ಎಸ್.ಆರ್.ಹಿರೇಮಠ್ ರಾಜಿ ರಹಿತ ಹೋರಾಟಗಾರ: ಸುಗತ ಶ್ರೀನಿವಾಸರಾಜು

Update: 2019-11-09 16:48 GMT
ಎಸ್.ಆರ್.ಹಿರೇಮಠ್

ಬೆಂಗಳೂರು, ನ.9: ಎಸ್.ಆರ್.ಹಿರೇಮಠ್ ಯಾವುದೇ ಹಂಗನ್ನು ತೊರೆದು, ಮುಲಾಜಿಲ್ಲದೆ ಸಾಮಾಜಿಕ ಹೋರಾಟ ಕಟ್ಟಿದವರಾಗಿದ್ದು, ನಾಡಿನ ಬುದ್ಧಿಜೀವಿಗಳಿಂದ ಭಿನ್ನವಾದವರಾಗಿದ್ದಾರೆ ಎಂದು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಹೇಳಿದ್ದಾರೆ.

ಶನಿವಾರ ನಗರದ ಗಾಂಧೀ ಭವನದಲ್ಲಿ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಆಯೋಜಿಸಿದ್ದ ಎಸ್.ಆರ್.ಹೀರೇಮಠ್ 75- ಹೀಗೊಂದು ಕೃತಜ್ಞತೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮಲ್ಲಿರುವ ಅನೇಕ ಬುದ್ಧಿಜೀವಿಗಳ ನಡುವೆ ಎಸ್.ಆರ್.ಹಿರೇಮಠ್ ಭಿನ್ನವಾಗಿ ನಿಲ್ಲುತ್ತಾರೆ. ನಾನು ಕನ್ನಡದ ಎರಡು ಪ್ರಮುಖ ದಿನಪತ್ರಿಕೆಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದ ವೇಳೆ ನಾಡಿನ ಹಿರಿಯ ಸಾಹಿತಿಗಳಾದ ದೇವನೂರ ಮಹಾದೇವ, ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಹಿರೇಮಠ್‌ರನ್ನು ಸಾಕ್ಷಿಪ್ರಜ್ಞೆಗಳು ಎಂದಿದ್ದೆ ಎಂದು ನುಡಿದರು.

ಇಂದಿನ ಬುದ್ಧಿಜೀವಿಗಳಿಗೆ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದ ಅವರು, ನಾನು ಹಿಂದಿನ ಸರಕಾರದ ಅವಧಿಯಲ್ಲಿ ಅಕಾಡೆಮಿ, ಕಮಿಟಿಗಳಲ್ಲಿ ಇದ್ದೆವು. ಈಗ ಸರಕಾರ ಬದಲಾಗಿದೆ ರಾಜೀನಾಮೆ ನೀಡುತ್ತೇವೆ ಎನ್ನುತ್ತಾರೆ. ಅಲ್ಲದೆ, ರಾಜ್ಯೋತ್ಸವ ಅಂತಹ ಪ್ರಶಸ್ತಿಗಳಿಗೆ ಅರ್ಜಿ ಹಾಕಿಕೊಂಡು ಪ್ರಶಸ್ತಿ ಪಡೆಯುವಷ್ಟರ ಮಟ್ಟಿಗೆ ಇಳಿದಿರುವುದು ಸಲ್ಲ ಎಂದರು.

ಹಿರೇಮಠ್, ದೇವನೂರು, ದೊರೆಸ್ವಾಮಿ ಇವರು ನಿಜವಾದ ಬುದ್ಧಿಜೀವಿಗಳು. ಬೇರೆ ಬುದ್ಧಿಜೀವಿಗಳು ಸಿದ್ದರಾಮಯ್ಯ ಸರಕಾರ ಇದ್ದಾಗ ಏನು ಮಾಡುತ್ತಾರೆ, ಹೋದಾಗ ಏನು ಮಾಡುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ. ನಮ್ಮ ನಡುವೆ ಇರುವ ಬುದ್ಧಿಜೀವಿಗಳು ನಮ್ಮ ದೇಶದ ಬಹುದೊಡ್ಡ ಸಮಸ್ಯೆಗಳ ಬಗ್ಗೆ ಎಲ್ಲಾದರೂ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.

