ಪ್ರವಾದಿ ಕಟ್ಟಿದ ಆದರ್ಶ ಸಮಾಜ, ಮಾದರಿ ಸರಕಾರ

Update: 2019-11-09 14:44 GMT

ಬದುಕಿನ ಸಾರ್ಥಕತೆ ಕೇವಲ ಆರಾಧನೆ ಮತ್ತು ಪ್ರಾರ್ಥನೆಗಳಿಂದ ಅಥವಾ ವ್ಯಕ್ತಿಗತವಾಗಿ ಕೆಲವು ಸದ್ಗುಣಗಳನ್ನು ಬೆಳೆಸಿಕೊಂಡು ಕೆಲವು ಅನಿಷ್ಟಗಳಿಂದ ಮುಕ್ತರಾಗುವುದರಿಂದ ಪ್ರಾಪ್ತವಾಗುವುದಿಲ್ಲ. ಸಾಮಾಜಿಕ ಜವಾಬ್ದಾರಿಗಳಿಗೂ ಆರಾಧನಾ ಕರ್ಮಗಳಷ್ಟೇ ಮಹತ್ವ ಮತ್ತು ಪಾವಿತ್ರ್ಯ ಇದೆ ಎಂಬುದು ಪ್ರವಾದಿವರ್ಯರ ಬೋಧನೆಗಳ ಒಂದು ಮುಖ್ಯ ಅಂಶವಾಗಿತ್ತು. ಆದ್ದರಿಂದಲೇ ಅವರ ಅನುಯಾಯಿಗಳಾದ ಪ್ರತಿಯೊಬ್ಬರೂ ಕೇವಲ ತಮ್ಮ ಮೋಕ್ಷದ ಬದಲು ಸಂಪೂರ್ಣ ಸಮಾಜದ ಅಭ್ಯುದಯದ ಬಗ್ಗೆ ಚಿಂತಿತರಾಗುತ್ತಿದ್ದರು.

ಮಕ್ಕಾದಲ್ಲಿ ಕ್ರಿ.ಶ. 610 ರಲ್ಲಿ ಸತ್ಯ ಪ್ರಸಾರ ಆರಂಭಿಸಿದ ಪ್ರವಾದಿ ಮುಹಮ್ಮದ್ (ಸ) ಅಲ್ಲಿ ತೀವ್ರ ಪ್ರತಿರೋಧವನ್ನು ಎದುರಿಸಬೇಕಾಯಿತು. ಆರಂಭಿಕ ವರ್ಷಗಳಲ್ಲಿ ಮಂದವಾಗಿದ್ದ ವಿರೋಧವು ಕ್ರಮೇಣ ತುಂಬಾ ಉಗ್ರ ಸ್ವರೂಪ ತಾಳಿತು. ಪ್ರವಾದಿವರ್ಯರ ಕೆಲವು ಅನುಯಾಯಿಗಳ ಹತ್ಯೆಯೂ ನಡೆಯಿತು. ಸ್ವತಃ ಪ್ರವಾದಿಯ ಹತ್ಯೆಗೆ ಹಲವು ಸಂಚುಗಳು, ಶ್ರಮಗಳು ನಡೆದವು. ಈ ಬಗೆಯ ಸನ್ನಿವೇಶದಲ್ಲಿ ಮುಹಮ್ಮದರು (ಸ) ತಾವು ಅಪಾರವಾಗಿ ಪ್ರೀತಿಸುತ್ತಿದ್ದ ತಮ್ಮ ತಾಯ್ನಿಡು ಮಕ್ಕಾವನ್ನು ತ್ಯಜಿಸಿ ಸುಮಾರು 450 ಕಿ.ಮೀ. ದೂರದ ಮದೀನಾ ನಗರಕ್ಕೆ ವಲಸೆ ಹೋದರು. ಅಲ್ಲಿ ಅವರು ಒಂದು ಆದರ್ಶ ಸಮಾಜವನ್ನು ಮತ್ತು ಒಂದು ಕಲ್ಯಾಣ ಸರಕಾರವನ್ನು ಸ್ಥಾಪಿಸಿದರು.

ಇದಿಷ್ಟು ಜನಪ್ರಿಯ ಇತಿಹಾಸ. ನಿಜವಾಗಿ, ಇದಾವುದೂ ಹಠಾತ್ತಾಗಿ ಅಥವಾ ಆಕಸ್ಮಿಕವಾಗಿ ನಡೆದಿರಲಿಲ್ಲ. ಪ್ರವಾದಿ (ಸ) ಮದೀನಾಗೆ ವಲಸೆ ಹೋಗುವ ಮುನ್ನ ಆ ನಿಟ್ಟಿನಲ್ಲಿ ಬಹಳಷ್ಟು ಪೂರ್ವ ಸಿದ್ಧತೆಗಳು ನಡೆದಿದ್ದವು. ವಲಸೆ ಅಥವಾ ‘ಹಿಜ್ರತ್’ ಗೆ ಬಹುಕಾಲ ಮುನ್ನವೇ ಪ್ರವಾದಿ (ಸ) ಮದೀನಾದ ಹಲವರ ಜೊತೆ ಸಂಪರ್ಕದಲ್ಲಿದ್ದರು. ಪ್ರವಾದಿಯ ಜನನಕ್ಕಿಂತ ನೂರಾರು ವರ್ಷ ಹಿಂದೆಯೇ ಮಕ್ಕಾ ನಗರವು ಹಜ್ ಯಾತ್ರೆಯ ಕೇಂದ್ರವಾಗಿತ್ತು. ಅರೇಬಿಯಾದ ವಿವಿಧ ಭಾಗಗಳ ಜನ ಹಜ್ ತಿಂಗಳಲ್ಲಿ, ಹಜ್ ಕರ್ಮದಲ್ಲಿ ಭಾಗವಹಿಸಲು ಮಕ್ಕಾ ನಗರಕ್ಕೆ ಬರುತ್ತಿದ್ದರು. ಹಜ್ ಅಲ್ಲದ ತಿಂಗಳಲ್ಲೂ ಹಲವರು ಪವಿತ್ರ ಕಾಬಾದ ಸಂದರ್ಶನಕ್ಕೆಂದು ಮಕ್ಕಾ ನಗರಕ್ಕೆ ಬರುತ್ತಿದ್ದರು. ಪ್ರವಾದಿ (ಸ) ಅಂತಹ ಯಾತ್ರಿಕರನ್ನು ಖಾಸಗಿಯಾಗಿ ಸಂಪರ್ಕಿಸಿ ಅವರಿಗೆ ಸತ್ಯ ಸಂದೇಶವನ್ನು ತಲುಪಿಸುತ್ತಿದ್ದರು. ಅವರಲ್ಲಿ ಅನೇಕ ಯಾತ್ರಿಕರು ಸತ್ಯ ಧರ್ಮವನ್ನು ಸ್ವೀಕರಿಸಿ ತಮ್ಮ ನಾಡುಗಳಿಗೆ ಮರಳಿ ಅಲ್ಲಿ ತಮ್ಮ ಬಂಧು ಮಿತ್ರರಿಗೆ ಸತ್ಯವನ್ನು ಪರಿಚಯಿಸುತ್ತಿದ್ದರು, ಈ ರೀತಿ ಪ್ರವಾದಿಯ ಜೊತೆ ಸಂಪರ್ಕ ಬೆಳೆಸಿಕೊಂಡಿದ್ದ ಯಾತ್ರಿಕರಲ್ಲಿ ಮದೀನಾದ ಕೆಲವರೂ ಇದ್ದರು. ಅವರಿಂದಾಗಿ ಕ್ರಮೇಣ ಮದೀನಾದಲ್ಲಿ ಇಸ್ಲಾಮ್ ಧರ್ಮದ ಕುರಿತು ಚರ್ಚೆ, ಊಹಾಪೋಹಗಳು ಆರಂಭವಾದವು.

