ಅಯೋಧ್ಯೆ ತೀರ್ಪು ಬರೆದ ನ್ಯಾಯಾಧೀಶರ ಹೆಸರೇನು ಗೊತ್ತಾ?

Update: 2019-11-09 14:41 GMT

ಹೊಸದಿಲ್ಲಿ,ನ.9: ಅಯೋಧ್ಯೆ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ 1,045 ಪುಟಗಳ ತೀರ್ಪಿನಲ್ಲಿ ಅದನ್ನು ಬರೆದ ನ್ಯಾಯಾಧೀಶರ ಹೆಸರನ್ನು ಬಹಿರಂಗಗೊಳಿಸಲಾಗಿಲ್ಲ.

ಇದು ಅತ್ಯಂತ ಅಸಾಮಾನ್ಯ ಮತ್ತು ಸಂಪ್ರದಾಯಕ್ಕೆ ತದ್ವಿರುದ್ಧವಾದ ವಿದ್ಯಮಾನವಾಗಿದೆ. ಸ್ಥಾಪಿತ ಪದ್ಧತಿಯಂತೆ ಪೀಠದ ತೀರ್ಪನ್ನು ಬರೆದಿರುವ ನ್ಯಾಯಾಧೀಶರ ಹೆಸರನ್ನು ಅದರಲ್ಲಿ ಉಲ್ಲೇಖಿಸಲಾಗುತ್ತದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ,ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ(ನಿಯೋಜಿತ ಮು.ನ್ಯಾ.), ಡಿ.ವೈ.ಚಂದ್ರಚೂಡ,ಅಶೋಕ ಭೂಷಣ್ ಮತ್ತು ಅಬ್ದುಲ್ ನಝೀರ್ ಅವರನ್ನೊಳಗೊಂಡ ಸಂವಿಧಾನ ಪೀಠವು ಪ್ರಕರಣದ ವಿಚಾರಣೆಯನ್ನು ನಡೆಸಿತ್ತು.

ತೀರ್ಪಿನ ಕುರಿತು ಇನ್ನೊಂದು ಕುತೂಹಲಕರ ಅಂಶವೆಂದರೆ ಅದಕ್ಕೆ 116 ಪುಟಗಳ ಅನುಬಂಧವನ್ನು ಲಗತ್ತಿಸಲಾಗಿದ್ದು, ಹಿಂದು ಭಕ್ತಾದಿಗಳ ವಿಶ್ವಾಸ ಮತ್ತು ನಂಬಿಕೆಯಂತೆ ವಿವಾದಿತ ನಿವೇಶನವು ಶ್ರೀರಾಮನ ಜನ್ಮಸ್ಥಳವಾಗಿದೆ ಎನ್ನುವುದನ್ನು ಎತ್ತಿ ಹಿಡಿದಿದೆ.

ಈ ಅನುಬಂಧವನ್ನು ಬರೆದವರ ಹೆಸರೂ ನಿಗೂಢವಾಗಿದೆ.

“ನಮ್ಮಲ್ಲೋರ್ವರು ಮೇಲ್ಕಾಣಿಸಿದ ಕಾರಣಗಳನ್ನು ಮತ್ತು ನಿರ್ದೇಶಗಳನ್ನು ಒಪ್ಪಿಕೊಂಡಿರುವರಾದರೂ ಹಿಂದು ಭಕ್ತರ ವಿಶ್ವಾಸ ಮತ್ತು ನಂಬಿಕೆಯಂತೆ ವಿವಾದಿತ ನಿವೇಶನವು ಶ್ರೀರಾಮನ ಜನ್ಮಸ್ಥಳವೇ ಎನ್ನುವುದರ ಬಗ್ಗೆ ಪ್ರತ್ಯೇಕ ಕಾರಣಗಳನ್ನು ದಾಖಲಿಸಿದ್ದಾರೆ. ಅವರು ಸೂಚಿಸಿರುವ ಕಾರಣಗಳನ್ನು ಅನುಬಂಧವೊಂದರಲ್ಲಿ ಉಲ್ಲೇಖಿಸಲಾಗಿದೆ” ಎಂದು ಪುಟ 929ರಲ್ಲಿಯ ತೀರ್ಪಿನ ಅಂತಿಮ ಪ್ಯಾರಾದಲ್ಲಿ ಹೇಳಲಾಗಿದೆ.

ನ್ಯಾಯಾಧೀಶರಲ್ಲೋರ್ವರಿಂದ ಸೇರ್ಪಡೆಗೊಂಡಿರುವ ಈ ಅನುಬಂಧವು,ರಾಮ ಜನ್ಮಭೂಮಿಯ ಪ್ರಸಕ್ತ ನಿವೇಶನವು ಶ್ರೀರಾಮನ ಜನ್ಮಸ್ಥಳವಾಗಿದೆ ಎಂದು ಹಿಂದುಗಳು ನಂಬಲು ಕಾರಣವಾಗಿದ್ದ ಸಾಕಷ್ಟು ಗ್ರಂಥಗಳು ಕ್ರಿ.ಶ.1528ಕ್ಕೆ ಮೊದಲು ಇದ್ದವು ಎನ್ನುವುದು ಕಂಡು ಬಂದಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು,ಅದಕ್ಕೆ ಪೂರಕವಾಗಿ ವಿವಿಧ ಪ್ರಾಚೀನ ಗ್ರಂಥಗಳನ್ನು ಪ್ರಸ್ತಾಪಿಸಲಾಗಿದೆ.

“ಬಾಬರಿ ಮಸೀದಿ ನಿರ್ಮಾಣಗೊಳ್ಳುವ ಮೊದಲು ಮತ್ತು ಅದರ ನಂತರವೂ ಮಸೀದಿಯನ್ನು ನಿರ್ಮಿಸಲಾದ ನಿವೇಶನವು ಶ್ರೀರಾಮನ ಜನ್ಮಸ್ಥಳವಾಗಿತ್ತು ಎನ್ನುವುದು ಹಿಂದುಗಳ ವಿಶ್ವಾಸ ಮತ್ತು ನಂಬಿಕೆಯಾಗಿತ್ತು ಮತ್ತು ಇದು ಮೇಲೆ ಚರ್ಚಿಸಲಾಗಿರುವ ದಾಖಲೆ ರೂಪದ ಮತ್ತು ಮೌಖಿಕ ಸಾಕ್ಷ್ಯಾಧಾರಗಳಿಂದ ರುಜುವಾತಾಗಿದೆ” ಎಂಬ ಪ್ಯಾರಾದೊಡನೆ ಅನುಬಂಧವು ಅಂತ್ಯಗೊಂಡಿದೆ.

ತೀರ್ಪನ್ನು ಬರೆದಿರುವ ನ್ಯಾಯಾಧೀಶರು ಅನಾಮಿಕರಾಗಿ ಉಳಿದಿರುವುದಕ್ಕೆ ವಕೀಲ ಸಮುದಾಯವು ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚರಿಯನ್ನು ಹಂಚಿಕೊಂಡಿದೆ.

ಪ್ರಮುಖ ಪ್ರಕರಣವೊಂದರಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಲೇಖಕರ ಹೆಸರನ್ನು ಮುಚ್ಚಿಟ್ಟಿದ್ದ ಯಾವುದೇ ಗೊತ್ತಿರುವ ಪೂರ್ವ ನಿದರ್ಶನವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News