ಚೂರಿ

Update: 2019-11-10 07:38 GMT

     ನೂರುಲ್ಲಾ ತ್ಯಾಮಗೊಂಡ್ಲು

ಹಗಲಿನ ರೌದ್ರ ಉಷ್ಣವನ್ನೆಲ್ಲ ತನ್ನ ದೇಹದಲ್ಲಿ ಅಡಗಿಸಿಕೊಂಡು ನೆಲದ ಮೇಲೆ ಕೀವು ಸೋರುತ್ತಿದ್ದ ತನ್ನ ಅಂಗಾಲನ್ನು ಮೆಲ್ಲಗೆ ಊರಿ ನಡೆಯುತ್ತಿದ್ದ ಚೂರಿ ಅಕಸ್ಮಾತ್ ಗಾಯಕ್ಕೆ ಮಣ್ಣಿನ ಸ್ಪರ್ಶವಾದರೆ ನೆಲಮುಗಿಲು ಒಂದಾಗುವಂತೆ ಬೊಬ್ಬಿಡುತ್ತಿದ್ದನು. ಹಾಗೆ ಅವನು ಬೊಬ್ಬಿಟ್ಟು ಮತ್ತೆ ಮುಂದಿನ ಹೆಜ್ಜೆ ಹಾಕಬೇಕಾದರೆ ಐದಾರು ನಿಮಿಷಗಳೇ ಬೇಕು. ಹೀಗೆ ಕುಂಟುತ್ತಾ ಕುಂಟುತ್ತಾ ಹಟ್ಟಿಯಿಂದ ಒಂದು ಮೈಲಿ ದೂರವಾಗಿದ್ದ. ಚೂರಿ ಸುಮ್ಮ ಸುಮ್ಮನೆ ಕೆರೆಯ ತಾಟಿನಕಡೆ ಬರುವವನಲ್ಲ.ಅವನ ಮನಸ್ಸಿಗೆ ಗಾಢವಾದ ಪೆಟ್ಟಾದರೆ ಮಾತ್ರ ಅವನು ಹೀಗೆ ಬರುತ್ತಿದ್ದನು. ಹೀಗೆ ಬರುತ್ತಿದ್ದ ಚೂರಿಯನ್ನೇ ಕಾಯುತಲಿದ್ದ ಮಣ್ಣಿನ ಮೇಲಿನ ಚೂಪೊಂದು ಗಾಯದ ಹೊಟ್ಟೆ ಯನ್ನು ಬಗೆದು ಹೋಯಿತು. ತನ್ನ ದೇಹದ ಶಕ್ತಿಯನ್ನೆಲ್ಲ ಗಾಯವಾದ ಬಲಗಾಲಿನ ಮೇಲೆ ಹಾಕದೆ ನಡೆಯುತ್ತಿದ್ದು, ಈಗ ಚೂಪು ಕಲ್ಲೊಂದು ತಿವಿದಾಗ ತನ್ನ ಜೀವವೇ ಉದುರಿ ಹೋಯಿತೆನ್ನುವಂತೆ ನಡುಗಿ ಧುಪ್ಪೆಂದು ಬಿದ್ದನು. ಸುಡುತ್ತಿರುವ ಮಣ್ಣು ಅದರ ಮೇಲೆ ಬೋರಲಾಗಿ ಬಿದ್ದ ಚೂರಿ ಅಯ್ಯಯ್ಯಿ.. ಅಮ್ಮಾಮ್ಮೋ.. ಎಂದು ಒದ್ದಾಡಿದ. ಕೆರೆಯ ತಟದ ನೀರವತೆ ಅವನ ಚೀರಾಟವನ್ನು ನಿಧಾನವಾಗಿ ನುಂಗುತ್ತಿತ್ತು. ಒಂದೆರಡು ಕ್ಷಣ ಹಾಗೆ ಕಣ್ಣು ಮುಚ್ಚಿದ. ಅವನ ಕಾಲಿನ ಒದ್ದಾಟಕೆ ಕೀವು ಮತ್ತು ರಕ್ತ ಎರಡೂ ಒಂದಾಗಿ ಕಾಲ್ಗಳ ಅಂಗಳದಲ್ಲಿ ಚೆಲ್ಲಿ ಹೋಗಿತ್ತು. ನೋಣಗಳು ಒಂದೊಂದಾಗಿ ಸೇರಿಕೊಂಡಿದ್ದವು. ತೇಪೆಹಾಕಿದ್ದ ಟೆರಿಕಾಟ್ ಚಡ್ಡಿಯ ಕೆಳಗೆ ತೊಡೆಗಳು ಚುರುಗುಟ್ಟಿದ್ದವು. ದಿಗ್ಗನೆ ಕಣ್ಬಿಟ್ಟು ಕುಳಿತ. ಗಾಬರಿಗೊಂಡವನಂತೆ ಕಣ್ಣುಗಳನ್ನು ಚಲಿಸಿದ. ಮೇಲೆ ನೋಡಿದ. ಸೂರ್ಯ ಪಶ್ಚಿಮ ದಿಕ್ಕಿಗೆ ಮುಖಮಾಡಿ ಬಹಳ ಹೊತ್ತಾಗಿತ್ತು. ಸುತ್ತಲು ಕೆರೆಯ ನೆಲ ಚಕ್ಕಚಕ್ಕಳವಾಗಿ ಎದ್ದಿತ್ತು. ನನ್ನ ಪಾಡು ನಿನ್ನಂತೆ ಚೂರಿ ಎನ್ನುವಂತೆ ಬಿಸಿಯುಸಿರು ಬಿಡುತ್ತಿತ್ತು ಅದು. ಗಾಯದ ಬಲಗಾಲನ್ನು ಕೈಗಳಿಂದ ಎತ್ತಿ ಎಡತೊಡೆ ಮೇಲಿರಿಸಿ ಸೋರುತ್ತಿದ್ದ ರಕ್ತ ಕೀವುಗಳನ್ನು ಒರೆಸಲು ಆಜುಬಾಜು ಕತ್ತು ತಿರುವಿ ಒಂದು ಬಟ್ಟೆ ತುಂಡು ಸಿಗಬಹುದೇನೊ ಎಂದು ನೋಡಿದ. ಅಲ್ಲಿ ಯಾವುದು ಇಲ್ಲದ್ದು ಗಮನಕ್ಕೆ ಬಂದು ಹಾಗೆ ಫೂವು.. ಫೂವು.. ಎಂದು ಸೀಳು ತುಟಿಗಳಿಂದ ಉರುವಿದ. ಛುಮುಗುಡುತ್ತಿದ್ದ ನೋವಿಗೆ ಕಣ್ಣ ಪಸೆಯು ಗಾಯಕ್ಕೆ ಸರಿಯಾಗಿ ಬೀಳುತ್ತಿತ್ತು. ನಂತರ ಕತ್ತನ್ನು ಎತ್ತಿ ತನ್ನ ಬಲಗೈ ನೆಲಕ್ಕೆ ಒತ್ತಿ ಪಾಸು ಬಿದ್ದಿದ್ದ ತನ್ನ ಹರಕು ಟವಲನ್ನು ಹಿಡಿದು ಅಮ್ಮ... ಎಂದು ಉಸಿರು ಕಟ್ಟಿ ಎದ್ದನು. ಕೈಯಲ್ಲಿದ್ದ ಕಮಟು ಟವಲನ್ನು ಎಡ ಮುಂಡೆಯ ಮೇಲೆಸೆದು ಅದೇ ಕೈಯನ್ನು ಕಣ್ಗಳಿಗೆ ಚಾವಣಿ ಹಿಡಿದು ದೂರದಲ್ಲಿದ್ದ ಒಂದು ಮರದತ್ತ ಕಣ್ಣಾಯಿಸಿದ. ಮತ್ತೆ ದೇಹದ ಎಲ್ಲಾ ಕಸುವನ್ನು ಒಂದುಮಾಡಿ ಬಲಗಾಲಿನ ಮೇಲಿರಿಸಿ ಎಡಗಾಲನ್ನು ಜೋರಾಗಿ ಎತ್ತಿಡಲು ಮುಂದಾದ. ಚೂರಿಯ ಈ ಅವಸ್ಥೆ ಕಂಡ ಯಾರಿಗಾದರೂ ಅಯ್ಯೆ ಎನ್ನದಿರಲಾರದು. ಆದರೆ ಒಂದು ನರ ಪಿಳ್ಳೆಯೂ ಅಲ್ಲಿರಲಿಲ್ಲ, ಸಿವಾಯೆ ಮೇಲೆ ಹಾರುತ್ತಿದ್ದ ಹದ್ದಿನ ಹೊರತು. *-*-* ಹೊಂಗೆ ಮರದ ಉದರಕೆ ತನ್ನ ಬೆನ್ನು ಆನಿಸಿ ಬಲಗೈ ಊರಿ ಕೂತು ತನ್ನ ಎರಡು ಕಾಲುಗಳನ್ನು ನಿಧಾನವಾಗಿ ಚಾಚಿ ಪೆಡಂಭೂತ ನಿಟ್ಟುಸಿರನ್ನು ಬಿಟ್ಟು ಸಾವರಿಸಿಕೊಂಡನು. ಈಗ ಒಂದು ಬಲವಾದ ಉಸಿರಿನೊಂದಿಗೆ ಅವನ ಮಾತುಗಳು ಬರುತ್ತಿದ್ದವು : ‘‘ಯಾಕಪ್ಪ ದ್ಯಾವ್ರೆ... ಈ ಪರಿ ಕಷ್ಟ ಕೊಡ್ತಿ. ಚಿಕ್ಕಿಗೆ ಕರಸ್ಕೊಂಡಂಗೆ ನಂಗೂ ಕರಸ್ಕೊಡಿದ್ರೆ ನಿಂಗೇನಾಗ್ತಿತ್ತು. ನಾ ಯೇನ್ ಪಾಪ ಮಾಡಿದ್ನಂತ ಈ ಸಿಕ್ಸೆ... ಚೂರಿ ದೇವರಿಗೆ ಶಪಿಸುತ್ತಿದ್ದರೆ ಅತ್ತ ಗಾಯಕ್ಕೆ ನೋಣಗಳು ದಾಳಿ ನಡಿಸಿದ್ದವು. ಶೂರ್.. ಶೂರ್..’’ ಎಂದು ಬಾಗಿ ಕೈಗಳಿಂದ ಬೀಸಿದನು. ‘‘ಹಾಳದ್ವು , ವಿಷ ಯೇರೊಂಗೆ ಕಡ್ದು ಸಾಯ್ಸದು ಯಿಲ್ಲ ಅತ್ತ. ಸುಮ್ಗೆ ಪ್ರಾಣ ಹಿಂಡ್ತಾವೆ’’. ಚೂರಿಗೆ ಸಿಟ್ಟು ನೆತ್ತಿಗೇರಿತ್ತು. ಕಾಲಿನ ಕಡೆ ಬಾಗಿ ಕಾಲ ಬುಡದಲ್ಲಿದ್ದ ಮಣ್ಣನ್ನು ಬೊಗಸೆಯಾಗಿ ಹಿಡಿದು ಗಾಯದ ಮೇಲೆ ನಿಧಾನಕ್ಕೆ ಸುರಿದು ‘‘ಗುಯ್.. ಅಂತಿರಾ ಹಾಳದ್ದು... ಅನ್ನಿ ನೋಡುವ ಈಗ ಅದೆಂಗನ್ತಿರೊ ನಾನು ನೋಡೇ ಬಿಡ್ತಿನಿ’’ ಎಂದು ಮತ್ತೆ ಮಣ್ಣನ್ನು ಹಿಡಿಯಾಗಿ ಹಿಡಿದು ಅಲ್ಲೆ ಗಿರಕಿ ಹೊಡೆಯುತ್ತಿದ್ದ ಐದಾರು ನೋಣಗಳಿಗೆ ತೋರಿಸಿ ಗಾಯದ ಮೇಲೆ ತೂರಿ ಬಿಟ್ಟು ಎರಡು ಕೈಗಳನ್ನು ಉಜ್ಜಿ ಕೊಡವಿದ. ಹಾಗೆ ಕೊಡವಿದಾಗ ಧೂಳು ಗಾಳಿಗೆ ತಡಕಿತು. ಅದು ಹೇಗೆಂದರೆ, ಆತನ ಮನದೊಳಗೆ ತಡಕುತ್ತಿದ್ದ ಚಿಂತೆಯ ಕಿಡಿ ಹಾಗೆ. ಐವತ್ತು ವಸಂತಗಳ ತಮ್ಮ ಸುದೀರ್ಘ ಬದುಕಿನೊಳಗೆ ಪ್ರೀತಿಯೊಂದನ್ನು ಬಿಟ್ಟರೆ ಅವರು ಸಂಪಾದಿಸಿ ಉಳಿಸಿಕೊಂಡದ್ದು ಇನ್ನೇನು ಆಗಿರಲಿಲ್ಲ. ಒಂದೆರಡು ಹೊತ್ತಿನ ಊಟಕ್ಕೆ ಚಮ್ಮಾರಿಕೆಯ ಕುಲಕಸುಬು. ದಾಂಪತ್ಯ ಸುಖಕೆ ಪ್ರೀತಿಯ ಉಣಿಸು. ಮುಂದೆ ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಕವಿ ನುಡಿಯ ಜೀವನ ತರ್ಕ. ಇವಿಷ್ಟೇ ಚೂರಿ ಚಿಕ್ಕಿಯರ ಬದುಕಿನ ಆವರ್ತವಾಗಿದ್ದಿತು. ಆದರೆ ವಿಧಿಯ ದಾಪುಗಾಲು ಇಷ್ಟು ಬೇಗ ಬರುತ್ತದೆಂದು, ಅವನ ಬದುಕನ್ನು ಅಲ್ಲೊಲ್ಲ ಕಲ್ಲೊಲ್ಲ ಮಾಡುತ್ತದೆಂದು ಎಣಿಸಿರಲಿಲ್ಲ. ಈಗ ಚೂರಿಯ ಮನಸ್ಸಿನೊಳಗೆ ಚಿಕ್ಕಿಯ ತಿಥಿಯ ಕಿಡಿ ಹೊತ್ತಿಕೊಂಡಿತು. ಈ ಆಲೋಚನೆಯ ಕಿಡಿ ಇವತ್ತಿನದಾಗಿರಲಿಲ್ಲ. ಚಿಕ್ಕಿ ಅವನಿಂದ ಅಗಲಿದಾಗಿಂದ ತಾಕಿಕೊಂಡಿದ್ದು. ನಾಳೆಯೇ ತಿಥಿಯ ಕಾರ್ಯ ಆಗಬೇಕಾಗಿದೆ. ಆದ್ದರಿಂದ ಆತನ ತಲೆಯ ಮೇಲೆ ಆನೆ ಗಾತ್ರದ ಕಲ್ಲು ಇಟ್ಟಂಗಾಗಿದೆ. ಅದನ್ನು ಇಳಿಸುವ ಸಾಕಷ್ಟು ತರ್ಕಿಬುಗಳು ಮಾಡಿಯೂ ಆಗಿದೆ. ಆದರೆ ಯಾವುದು ಆತನ ವಜನನ್ನು ಇಳಿಸುವ ಬಲ ಇಲ್ಲದೆ ಆತ ವಿಚಲಿತನಾಗಿದ್ದಾನೆ. ತನ್ನ ಕೃಶವಾದ ದೇಹ ತನ್ನ ಚುಕ್ಕಿಯ ತಿಥಿಗೆ ಸಾಕಾಗುವಷ್ಟು ನಾಲ್ಕು ಕಾಸು ಸಂಪಾದಿಸಲಿಕ್ಕೆ ಸಹಕರಿಸುತ್ತಿಲ್ಲ ಎನ್ನುವ ಸಂಕಟದ ಹುತ್ತ ಆತನ ಎದೆಯಲ್ಲಿ ಬೆಳೆದಿತ್ತು. ಚಿಕ್ಕಿ ಬದುಕಿದ್ದಾಗಿನಿಂದಲೂ ಅಷ್ಟೇ, ಹೊತ್ತು ಮೂಡುವ ಹೊತ್ತಿಗೆ ಇಬ್ಬರೂ ಬಸ್ ನಿಲ್ದಾಣದ ಮೂಲೆಯಲ್ಲಿ ಆಕಾಶದ ಎತ್ತರಕ್ಕೆ ನಿಲ್ಲಿಸಿದ್ದ ಲೈಟು ಕಂಬದ ಕೆಳಗೆ ಗೋಣಿ ತಾಟು ಹಾಕಿ ತಮ್ಮ ಕುಲ ಕಸುಬು ಮಾಡಿ, ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಪುಳಿ ಯೆಂಡ ಮತ್ತು ಎರಡೊತ್ತಿನ ಗಂಜಿಗೆ ಸಾಕಾಗುವಷ್ಟು ಶ್ರಮಿಸಿ ಗುಡಿಸಲು ಸೇರುತ್ತಿದ್ದರು. ಅಷ್ಟು ಬಿಟ್ಟರೆ ಯಾವುದೇ ಬಾಧೆ ಅಷ್ಟಾಗಿ ಅವರ ಜೀವನದಲ್ಲಿ ಬಂದಿರಲಿಲ್ಲ. ಆದರೆ ಚಿಕ್ಕಿ ಆತನ ಜೀವನದಿಂದ ಕಣ್ಮರೆಯಾದಾಗಿನಿಂದ ಆತನ ಕಸುಬು ಎಡವಿತ್ತು. ಅವಳು ಬದುಕಿದ್ದಾಗ ಅವನಿಗಿಂತ ಹೆಚ್ಚಾಗಿ ಅವಳೇ ದುಡಿಯುತ್ತಿದ್ದಳು. ಆಗ ತನ್ನ ಕೈಗಳು ನಡುಗುತ್ತಿರುವುದನ್ನು ಶಪಿಸಿಸುತ್ತಿದ್ದ, ಚಿಕ್ಕಿ ಆತನ ನೋವಿಗೆ ಸಮಾಧಾನಿಸಿ ಧೈರ್ಯ ತುಂಬುತ್ತಿದ್ದಳು. ಅಂತಾಗಿ ಅವನು ಅವತ್ತಿನಿಂದಲೂ ಲೈಟುಕಂಬದ ಬಳಿ ಕಾಣಿಸಿಕೊಂಡಿದ್ದೆ ಅಪರೂಪವಾಗಿತ್ತು. ಈಗೆ ನಾಲ್ಕು ದಿನಗಳಿಂದಲೂ ಚೂರಿ ಹಗಲು ಪೇಟೆಯ ಗಲ್ಲಿಗಳು ಬಸ್ ನಿಲ್ದಾಣದಲ್ಲಿ ರಾತ್ರಿ ತನ್ನ ಹಟ್ಟಿಯ ಪಕ್ಕದ ಸಾಬರ ಕೇರಿಯಲ್ಲಿ ಅಲೆದಾಡುವುದು ಕಾಣುತ್ತಿತ್ತು. ಇಷ್ಟರ ನಡುವೆ ನೆನ್ನೆ ರಾತ್ರಿ ಸಾಬರ ಕೇರಿಯಿಂದ ತನ್ನ ಹಟ್ಟಿಕಡೆ ಹೆಜ್ಜೆ ಹಾಕಿ ಬರುತ್ತಿರುವಾಗ ಚೂರಿಯನ್ನು ಹಿಂಬಾಲಿಸಿದ ನಾಯಿಯೊಂದು ಬೊಗಳಲು ಶುರು ಮಾಡಿತು. ‘‘ಶೂ..