ಮದೀನಾದಲ್ಲಿದ್ದ ಅರಬ್ ಮೂಲದ ಜನರು ಹಲವು ದೇವರನ್ನು ಪೂಜಿಸುವ ವಿಗ್ರಹಾರಾಧಕರಾಗಿದ್ದರು. ಆದರೆ ಅವರಿಗೆ ಏಕದೇವತ್ವ ಎಂಬುದು ತೀರಾ ಅಪರಿಚಿತವೇನೂ ಆಗಿರಲಿಲ್ಲ. ಏಕೆಂದರೆ ತಾತ್ವಿಕವಾಗಿ, ತಾವು ಏಕ ದೇವೋಪಾಸಕರು ಎಂದು ಹೇಳಿಕೊಳ್ಳುವ ಯಹೂದಿ ಸಮುದಾಯದವರು ಮದೀನಾದಲ್ಲಿ ಗಣ್ಯಸಂಖ್ಯೆಯಲ್ಲಿದ್ದರು. ಅರೇಬಿಯಾದಲ್ಲಿ ಒಬ್ಬ ದೇವದೂತ ಬರಲಿದ್ದಾರೆ, ಅವರ ಮೂಲಕ ಯಹೂದಿ ಜನಾಂಗದ ಶತ್ರುಗಳ ಸಂಹಾರ ನಡೆಯಲಿದೆ ಮತ್ತು ಯಹೂದಿಗಳಿಗೆ ವಿಮೋಚನೆ ಸಿಗಲಿದೆ ಎಂಬ ನಂಬಿಕೆಯನ್ನೂ ಅವರು ಪ್ರಚಾರ ಪಡಿಸಿದ್ದರು. ಆ ಕಾಲದಲ್ಲಿ ಮದೀನಾ ಎಂಬುದು ವಿವಿಧ ಕುಲಗೋತ್ರಗಳ ನಡುವಣ ಕಲಹಗಳ ವೇದಿಕೆಯಾಗಿತ್ತು. ಮದೀನಾದಲ್ಲಿ ಬಹುಸಂಖ್ಯಾತರಾಗಿದ್ದ ಅರಬ್ ಜನರು ಬನೂ ಔಸ್ ಮತ್ತು ಬನೂ ಖಜ್ರಜ್ ಎಂಬೆರಡು ಪ್ರಮುಖ ಪ್ರತಿಸ್ಪರ್ಧಿ ಗೋತ್ರಗಳಿಗೆ ಸೇರಿದ್ದರು. ಈ ಎರಡು ಗೋತ್ರಗಳ ಮಧ್ಯೆ ಬಹುಕಾಲದಿಂದ ಪರಸ್ಪರ ತೀವ್ರ ಅಪನಂಬಿಕೆ ಮತ್ತು ದ್ವೇಷವಿತ್ತು. ಅವರ ನಡುವೆ ಕ್ಷುಲ್ಲಕ ಕಾರಣಗಳಿಗಾಗಿ ಹಲವು ಘೋರ ಯುದ್ಧಗಳು ನಡೆದಿದ್ದವು. ಯುದ್ಧವಿರಾಮದ ಅವಧಿಯಲ್ಲೂ ಯಾವುದೇ ಕ್ಷಣ ಮತ್ತೆ ಯುದ್ಧ ಸ್ಫೋಟಿಸುವ ಸಾಧ್ಯತೆ ಇರುತ್ತಿತ್ತು. ಜನಾಂಗೀಯವಾಗಿ ಯಹೂದಿಗಳಿಗೆ ಪ್ರಸ್ತುತ ಎರಡೂ ಸಮುದಾಯಗಳೊಂದಿಗೆ ಯಾವುದೇ ನಂಟು ಇರಲಿಲ್ಲ. ಆದರೆ ಪ್ರಸ್ತುತ ಯುದ್ಧಗಳಲ್ಲಿ ಯಹೂದಿಗಳ ಕೆಲವು ನಾಯಕರು ತಮ್ಮ ಹಿತಾಸಕ್ತಿಗಳಿಗೆ ಅನುಸಾರವಾಗಿ ಯಾವುದಾದರೂ ಪಕ್ಷದ ಪರವಾಗಿ ಸಕ್ರಿಯ ಪಾತ್ರ ವಹಿಸುತ್ತಿದ್ದರು.