ದೇಶದ ಬಹುದೊಡ್ಡ ಹಗರಣ ರಫೇಲ್ ಡೀಲ್, ನೋಟು ಅಮಾನ್ಯೀಕರಣ, ಆರ್‌ಸಿಇಪಿ ಸೇರಿದಂತೆ ಯಾವ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಆದರೆ, ಅಕಾಡೆಮಿ ಅಧ್ಯಕ್ಷಗಿರಿಗೆ, ವಿಶ್ವವಿದ್ಯಾಲಯಗಳಲ್ಲಿ ಅಧಿಕಾರಕ್ಕಾಗಿ ಅರ್ಜಿ ಸಲ್ಲಿಸಲು ಮುಂದೆ ಇರುತ್ತಾರೆ ಎಂದು ಸುಗತ ಶ್ರೀನಿವಾಸರಾಜು ಕಟುವಾಗಿ ಟೀಕಿಸಿದರು.

ಹಿರೇಮಠರಿಗೆ ಯಾರೂ ಪ್ರಶಸ್ತಿ ಕೊಡುವ ಹಾಗಿಲ್ಲ. ಚರಿತ್ರೆ ಅವರನ್ನು ಸ್ಮರಿಸುತ್ತದೆ. ಅದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಎಸ್.ಆರ್.ಹಿರೇಮಠ್‌ರ ಜೀವನ ನಮ್ಮ ನಾಡಿನ ಚಳವಳಿಗೆ ಸಾಕ್ಷಿ ಪ್ರಜ್ಞೆಯಾಗಿದೆ. ಅವರು ನನಗೂ ಅನೇಕ ಹೋರಾಟಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಭ್ರಷ್ಟಾಚಾರ ವಿರೋಧಿ ಹೋರಾಟ, ರೈತರ ಪರವಾದ ಚಳವಳಿ ಸೇರಿದಂತೆ ಅನೇಕ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.

ಹಿರೇಮಠ್ ಅವರು ಎಲ್ಲವನ್ನು ನೇರವಾಗಿ ಮಾತನಾಡುವ ವ್ಯಕ್ತಿಯಾಗಿದ್ದು, ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಮಾತನಾಡುತ್ತಾರೆ. ಅದರಿಂದ ಅನೇಕರಿಗೆ ಕೋಪವೂ ಬಂದಿದೆ. ಅಲ್ಲದೆ, ಅವರು ಸಾಕ್ಷಿಗಳು ಹಾಗೂ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಚರ್ಚೆ ಮಾಡುತ್ತಾರೆ ಎಂದು ನುಡಿದರು.

ಜನರ ಸಮಸ್ಯೆಗಳ ವಿರುದ್ಧ, ನಾಡಿನ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಇದುವರೆಗೂ ಸ್ವಂತ ಆಸ್ತಿ ಏನು ಇಲ್ಲ ಎಂಬುದು ವಾಸ್ತವ. ಖಾಸಗಿ ಆಸ್ತಿಯನ್ನು ಮಾಡಿಕೊಂಡವರಲ್ಲ. ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಒಬ್ಬ ಶ್ರೇಷ್ಠ ಕಾರ್ಯಕರ್ತರನ್ನು ನೆನೆಯಬೇಕಾಗಿರುವುದು ಎಲ್ಲರ ಕರ್ತವ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿಕೃಷ್ಣಾರೆಡ್ಡಿ, ಹೋರಾಟಗಾರ ರಾಘವೇಂದ್ರ ಕುಷ್ಠಗಿ, ಡಾ.ಪವಾರ್, ಸಿ.ಎನ್.ದೀಪಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News