಯಕ್ತಿಗೆ ಉದ್ಯೋಗ ಲಭಿಸುವವರೆಗೆ ನಿರುದ್ಯೋಗ ವೇತನ ನೀಡುತ್ತದೆ.

ಅರುವತ್ತು ವಯಸ್ಸಿಗಿಂತ ಹೆಚ್ಚಿನ ನಿರ್ಗತಿಕ ವೃದ್ಧರಿಗೆ ಸರಕಾರ ವೃದ್ಧಾಪ್ಯ ವೇತನ ನೀಡುತ್ತದೆ. ಬಡವರಿಂದ ಅಧಿಕ ಬಾಡಿಗೆ ವಸೂಲಿ ಮಾಡುವುದಕ್ಕೆ ಸರಕಾರ ನಿರ್ಬಂಧ ವಿಧಿಸಿದ್ದಲ್ಲದೆ ಸರಕಾರದಿಂದಲೇ ಮನೆ ಮಾಲಕನಿಗೆ ಸರಕಾರಿ ಅನುದಾನ ನೀಡಿ ಮನೆ ಬಾಡಿಗೆ ಹೆಚ್ಚಿಸದಂತೆ ಷರತ್ತು ಹಾಕುತ್ತದೆ.

ಇಂಗ್ಲೆಂಡ್‌ನಲ್ಲಿ ಪ್ರಥಮ ಶಿಕ್ಷಣ ಉಚಿತ ಮತ್ತು ಕಡ್ಡಾಯಗೊಳಿಸಲಾಗಿರುವುದರ ಜೊತೆಗೆ ಉಚಿತ ಕಾಲೇಜು ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಬ್ರಿಟಿಷ್ ಸರಕಾರ ಈ ದೇಶದಲ್ಲಿ ಇಂತಹ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ.

 ಮುಂಬೈ ಗಿರಣಿ ಮಾಲಕರು ಕಾರ್ಮಿಕ ವೇತನ ಕಡಿಮೆಗೊಳಿಸಿ ತೊಂದರೆ ನೀಡುತ್ತಿರುವುದರಿಂದ ಕಾರ್ಮಿಕರು ಮುಷ್ಕರಕ್ಕೆ ಇಳಿಯುತ್ತಿದ್ದಾರೆ. ಆದರೆ ಸರಕಾರ ಇತ್ತ ಗಮನ ಹರಿಸುತ್ತಿಲ್ಲ. ಇಂಗ್ಲೆಂಡ್ ಜರ್ಮನಿಯಲ್ಲಿ ಇಂತಹ ಮುಷ್ಕರ ಪ್ರಾರಂಭವಾಗಿದ್ದರೆ ಅಲ್ಲಿನ ಸರಕಾರ ಮೌನಕ್ಕೆ ಶರಣಾಗುತ್ತಿರಲಿಲ್ಲ.

ಶಾಂತಿ ಸೌಹಾರ್ದ ಕಾಪಾಡುವುದಷ್ಟೇ ನಮ್ಮ ಕರ್ತವ್ಯವೆಂದು ಇಲ್ಲಿನ ಸರಕಾರ ಭಾವಿಸಿರುವ ಕಾರಣ ಇಲ್ಲಿನ ಜನರಿಗೆ ಯಾವುದೇ ಸುಖ ಸೌಲಭ್ಯಗಳು ದೊರೆಯುವುದು ಸಾಧ್ಯವಿಲ್ಲ. ದೇಶಕ್ಕಾಗಿ ಹಾಗೂ ನಿಮಗಾಗಿ ಆದರೂ ಇಲ್ಲಿನ ಜನರ ಕೈಗೆ ಅಧಿಕಾರ ಸಿಗುವುದು ಅತ್ಯಗತ್ಯವಾಗಿರುವ ಕಾರಣ ಬ್ರಿಟಿಷ್ ಸರಕಾರದ ಹಿಡಿತದಿಂದ ಅಧಿಕಾರ ಕಿತ್ತುಕೊಳ್ಳುವುದಕ್ಕೆ ಪ್ರಯತ್ನಿಸುತ್ತೇನೆ. ನನಗೆ ನೀಡಿರುವ ಒಂದು ಮಾನಪತ್ರದಲ್ಲಿ ‘ಸುಧಾಮನ ಅವಲಕ್ಕಿಯಂತೆ ನಮ್ಮ ಚಿಕ್ಕ ಕಾಣಿಕೆ ಸ್ವೀಕರಿಸಿ’ ಎಂದು ಹೇಳಲಾಗಿದೆ. ಆದರೆ ಸುಧಾಮನ ಅವಲಕ್ಕಿಯಿಂದ ಏನೂ ಆಗದು. ಸ್ವರ್ಗದಲ್ಲಿ ನಿಮಗೆ ಉತ್ತಮ ಸ್ಥಾನ ಲಭಿಸಲಿ ಎಂದು ನಾನು ಪ್ರಯತ್ನಿಸುವುದೂ ಇಲ್ಲ ಮತ್ತು ಅದು ನನ್ನ ಕೆಲಸವೂ ಅಲ್ಲ. ಈ ಲೌಕಿಕ ಜಗತ್ತಿನಲ್ಲಿ ನಿಮ್ಮ ಕಷ್ಟ ಪರಿಹಾರ ಆಗಿ ನಿಮಗೆ ಸುಖ ಶಾಂತಿ ಲಭಿಸಬೇಕು ಎನ್ನುವುದರತ್ತ ಮಾತ್ರ ನನ್ನ ಪ್ರಯತ್ನ. ಇದಕ್ಕೆ ಹಣ ಬೇಕಾಗುತ್ತದೆ ಅದನ್ನು ನಿಮ್ಮಿಂದ ಪಡೆದುಕೊಳ್ಳುತ್ತೇನೆ ಮತ್ತು ನೀವು ನನಗೆ ಕೊಡಲೇಬೇಕಾಗುತ್ತದೆ

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News