ಮಕ್ಕಾದಲ್ಲಿ ಮುಹಮ್ಮದರು (ಸ) ತಾನು ಅಲ್ಲಾಹನ ದೂತನೆಂದು ಘೋಷಿಸಿದಾಗ ಮದೀನಾದ ಯಹೂದಿಗಳು ತಾವು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ವಿಮೋಚಕ ಪ್ರವಾದಿ ಇಬ್ರಾಹೀಮರ ಸಂತತಿಯಲ್ಲಿ ಹುಟ್ಟಿಬಂದಿದ್ದಾರೆಂದು ಸಂತಸ ಪಟ್ಟಿದ್ದರು. ತಮ್ಮ ವಿಮೋಚಕ, ಇಬ್ರಾಹೀಮರ ಪುತ್ರ ಇಸ್‌ಹಾಕ್‌ರ ಸಂತತಿಯಲ್ಲಿ ಜನಿಸುತ್ತಾರೆಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಮುಹಮ್ಮದರು ಇಬ್ರಾಹೀಮ್‌ರ ಇನ್ನೊಬ್ಬ ಪುತ್ರ ಇಸ್ಮಾಈಲ್‌ರ ಸಂತತಿಯವರೆಂದು ತಿಳಿದಾಗ ಮದೀನಾದ ಯಹೂದಿಗಳಿಗೆ ನಿರಾಶೆಯಾಯಿತು. ಅತ್ತ ಮದೀನಾದ ಅರಬ್ ಜನಾಂಗದವರಿಗೆ ಪ್ರವಾದಿಯ ಸಂದೇಶ ತಲುಪತೊಡಗಿದಾಗ ಅವರಲ್ಲೊಂದು ಹೊಸ ಆಶಾವಾದ ಮೂಡಿತು. ಪ್ರವಾದಿತ್ವದ 11ನೇ ವರ್ಷ ಹಜ್ ದಿನಗಳಲ್ಲಿ ಮದೀನಾದ ಖಜ್ರಜ್ ಎಂಬ ಅರಬ್ ಗೋತ್ರದ 6 ಮಂದಿ ಮಕ್ಕಾದ ಪ್ರಸಿದ್ಧ ‘ಮಿನಾ’ದ ಬಳಿ ಅಖಬಾ ಎಂಬಲ್ಲಿ ಪ್ರವಾದಿ ಮುಹಮ್ಮದ್(ಸ) ಮತ್ತು ಅವರ ಸಂಗಾತಿಗಳಾದ ಅಬೂಬಕರ್ ಮತ್ತು ಅಲಿ (ರ) ರನ್ನು ಭೇಟಿಯಾಗಿ ಇಸ್ಲಾಮ್ ಧರ್ಮದ ಪ್ರಾಥಮಿಕ ಸಂದೇಶವನ್ನು ಅರಿತು ಕೊಂಡರು. ಪ್ರಸ್ತುತ 6 ಮಂದಿ ಮದೀನಾಗೆ ಮರಳಿ ಅಲ್ಲಿ ತಾವು ಅರಿತ ವಿಚಾರಗಳನ್ನು ತಮ್ಮ ಆಪ್ತರ ಜೊತೆ ಹಂಚಿಕೊಂಡರು. ಈ ರೀತಿ ಇಸ್ಲಾಮ್ ಧರ್ಮ ಮತ್ತದರ ಸಂದೇಶವು ಮದೀನಾದ ಒಂದು ದೊಡ್ಡ ವಲಯದಲ್ಲಿ ಚರ್ಚಾವಿಷಯವಾಗಿ ಬಿಟ್ಟಿತು.

ಪ್ರಥಮ ಅಖಬಾ ಪ್ರಮಾಣ   

ಮುಂದಿನ ವರ್ಷ ಹಜ್ ದಿನಗಳಲ್ಲಿ ಮದೀನಾದ 12 ಮಂದಿಯ ನಿಯೋಗವೊಂದು ಮಕ್ಕಾಗೆ ಬಂದು ಪ್ರವಾದಿ ಮುಹಮ್ಮದ್ (ಸ) ರನ್ನು ಭೇಟಿಯಾಯಿತು. ಆ ಪೈಕಿ 11 ಮಂದಿ ಮದೀನಾದ ಖಜ್ರಜ್ ಗೋತ್ರಕ್ಕೆ ಮತ್ತು ಒಬ್ಬರು ಮಾತ್ರ ಔಸ್ ಗೋತ್ರಕ್ಕೆ ಸೇರಿದವರಾಗಿದ್ದರು. ಈ ಹಿಂದಿನ ತಂಡದ 6 ಮಂದಿಯ ಪೈಕಿ 5 ಮಂದಿ ಆ ನಿಯೋಗದಲ್ಲೂ ಇದ್ದರು. ನಿಯೋಗದ ಎಲ್ಲ ಸದಸ್ಯರು ಇಸ್ಲಾಮ್ ಧರ್ಮವನ್ನು ತಾವು ನಂಬಿ ಸ್ವೀಕರಿಸಿರುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಅವರು ಕೆಲವು ವಿಷಯಗಳಿಗೆ ತಾವು ಬದ್ಧರಾಗಿರುವುದಾಗಿ ಪ್ರಮಾಣ ಮಾಡಿದರು. ಇತಿಹಾಸದಲ್ಲಿ, ‘ಪ್ರಥಮ ಅಖಬಾ ಪ್ರಮಾಣ’ ಎಂದೇ ಖ್ಯಾತವಾಗಿರುವ ಪ್ರಸ್ತುತ ಪ್ರಮಾಣದ ಮುಖ್ಯ ಅಂಶಗಳು ಹೀಗಿದ್ದವು: 

ನಾವು ಏಕಮಾತ್ರ ಒಡೆಯನಾದ ಅಲ್ಲಾಹನನ್ನು ಮಾತ್ರ ಆರಾಧಿಸುವೆವು. ಯಾರನ್ನೂ ಅಲ್ಲಾಹನ ಪಾಲುದಾರರೆಂದು ಅಂಗೀಕರಿಸಲಾರೆವು. ನಾವು ಮದ್ಯಪಾನ ಮಾಡಲಾರೆವು. ವ್ಯಭಿಚಾರ ಮಾಡಲಾರೆವು. ನಾವು ನಮ್ಮ ಮಕ್ಕಳನ್ನು ಕೊಲ್ಲಲಾರೆವು. ನಾವು ಯಾರ ಮೇಲೂ ಸುಳ್ಳಾರೋಪ ಹೊರಿಸಲಾರೆವು, ಪರನಿಂದನೆ ಮಾಡಲಾರೆವು. ನಾವು ಎಲ್ಲ ಸತ್ಕಾರ್ಯಗಳಲ್ಲಿ ದೇವದೂತ ಮುಹಮ್ಮದ್ (ಸ) ಅವರ ಆಜ್ಞಾಪಾಲನೆ ಮಾಡುವೆವು. (ಇಲ್ಲಿ, ಕಳವಿನ ವಿರುದ್ಧ ಮಾಡಲಾದ ಪ್ರಮಾಣವನ್ನು, ಅಂದಿನ ಸಮಾಜದಲ್ಲಿ ಸಾಮಾನ್ಯವಾಗಿದ್ದ, ಮರುಭೂಮಿಯಲ್ಲಿ ಪ್ರಯಾಣಿಸುತ್ತಿರುವ ಯಾತ್ರಿಕರು ಹಾಗೂ ಯಾತ್ರಾ ತಂಡಗಳನ್ನು ದೋಚುವ ದುರಾಚಾರದ ಹಿನ್ನೆಲೆಯಲ್ಲಿ ನೋಡಬಹುದು. ಹಾಗೆಯೇ ನಾವು ನಮ್ಮ ಮಕ್ಕಳನ್ನು ಕೊಲ್ಲುವುದಿಲ್ಲ ಎಂಬ ಪ್ರಮಾಣವನ್ನು, ಹಲವರು ತಮ್ಮ ಮನೆಯಲ್ಲಿ ಹೆಣ್ಣು ಶಿಶುವಿನ ಜನವನ್ನು ಅಗೌರವ ಎಂದು ಪರಿಗಣಿಸಿ ಹೆಣ್ಣು ಶಿಶುವನ್ನು ಕೊಲ್ಲುತ್ತಿದ್ದ ಅನಿಷ್ಟದ ಹಿನ್ನೆಲೆಯಲ್ಲಿ ನೋಡಬಹುದು.)