ಷ್ ನಾಯಿಮುಂಡೆದೆ ನಾನ್ಕಣೋ ಚೂ..ರಿ ಕಣ್ ಕಾಣಲ್ವೆ ನಿಂಗೆ. ಯಾವತ್ತಿಲ್ದಿದ್ದು ಇವತ್ ಬೊಗುಳ್ತಿದ್ದಿ. ಹೊಗತ್ತಾ’’ ಎಂದು ಅಷ್ಟೊ ಇಷ್ಟೊ ಅಮಲು ತುಂಬಿಕೊಂಡ ಪ್ರಜ್ಞೆಯಿಂದ ಬೈದ. ನಾಯಿ ಅವನ ಯಾವ ಬೈಗುಳಕ್ಕೆ ಕ್ಯಾರೆ ಎನ್ನಲಿಲ್ಲ. ಅದು ಮತ್ತೆ ಬೊಗಳುತಲಿತ್ತು. ಚೂರಿ ‘‘ಯೇಯ್ ಕಳ್ಮುಂಡೇದೆ ಕಳ್ನಂಗೆ ಬೊಗುಳ್ತಿ’’ ಎಂದು ತನ್ನ ಕಾಲುಗಳಿಗೆ ತಾಕುತಿದ್ದ ಜಲ್ಲಿ ಕಲ್ಲುಗಳನ್ನು ಗಮನಿಸಿ ಹಾಗೆ ಬಗ್ಗಿ ಹಿಡಿ ಗಾತ್ರದ ಕಲ್ಲನ್ನು ಎತ್ತಿ ಆ ನಾಯಿಯತ್ತ ಒಗೆದನು. ಆ ಕಲ್ಲು ದಿಕ್ಕು ತಪ್ಪಿ ಎತ್ತ ಹಾರಿತೋ.. ನಾಯಿ ಮತ್ತೆ ಅಣಕಿಸುವಂತೆ ಬೊಗಳಿದಾಗ ‘ಹಾಳ್ಮುಂಡೆದು’ ಎಂದು ಒಂದೈದು ಹೆಜ್ಜೆಗಳು ಬಿರುಸಾಗಿ ಹೆಜ್ಜೆ ಕಿತ್ತನು. ಆಗ ಇರುಳು ಕಡಿದು ನಡೆವ ಅವನ ಬಲಗಾಲಿಗೆ ಎಂತದೊ ಗಾಜಿನ ಚೂರು ದಸಕ್ಕನೆ ನಾಟಿತು. ಆಗ ಮೈಮೇಲಿನ ಕತ್ತಲೆ ಹಾರಿ ಹೋದಂತೆ ಅಯ್ಯಯ್ಯೆ ಎಂದು ಚೀರಿದನು. ರಕ್ತವು ಅಂಗಾಲಿಂದ ಸೋರಿ ನೆಲ ಒದ್ದೆ ಮಾಡಿದ್ದರೂ ಆ ಕತ್ತಲಲ್ಲಿ ಅವನ ಕಣ್ಣಿಗೆ ಕಾಣಲಿಲ್ಲ. ಆದರೆ ನೋವು ಮಾತ್ರ ಚೂರಿಯ ನೆತ್ತಿಯ ನರಗಳನ್ನು ಸಡಿಲ ಮಾಡಿತ್ತು. *-*-* ಕಾಗೆಯ ಕಾ..ಕಾ.. ಶಬ್ದ ಕಿವಿ ಗುರ್ ಎನ್ನುವಂತೆ ಬಡಿದಿದ್ದೆ ಚೂರಿ ಎಚ್ಚೆತ್ತವನಂತೆ ಅತ್ತ ಕಣ್ಣಾಯಿಸಿದ. ಆಗ ಕರಿ ‘‘ನನ್ಮಂಗದೆ ನನ್ನ ನೋಡಿ ಅಣಕ್ಸ್ತಿ.. ನೋಡು ನಿನ್ನಂಗೆ ನಾನು ಈ ಬಣ್ಣಗೇಡಿ ಸಮಾಜದ ಕರಿ ಮುದುಕ. ನಮ್ಗೆ ನಾವೇ ಸಂತೈಸ್ಕೊಂಬೇಕು ಅಂತದ್ರಲ್ಲಿ ನೀನು ನನ್ನ ಅಣಕಿಸ್ತಿಯೇನು. ತೂತ್ ಹೋಗತ್ತಾ’’ ಎಂದು ತಲೆ ಮೇಲೆ ಕೈಸವರಿ ಅತ್ತ ಇತ್ತ ಕಣ್ಣಾಯಿಸಿದ. ಕೆರೆಯ ಬಯಲ ಹೊರತು ಅಲ್ಲಿ ಯಾರು ಅವನ ಕಣ್ಣಿಗೆ ಕಾಣಿಸಲಿಲ್ಲ. ಹೊತ್ತು ಅದಾಗಲೇ ಪಡುವಣ ದಿಕ್ಕಿನ ಮೇಲೆ ಸವಾರಿ ಮಾಡಿತ್ತು. ಚೂರಿಗೂ ಅದರ ಅರಿವಾಗಿರಬೇಕು. ನಿಡಿದಾದ ನಿಟ್ಟುಸಿರು ಬಿಟ್ಟು ಎರಡು ಕೈಗಳನ್ನು ನೆಲಕೆ ಒತ್ತಿ ಮೇಲೆದ್ದ ಚೂರಿಯ ಮನಸಲಿ ನಾಳೆಯ ವ್ಯಥೆಯು ಎದ್ದಿತು. ‘‘ನಾನ್ ಅವಳ್ಗಂಡ ನಾನ್ ತಿತಿ ಮಾಡ್ದೆ ಇನ್ಯಾರ್ ಮಾಡ್ಬೇಕು. ಅದ್ಕೆ ತಕ್ಕ ಹಣ ಕೂಡಿಸ್ಲೇ ಬೇಕು.’’ ಮನಸ್ಸಿನ ಸುಳಿಯಲಿ ಅವನ ಈ ಯೋಚನೆಯು ಗಿರಗಿರ ಸುತ್ತುತ್ತಲೇ ಇತ್ತು. ಬಲಗಾಲನ್ನು ನಿಧಾನಕ್ಕೆ ಊರಿ ಎಡಗಾಲನ್ನು ಎತ್ತಿ ಇಡುವಾಗ ಗಾಯದ ಭಾಗ ಜುಂ ಎಂದು ನೆತ್ತಿ ತಿರುಗಿದಂಗಾಯಿತು. ‘ಅಮ್ಮಾ...’ ಎಂದು ಚೀರಿ ಮತ್ತೆ ತನ್ನ ಕುಂಟು ವರಸೆಗೆ ತೊಡಗಿದ. ಕೆರೆಯನ್ನು ಹಿಂದಿಕ್ಕಿ ಒಣಗಿದ ಹೊಲಗಳ ಬದುವಿಗೆ ಸೇರಿ ನೇರವಾಗಿ ಹಟ್ಟಿಕಡೆ ಪಯಣ ಬೆಳೆಸಿದ. ಹಟ್ಟಿ ತಲುಪಿದಾಗ ಸೂರ್ಯ ಕಾವನ್ನು ಇಳಿಸಿ ತಣ್ಣಗಾಗಿದ್ದ. ಆದರೆ ಸಂಜೆಯ ಶಾಂತತೆ ಚೂರಿಯ ಮನಸ್ಸನ್ನು ಒಂದಿಷ್ಟು ತಣ್ಣಗಾಗಿಸಲಿಲ್ಲ. ಕುಂಟುತ್ತಾ ಕುಂಟುತ್ತಾ ತನ್ನ ಗುಡಿಸಲಿಗೆ ಸಮೀಪಿಸಿ ತನ್ನ ಜೊಂಪು ಹಿಡಿದ ಕಣ್ಣುಗಳಿಂದ ಗುಡಿಸಲ ತಟ್ಟಿ ನೋಡಿ ‘‘ಚಿಕ್ಕಿ ನೀ ನಿವತ್ತು ಇದ್ದಿದ್ರೆ ಬರ್ವಾಗ ಬಾಗ್ಲಲ್ಲಿ ನಿತ್ಕಂಡು ಕಣ್ತುಂಬ ನೋಡಿ ಬಾ.. ಎತ್ಲಾಗ ಹಾಳಾಗೋಗಿದ್ದೆ ನಿಂಗೆ ಕಾಯ್ದು ಕಾಯ್ದು ಕಾಲೆಲ್ಲ ಸೋತೋದ್ವು.. ಪ್ಯಾಟೇಲಿ ಅದೇನ್ ಕೇಮೆ ಅಂತಿನೀ..ಬಾ ಬೇಗ ಇಟ್ಟು ತಣ್ಣಾಗೋಯ್ತು..ವಸಿ ವಟ್ಟೆಗಾಕ್ಕೊಂಡು ಬಿದ್ಕೊವಂತೆ..’’ ಎಂದು ಉಸಿರ್ಬುಡ್ದೆ ವದರ್ತಿದ್ಲು. ಈಗವ್ಳಿಲ್ಲ. ಬಾಗ್ಲು ಮಾತ್ರ ಮೂಕ್ನಂತೆ ನಿತ್ಕೊಂಡಿದೆ. ಚೂರಿಗೆ ಕಣ್ತುಂಬಿ ಬಂತು. ಕೆನ್ನೆ ಮೇಲೆ ಜಾರುತ್ತಿದ್ದ ನೀರನ್ನು ಕೈಗಳಿಂದ ವರೆಸಿ ಒಳ ನುಗ್ಗಿದ. ಬುಟ್ಟಿ ಇಲ್ಲದ ಮನೆಯಲ್ಲಿ ಬೆಳಕು ಎಲ್ಲಿಯದು. ಹೊರಗಿನ ಕತ್ತಲು ಒಳ ನುಗ್ಗಿ ಬಹಳ ಹೊತ್ತಾಗಿತ್ತು. ಚೂರಿ ಕತ್ತಲೆಯನ್ನು ನುಂಗಿ ನಿಧಾನಕ್ಕೆ ಕಾಲು ಇಟ್ಟು ನಡೆದ. ಆಗ ಅವನ ಕಾಲಿಗೆ ತಾಕಿದ ಖಾಲಿ ತಟ್ಟೆ ಚಂಬು ಲೋಟಗಳು ಚಳಪಳ ಸದ್ದು ಮಾಡಿ ಚಲಿಸುತ ನಾವು ಇದ್ದೀವಿ ನಿನ್ನಂತೆ ಎಂದವು. ಚೂರಿಗೆ ಆ ದನಿ ಕಿವಿಗೆ ತಾಕುವಷ್ಟು ಜಾಗೃತನಾಗಿರಲಿಲ್ಲ. ಮುಂದೆ ಕೈ ಮಾಡಿ ಗೋಡೆ ತಡುಕಿದ, ಗೋಡೆ ಮುಟ್ಟಿದ ಅನುಭವವಾಗಿ ಗೋಡೆಗೆ ಬೆನ್ನು ತಾಕಿಸಿ ಹಾಗೆ ನೆಲಕ್ಕೆ ಜಾರಿದ. ಹಟ್ಟಿಯ ಕತ್ತಲು ಹೊರಗಿನಿಂದ ಒಳಗೆ ಒಳಗಿನಿಂದ ಹೊರಗೆ ಕವಾಯತು ನಡೆಸುತ್ತಿತ್ತು. ಆದರೆ ಚೂರಿಯ ಮನಸ್ಸಲ್ಲಿ ಮಾತ್ರ ನೋವಿನ ಉರಿ ಆತನನ್ನು ನಿಧಾನಕ್ಕೆ ಕರಗಿಸುತಲಿತ್ತು. ಹತ್ತು ಹದಿನೈದು ನಿಮಿಷ ಕಳೆದಿರಬೇಕು. ಚಿಟಾರನೇ ಚಿಕ್ಕಿ.. ಎಂದು ಗೋಗರೆದ ಶಬ್ದ ಗುಡಿಸಲ ಮೇಲಿನ ತಾರುಗಳನ್ನು ಸೀಳಿ ಆಕಾಶಕ್ಕೆ ಹಾರಿತು. ‘‘ಅಯ್ಯೋ ಸತ್ಮೇಲೆ ರುಣ ತೀರ್ಸೋ ಒಂದ್ ಪುಣ್ಯ ಕಾರ್ಯ ಮಾಡೋಕಾಕ್ದೆ ಇರೋ ಈ ಹಾಳ್ನನ್ಮಗನ ಯಾಕಾದ್ರು ಬಿಟ್ಟೋದೇ ಚಿಕ್ಕೀ.. ನೀನಂತು ಸರ್ಗ ಸೇರ್ಕೊಂಡೆ..