ಚಹಾ ಮಹಾರಾಜ

Update: 2019-11-10 09:23 GMT

ಬನ್ನೂರು ಕೆ. ರಾಜು

ಸಾವಿರಾರು ವರ್ಷಗಳ ಹಿಂದೆ ಚೀನಾ ದೇಶದಲ್ಲಿ ಶೆನ್ನಾಂಗ್ ಎಂಬ ರಾಜನಿದ್ದ. ಆತ ಮಹಾ ಪಂಡಿತನಾಗಿದ್ದ. ಔಷಧ ಹಾಗೂ ಕೃಷಿಯ ಬಗ್ಗೆ ಬಹಳ ಆಳವಾಗಿ ತಿಳಿದುಕೊಂಡಿದ್ದ. ಹಾಗಾಗಿ ರಾಜ ಶೆನ್ನಾಂಗ್ ತನ್ನ ಪ್ರಜೆಗಳ ರೋಗರುಜಿನಗಳಿಗೆ ಸ್ವತಃ ತಾನೇ ಔಷಧವನ್ನು ಕೊಡುತ್ತಿದ್ದ. ಇದರಿಂದ ಗುಣಮುಖರಾದ ಜನರು ರಾಜ ಶೆನ್ನಾಂಗ್‌ನನ್ನು ಹಾಡಿ ಹೊಗಳುತ್ತಿದ್ದರು. ಇಂತಹ ಹೊಗಳಿಕೆಯ ಉತ್ತೇಜನದಿಂದ ಉಬ್ಬಿ ಹೋಗಿದ್ದ ಅವನು, ತನ್ನ ರಾಜಾಳ್ವಿಕೆಯ ಜೊತೆಯಲ್ಲಿ ಔಷಧ ಮತ್ತು ಕೃಷಿ ಹಾಗೂ ಸಸ್ಯಗಳ ಬಗ್ಗೆ ಸಂಶೋಧನೆ ಯಲ್ಲಿ ತೊಡಗಿದ. ಬೇರೆ ರಾಜರುಗಳಂತೆ ಇವನು ಕಾಡಿಗೆ ಪ್ರಾಣಿಗಳನ್ನು ಬೇಟೆಯಾಡಲು ಹೋಗುತ್ತಿರಲಿಲ್ಲ. ಬದಲಿಗೆ ಅಧ್ಯಯನ ಮಾಡಲು ಮಾರುವೇಷದಲ್ಲಿ ಕಾಡಿಗೆ ಆಗಾಗ್ಗೆ ಹೋಗುತ್ತಿದ್ದ.

ಒಮ್ಮೆ ರಾಜ ಶೆನ್ನಾಂಗ್ ಸಸ್ಯ ಸಂಶೋಧನೆಗೆ ಕಾಡಿಗೆ ಹೊರಟ. ಅಲ್ಲಿ ವಿವಿಧ ರೀತಿಯ ಔಷಧೀಯ ಗುಣವುಳ್ಳ ಸಸ್ಯಗಳನ್ನು ಹುಡುಕುತ್ತಾ ಸ್ವಲ್ಪ ಸಮಯದ ನಂತರ ಆಯಾಸದಿಂದ ಒಂದು ಮರದ ಕೆಳಗೆ ಕುಳಿತ. ಬಾಯಾರಿಕೆಯಿಂದ ಬಳಲಿದ್ದ ಇವನಿಗೆ ನೀರು ಕುಡಿಯಬೇಕೆನಿಸಿತು. ಕಾಡು ಸಂಪೂರ್ಣ ಶೀತಮಯವಾಗಿ ಚಳಿ ಚಳಿ ಎನಿಸುತ್ತಿತ್ತು. ಇಂತಹ ವಾತಾವರಣದಲ್ಲಿ ಕುಡಿಯಲು ಬಿಸಿ ನೀರು ಸೂಕ್ತ ಎಂದು ಅಲ್ಲೇ ಒಂದು ಕಡೆ ನೀರನ್ನು ಬಿಸಿ ಮಾಡುತ್ತಿದ್ದ ರಾಜ ಶೆನ್ನಾಂಗ್. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಬೀಸಿತು. ಆ ಗಾಳಿಯೊಂದಿಗೆ ಎಲ್ಲಿಂದಲೋ ಎಲೆಯೊಂದು ತೂರಿಕೊಂಡು ಬಂದು ರಾಜ ಶೆನ್ನಾಂಗ್ ಇಟ್ಟಿದ್ದ ಬಿಸಿ ನೀರಿನ ಪಾತ್ರೆಯೊಳಕ್ಕೆ ಬಿತ್ತು. ಏನನ್ನೋ ಚಿಂತಿಸುತ್ತಿದ್ದ ಇವನ ಸಂಶೋಧಕ ಮನಸ್ಸು ಇದನ್ನು ಗಮನಿಸಲಿಲ್ಲ.