ಪ್ರಸ್ತುತ ತಂಡವು ಮರಳಿ ಮದೀನಾಗೆ ಹೋಗುವಾಗ, ಮದೀನಾದಲ್ಲಿ ಜನರಿಗೆ ಧರ್ಮವನ್ನು ಪರಿಚಯಿಸಲು ತಮ್ಮ ಜೊತೆ ಒಬ್ಬ ಶಿಕ್ಷಕನನ್ನು ಕಳುಹಿಸಬೇಕೆಂದು ಮನವಿ ಮಾಡಿದರು. ಆ ಪ್ರಕಾರ ಪ್ರವಾದಿ (ಸ) ಮುಸ್ ಅಬ್ ಬಿನ್ ಉಮೈರ್ ಎಂಬ ತಮ್ಮ ಯುವ ಸಂಗಾತಿಯನ್ನು ಅವರ ಜೊತೆ ಕಳಿಸಿಕೊಟ್ಟರು. ಇದು ನಿಜವಾಗಿ ಪ್ರವಾದಿ ಮುಹಮ್ಮದ್ (ಸ) ಮದೀನಾವನ್ನು ಪ್ರವೇಶಿಸುವ ಮುನ್ನವೇ ಅಲ್ಲಿ ಒಂದು ಆದರ್ಶ ಸಮಾಜವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೈಗೊಂಡ ಒಂದು ಪ್ರಮುಖ ಪೂರ್ವಕ್ರಮವಾಗಿತ್ತು.

ದ್ವಿತೀಯ ಅಖಬಾ ಪ್ರಮಾಣ 
ಮುಸ್‌ಅಬ್ ಬಿನ್ ಉಮೈರ್ (ರ) ತಮ್ಮ ಕರ್ತವ್ಯವನ್ನು ಬಹಳ ದಕ್ಷವಾಗಿ ನೆರವೇರಿಸಿದರು. ಅವರ ಶ್ರಮಗಳ ಫಲಶ್ರುತಿಯಾಗಿ ಮದೀನಾ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳ ಹಲವರು ಇಸ್ಲಾಮ್ ಧರ್ಮದ ಅನುಯಾಯಿಗಳಾಗಿ ಮಾರ್ಪಟ್ಟರು. ಅವರಲ್ಲೊಬ್ಬರು ಔಸ್ ಗೋತ್ರದ ನಾಯಕ ಸಅದ್ ಬಿನ್ ಅಬೀ ವಕ್ಕಾಸ್. ಅವರು ಮುಸ್ಲಿಮರಾದ ಬೆನ್ನಿಗೆ ಅವರ ಗೋತ್ರದ ಎಲ್ಲ ಸದಸ್ಯರೂ ಮುಸ್ಲಿಮರಾದರು.