ನನ್ ಬಿಟ್ಟೋದ ಗಳಿಗ್ಲಿಂದು ನಾ ನರ್ಕದಲ್ಲಿರೊಂಗಾಗೈತೆ. ಇಲ್ನೋಡು ಈ ಕತ್ಲೆ ನನ್ನ ಯೆಂಗ್ ನುಂಗ್ತೈತೆ. ಅಯ್ಯೋ ಚಿಕ್ಕಿ ಆ ದೇವ್ರೆಗೆ ಹೇಳಿ ನನ್ಗೂ ಕರ್ಕೋಳೇ.. ನಿನ್ ರುಣ ತೀರ್ಸೋ ಶಕ್ತಿನು ನನ್ಗಿಲ್ವಲ್ಲ.. ನಾ ನಿನ್ತಾವ ಬಂದ್ಬಿಟ್ರೆ ಈ ಬುಮಿಲಿ ಯಾವ ರುಣನೂ ಇರಲ್ಲ’’ ಎಂದು ಬಿಕ್ಕಳಿಸಿದ. ಕತ್ತಲಿನ ಪದರುಗಳನ್ನು ಸುತ್ತಿಕೊಳ್ಳುತ್ತಿದ್ದ ರೋದನ ಇನ್ನಷ್ಟು ಗಾಢವಾಗುತ್ತಲಿತ್ತು ಹೊರತು ಯಾವ ಸಾಂತ್ವನದ ಬೆಳಕು ಅಲ್ಲಿ ಮೂಡಲಿಲ್ಲ. ಅವನ ಅಳಲು ಬಿಕ್ಕಳಿಕೆ ನಿಂತಿದೆ. ಕತ್ತಲು ಒಳಗಿನ ನೀರವತೆಯನ್ನು ಹೀರಿ ಇನ್ನಷ್ಟು ಗಾಢವಾಗಿದೆ. ಚೂರಿ ತೆವಳುತ ಯಾವಾಗಲೋ ಗೋಡೆ ಬಿಟ್ಟು ತಟ್ಟಿಯ ಸಮೀಪ ಬಂದಿದ್ದ. ಕೈ ತಗುಲಿ ತಟ್ಟಿ ಕಿರ್ ಎಂದಿತು. ತಟ್ಟಿ ಒಹ್ ಚೂರಿಯದೇ ಎಂದು ಸುಮ್ಮನಾಯಿತು. ಹಾಗೆ ನಿಧಾನಕ್ಕೆ ತಟ್ಟಿ ಗುಡಿಸಲು ದಾಟಿದ ಚೂರಿ ಮೆಲ್ಲನೆ ಎದ್ದು ಊರ ಗೌಡನ ಹಟ್ಟಿ ಕಡೆ ಮುಖ ಮಾಡಿ ನಡೆದ. ಗೌಡನ ಹಟ್ಟಿಯ ಬಾಗ್ಲು ಬಳಿ ನಾಯಿ ತೆವಳುತ್ತ ಬರುವ ಚೂರಿಯನ್ನು ನೋಡಿ ಬೊಗಳಿತು. ಚೂರಿ ದೀನನಾಗಿ ನಾಯಿಯ ಕಣ್ಣೊಳಗೆ ಇಳಿದ. ನಾಯಿ ಅವನ ದಯೆಗೆ ಕುಯ್ ಗುಟ್ಟಿತು. ನಂತರ ಅದೇ ಬೊಗಳು ಶುರುಮಾಡಿತು. ಅಷ್ಟರಲ್ಲಿ ಯಾರೊ ಒಳಗಿಂದ ಯಾರದು ಇಷ್ಟೊತ್ತಲಿ ಎಂದಿತು. ನಾನ್ ಕಂಡ್ರ ಚೂರಿ ಎಂದ ಸದ್ದಿಗೆ ಮರುದನಿ ಯಾರು ಚೂರಿನೇ.. ಎಂದಾಗ ಚೂರಿ ಆಶ್ಚರ್ಯನಾಗಿ ಹೌದು ಕಂಡ್ರ ಎಂದ. ಯೇನಲೇ ಇಷ್ಟೊತ್ನಲಿ ಯೇನ್ ಬಂದಿದ್ದು ಎಂದಾಗ ಗೌಡ. ಚೂರಿ, ‘‘ಗೌಡ್ರ.. ನಾಳೆ ನನ್ ಚಿಕ್ಕಿ ತಿತಿ ಮಾಡ್ಬೇಕು ಕೈಲಿ ಬಿಡಿಗಾಸಿಲ್ಲ..’’ ‘‘ಅದ್ಕೆ ನಾ ಯೇನ್ ಮಾಡ್ಲಿ’’ ಎಂದ ಗೌಡನ ಎದಿರು ನುಡಿಗೆ ಕಕ್ಕಾಬಿಕ್ಕಿಯಾದ ಚೂರಿ ‘‘ಅದ್ಕ.. ಒಂದಿಷ್ಟು ಹಣ ಕೊಡ್ರಲಾ ನಾ ನಿಮ್ ಸಾಲನ ಸಾಯೊದ್ರೊಳ್ಗೆ ತೀರ್ಸಿ ಬಿಡ್ತಿನಿ’’ ಎಂದ. ಗೌಡ ನಗಾಡಿದ. ‘‘ಲೇ ಇವ್ನೆ ತಿಥಿಗಿತಿ ನಿನ್ನಂತೋರ್ಗೆ ಏಕೋ ಹೋಗ್ ಹೋಗ್ಲ. ತಿಥಿಪತಿಯಲ್ಲ ಬದ್ಕಿರೋರ್ಗೆ..ನೀ ಮಾಡಿ ಅದೇನು ಸಾದ್ನೆ ಮಾಡಿಯ’’ ಎಂದು ಗೌಡ ವೈಚಾರಿಕ ನುಡಿಗಳಿಂದ ಅವನನ್ನು ತಿವಿದ. ‘‘ಮತ್ತೆ ನೋಡು ನನ್ ಹತ್ರ ನಿನ್ ಕೊಡಾಕೆ ಇಷ್ಟೊತ್ನಲ್ಲಿ ದುಡ್ಡು ಮಡಿಕಂಡಿಲ್ಲ...ಈ ತಿಥಿಪತಿಯ ನಾಟ್ಕ ಬಿಡು...ಕುಡ್ದಿದ್ದಿಯೆನೊ ಹೋಗಿ ಬಿದ್ಕು..’’ ಎಂದ. ‘‘ಇಲ್ಲ ಗೊಡ್ರೆ ನಾ ಕುಡ್ದಿಲ್ಲ’’ ಎಂದ ಚೂರಿ.. ‘‘ಹಂಗಾರೆ ಹೋಗಿ ಕುಡ್ದು ಮಲಿಕ್ಕೊ ಹೋಗು.. ಹಂಗನ್ಬ್ಯಾಡಿ ದೇವ್ರೆ ನೀವೆ ಯಿಂಗನ್ಬುಟ್ರೆ ಇನ್ಯಾರು ಕೊಡ್ತಾರೆ ನಂಗೆ..