ಸರಕಾರಗಳು ಬದಲಾದಂತೆ ಪಠ್ಯದ ವಸ್ತುಗಳು ಬದಲಾಗಬೇಕೇ?

Update: 2019-11-08 18:28 GMT

‘‘ಆತ್ಮೀಯ ಕನ್ನಡಿಗರೇ ವಂದನೆಗಳು,

ಸ್ವತಂತ್ರ ಭಾರತದ ಸುವರ್ಣ ಮಹೋತ್ಸವ ಆಚರಿಸುತ್ತಿರುವ ತಮಗೆಲ್ಲ ಅಭಿನಂದನೆಗಳು, ನಾನು ಸಾಧಿಸದೇ ಇದ್ದುದನ್ನು ನೀವು ಸಾಧಿಸಿರುವಿರಿ, ನನ್ನ ಕನಸನ್ನು ನನಸಾಗಿ ಮಾಡಿರುವಿರಿ. ಅದಕ್ಕಾಗಿ ತುಂಬು ಮನದ ಧನ್ಯವಾದಗಳು. ಮೈತುಂಬಿದ ಸಂತೋಷದಲ್ಲಿ ಮೈಮರೆಯದಿರಿ. ಪಾರತಂತ್ರ್ಯ ಛದ್ಮವೇಷದಲ್ಲಿ ಸದಾ ಹೊಂಚು ಹಾಕುತ್ತಿರುತ್ತದೆ. ಸಾತಂತ್ರ್ಯಕ್ಕಾಗಿ ದೇಶಪ್ರೇಮ ಬೇಕು. ಅದನ್ನು ಕಾಪಾಡಲು ಬಲಿದಾನವೂ ಬೇಕು. ಮಕ್ಕಳೇ ನಾನು ಯಾರು ಗೊತ್ತೆ? ಇತಿಹಾಸಕಾರರು ಮೈಸೂರು ಹುಲಿ ಎಂದು ಗುರುತಿಸಿದರು. ನನ್ನ ತಂದೆ ತಾಯಿ ಟಿಪ್ಪುಎಂದು ಕರೆದರು. ನನ್ನ ತಂದೆ ಹೈದರಲಿಯ ತರುವಾಯ ನಾನು ಮೈಸೂರು ರಾಜ್ಯದ ಸುಲ್ತಾನನಾದೆ....’’

ಇದು ಸುಮಾರು 22 ವರ್ಷಗಳ ಹಿಂದೆ ಅಂದರೆ 1997-98ನೆಯ ಶೈಕ್ಷಣಿಕ ವರ್ಷದಲ್ಲಿ 6ನೇ ತರಗತಿಯ ಪ್ರಥಮ ಭಾಷೆ ಕನ್ನಡದ 12ನೇ ಗದ್ಯಪಾಠ ‘ಕನ್ನಡಿಗರಿಗೆ ಟಿಪ್ಪುವಿನ ಪತ್ರ’ ಗದ್ಯಭಾಗದಿಂದ ಆಯ್ದ ಭಾಗ. ಇಡೀ ದೇಶ ಸ್ವಾತಂತ್ರ್ಯದ ಸುವರ್ಣ ಸಂಭ್ರಮದಲ್ಲಿರುವಾಗ ಟಿಪ್ಪು ಸುಲ್ತಾನನು ಕನ್ನಡಿಗರಿಗೆ ಸ್ವರ್ಗದಿಂದ ಬರೆದಿರುವ ಕಾಲ್ಪನಿಕ ಪತ್ರ. ಈ ಪತ್ರದ ಮೂಲಕ ಪಠ್ಯಪುಸ್ತಕ ರಚನಾ ಸಮಿತಿಯವರು ಮಕ್ಕಳಿಗೆ ನಮ್ಮ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯನ್ನು ತಾಯಿ ನಾಡಿನ ರಕ್ಷಣೆಗಾಗಿ ನಮ್ಮ ಪೂರ್ವಜರು ಎಂತಹ ತ್ಯಾಗ ಪರಾಕ್ರಮ ಮತ್ತು ಅಭಿಮಾನ ತೋರಿದ್ದಾರೆಂಬ ವಿಷಯವನ್ನು ಅರ್ಥೈಸುವ ಉದೇಶವಿಟ್ಟುಕೊಂಡಿದ್ದಾರೆ. ಅಂತೆಯೇ ನಾಡಿನ ಎಲ್ಲಾ ಶಿಕ್ಷಕರು ಮಕ್ಕಳಿಗೆ ರಾಷ್ಟ್ರಾಭಿಮಾನ ನೂರ್ಮಡಿಯಾಗುವಂತೆ ಬೋಧಿಸಿದ್ದಾರೆ ಕೂಡ. ಇದೇ ಪಾಠ 2011-12ರ ತನಕ (ಹೊಸ ಪಠ್ಯಕ್ರಮ ಬರುವ ತನಕವೂ) ರಾಜ್ಯದ ಎಲ್ಲಾ ಶಾಲೆಗಳ ಮಕ್ಕಳ ಮನದಾಳಕ್ಕಿಳಿದಿದೆ. ನಾನೇಕೆ ಇಂದು ಈ ವಿಚಾರವನ್ನ್ನು ಹೇಳುತ್ತಿದ್ದೇನೆಂದರೆ ಈಗಿನ ರಾಜ್ಯ ಸರಕಾರವು ಪಠ್ಯ ಪುಸ್ತಕದಿಂದ ಟಿಪ್ಪುವಿನ ವಿಷಯವನ್ನು ಕೈಬಿಡಬೇಕೆಂದು ನಿರ್ಧರಿಸಿರುವುದು ಜನಜನಿತ ಟಿಪ್ಪುದೇಶಭಕ್ತನಾಗಿರಲಿಲ್ಲ ಹಾಗೂ ಆತನದ್ದು ತನ್ನ ಸಾಮ್ರಾಜ್ಯ ರಕ್ಷಣೆಯ ಹೋರಾಟವಾಗಿತ್ತೇ ಹೊರತು ಸ್ವಾತಂತ್ರ್ಯ ಹೋರಾಟವಲ್ಲ ಎಂಬುದು. ಇದು ಸರಕಾರದ ತೀರ್ಮಾನವಿರಬಹುದು ಆದರೆ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಟಿಪ್ಪುಈ ದೇಶದ ಸ್ವಾತಂತ್ರ್ಯ ಹೋರಾಟಗಾರ ಎಂದು ರಾಜ್ಯದ ಲಕ್ಷಾಂತರ ಶಿಕ್ಷಕರು ಒಂದು ಪೀಳಿಗೆಗೆ ಬೋಧನೆ ಮಾಡಿದ್ದಾಗಿದೆ.