ಮುಂದಿನ ವರ್ಷ ಮುಸ್‌ಅಬ್‌ರ ನೇತೃತ್ವದಲ್ಲಿ ಇಬ್ಬರು ಮಹಿಳೆಯರು ಮತ್ತು 73 ಮಂದಿ ಪುರುಷರನ್ನೊಳಗೊಂಡ ಒಂದು ದೊಡ್ಡ ನಿಯೋಗವು ಮದೀನಾ ದಿಂದ ಮಕ್ಕಾಗೆ ತೆರಳಿತು. ಈ ಬಾರಿ ನಿಯೋಗದಲ್ಲಿ ಮದೀನಾದ ಎರಡೂ ಪ್ರಮುಖ ಗೋತ್ರಗಳ ಸದಸ್ಯರು ಗಣ್ಯ ಸಂಖ್ಯೆಯಲ್ಲಿದ್ದರು. ಮಕ್ಕಾದಲ್ಲಿ ಆಗಲೂ ಇಸ್ಲಾಮ್ ಧರ್ಮದ ಪಾಲಿಗೆ ತೀರಾ ಪ್ರತಿಕೂಲ ವಾತಾವರಣವಿತ್ತು. ಹಿಂದಿನ ವರ್ಷ ಸಮಾಲೋಚನೆ ನಡೆದಿದ್ದ ಅದೇ ಅಖಬಾದಲ್ಲಿ ರಾತ್ರಿಯ ಕತ್ತಲಲ್ಲಿ ಪ್ರವಾದಿವರ್ಯರು (ಸ) ಪ್ರಸ್ತುತ ನಿಯೋಗವನ್ನು ಭೇಟಿಯಾದರು. ತೀರಾ ಗುಪ್ತ ವಾತಾವರಣದಲ್ಲಿ ನಡೆದ ಆ ಸಭೆಯಲ್ಲಿ ಪ್ರವಾದಿಯ ಜೊತೆ ಅವರ ಪ್ರೀತಿಪಾತ್ರ ಚಿಕ್ಕಪ್ಪ ಅಬ್ಬಾಸ್ ಇದ್ದರು. ಅಬ್ಬಾಸ್ ಆಗಿನ್ನೂ ಮುಸ್ಲಿಮರಾಗಿರಲಿಲ್ಲ. ಆದರೆ ಪ್ರವಾದಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರ ಆರೋಗ್ಯ ಮತ್ತು ಭದ್ರತೆಯ ಬಗ್ಗೆ ಸದಾ ಚಿಂತಿತರಾಗಿರುತ್ತಿದ್ದರು. ಶೀಘ್ರದಲ್ಲೇ ಪ್ರವಾದಿ (ಸ) ಮದೀನಾಗೆ ತೆರಳಲಿದ್ದಾರೆ ಎಂಬ ಮುನ್ಸೂಚನೆ ಅಬ್ಬಾಸ್‌ರಿಗೆ ಸಿಕ್ಕಿತ್ತು. ಪ್ರವಾದಿ (ಸ) ಪವಿತ್ರ ಕುರ್‌ಆನ್‌ನ ಕೆಲವು ವಚನಗಳನ್ನು ಓದಿ, ಉಪದೇಶದ ಮಾತುಗಳನ್ನಾಡಿದ ಬಳಿಕ, ಮದೀನಾದವರಿಂದ ನಿಷ್ಠೆಯ ಪ್ರಮಾಣ ಪಡೆಯಲು ಹೊರಟಾಗ ಅಬ್ಬಾಸ್ ಮಧ್ಯ ಪ್ರವೇಶಿಸಿದರು. ಅವರು ಮದೀನಾದವರೊಡನೆ, ನೀವು ಇವರ ಜೊತೆ ಯಾವುದೇ ಒಡಂಬಡಿಕೆ ಮಾಡಿಕೊಳ್ಳುವ ಮುನ್ನ ಅದರ ದೂರಗಾಮಿ ಪರಿಣಾಮಗಳ ಕುರಿತಂತೆ ಚೆನ್ನಾಗಿ ಯೋಚಿಸಿಕೊಳ್ಳಿ, ಈಗಾಗಲೇ ಮಕ್ಕಾದ ಹೆಚ್ಚಿನವರೆಲ್ಲಾ ಇವರ ವಿರುದ್ಧ ಯುದ್ಧ ಸಾರಿದ್ದಾರೆ. ನೀವೀಗ ಇವರ ಜೊತೆಗೆ ನಿಲ್ಲುವುದೆಂದರೆ ಅದು ಮಕ್ಕಾದವರ ವಿರುದ್ಧ ಯುದ್ಧ ಸಾರುವುದಕ್ಕೆ ಸಮಾನವಾಗಿದೆ. ಇವರ ಗೋತ್ರದವರಾದ ನಾವು ಇವರ ಧರ್ಮವನ್ನು ಸ್ವೀಕರಿಸಿಲ್ಲ. ಆದರೂ ಈ ತನಕ ನಾವು ನಮ್ಮ ಜೀವಗಳನ್ನು ಪಣಕ್ಕೊಡ್ಡಿ ಇವರಿಗೆ ಎಲ್ಲ ಬಗೆಯ ರಕ್ಷಣೆ ಮತ್ತು ಬೆಂಬಲ ನೀಡಿದ್ದೇವೆ. ಇದೀಗ, ನಿಮ್ಮ ಸರ್ವಸ್ವವನ್ನೂ ಸಮರ್ಪಿಸಿ ಕೊನೆಯ ತನಕ ಇವರ ಜೊತೆಗೆ ನಿಲ್ಲುವ ಮಟ್ಟದ ಬದ್ಧತೆ ನಿಮ್ಮಲ್ಲಿದ್ದರೆ ಮಾತ್ರ ಇವರಿಗೆ ನೀವು ನಿಮ್ಮ ನಿಷ್ಠೆ ಪ್ರಕಟಿಸಿ - ಎನ್ನುತ್ತಾ ಮದೀನಾ ನಿಯೋಗದವರನ್ನು ಎಚ್ಚರಿಸಿದರು.

ಇದಕ್ಕುತ್ತರವಾಗಿ ನಿಯೋಗದವರು, ಮುಹಮ್ಮದ್ (ಸ)ರನ್ನು ತನ್ನ ದೂತರಾಗಿ ಕಳುಹಿಸಿದ ಆ ಅಲ್ಲಾಹನಾಣೆ, ಪ್ರವಾದಿವರ್ಯರು ಮದೀನಾಗೆ ಬಂದರೆ ನಾವು ಸ್ವತಃ ನಮ್ಮ ಮಡದಿ ಮಕ್ಕಳನ್ನು ರಕ್ಷಿಸುವುದಕ್ಕಿಂತ ಹೆಚ್ಚು ಮುತುವರ್ಜಿಯೊಂದಿಗೆ ಇವರನ್ನು ರಕ್ಷಿಸುವೆವು ಮತ್ತು ಅದಕ್ಕಾಗಿ ನಾವು ಯಾವುದೇ ಬಗೆಯ ತ್ಯಾಗ ಬಲಿದಾನಗಳನ್ನು ನೀಡಲು ಹಿಂಜರಿಯಲಾರೆವು. ನಾವು ಸಮರ ಕಲೆಯಲ್ಲಿ ಪಳಗಿರುವ ಸಮರ್ಥ ಯೋಧರು ಎಂದು ಅಬ್ಬಾಸ್‌ರಿಗೆ ಮಾತುಕೊಟ್ಟರು. ಈ ವೇಳೆ, ನಿಯೋಗದವರ ಪೈಕಿ ಖಜ್ರಜ್ ಗೋತ್ರದ ಪರವಾಗಿ ಒಬ್ಬರು ಪ್ರವಾದಿಯೊಡನೆ - ಬಹುಕಾಲದಿಂದ ಮದೀನಾದ ಯಹೂದಿ ಸಮುದಾಯದ ಜೊತೆ ನಮ್ಮ ಮೈತ್ರಿ ಇದೆ. ನಾವು ನಿಮ್ಮ ನಾಯಕತ್ವವನ್ನು ಅಂಗೀಕರಿಸಿರುವ ವಿಷಯ ತಿಳಿದೊಡನೆ ಅವರು ನಮ್ಮ ಜೊತೆಗಿನ ತಮ್ಮ ಮೈತ್ರಿಯನ್ನು ಮುರಿದು ಬಿಡುವರು. ಇತ್ತ ನೀವು ಮದೀನಾದಲ್ಲಿ ಪ್ರಾಬಲ್ಯ ಪಡೆದ ಬಳಿಕ ನಮ್ಮನ್ನು ಕೈಬಿಟ್ಟು ಮಕ್ಕಾಗೆ ಮರಳಿ ಹೋದರೆ ನಮ್ಮ ಗತಿ ಏನು? ಎಂದು ಪ್ರಶ್ನಿಸಿದರು. ಇದಕ್ಕುತ್ತರವಾಗಿ ಪ್ರವಾದಿ (ಸ) ನಿಮ್ಮ ಜೀವ ನನ್ನ ಜೀವ. ನೀವು ನನ್ನವರು ಮತ್ತು ನಾನು ನಿಮ್ಮವನು ಎಂದಷ್ಟೇ ಹೇಳಿದರು.

