'ನಾಲ್ಕನೇ ಶನಿವಾರವೂ ರಜೆ': ಮುಖ್ಯಮಂತ್ರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ

Update: 2019-11-08 17:47 GMT

ಬೆಂಗಳೂರು, ನ.8: ರಾಜ್ಯ ಸರಕಾರಿ ನೌಕರರಿಗೆ ಹಲವಾರು ವರ್ಷಗಳಿಂದಲೂ ತಿಂಗಳ ಎರಡನೇ ಶನಿವಾರ ರಜೆ ನೀಡಲಾಗುತ್ತಿದೆ. ಹಾಗೆಯೇ ಇತ್ತೀಚೆಗೆ ನಾಲ್ಕನೇ ಶನಿವಾರವನ್ನೂ ರಜಾ ದಿನವನ್ನಾಗಿ ಘೋಷಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ನಾಲ್ಕನೇ ಶನಿವಾರವನ್ನು ರಜಾ ದಿನವನ್ನಾಗಿ ಘೋಷಿಸಿದ ಸಂದರ್ಭದಲ್ಲಿ ಸರಕಾರಿ ನೌಕರರಿಗಿದ್ದ ವಾರ್ಷಿಕ 15 ಸಾಂದರ್ಭಿಕ ರಜೆಗಳನ್ನು 10 ದಿನಗಳಿಗೆ ಇಳಿಕೆ ಮಾಡಲಾಗಿತ್ತು. ಇತರೆ ಸರಕಾರಿ ನೌಕರರಂತೆಯೇ ಅದು ಶಾಲಾ ಶಿಕ್ಷಕ ಸಮುದಾಯಕ್ಕೂ ಅನ್ವಯವಾಗಿದೆ ಎಂದು ತಿಳಿಸಿದ್ದಾರೆ.

ಶಾಲಾ ಶಿಕ್ಷಕರಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇರುವುದಿಲ್ಲ. ಆದರೂ ಅವರಿಗೆ ನೀಡಲಾಗುತ್ತಿದ್ದ ಸಾಂದರ್ಭಿಕ ರಜೆಗಳನ್ನು ವಾರ್ಷಿಕ 10 ದಿನಗಳಿಗೆ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂಬ ಕೂಗು ಕೇಳಿಬರುತ್ತಿದೆ ಎಂದು ತಿಳಿಸಿದ್ದಾರೆ. ಈ ಆಗ್ರಹವು ನ್ಯಾಯೋಚಿತವಾಗಿರುವುದರಿಂದ ಶಿಕ್ಷಕ ಸಮುದಾಯಕ್ಕೆ ಅನ್ವಯವಾಗುವಂತೆ ಅವರಿಗೆ 15 ದಿನಗಳ ಸಾಂದರ್ಭಿಕ ರಜೆಗಳನ್ನು ಮೊದಲಿನಂತೆ ಮುಂದುವರೆಸಲು ಸರಕಾರದ ರಜಾ ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಅವರು, ಮುಖ್ಯಮಂತ್ರಿಗೆ ಬರೆದಿರುವ ಪತ್ರದೊಂದಿಗೆ ಪ್ರಸ್ತಾವನೆಯನ್ನು ಲಗತ್ತಿಸಿ ಕಳುಹಿಸಿ ಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News