ತರಗತಿಯಲ್ಲಿ ಶಿಕ್ಷಕರು ಹೇಳುವ ಪಾಠವೇ ಸತ್ಯವೆಂದು ನಂಬಿದ ಅಸಂಖ್ಯಾತ ಮಕ್ಕಳಿಗೆ ತಪ್ಪುಪಾಠ ಹೇಳಿದ್ದೇವೆಯೇ ಎಂಬ ಸಂಶಯ, ಪಾಪಪ್ರಜ್ಞೆ ನನ್ನಂಥ ಎಲ್ಲಾ ಶಿಕ್ಷಕರನ್ನು ಕಾಡುತ್ತಿದೆ. ಶಿಕ್ಷಕರಿಗೆ ಅಬ್ಬಕ್ಕ, ಎಚ್ಚಮ್ಮ ನಾಯಕ, ಸಂಗೊಳ್ಳಿರಾಯಣ್ಣ, ಟಿಪ್ಪುಸುಲ್ತಾನ್, ಪಂಡಿತ ತಾರನಾಥ, ಮೇಡಂ ಕಾಮಾ, ಶಾಂತವೇರಿ ಗೋಪಾಲಗೌಡರು, ಆರ್ ಕಲ್ಯಾಣಮ್ಮ, ರಾಧಾಕೃಷ್ಣನ್, ಗುಂಡಪ್ಪ, ಸರ್ ಮಿರ್ಝಾ ಇಸ್ಮಾಯೀಲ್‌ರಂತಹ ಯಾವುದೇ ವ್ಯಕ್ತಿಚಿತ್ರದ ಪಾಠವಾದರೂ ಮಕ್ಕಳಿಗೆ ಆ ಸಾಧಕರನ್ನು ಪರಿಚಯಿಸಿ ಮಕ್ಕಳ ಮನಸ್ಸಿನಲ್ಲಿ ಸ್ಫೂರ್ತಿಯ ಬೀಜವನ್ನು ಬಿತ್ತುವ ಕಾರ್ಯವನ್ನು ಗುರುಸಂಕುಲ ಮಾಡುತ್ತಿದೆ. ಪಠ್ಯಪುಸ್ತಕ ಎಂಬುದು ಶಿಕ್ಷಣತಜ್ಞರ, ವಿಷಯ ಪಾಂಡಿತ್ಯ ಉಳ್ಳವರ ಅನುಭವಗಳ ಸಂಗ್ರಹವಾಗಿರುತ್ತದೆ. ರಚನಾ ಸಮಿತಿಯಲ್ಲಿನ ವಿಷಯತಜ್ಞರು ತಪ್ಪುಮಾಡಿದರೆ ಅದನ್ನೂ ಮತ್ತೊಂದು ಸುತ್ತಿನಲ್ಲಿ ತಜ್ಞರ ತಂಡ ಪರಿಷ್ಕರಿಸುತ್ತದೆ. ಅದಾದ ನಂತರ ಸರಕಾರವು ಮಕ್ಕಳ ಕೈಗಿಡುತ್ತದೆ. ಈ ಎಲ್ಲಾ ಹಂತಗಳನ್ನೂ ದಾಟಿದ, ನಾವು ಬೋಧಿಸಿದ 6ನೇ ತರಗತಿ ಪಠ್ಯಪುಸ್ತಕದ ರಚನಾ ಸಮಿತಿಯ ಅಧ್ಯಕ್ಷರಾಗಿ ಡಾ. ಸಿ. ಎಸ್. ರಾಮಚಂದ್ರ (ರೀಡರ್ ಭಾಷಾ ವಿಜ್ಞಾನ, ಅಧ್ಯಯನ ವಿಭಾಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ) ಇವರಾಗಿದ್ದಾರೆ. ನಾಡಿನ ಹಿರಿಯ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೂ ಆದ ಡಾ. ಚಂದ್ರಶೇಖರ ಕಂಬಾರರು ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