ತರುವಾಯ ಮದೀನಾದ ನಿಯೋಗದಲ್ಲಿದ್ದ ಸದಸ್ಯರೆಲ್ಲ ಕೆಲವು ನಿರ್ದಿಷ್ಟ ವಿಷಯಗಳಲ್ಲಿ ತಮ್ಮ ಬದ್ಧತೆಯನ್ನು ಪ್ರಕಟಿಸುವ ಪ್ರಮಾಣ ಮಾಡಿದರು. ದ್ವಿತೀಯ ಅಖಬಾ ಪ್ರಮಾಣ ಎಂದು ಇತಿಹಾಸದಲ್ಲಿ ದಾಖಲಾಗಿರುವ ಪ್ರಸ್ತುತ ಪ್ರಮಾಣದ ಮುಖ್ಯಅಂಶಗಳು ಹೀಗಿದ್ದವು:
1. ಎಲ್ಲ ಬಗೆಯ ಸನ್ನಿವೇಶಗಳಲ್ಲೂ ನಾವು ಪ್ರವಾದಿ ಮುಹಮ್ಮದ್ (ಸ) ರ ಆದೇಶಗಳನ್ನು ಆಲಿಸುವೆವು ಮತ್ತು ಪಾಲಿಸುವೆವು.
2. ಪರಿಸ್ಥಿತಿ ಅನುಕೂಲಕರವಿರಲಿ, ಪ್ರತಿಕೂಲವಿರಲಿ ನಾವು ಸತ್ಯದ ಮಾರ್ಗದಲ್ಲಿ ಖರ್ಚು ಮಾಡುತ್ತೇವೆ.
3. ನಾವು ಸಮಾಜದಲ್ಲಿ ಸದಾ ಸತ್ಕಾರ್ಯಗಳನ್ನು ಆದೇಶಿಸುವ ಮತ್ತು ದುಷ್ಕರ್ಮಗಳನ್ನು ತಡೆಯುವ ಕಾರ್ಯದಲ್ಲಿ ನಿರತರಾಗಿರುವೆವು.
4. ಅಲ್ಲಾಹನ ಆದೇಶಗಳನ್ನು ಪಾಲಿಸುವ ವಿಷಯದಲ್ಲಿ ನಾವು ಯಾರದೇ ವಿರೋಧವನ್ನು ಲೆಕ್ಕಿಸಲಾರೆವು.

ತರುವಾಯ ಪ್ರವಾದಿ (ಸ) ಮದೀನಾದಿಂದ ಬಂದಿದ್ದ ನಿಯೋಗದ ಸದಸ್ಯರಿಗೆ ಮುಂದಿನ ದಿನಗಳಲ್ಲಿ ಅವರು ಮಾಡಬೇಕಾದ ಕೆಲಸ ಕಾರ್ಯಗಳನ್ನು ವಿವರಿಸಿದರು. ಆ ಬಳಿಕ ಅವರ ಪೈಕಿ ವಿವಿಧ ಕುಲಗೋತ್ರಗಳನ್ನು ಪ್ರತಿನಿಧಿಸುವ 12 ಮಂದಿಯನ್ನು ಆರಿಸಿ ಅವರನ್ನು ತಮ್ಮ ವಿಶೇಷ ಪ್ರತಿನಿಧಿಗಳೆಂದು ಘೋಷಿಸಿದರು ಮತ್ತು ಅವರಿಗೆ ಕೆಲವು ನಿರ್ದಿಷ್ಟ ಕರ್ತವ್ಯಗಳನ್ನು ವಹಿಸಿಕೊಟ್ಟರು.

ಹೊಸ ಶಕೆಯ ಆರಂಭ
ಮದೀನಾದ ನಿಯೋಗವು ಮರಳಿ ಹೋದ ಬಳಿಕ ಪ್ರವಾದಿವರ್ಯರ ಸೂಚನೆಯ ಮೇರೆಗೆ, ಮಕ್ಕಾದಲ್ಲಿ ತೀರಾ ಪ್ರತಿಕೂಲ ಸ್ಥಿತಿಯಲ್ಲಿ ಬದುಕುತ್ತಿದ್ದ ಮುಸ್ಲಿಮರು ಗುಟ್ಟಾಗಿ ಮಕ್ಕಾವನ್ನು ತೊರೆದು ಮದೀನಾದತ್ತ ವಲಸೆ ಹೋಗಲಾರಂಭಿಸಿದರು. ಎರಡು ತಿಂಗಳ ಬಳಿಕ ಅಂದರೆ ಹೆಚ್ಚಿನೆಲ್ಲಾ ಅನುಯಾಯಿಗಳು ವಲಸೆ ಹೋದ ಬಳಿಕ ಸ್ವತಃ ಪ್ರವಾದಿ (ಸ) ಸುಮಾರು 500 ಕಿ.ಮೀ. ದೂರದ ಮದೀನಾಗೆ ವಲಸೆಹೋದರು. ಪ್ರತಿಯೊಬ್ಬ ಅನುಯಾಯಿಯ ವಲಸೆಯೂ ಸಾಹಸಮಯವಾಗಿತ್ತು. ಪ್ರವಾದಿ ಮತ್ತು ಅವರ ಅನುಯಾಯಿಗಳ ವಲಸೆಯ ಸ್ವರೂಪ ಹಾಗೂ ಸನ್ನಿವೇಶದ ಕುರಿತಂತೆ ಮತ್ತು ಸ್ವತಃ ಅವರ ವಲಸೆಯ ಘಟನೆಯ ಬಗ್ಗೆ ಹಲವು ರೋಚಕ ಕಥೆಗಳು, ಐತಿಹ್ಯಗಳು ಮತ್ತು ಐತಿಹಾಸಿಕ ವರದಿಗಳಿವೆ. ಏನಿದ್ದರೂ ಪ್ರಸ್ತುತ ವಲಸೆಯೊಂದಿಗೆ ಮಾನವ ಇತಿಹಾಸದಲ್ಲಿ ಒಂದು ನೂತನ ಶೇಕ್ ಅಥವಾ ಹೊಸ ಯುಗವೊಂದು ಆರಂಭವಾಯಿತು. ಅರಬಿ ಭಾಷೆಯಲ್ಲಿ ಹಿಜ್ರತ್ ಅಂದರೆ ವಲಸೆ. ಆದ್ದರಿಂದಲೇ ವಲಸೆಯೊಂದಿಗೆ ಆರಂಭವಾದ ಮುಸ್ಲಿಮ್ ಶಕೆಯನ್ನು ಹಿಜರಿ ಶಕೆ ಎಂದು ಹಾಗೂ ಮುಸ್ಲಿಮ್ ಕ್ಯಾಲೆಂಡರ್ ಅನ್ನು ಹಿಜರಿ ಕ್ಯಾಲೆಂಡರ್ ಎಂದು ಕರೆಯಲಾಗುತ್ತದೆ.