ನಮ್ ತಾತ್ನ ಕಾಲ್ದಿಂದ್ಲು ನಿಮ್ ಪಾದ ರಕ್ಷೆ ಮಾಡ್ತಾ ಬಂದಿದ್ದಿವಿ ನಾವು.. ದೊಡ್ಡ ಗೊಡ್ರು ನಮ್ಗೆ ಕಷ್ಟಕಾಲದಲ್ಲಿ ಸಹಾಯ ಮಾಡ್ತಿದ್ರು ನೀವು ಕೈ ಬಿಡಬೇಡಿ’’ ಎಂದ. ‘‘ಲೇ ನಿಂಗರ್ಥ ಆಗಾಂಗಿಲ್ಲ ಬಿಡು.. ಈಗ ಕಾಲ ಬದಲಾಗಿದೆ..ಗೊಡ್ರು ಮೆಟ್ಟು ಹೊಲ್ಸೊ ಕಾಲನು ಹೋಯ್ತು.. ಪೇಟೇಲಿ ಮನ್ಸಿಗೆ ಇಷ್ಟವಾದ್ ಮೆಟ್ ಸಿಗ್ತಾವೆ..ನಿನ್ನ ಕಿತ್ತೊಗಿರು ಚರ್ಮದ ಮೆಟ್ಟು ಮೆಟ್ಟುವ ಕಾಲ ಇದಲ್ಲ..ನಂಗೆ ಈ ಮೆಟ್ಟು ಹೊಲಿಸೊ ಶೋಕೀನು ಇಲ್ಲ..ಹ್ಞಾ ಬೆಳಗ್ಗೆ ಬರಂಗಿದ್ರೆ ಬಾ ಒಂದೆರಡು ಶೂಗಳ ಅಟ್ಟ ಕಿತ್ತೊಗಿದೆ ಸರಿ ಮಾಡಿ ಕೊಡುವಿಯಂತೆ.. ಈಗೋಗಿ ಬಿದ್ಕೂ ನನ್ಗೆ ಬೇರೆ ಕೆಲ್ಸ ಇದೆ.’’ ಎಂದು ಒಳಗೆ ಹೋದ ಗೌಡ.. ಚೂರಿ ಆಯ್ ತ್ರಪ್ಪೊ ನಾಳೆ ಬೆಳಗ್ಗೆ ನಿಮ್ ಶೂಗಳ್ನ ಹೊಲಿದ್ಕೊಡ್ತೇನೆ ಈಗ ಸ್ವಲ್ಪ ದಯ ಮಾಡಿ ಈ ಬಡವನ್ಮೇಲೆ ಎಂದ... ಒಳಗಿಂದ ಯಾವ ಸದ್ದು ಕೇಳಿ ಬರಲಿಲ್ಲ. ಚೂರಿ ಐದಾರು ನಿಮಿಷ ಹಾಗೆ ಕಕವಿಕಿ ಬಾಗಿಲ ಕಡೆ ದಿಟ್ಟಿ ಹಾಯಿಸಿದ್ದ.. ಆದರೆ ಯಾವ ಪ್ರಯೋಜನನೂ ಆಗಲಿಲ್ಲ..ಆದಾದ ನಂತರ ಯಾರೊ ಬಾಗಿಲು ದಢ... ಎಂದು ಮುಚ್ಚಿದರು. ಚೂರಿಯ ಕಣ್ಣುಗಳು ಆರ್ದ್ರವಾದವು.. ಮನಸ್ಸು ಹೆಪ್ಪುಗಟ್ಟಿದಂತೆ ಆಯಿತು.. ನಂತರ ಬಂದ ದಾರಿಗೆ ಸುಂಕವಿಲ್ಲ ಎಂದಂತೆ..ಚೂರಿ ಅಲ್ಲಿಂದ ಕಾಲುಕಿತ್ತು ಹೊರ ನಡೆದ.. ಗೌಡನ ನಾಯಿ ಚೂರಿಗೆ ಅಣಕಿಸುವಂತೆ ಬೊಗಳುತ್ತಿತ್ತು.. ಚೂರಿ ತೆವಳುತ್ತ ತೆವಳುತ್ತ.. ಹಾದಿ ಸವೆಸಿದ... ಹೆಂಡದಂಗಡಿಯ ಗೋಪಣ್ಣ ಕುಂಟುತ್ತಾ ಬರುತ್ತಿರುವ ಚೂರಿಯನ್ನು ಅವನ ಮುಖದ ಮೇಲೆ ಮೂಡಿದ ತಹರೇವಾರಿ ನಕಾಶೆಗಳನ್ನು ನೋಡಿ ತಣ್ಣಗಾದ. ಚೂರಿ ಗೋಪಣ್ಣನ ಮುಖ ನೋಡಿದ ಆತನ ಮುಖದಲ್ಲಿ ಎಂದಿನ ಗಾಂಭಿರ್ಯವೇ ಮನೆ ಮಾಡಿತ್ತು. ಚೂರಿ ಇನ್ನಷ್ಟು ಅವನಿಗೆ ಹತ್ತಿರಾದ. ಅವನು ಒಂದು ಸಜ್ಜೆ ಕಲ್ಲಿನ ಮೇಲೆ ಕುಳಿತು ಒಂದು ಕಾಲು ಇಳೀ ಬಿಟ್ಟಿದ್ದ. ಚೂರಿ ನೆನ್ನೆ ಇದೇ ರೀತಿ ಬಂದು ಗೋಪಣ್ಣನ ಕಾಲ ಬುಡದಲ್ಲಿ ನಿಂತು ಅಣ್ಣಾ ವಸಿ ಸಾಲ ಕೊಡಣ್ಣೋ... ನಾಳೆ ತೀರಿಸ್ತಿನಿ ನಿನ್ ರುಣ ಅಂದಿದ್ದ. ಆಗ ಗೋಪಣ್ಣ ಹೋಗ್ ಹೋಗ್ಲೇ ಚಮ್ಮಾರ್ ನನ್ಮಗ್ನೇ ಪುಕ್ಸಾಟೆ ಕೊಡೋಕೆ ನಮ್ಮಪ್ಪಾ ಹೆಂಡ ತುಂಬೊಲ್ಲಾ.. ನಾನು ಹಣ ಚೆಲ್ಲಿ ತುಂಬ್ಕೆಳ್ಳೊದು ಎಂದಿದ್ದ. ಚೂರಿ ಮನಸ್ಸಿನಲ್ಲಿ ನೆನ್ನೆಯ ಘಟನೆಯೂ ಮರುಕಳಿಸದಿರಲಿಲ್ಲ. ಆದರೂ ಬಂದಿದ್ದ ಚೂರಿ. ಗೋಪಣ್ಣ ಚೂರಿಯನ್ನು ಚೂರಿ ಗೋಪಣ್ಣನನ್ನು ಹೀಗೆ ಇಬ್ಬರೂ ಒಬ್ಬರನ್ನೊಬ್ಬರು ನೋಡಿದರು. ಚೂರಿ ತನ್ನ ಗಾಯದ ಕಾಲನ್ನು ಮತ್ತೆ ಮತ್ತೆ ನೋಡಿ ಅಮ್ಮ.. ಅಯ್ಯೆ.. ಎಂದು ಸಣ್ಣಗೆ ನರಳುತ ಗೋಪಣ್ಣನ ಮುಖಕ್ಕೆ ಕಣ್ಣು ನೆಟ್ಟಿದ್ದ. ಗೋಪಣ್ಣ ಅವನ ಎಲ್ಲಾ ಚಟುವಟಿಕೆ ಗಮನಿಸುತ್ತಲೇ ಇದ್ದ. ಹಾಗೆ ಚೂರಿ ದೀನನಾಗಿ ನಿಟ್ಟಿಸಿ ಗೋಪಣ್ಣ... ಎಂದ. ಯೇನ್ಲಾ ಹಾಳ್ಮುಂಡೆ ಮಗ್ನೆ ಮತ್ತೆ ವಕ್ಕೊರಿಸ್ಕೊಂಡ್ಯಾ ಎಂದ ಗೋಪಣ್ಣ. ಚೂರಿ ಅವನ ಬೈಗಳು ನುಂಗಿ..ಈ ನಿನ್ ದಯಾ ಇರ್ತಿಲಿಲ್ಲಾಂದ್ರೆ ನಾ ಯಾವಾಗ್ಲೊ ಸತ್ತೊಗ್ತಿದ್ದೆ ಗೋಪಣ್ಣ.. ನನ್ನ ವಟ್ಟೆ ವಳ್ಗಿನ ವಿಸ್ಯಕ್ಕೆ ಈ ಯೆಂಡ ಇರ್ತಿಲಿಲ್ಲ ಅಂದ್ರೆ ನಾ ಯಾವಾಗ್ಲೊ ಮಣ್ಣಾಗಿರ್ತಿದ್ದೆ..ಇದು ನಿನ್ ದಯಾ.. ಎಂದ. ದಯಾಗಿಯಾ ಬೇಗಾಗಿಲ್ಲ ದೊಡ್ಡಿದ್ರೆ ಬಾ ಇಲ್ಲ ಬರ್ಬೇಡ ಇದೇ ಕಡೆ ಸರ್ತಿ ತಿಳ್ಕೊ ಮುಂಡೇದೆ ಎಂದ. ಚೂರಿ ನನ್ ಮನ್ಸಿಂದ್ ಮಾತು ಆಡ್ದೆ ಗೋಪಣ್ಣ..ಇನ್ಯಾವತ್ತು ಈ ಕಡೆ ಮಕ ಮಾಡಲ್ಲ..ಇವತ್ತು ಕರುಣೆ ತೋರ್ಸು ಎಂದ... ಆಗ ಗೋಪಣ್ಣ ಪ್ಲಾಸ್ಟಿಕ್ ಲೋಟದಲ್ಲಿ ಒಂದಿಷ್ಟು ಹೆಂಡ ಸುರಿದು ಅದಕ್ಕೆ ತುಂಬುವಂತೆ ನೀರು ಸುರಿದು ಇಗಾ ಎಂದ. ಚೂರಿ ಓ ನನ್ ದ್ಯಾವ್ರೆ ಎಂದಂದು ಅವನ ಕೈಯಿಂದ ಲೋಟ ತೆಗೆದು ಒಂದೇ ಗುಕ್ಕಿಗೆ ಅದನ್ನು ಕುಡಿದು, ಗೋಪಣ್ಣ ನಿನ್ನ ದ್ಯಾವ್ರ ಸುಖವಾಗಿಡ್ಲಿ.. ಎಂದು ಎರಡು ಕೈಗಳೆತ್ತಿ ಹರಸಿದ, ಗೋಪಣ್ಣ ಅವನ ಯಾವ ಮಾತಿಗೂ ಕಿವಿ ಗೊಡದೆ ಗಿರಾಕಿಗೆ ಹೆಂಡ ಸುರಿಯುವುದರಲ್ಲಿ ತೊಡಗಿದ. ನಂತರ ಚೂರಿ ಅಲ್ಲಿಂದ ಬೆನ್ನು ಮಾಡಿದ. ಹಟ್ಟಿಯಲ್ಲಿ ತೂರಾಡುತ್ತಾ ಬರುತ್ತಿದ್ದ ಚೂರಿಯನ್ನು ಗಮನಿಸಿದ ನಾಯಿ ಬಾಲ ಅಲ್ಲಾಡಿಸುತ್ತಾ ಚೂರಿಯ ಕಾಲ ಬುಡದಲ್ಲಿ ಬಂದು ಕುಯ್ ಕುಯ್ ಎಂದಿತು. ಚೂರಿ ಬಸ್ಯ... ಎಂದೊಡನೆ ಆ ನಾಯಿ ಇನ್ನೂ ಜೋರಾಗಿ ಕುಯ್ಯೂ ಕುಯ್ಯೂ ಎಂದು ಸದ್ದು ಮಾಡಿತು. ನಾಯಿ ಚೂರಿಯ ಬಲಗಾಲಿಗೆ ತನ್ನ ಮೂತಿ ತಾಕಿಸುತ್ತಲೇ ಯೇಯ್ ಬಸ್ಯ ಅಲ್ ಮುಟ್ಬೇಡ ಗಾಯವಾಗಯ್ತಾ ಅಲ್ಲಿ ಎಂದ. ನಾಯಿ ಅವನ ಶಬ್ದಕ್ಕೆ ಹಿಂದೆ ಸರಿಯಿತು. ಬಾ ಇಲ್ಲಿ ಎಂದು ಕತ್ಲಲ್ಲು ಬಸ್ಯನ ಕತ್ತು ಬಳಸಿ ಬಸ್ಯನ ತಲೆಗೆ ಮುತ್ತನಿಟ್ಟು ಹ್ಞು..ನಡೀ ಈಗ ಇವತ್ ನನ್ ತಾವ ನಿಂಗೆ ಕೊಡೋಕೆ ಚಾಕ್ನಾನು ಇಲ್ಲ ಪಾಕ್ನಾನು ಇಲ್ಲ ಎಂದ. ನಾಯಿ ಬಾಲ ಅಲ್ಲಾಡಿಸುತ್ತಲೇ ಇತ್ತು. ಚೂರಿ ಅಲ್ಲಿಂದ ಮುನ್ನಡೆದ. ನಾಯಿ ಅಲ್ಲೆ ನಿಂತು ಅವನ ನಿರ್ಗಮನವನ್ನೇ ನೋಡು�

Writer - ನೂರುಲ್ಲಾ ತ್ಯಾಮಗೊಂಡ್ಲು

contributor

Editor - ನೂರುಲ್ಲಾ ತ್ಯಾಮಗೊಂಡ್ಲು

contributor

Similar News