5ನೇ ಟ್ವೆಂಟಿ-20: ‘ಸೂಪರ್ ಓವರ್’ನಲ್ಲಿ ಕಿವೀಸ್‌ಗೆ ಸೋಲುಣಿಸಿದ ಇಂಗ್ಲೆಂಡ್

Update: 2019-11-10 08:08 GMT

ಆಕ್ಲಂಡ್, ನ.10: ಮಳೆಬಾಧಿತ ಐದನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆತಿಥೇಯ ನ್ಯೂಝಿಲ್ಯಾಂಡ್ ತಂಡವನ್ನು ಸೂಪರ್ ಓವರ್‌ನಲ್ಲಿ ಮಣಿಸಿ 5 ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ರೋಚಕವಾಗಿ ಗೆದ್ದುಕೊಂಡಿದೆ.

ಮಳೆಯಿಂದಾಗಿ ಪಂದ್ಯವನ್ನು 11 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ರವಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿವೀಸ್ 11 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 146 ರನ್ ಗಳಿಸಿತು.

ಗೆಲ್ಲಲು 147 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 11 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 146 ರನ್ ಗಳಿಸಿ ಪಂದ್ಯವನ್ನು ಟೈಗೊಳಿಸಿತು. ಆಗ ಫಲಿತಾಂಶ ನಿರ್ಧರಿಸಲು ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 17 ರನ್ ಗಳಿಸಿತು. ಜಾನಿ ಬೈರ್‌ಸ್ಟೋವ್ 8 ಹಾಗೂ ಇಯಾನ್ ಮೊರ್ಗನ್ 9 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ನ್ಯೂಝಿಲ್ಯಾಂಡ್ 1 ವಿಕೆಟ್ ಕಳೆದುಕೊಂಡು 8 ರನ್ ಗಳಿಸಿತು. ಗೆಲ್ಲಲು 9 ರನ್ ಕೊರತೆ ಎದುರಿಸಿತು.

ಇದಕ್ಕೂ ಮೊದಲು  ಇಂಗ್ಲೆಂಡ್‌ಗೆ ಗೆಲ್ಲಲು ಕೊನೆಯ ಓವರ್‌ನಲ್ಲಿ 16 ರನ್ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ಜೋರ್ಡನ್ ಒಟ್ಟು 12 ರನ್(1 ಬೌಂಡರಿ,1 ಸಿಕ್ಸರ್, 2 ರನ್)ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್‌ನ ಪರ ಗರಿಷ್ಠ ಸ್ಕೋರ್ ಗಳಿಸಿದ ಬೈರ್‌ಸ್ಟೋವ್(47,18 ಎಸೆತ, 2 ಬೌಂಡರಿ, 5 ಸಿಕ್ಸರ್)ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಕಿವೀಸ್ ಸ್ಪಿನ್ನರ್ ಸ್ಯಾಂಟ್ನರ್ ಸರಣಿಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದರು.

ಕಿವೀಸ್‌ನ ಪರ ಸ್ಯಾಂಟ್ನರ್(2-20), ನೀಶಾಮ್(2-25) ಹಾಗೂ ಟಿಮ್ ಬೌಲ್ಟ್(2-35)ತಲಾ 2 ವಿಕೆಟ್ ಪಡೆದಿದ್ದಾರೆ.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲ್ಯಾಂಡ್ ಪರ ಆರಂಭಿಕ ಆಟಗಾರ ಗಪ್ಟಿಲ್(50, 20 ಎಸೆತ,3 ಬೌಂಡರಿ,5 ಸಿಕ್ಸರ್)ಹಾಗೂ ಮುನ್ರೊ(46, 21 ಎಸೆತ, 2 ಬೌಂಡರಿ, 4 ಸಿಕ್ಸರ್)ಮೊದಲ ವಿಕೆಟ್‌ಗೆ 83 ರನ್ ಸೇರಿಸಿ ಉತ್ತಮ ಆರಂಭವನ್ನು ನೀಡಿದರು. ಸೆಫರ್ಟ್(39, 16 ಎಸೆತ, 1 ಬೌಂಡರಿ,5 ಸಿಕ್ಸರ್)ಹೊರತುಪಡಿಸಿ ಉಳಿದ ಆಟಗಾರರು ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ಈ ಪಂದ್ಯವು ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ನೆನಪಿಸಿತು. ಫೈನಲ್‌ನಲ್ಲಿ ಸೆಣಸಾಡಿದ್ದ ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ಮೊದಲಿಗೆ ಟೈ ಸಾಧಿಸಿದ್ದವು. ಆಗ ಸೂಪರ್‌ಓವರ್ ಅಳವಡಿಸಲಾಯಿತು. ಅಲ್ಲೂ ಕೂಡ ಟೈ ಆದಾಗ ಗರಿಷ್ಟ ಬೌಂಡರಿ ಗಳಿಸಿದ್ದ ಇಂಗ್ಲೆಂಡ್ ವಿಶ್ವ ಚಾಂಪಿಯನ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News