ಸಮಾಜದ ನವ ನಿರ್ಮಾಣ 
ಪ್ರವಾದಿ (ಸ) ಮದೀನಾಗೆ ಹೋದಾಗ ಅಲ್ಲೊಂದು ಅಧಿಕೃತ ಸರಕಾರ ಇರಲಿಲ್ಲ. ಮದೀನಾ ಮಾತ್ರವಲ್ಲ ಅರಬ್ ನಾಡಿನ ಹೆಚ್ಚಿನೆಡೆ ಅಧಿಕೃತ ಆಡಳಿತ ವ್ಯವಸ್ಥೆ ಅಸ್ತಿತ್ವದಲ್ಲಿರಲಿಲ್ಲ. ಅಲ್ಲಲ್ಲಿ ವಿವಿಧ ಬುಡಕಟ್ಟು ಜನಾಂಗಗಳು ಮತ್ತು ಕುಲಗೋತ್ರಗಳು ತಮ್ಮ ಶಕ್ತಿ ಸಾಮರ್ಥ್ಯಗಳ ಆಧಾರದಲ್ಲಿ ಭೂಮಿಯ ಯಾವ ಭಾಗ ಯಾರಿಗೆ ಸೇರಿದ್ದೆಂದು ತೀರ್ಮಾನಿಸಿ ಅದರ ಆಧಾರದಲ್ಲೇ ಹಕ್ಕು ಸಾಧಿಸುತ್ತಿದ್ದರು. ಪ್ರತಿಯೊಂದು ಜನಾಂಗಕ್ಕೆ ಆಯಾ ಜನಾಂಗದ ನಾಯಕನೇ ಆಡಳಿತಗಾರನಾಗಿರುತ್ತಿದ್ದನು. ಯಾವುದಾದರೂ ಜನಾಂಗದೊಳಗಿನ ವಿವಿಧ ಪಂಗಡಗಳ ನಡುವೆ ಅಥವಾ ಎರಡು ಭಿನ್ನ ಜನಾಂಗಗಳ ನಡುವೆ ಘರ್ಷಣೆ ಏರ್ಪಟ್ಟಾಗ ಸಕಾಲದಲ್ಲಿ ಅದನ್ನು ಇತ್ಯರ್ಥಗೊಳಿಸಬಲ್ಲ ಯಾವುದೇ ಏರ್ಪಾಡು ಅಲ್ಲಿರಲಿಲ್ಲ. ಇದರಿಂದಾಗಿ ಚಿಕ್ಕಪುಟ್ಟ ಕಾರಣಗಳಿಗಾಗಿ ಆರಂಭವಾದ ಜಗಳಗಳು ಯುದ್ಧದ ರೂಪ ತಾಳಿ ಹಲವು ವರ್ಷಗಳಷ್ಟು ಕಾಲ ಮುಂದುವರಿಯುತ್ತಿದ್ದವು. ಅಂತಹ ಸಮಾಜದಲ್ಲಿ ಪ್ರವಾದಿ (ಸ) ತಮ್ಮ ಅನುಯಾಯಿಗಳನ್ನು ಮಾತ್ರವಲ್ಲ ಮದೀನಾ ಮತ್ತು ಅದರ ಸುತ್ತಮುತ್ತಲ ವಿವಿಧ ಜನಾಂಗ, ಕುಲಗೋತ್ರಗಳು ಮತ್ತು ಬುಡಕಟ್ಟುಗಳ ಜನರನ್ನು ಒಂದುಗೂಡಿಸಿ ಅವರೆಲ್ಲರ ಸಮ್ಮತಿಯೊಂದಿಗೆ ಒಂದು ಸರಕಾರವನ್ನು ಸ್ಥಾಪಿಸಿದರು. ವಿಶೇಷವೇನೆಂದರೆ ಏಳನೇ ಶತಮಾನದಲ್ಲಿ (ಕ್ರಿ.ಶ. 622) ಧರ್ಮಸ್ಥಾಪಕರೊಬ್ಬರು ಸ್ಥಾಪಿಸಿದ ಆ ಸರಕಾರವು ಒಂದು ಧರ್ಮದವರ ಹಿತಕ್ಕಾಗಿ ಸ್ಥಾಪಿಸಿದ ಸರಕಾರವಾಗಿರಲಿಲ್ಲ. ಅದು ವಿಭಿನ್ನ ಧಾರ್ಮಿಕ ಹಿನ್ನೆಲೆಯ ಎಲ್ಲ ನಾಗರಿಕರಿಗೆ ಸಮಾನ ಸ್ಥಾನಮಾನವನ್ನು ನೀಡುವ, ಎಲ್ಲರಿಗೆ ನ್ಯಾಯ ಒದಗಿಸುವ, ಎಲ್ಲರ ಸಮಗ್ರ ಅಭ್ಯುದಯ ಬಯಸುವ ಮತ್ತು ಎಲ್ಲರಿಗೆ ಗೌರವ ಹಾಗೂ ಭದ್ರತೆ ನೀಡುವ ಸರಕಾರವಾಗಿತ್ತು.