ಸ್ವಲ್ಪ ಸಮಯದ ನಂತರ ರಾಜ ಶೆನ್ನಾಂಗ್ ಬಿಸಿಯಾಗಲು ಇಟ್ಟಿದ್ದ ನೀರು ಕೊತ ಕೊತನೆ ಕುದಿಯ ತೊಡಗಿತು. ಅದರೊಡನೆ ಪಾತ್ರೆಯೊಳಗೆ ಬಿದ್ದದ್ದ ಎಲೆ ಸಹ ಚೆನ್ನಾಗಿ ಬೆಂದು ತನ್ನ ರಸವನ್ನು ಬಿಟ್ಟಿತು. ಪಾತ್ರೆಯಲ್ಲಿದ್ದ ನೀರು ಸಂಪೂರ್ಣ ತನ್ನ ಬಣ್ಣವನ್ನು ಬದಲಾಯಿಸಿ ಒಂದು ರೀತಿ ಕಂದು ಬಣ್ಣಕ್ಕೆ ಬಂದಿತು. ಈಗ ರಾಜ ಶೆನ್ನಾಂಗ್‌ನ ಗಮನ ತನ್ನ ಬಿಸಿ ನೀರಿನ ಪಾತ್ರೆಯೊಳಗೆ ಬಿದ್ದದ್ದ ಎಲೆಯ ಮೇಲೆ ಬಿತ್ತು. ‘‘ಅಯ್ಯಯ್ಯೋ ಪಾತ್ರೆಯಲ್ಲಿನ ಬಿಸಿ ನೀರೆಲ್ಲಾ ಕೆಟ್ಟು ಹೋಗಿದೆಯಲ್ಲಾ’’ ಎಂದು ತನ್ನ ಮನಸ್ಸಿನಲ್ಲಿ ಗೊಣಗಿಕೊಳ್ಳುತ್ತಾ ಆ ನೀರನ್ನು ಹೊರ ಚೆಲ್ಲಲು ಮುಂದಾದ.

