ಬಡ-ಮಧ್ಯಮ ವರ್ಗದ ಜನರ ಬದುಕು ಕಸಿದುಕೊಂಡ ದಿನ: ಸಿದ್ದರಾಮಯ್ಯ

Update: 2019-11-08 14:14 GMT

ಬೆಂಗಳೂರು, ನ.8: ಪ್ರಧಾನಿ ನರೇಂದ್ರ ಮೋದಿ 500 ಹಾಗೂ ಒಂದು ಸಾವಿರ ರೂ.ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಇಂದಿಗೆ(ನವೆಂಬರ್ 8) ಮೂರು ವರ್ಷಗಳಾಗಿದ್ದು, ಇಂದಿನ ದಿನವನ್ನು ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಕಸಿದುಕೊಂಡು ದಿನವೆನ್ನುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಟ್ವೀಟ್‌ಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದಿನವನ್ನು ನೋಟು ನಿಷೇಧಗೊಂಡ ದಿನ ಎನ್ನುವುದಕ್ಕಿಂತ, ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಕಸಿದುಕೊಂಡ ದಿನವೆನ್ನುವುದೇ ಸೂಕ್ತ. ಅಂದು ಬ್ಯಾಂಕುಗಳ ಮುಂದಿನ ಸರತಿ ಸಾಲಿನಲ್ಲಿ ಆರಂಭಗೊಂಡ ಸಾವಿನ ಸರಪಳಿ ಇಂದಿಗೂ ಜನರ ವ್ಯಾಪಾರ, ಉದ್ಯೋಗವನ್ನು ಕಸಿದುಕೊಳ್ಳುತ್ತಾ ಬಡ ಜನರ ಬಲಿ ಪಡೆಯುತ್ತಲೇ ಇದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸರಿಯಾದ ಪೂರ್ವ ತಯಾರಿಯಿಲ್ಲದ ನೋಟು ನಿಷೇಧದಿಂದಾಗಿ ಇದುವರೆಗೂ ದೇಶದಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಉದ್ಯೋಗ ಸೃಷ್ಟಿಸಬೇಕಿದ್ದ ಸರಕಾರ ಯುವ ಜನರಿಗೆ ಪಕೋಡ ಮಾರುವಂತೆ ಸಲಹೆ ನೀಡಿರುವುದು ದೊಡ್ಡ ದುರಂತ ಎಂದು ಅವರು ಟೀಕಿಸಿದ್ದಾರೆ.

ನೋಟು ನಿಷೇಧದ ನಂತರ ಇಳಿಕೆಯ ಹಾದಿ ಹಿಡಿದಿದ್ದ ದೇಶದ ಜಿಡಿಪಿ ದರ ಈಗ ಕೋಮಾ ಸ್ಥಿತಿಯಲ್ಲಿದೆ. ಪ್ರಸಕ್ತ ವರ್ಷದ ಜಿಡಿಪಿ ಶೇ.5 ರಷ್ಟಿದ್ದು, ಇದು ಹಿಂದಿನ 7 ವರ್ಷಗಳಲ್ಲೇ ಅತ್ಯಂತ ಕನಿಷ್ಠದ್ದಾಗಿದೆ. ದೇಶದ ವಿತ್ತ ಸಚಿವರ ಪತಿಯೇ ಸರಕಾರದ ಆಡಳಿತ ನೀತಿಗಳ ವೈಫಲ್ಯ ಕುರಿತು ಲೇಖನ ಬರೆದಿರುವುದು ಗಮನಾರ್ಹ ವಿಚಾರ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಸರಕಾರದ ಆರ್ಥಿಕ ನೀತಿಗಳ ವೈಫಲ್ಯಕ್ಕೆ ಅಧಿಕಾರಿಗಳನ್ನು ಹೊಣೆ ಮಾಡುವ ನರೇಂದ್ರ ಮೋದಿ, ಬಾಲಾಕೋಟ್ ದಾಳಿಯ ಶ್ರೇಯವನ್ನು ಮಾತ್ರ ತಮ್ಮದೇ ಸಾಧನೆ ಎಂಬಂತೆ ಬಿಂಬಿಸಿಕೊಂಡಿದ್ದು ವಿಪರ್ಯಾಸ. ರಿಸರ್ವ್ ಬ್ಯಾಂಕಿನ ಅನುಮತಿಯಿಲ್ಲದೆ ಸರಕಾರ ನೋಟು ನಿಷೇಧಿಸಿದ್ದರಿಂದ ಆದ ಅನಾಹುತಗಳಿಗೆ ಹೊಣೆ ಯಾರು? ಎಂದು ಅವರು ಪ್ರಶ್ನಿಸಿದ್ದಾರೆ.

ನೋಟು ನಿಷೇಧದ ಪ್ರಮುಖ ಉದ್ದೇಶಗಳಲ್ಲಿ ಭಯೋತ್ಪಾದನೆ ನಿಯಂತ್ರಣ ಒಂದು ಎಂದು ಸರಕಾರ ಹೇಳಿತ್ತು. ಆದರೆ ಯುಪಿಎ ಅವಧಿಗೆ ಹೋಲಿಕೆ ಮಾಡಿದರೆ ಎನ್‌ಡಿಎ ಅವಧಿಯಲ್ಲಿ ಭಯೋತ್ಪಾದಕ ದಾಳಿ ಪ್ರಮಾಣ ಶೇ.176 ಹೆಚ್ಚಿದೆ. ಮೋದಿಯವರ ಅವಧಿಯಲ್ಲಿ ಈವರೆಗೆ 1706 ಭಯೋತ್ಪಾದಕ ದಾಳಿಗಳಾಗಿವೆ. ಹಾಗಾದರೆ ನೋಟು ನಿಷೇಧದಿಂದಾದ ಉಪಯೋಗ ಏನು? ಸಿದ್ದರಾಮಯ್ಯ ಕೇಳಿದ್ದಾರೆ.

ನೋಟು ರದ್ದತಿಯ ನಂತರ ಕುಂಟುತ್ತಾ ಸಾಗುತ್ತಿದ್ದ ಸೇವಾ ವಲಯದ ಪ್ರಗತಿ, ಪ್ರಸಕ್ತ ಹಣಕಾಸು ವರ್ಷದ 3ನೇ ತ್ರೈಮಾಸಿಕ ಆರಂಭದಲ್ಲಿಯೇ ತೀವ್ರ ಕುಸಿತದ ಹಾದಿ ಹಿಡಿದಿದೆ. ನಿರಂತರ ಏರಿಕೆ ಕಾಣುತ್ತಿರುವ ಕಚ್ಚಾ ಸಾಮಗ್ರಿಗಳ ಬೆಲೆ ಸೇರಿದಂತೆ ನೋಟು ರದ್ಧತಿಯ ದುಷ್ಪರಿಣಾಮಗಳು ಇದಕ್ಕೆ ಮುಖ್ಯ ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News