ಪ್ರಥಮ ಲಿಖಿತ ಸಂವಿಧಾನ
ತಾವು ಮದೀನಾ ಪ್ರವೇಶಿಸಿದ ವರ್ಷವೇ ಪ್ರವಾದಿ ಮುಹಮ್ಮದ್ (ಸ) ಮಾಡಿದ ಒಂದು ಅನನ್ಯ ಸಾಧನೆ ಏನೆಂದರೆ, ಅಲ್ಲಿ ಅವರು ಎಲ್ಲ ಪಂಗಡಗಳೂ ಒಪ್ಪುವ ಒಂದು ಸಂವಿಧಾನವನ್ನು ರಚಿಸಿದರು. ಅದು ಜಗತ್ತಿನ ಇತಿಹಾಸದಲ್ಲೇ ಪ್ರಜೆಗಳ ಸಹಮತದೊಂದಿಗೆ ರಚಿಸಲಾದ ಪ್ರಥಮ ಲಿಖಿತ ಸಂವಿಧಾನವಾಗಿತ್ತು. ಪ್ರಸ್ತುತ ಸಂವಿಧಾನದ ಮೂಲ ಪ್ರತಿಯಲ್ಲಿ ಕ್ರಮ ಸಂಖ್ಯೆ ಇರಲಿಲ್ಲವಾದ್ದರಿಂದ, ಮುಂದಿನ ದಿನಗಳಲ್ಲಿ ಅದರ ವಿಶ್ಲೇಷಣೆಗೆ ಹೊರಟವರು ಅದನ್ನು ಹಲವಾರು ಪರಿಚ್ಛೇದಗಳಾಗಿ ವಿಂಗಡಿಸಿದ್ದಾರೆ. ಕೆಲವರು ಅದನ್ನು ಕೇವಲ 28 ಪರಿಚ್ಛೇದಗಳಾಗಿ ವಿಂಗಡಿಸಿದ್ದರೆ ಕೆಲವರು ಪರಿಚ್ಛೇದಗಳ ಸಂಖ್ಯೆಯನ್ನು 63ರ ವರೆಗೂ ವಿಸ್ತರಿಸಿದ್ದಾರೆ. ನಾವು ಈ ಪೈಕಿ ಯಾವ ನಿರೂಪಣೆಯನ್ನು ನೆಚ್ಚಿಕೊಂಡರೂ ಅದರ ಒಂದು ಗಣ್ಯ ಭಾಗವು ಮುಸ್ಲಿಮರಿಗೆ ಸಂಬಂಧಿಸಿದೆ ಮತ್ತು ಬಹುತೇಕ ಅರ್ಧಭಾಗವು ಮುಸ್ಲಿಮರಲ್ಲದ ಇತರ ಸಮುದಾಯಗಳ ಹಕ್ಕು ಬಾಧ್ಯತೆಗಳು ಮತ್ತು ಅವರ ಹಿತ ರಕ್ಷಣೆಗೆ ಸಂಬಂಧಿಸಿದೆ ಎಂಬ ಅಂಶವು ತುಂಬಾ ಗಮನಾರ್ಹವೆನಿಸುತ್ತದೆ. ಆ ಸಂವಿಧಾನದನ್ವಯ ಎಲ್ಲ ಧರ್ಮಗಳ ಮತ್ತು ವಿವಿಧ ಸಮುದಾಯಗಳ ಸದಸ್ಯರಿಗೆ ಸಮಾನ ಮಟ್ಟದ ಪೌರತ್ವವನ್ನು ಅಂಗೀಕರಿಸಲಾಗಿತ್ತು. ಎಲ್ಲ ಧರ್ಮಗಳ ಅನುಯಾಯಿಗಳಿಗೆ ತಮ್ಮ ತಮ್ಮ ಧರ್ಮಗಳನ್ನು ನಿರಾತಂಕವಾಗಿ ಪಾಲಿಸುವ ಅಧಿಕಾರವಿದೆ ಮತ್ತು ಯಾರ ಮೇಲೂ ಅವರ ಇಚ್ಛೆಗೆ ವಿರುದ್ಧವಾಗಿ ಯಾವುದೇ ಧರ್ಮವನ್ನು ಹೇರಬಾರದು ಎಂದು ವಿಧಿಸಲಾಗಿತ್ತು.

ಈ ಸಂವಿಧಾನದ ಪ್ರಕಾರ ಸರಕಾರದ ಸಂವಿಧಾನ ದತ್ತ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿತ್ತು ಮತ್ತು ಪ್ರತಿಯೊಬ್ಬ ಪ್ರಜೆಯ ಹಕ್ಕು ಹಾಗೂ ಹಿತಾಸಕ್ತಿಗಳ ಸಂರಕ್ಷಣೆಯು ಪ್ರವಾದಿ ಮುಹಮ್ಮದರ ನೇತೃತ್ವದ ಸರಕಾರದ ಕರ್ತವ್ಯವಾಗಿತ್ತು. ಸರಕಾರವು ತನ್ನ ಅಧಿಕಾರ ವ್ಯಾಪ್ತಿಗೆ ಒಳಪಡುವ ಪ್ರತಿಯೊಬ್ಬ ನಾಗರಿಕನ ಮೂಲಭೂತ ಮಾನವೀಯ ಹಕ್ಕುಗಳನ್ನು ಗುರುತಿಸಿ ರಕ್ಷಿಸುವ ಹೊಣೆ ಹೊತ್ತಿತು. ನಾಗರಿಕರ ಜೀವ ಮತ್ತು ಸೊತ್ತುಗಳ ರಕ್ಷಣೆ ಮಾತ್ರವಲ್ಲ ಅವರ ಪೈಕಿ ದುರ್ಬಲ ಸ್ಥಿತಿಯಲ್ಲಿರುವವರ ಅನ್ನ, ವಸ್ತ್ರ ಮತ್ತು ಆಶ್ರಯದಂತಹ ಮೂಲಭೂತ ಅಗತ್ಯಗಳ ಈಡೇರಿಕೆಯ ಹೊಣೆ ಕೂಡಾ ಸರಕಾರದ್ದಾಗಿತ್ತು. ಪ್ರವಾದಿ ಸ್ಥಾಪಿಸಿದ ಆಡಳಿತ ವ್ಯವಸ್ಥೆಯು ಕೇಂದ್ರ ಪ್ರಧಾನವಾಗಿರದೆ ಒಕ್ಕೂಟ ವ್ಯವಸ್ಥೆಯ ಸ್ವರೂಪದಲ್ಲಿತ್ತು. ಹೆಚ್ಚಿನೆಲ್ಲಾ ಆಡಳಿತಾತ್ಮಕ ಚಟುವಟಿಕೆಗಳನ್ನು ಕೆಳಸ್ತರಕ್ಕ�

Writer - ಹವ್ವಾ ಶಹಾದತ್ ಬೋಳಾರ

contributor

Editor - ಹವ್ವಾ ಶಹಾದತ್ ಬೋಳಾರ

contributor

Similar News