ಕವಿ ಕಾಳಿದಾಸನ ಹೆಸರನ್ನು ಶಾಶ್ವತಗೊಳಿಸುವ ಕಾರ್ಯವಾಗಲಿ: ಎಚ್.ವಿಶ್ವನಾಥ್

Update: 2019-11-09 16:50 GMT

ಬೆಂಗಳೂರು, ನ.9: ಕವಿ ಕಾಳಿದಾಸನ ಹೆಸರನ್ನು ಮುಂದಿನ ತಲೆಮಾರುಗಳಿಗೂ ಜೀವಂತವಾಗಿಡುವ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು ಕಾರ್ಯಯೋಜನೆಯೊಂದನ್ನು ರೂಪಿಸಬೇಕಿದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ತಿಳಿಸಿದ್ದಾರೆ.

ಶನಿವಾರ ಕಾಳಿದಾಸ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಂಘಟನೆ ನಗರದ ಯವನಿಕದಲ್ಲಿ ಆಯೋಜಿಸಿದ್ದ ಲೇಖಕ ಪುರುಷೋತ್ತಮ ದಾಸ್ ಹೆಗ್ಗಡೆ ಅವರ ‘ಕಾಳಿದಾಸನ ಮೇಘದೂತ’ ವಿಭಿನ್ನ ಕೋನಗಳ ಅವಲೋಕನ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕವಿ ಕಾಳಿದಾಸನ ಸಾಹಿತ್ಯವು ಜಗತ್‌ಪ್ರಸಿದ್ಧ ನಾಟಕಕಾರ ಶೇಕ್ಸ್‌ಪಿಯರ್ ಕಾವ್ಯಕ್ಕೆ ಸರಿಸಾಟಿಯಾಗಿ ನಿಲ್ಲುವಂತಹದ್ದಾಗಿದೆ. ಆದರೆ, ಕಾಳಿದಾಸನ ಕಾವ್ಯವನ್ನು ಜನಸಾಮಾನ್ಯರಿಗೆ ಪರಿಚಯಿಸುವಲ್ಲಿ ನಾವು ವಿಫಲರಾಗಿದ್ದೇವೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಳಿದಾಸನ ಕುರಿತು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆತನನ್ನು ಜನತೆಗೆ ಪರಿಚಯಿಸಬೇಕಿದೆ ಎಂದು ಅವರು ಹೇಳಿದರು.

ಇಂಗ್ಲೆಂಡ್‌ನ ಸಣ್ಣ ಹಳ್ಳಿಯಲ್ಲಿ 450 ವರ್ಷಗಳ ಹಿಂದೆ ಹುಟ್ಟಿದ ಶೇಕ್ಸ್‌ಪಿಯರ್‌ನನ್ನು ಅಲ್ಲಿನ ಜನತೆ ಇಂದಿಗೂ ಜೀವಂತವಾಗಿಟ್ಟಿದ್ದಾರೆ. ಪ್ರತಿ ದಿನ ಆತ ಬರೆದಿರುವ ನಾಟಕಗಳು ಪ್ರದರ್ಶನವಾಗುತ್ತವೆ. ವರ್ಷದಲ್ಲಿ ಒಂದು ತಿಂಗಳು ಶೇಕ್ಸ್‌ಪಿಯರ್ ವೇಷ ಧರಿಸಿ ಸಂಭ್ರಮಿಸುತ್ತಾರೆ. ನಾವು ಸಹ ಇದೇ ಮಾದರಿಯಲ್ಲಿ ಕಾಳಿದಾಸನ ದಿನವನ್ನು ಆಚರಿಸಬೇಕು. ಆತನ ವೇಷ ಹಾಕಿ ಸಂಭ್ರಮಿಸಬೇಕು ಎಂದು ಅವರು ತಿಳಿಸಿದರು.

ಕಾಳಿದಾಸ ತಮ್ಮ ಕಾವ್ಯಗಳಲ್ಲಿ ಪುರುಷ-ಮಹಿಳೆಯ ಪ್ರೀತಿ-ಪ್ರಣಯಗಳ ಕುರಿತ ಸಂಬಂಧವನ್ನು ನವಿರಾಗಿ ದಾಖಲಿಸಿದ್ದಾನೆ. ಇದು ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಕಾಣಲು ಸಾಧ್ಯವಿಲ್ಲ. ಅತ್ಯಂತ ಮೌಲ್ಯಯುತ ಹಾಗೂ ಪ್ರಸ್ತುತ ಕಾಲಮಾನಕ್ಕೆ ಒಗ್ಗುವಂತ ಶ್ರೇಷ್ಠ ಸಾಹಿತ್ಯವನ್ನು ಕಾಳಿದಾಸ ನೀಡಿದ್ದು, ಈ ಕುರಿತು ಯುವ ಸಮುದಾಯಕ್ಕೆ ತಲುಪಿಸಬೇಕಿದೆ ಎಂದು ಅವರು ಹೇಳಿದರು.

ಡಾ.ರಾಜ್‌ಕುಮಾರ್ ತಮ್ಮ ಸಿನೆಮಾಗಳಲ್ಲಿ ಕಾಳಿದಾಸ, ಕನಕದಾಸ, ಪುರಂದರ ದಾಸ, ಭಕ್ತ ಕುಂಬಾರ ಪಾತ್ರದಲ್ಲಿ ಅಭಿನಯಿಸುವ ಮೂಲಕ ಅವರನ್ನು ಜನಸಾಮಾನ್ಯರಿಗೆ ಪರಿಚಯಿಸುವಂತಹ ಕೆಲಸ ಮಾಡಿದ್ದಾರೆ. ಈಗ ನಾವು ಆ ಮಹಾನ್ ಸಾಧಕರನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸಕ್ಕೆ ಮುಂದಾಗೋಣವೆಂದು ಅವರು ಹೇಳಿದರು.

ಸಂಸ್ಕೃತದಲ್ಲಿರುವ ಕಾಳಿದಾಸನ ಕಾವ್ಯವನ್ನು ಕನ್ನಡಕ್ಕೆ ಅನುವಾದ ಮಾಡುವುದು ಸವಾಲಿನ ಕೆಲಸ. ಇದನ್ನು ಲೇಖಕ ಪುರುಷೋತ್ತಮ ದಾಸ್ ಹೆಗ್ಗಡೆ ಯಶಸ್ವಿಯಾಗಿ ಮುಗಿಸಿ, ಕನ್ನಡಕ್ಕೊಂದು ಅಪರೂಪದ ಕೃತಿಯೊಂದನ್ನು ನೀಡಿದ್ದಾರೆ. ಪ್ರೀತಿ, ಪ್ರೇಮದ ಪ್ರತೀಕವಾಗಿರುವ ಕಾಳಿದಾಸನ ಕಾವ್ಯಗಳು ಎಲ್ಲರೂ ಓದುವಂತಾಗಲಿ ಎಂದು ಅವರು ಆಶಿಸಿದರು.

ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಸಿದ್ಧರಾಮಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಲೇಖಕ ಪುರುಷೋತ್ತಮ ದಾಸ್ ಹೆಗ್ಗಡೆ, ಬಿ. ದೇವರಾಜ, ಪ್ರೊ. ನಾರಾಯಣ ಘಟ್ಟ, ಆಚಾರ್ಯ ನಾಗರಾಜ್ ರಂಗಸ್ವಾಮಿಗೌಡ, ಲಿಂಗಪ್ಪ, ಗುರುಪಾದಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News