ನ್ಯಾಯಾಂಗದ ಗೌರವ ಎತ್ತಿ ಹಿಡಿದ ‘ಸುಪ್ರೀಂ’ ತೀರ್ಪು: ನಳಿನ್ ಕುಮಾರ್ ಕಟೀಲ್

Update: 2019-11-09 14:28 GMT

ಬೆಂಗಳೂರು, ನ.9: ಐವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಸರ್ವಸಮ್ಮತದಿಂದ ನೀಡಿದ ಈ ತೀರ್ಪು ನ್ಯಾಯಾಂಗದ ಗೌರವವನ್ನು ಹೆಚ್ಚಿಸಿದೆ. ಸತ್ಯಮೇವ ಜಯತೆ ಎನ್ನುವ ಅಂಶಕ್ಕೆ ಶಕ್ತಿ ತುಂಬಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಶನಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಏಕತೆಯನ್ನು ಎತ್ತಿ ತೋರಿಸುವ ಈ ತೀರ್ಪನ್ನು ಪ್ರಕಟಿಸಿದ ಐವರು ನ್ಯಾಯಮೂರ್ತಿಗಳಿಗೆ ಬಿಜೆಪಿ ಅಭಿನಂದನೆ ಸಲ್ಲಿಸುತ್ತದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಾಂತಿ ಸೌಹಾರ್ದತೆಗೆ ತೆಗೆದುಕೊಂಡಿರುವ ಕ್ರಮ ಸ್ವಾಗತಾರ್ಹ. ಇದು ಭಾರತೀಯತೆಗೆ ಸಂದ ನ್ಯಾಯ. ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನಲ್ಲಿ ಗೌರವವಿದೆ ಎಂಬ ಅಂಶವನ್ನು ನ್ಯಾಯಾಲಯ ಎತ್ತಿ ತೋರಿಸಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ರಾಜ್ಯದಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆಯನ್ನು ಕಾಪಾಡಬೇಕು. ಒಮ್ಮತದಿಂದ ರಾಮ ಮಂದಿರ ನಿರ್ಮಾಣವಾಗಬೇಕು. ಅದು ನಿಜವಾಗಿಯೂ ರಾಷ್ಟ್ರಮಂದಿರವಾಗಬೇಕು. ಎಲ್ಲ ಮತ, ಪಂಗಡದವರು ಸೇರಿ ಈ ಮಂದಿರ ಕಟ್ಟಬೇಕೆಂಬ ನ್ಯಾಯಾಲಯದ ಆಶಯ ಈಡೇರಲಿ ಎಂದು ಅವರು ಪ್ರಾರ್ಥಿಸಿದರು.

ಇದು ಯಾರ ಸೋಲು ಅಲ್ಲ, ಯಾರ ಗೆಲವೂ ಅಲ್ಲ, ಇದು ಇಡೀ ಭಾರತೀಯತೆ ಗೆಲುವು. ಇಲ್ಲಿರುವಂತಹ ಪ್ರತಿಯೊಬ್ಬ ಭಾರತೀಯರ ಗೆಲುವು. ಆದುದರಿಂದ ಯಾವುದೇ ವಿಜಯ ಸಂಭ್ರಮದ ಆಚರಣೆ ಇಲ್ಲ. ಒಟ್ಟಾಗಿ ಇಡೀ ರಾಷ್ಟ್ರ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುವ ಸುಸಮಯವಿದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News