ಟಿಪ್ಪುದೇಶಭಕ್ತನೋ ಅಲ್ಲವೋ ಎಂಬ ಚರ್ಚೆಯನ್ನು ಅಂದೇ ತೀರ್ಮಾನಿಸಿ ಇತಿಹಾಸ ತಜ್ಞರು ಮತ್ತು ಸಂಬಂಧಿಸಿದ ಇಲಾಖೆಯಿಂದ ತೀರ್ಮಾನಿಸಬಹುದಿತ್ತಲ್ಲವೇ? ಸರಕಾರಗಳು ಬದಲಾದಂತೆ ಪಠ್ಯದ ವಸ್ತುಗಳು ಬದಲಾಗಬೇಕೇ? ಅಥವಾ ಇತಿಹಾಸವೂ ಸರಕಾರದಂತೆ ಬದಲಾಗಬೇಕೇ? ಯಾರೋ ಮಾಡಿದ ತಪ್ಪಿಗೆ ನಾಡಿನ ಶಿಕ್ಷಕರು ಮತ್ತು ಮಕ್ಕಳು ಬಲಿಪಶುವಾಗಬೇಕೇ? ಈ ಬಗ್ಗೆ ಶಿಕ್ಷಣ ಇಲಾಖೆ ವಿಶ್ವವಿದ್ಯಾನಿಲಯಗಳು ಪ್ರಾಕ್ತಾನಶಾಸ್ತ್ರ ಇಲಾಖೆ ಇತಿಹಾಸ ಸಂಶೋಧನಾ ಇಲಾಖೆಗಳು ಕಣ್ಣುಮುಚ್ಚಿಕೊಂಡಿರುವ ಉದ್ದೇಶವೇನು? ಪ್ರಾಥಮಿಕ ಶಾಲೆಯಲ್ಲಿ ನಾಯಕನಾಗಿ ಬೋಧಿಸಲ್ಪಟ್ಟ ಟಿಪ್ಪುಸುಲ್ತಾನನನ್ನು ಪ್ರೌಢ ಮತ್ತು ಉನ್ನತ ಶಿಕ್ಷಣದಲ್ಲಿ ಖಳನಾಯಕನಂತೆ ಬೋಧಿಸಬೇಕಾದ ಸಂದಿಗ್ಧತೆಯಲ್ಲಿ ಶಿಕ್ಷಕರು ಸಿಲುಕಿದ್ದಾರೆ. ಇಂದು ಟಿಪ್ಪುವಿನ ಇತಿಹಾಸ ತಪ್ಪು ಎಂದಿರುವ ಹಾಗೆ ನಾಳೆ ಅಬ್ಬಕ್ಕರಾಣಿ, ಎಚ್ಚಮ್ಮನಾಯಕರ ಇತಿಹಾಸವೂ ತಪ್ಪುಎನ್ನುವ ಪರಿಸ್ಥಿತಿ ಬಂದರೆ, ವಿದ್ಯಾರ್ಥಿಗಳು ಶಿಕ್ಷಕರನ್ನು ಪಠ್ಯಪುಸ್ತಕಗಳನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇರುತ್ತದೆಯೇ? ಅತ್ಯಂತ ಜವಾಬ್ದಾರಿಯುತವಾಗಿ ನಡೆಯಬೇಕಿದ್ದ ಪಠ್ಯಪುಸ್ತಕ ರಚನಾ ಕಾರ್ಯದಲ್ಲಿ ಲೋಪ ಕಂಡುಬರದಂತೆ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸನ್ಮಾನ್ಯ ಶಿಕ್ಷಣ ಸಚಿವರು ನೋಡಿಕೊಂಡರೆ ವಿದ್ಯಾಇಲಾಖೆಯ ಗೌರವ ಮತ್ತು ನಾಡಿನ ಶಿಕ್ಷಕರ ಮೇಲಿನ ವಿಶ್ವಾಸಾರ್ಹತೆ ಉಳಿಸಿದಂತಾಗುತ್ತದೆ.

Writer - ಸುರೇಶ್ ನೇರ್ಲಿಗೆ

contributor

Editor - ಸುರೇಶ್ ನೇರ್ಲಿಗೆ

contributor

Similar News