ಇನ್ನೇನು ಪಾತ್ರೆಯಲ್ಲಿದ್ದ ನೀರನ್ನು ರಾಜ ಶೆನ್ನಾಂಗ್ ಹೊರ ಚೆಲ್ಲಬೇಕು, ಅಷ್ಟರಲ್ಲಿ ಆ ನೀರಿನಿಂದ ಎಂತಹುದೋ ಒಂದು ರೀತಿ ಆಹ್ಲಾದಕರವಾದ ಘಮ್ಮನೆಯ ಪರಿಮಳ ಇವನ ಮೂಗಿಗೆ ಬಡಿಯಿತು. ಪಾತ್ರೆಯೊಳಗಿನ ನೀರಿನ ಸುವಾಸಿತ ಸ್ವಾದಕ್ಕೆ ಒಂದು ಕ್ಷಣ ಇವನ ಪಂಚೇಂದ್ರೀಯಗಳೆಲ್ಲವೂ ರಸ ರೋಮಾಂಚನಗೊಂಡವು. ತಕ್ಷಣ ನೀರು ಚೆಲ್ಲುವುದನ್ನು ನಿಲ್ಲಿಸಿ, ಅದನ್ನು ಕುಡಿದು ರುಚಿಯನ್ನು ನೋಡಿದ ರಾಜ ಶೆನ್ನಾಂಗ್. ಬೆಟ್ಟದ ನೆಲ್ಲಿಕಾಯಿಯ ರಸದಂತೆ ಸ್ವಲ್ಪ ಒಗರು ಎನಿಸಿದರೂ ಅದರ ಅದ್ಭುತ ರುಚಿ ಅವನ ನಾಲಿಗೆಗೆ ಹಿಡಿಸಿತು. ಅದನ್ನು ಕುಡಿದ ಒಂದು ಕ್ಷಣದಲ್ಲಿ ಅವನ ಇಡೀ ದೇಹ ಹಗುರವಾದಂತೆ ಅನಿಸಿತು. ಮನಸ್ಸು ಉಲ್ಲಸಿತಗೊಂಡಿತು. ಅವನಿಗೆ ಅರಿವಿಲ್ಲದೆಯೇ ಖುಷಿಯಿಂದ ‘ಚಹಾ’ ಎಂಬ ಶಬ್ದ ಅವನ ಬಾಯಿಯಿಂದ ಹೊರಬಂತು.

ರಾಜ ಶೆನ್ನಾಂಗ್ ಬಿಸಿನೀರಿನ ಮೂಲಕ ತಾನು ಕುಡಿದ ಹೊಸ ಪೇಯವನ್ನು ತಂದು ತನ್ನ ಪ್ರಜೆಗಳಿಗೂ ಕುಡಿಸಿದ. ಅವರೆಲ್ಲ ತುಂಬಾ ಚೆನ್ನಾಗಿದೆ ಎಂದು ಮೆಚ್ಚಿಕೊಂಡರು. ಶೆನ್ನಾಂಗ್ ರಾಜನನ್ನು ಚಹಾ ಮಹಾರಾಜನೆಂದು ಕರೆದು ಜೈಕಾರ ಹಾಕಿದರು. ಕಾಡಿನಲ್ಲಿ ರಾಜ ಶೆನ್ನಾಂಗ್‌ನ ಬಿಸಿ ನೀರಿನ ಪಾತ್ರೆಗೆ ಗಾಳಿಯೊಡನೆ ತೇಲಿಕೊಂಡು ಬಂದು ಬಿದ್ದದ್ದು ‘ಟೀ’ ಎಲೆಯಾಗಿತ್ತು.

ರಾಜ ಶೆನ್ನಾಂಗ್‌ನ ಸಂಶೋಧಕ ಮನಸ್ಸು ಸುಮ್ಮನಿರಲಿಲ್ಲ. ತನ್ನ ಬಿಸಿನೀರಿನ ಪಾತ್ರೆಗೆ ಬಿದ್ದ ಎಲೆಯನ್ನು ಹಿಡಿದುಕೊಂಡು ಅವನು ಅನ್ವೇಷಣೆ ಮಾಡಿದ. ಅದರ ಗುಣ ವಿಶೇಷಗಳನ್ನು ಆಳವಾಗಿ ಅಧ್ಯಯನ ನಡೆಸಿದ. ಕೊನೆಗೆ ಇದೊಂದು ಮನುಷ್ಯರು ಸೇವಿಸಿ ಸಂತಸಪಡಬಲ್ಲ ಒಂದು ರುಚಿಯಾದ ಪೇಯವೆಂದು ಕಂಡು ಹಿಡಿದ. ಅದೇ ಈಗ ಎಲ್ಲರೂ ಕುಡಿದು ಆನಂದಿಸುವ ‘ಟೀ’ ಎಂಬ ಚಹಾ!

Writer - ಬನ್ನೂರು ಕೆ. ರಾಜು

contributor

Editor - ಬನ್ನೂರು ಕೆ. ರಾಜು

contributor

Similar News