‘ಟಿಪ್ಪು ಸುಲ್ತಾನ್ ಕೋಮು ಸೌಹಾರ್ದತೆ ಸ್ಥಾಪಿಸಿದ ಮಾದರಿ ಆಡಳಿತಗಾರ’

Update: 2019-11-09 16:45 GMT

ಬೆಂಗಳೂರು, ನ.9: ಟಿಪ್ಪು ಸುಲ್ತಾನ್ ನಮ್ಮ ನಾಡು ಕಂಡ ಅಪ್ರತಿಮ ವೀರರಷ್ಟೇ ಅಲ್ಲ, ನಾಡಿನ ಒಳಿತಿಗಾಗಿ ತನ್ನ ಮಕ್ಕಳನ್ನೆ ಒತ್ತೆಯಿಟ್ಟ ದೇಶಪ್ರೇಮಿ. ತನ್ನ ತಂದೆ ಹೈದರಾಲಿ ಆರಂಭಿಸಿದ ಬ್ರಿಟಿಷ್ ವಿರೋಧಿ ಬಂಡಾಯವನ್ನು ಸಮರ್ಥವಾಗಿ ಮುಂದುವರೆಸಿದ ಸಾಹಸಿ ಎಂದು ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಅಧ್ಯಕ್ಷ ಸೂಫಿ ವಲಿಬಾ ತಿಳಿಸಿದ್ದಾರೆ.

ಶನಿವಾರ ನಗರದ ಕಲಾಸಿಪಾಳ್ಯದಲ್ಲಿರುವ ಟಿಪ್ಪು ಸುಲ್ತಾನ್ ಅವರ ಬೇಸಿಗೆ ಅರಮನೆ ಆವರಣದಲ್ಲಿ ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಟಿಪ್ಪು ಜಯಂತಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಟಿಪ್ಪು ಸುಲ್ತಾನ್ ತಾನು ಆಳುತ್ತಿದ್ದ ಮೈಸೂರು ಪ್ರಾಂತ್ಯದಲ್ಲಿ ಕೋಮು ಸೌಹಾರ್ದತೆಯನ್ನು ಸ್ಥಾಪಿಸಿದ ಮಾದರಿ ಆಡಳಿತಗಾರ. ತನ್ನ ಸಾಮ್ರಾಜ್ಯದ ನಾಲ್ಕು ದಿಕ್ಕುಗಳಲ್ಲಿರುವ ದೇವಾಲಯಗಳಿಗೆ ಯಾವುದೇ ತಾರತಮ್ಯ ಮಾಡದೇ ಕೊಡುಗೆಗಳನ್ನು ಮತ್ತು ದಾನಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು.

ತನ್ನ ಆಡಳಿತದ ನಿರ್ಣಾಯಕ ಸ್ಥಾನಗಳಲ್ಲಿ ಇನ್ನಿತರೆ ಧರ್ಮದವರನ್ನು ಗಣನೀಯವಾಗಿ ನೇಮಿಸಿಕೊಂಡಿದ್ದರ ನಿರ್ದಿಷ್ಟ ವಿವರಗಳು ಕನ್ನಡ ಭಾಷೆಯಲ್ಲಿರುವ ಅವರ ಪತ್ರಗಳು, ಶಾಸನಗಳು, ಅವರ ಅಭಿವೃದ್ಧಿ ಕಾರ್ಯಗಳ ಸಾಕ್ಷಿಗಳು ಮುಂತಾದವುಗಳು, ಟಿಪ್ಪುವಿನ ಧರ್ಮಸಹಿಷ್ಣುತೆ ಹಾಗೂ ಅಭಿವೃದ್ಧಿ ಪರ ಉದಾರ ಧೋರಣೆಗಳಿಗೆ ಸಾಕ್ಷಿಯಾಗಿವೆ ಎಂದು ಸೂಫಿ ವಲಿಬಾ ತಿಳಿಸಿದರು.

ರಾಜ್ಯ ಸರಕಾರವು ಟಿಪ್ಪು ಸುಲ್ತಾನ್ ಜನ್ಮ ದಿನವನ್ನು ‘ಕೋಮು ಸೌಹಾರ್ದ ದಿನ’ವನ್ನಾಗಿ ಅಧಿಕೃತವಾಗಿ ಆಚರಿಸಲು ಆದೇಶ ಹೊರಡಿಸಬೇಕು. ಮೂಲಭೂತವಾದಿಗಳು ಅನಗತ್ಯವಾಗಿ ಮಾಡುವ ಅಪ ವ್ಯಾಖ್ಯಾನಗಳಿಗೆ ಕಿವಿಗೊಡದೆ ಟಿಪ್ಪು ಸುಲ್ತಾರ್‌ರನ್ನು ಸೌರ್ಹಾದದ ಸಂಕೇತವಾಗಿ ಕಾಣಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಅನುದಾನರಹಿತ ಅಲ್ಪಸಂಖ್ಯಾತರ ಶಾಲೆಗಳ ಒಕ್ಕೂಟದ ಅಧ್ಯಕ್ಷ ಡಾ.ಗುಲ್‌ಷಾದ್ ಅಹಮದ್, ದಿ ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಕ್ ಅಹಮದ್, ಮುಖಂಡರಾದ ಆರಿಫ್ ಅಹಮದ್, ಮುನಿನಂಜೇಗೌಡ, ಡಾ.ಯೂನುಸ್ ಜಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News