ದಮನಿಸಲಾಗದ ವರ್ತನೆಗಳ ಶಮನ

Update: 2019-11-10 11:15 GMT

ಹಠಾತ್ ಪ್ರವೃತ್ತಿಯ ಶಮನ

ಮಕ್ಕಳು ಇನ್ನೂ ದೈಹಿಕವಾಗಿ ಮತ್ತು ಮಾನಸಿಕ ವಾಗಿ ದೊಡ್ಡವರಿಗೆ ಭಾವನಾತ್ಮಕವಾಗಿ ಹೊಂದಿಕೊಂಡಿರುವಾಗಲೇ ಅಥವಾ ಅವಲಂಬಿತ ರಾಗಿರುವಾಗಲೇ ಅವರ ಇಂಪಲ್ಸಿವ್ ಡಿಸಾರ್ಡರ್ ಅಥವಾ ಹಠಾತ್ ಪ್ರವೃತ್ತಿಯನ್ನು ಶಮನ ಮಾಡಲು ಒಂದಷ್ಟು ಯೋಜಿತವಾದಂತಹ ಪ್ರಯತ್ನಗಳನ್ನು ಮಾಡಬೇಕು. ಒಂದು ವೇಳೆ ಅದು ಬಾಲ್ಯಾವಸ್ಥೆಯಲ್ಲಿ ಆಗದೇ ಹೋದರೆ ಅದೇ ಮಕ್ಕಳು ದೊಡ್ಡವರಾದ ಮೇಲೆ, ಯಾರ ಮೇಲೂ ಅವಲಂಬಿತರಾಗದೆ ಸ್ವತಂತ್ರರಾದಾಗ ಅಥವಾ ಭಾವನಾತ್ಮಕವಾಗಿ ಹಿರಿಯರಿಗೆ ಹೊಂದಿಕೊಂಡಿರುವ ಅನಿವಾರ್ಯ ಇಲ್ಲದಿರುವಾಗ ಅದನ್ನು ದಮನಿಸಲು ಸಾಧ್ಯವೇ ಇಲ್ಲ. ಶಮನಗೊಳಿಸಲು ಸಾಧ್ಯವಾಗುವುದು ಎಂದರೆ ಮಗುವಿಗೆ ಸ್ವಯಂನಿಯಂತ್ರಣ ಸಾಧಿಸಲು ನೆರವಾಗುವುದು.

ಮಗುವು ತನ್ನೊಂದಿಗೆ ತಾನೇ ಮಾತಾಡಿಕೊಳ್ಳುವ ಪ್ರಯೋಗ: ಟೊರಾಂಟೋ ಸ್ಕಾರ್ಬೋರೋ ಸ್ಟೇಟ್ಸ್ ವಿಶ್ವವಿದ್ಯಾನಿಲಯದ ಸಂಶೋಧನೆಯೊಂದು ಸೂಚಿಸುವ ಪ್ರಕಾರ ಒಳಧ್ವನಿಯು ಹಠಾತ್ ಪ್ರವೃತ್ತಿಯನ್ನು ನಿಯಂತ್ರಿಸುವಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಮಗುವಾಗಲಿ, ದೊಡ್ಡವರಾಗಲಿ ತಮಗೇನೋ ಹಠಾತ್ತನೆ ವರ್ತಿಸುವಂತಹ ಪ್ರೇರಣೆ ಬಂದಾಗ; ನಾನೇಕೆ ಹೀಗೆ ಆಡುತ್ತಿದ್ದೇನೆ? ನಾನೇಕೆ ಇಂತಹ ಕೆಲಸ ಮಾಡಲು ಹೋಗುತ್ತಿದ್ದೇನೆ? ನನ್ನಂಥವನು ಹೀಗೆ ಮಾಡಬಹುದೇ? ಈಗ ನಾನು ಏನು ಮಾಡಬೇಕು? ಈ ಬಗೆಯ ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಳ್ಳುವಂತಹ ಪ್ರಯೋಗಗಳು ಹಠಾತ್ ಪ್ರವೃತ್ತಿಯನ್ನು ತಡೆಯುತ್ತದೆ. ಸಂಯಮದ ಸಂಗತಿಗಳ ಉದಾಹರಣೆಗಳನ್ನು ನೆನೆಯುವ, ಅಂತಹ ದೃಷ್ಟಾಂತಗಳನ್ನು ಪದೇ ಪದೇ ಕೇಳುವ ಅಥವಾ ಅವರಿಂದ ಇತರ ಮಕ್ಕಳಿಗೆ ಹೇಳಿಸುವಂತಹ ಪ್ರಯೋಗಗಳು ಕೂಡಾ ಹಠಾತ್ ಪ್ರವೃತ್ತಿಯನ್ನು ತಡೆಯುವ ಸಾಧ್ಯತೆಗಳಿರುತ್ತವೆ. ಬಹಳ ಮುಖ್ಯವಾಗಿ ನಾನು ಇಂಥ ಮಾತನ್ನು ಆಡಬಾರದು, ಹೀಗೆ ವರ್ತಿಸಬಾರದು, ಇದು ನನ್ನಂಥವರಿಗಲ್ಲ ಎಂಬ ಎಚ್ಚರಿಕೆಯ ಪರಿಚಯ ಮತ್ತು ಅದನ್ನು ಪದೇ ಪದೇ ಸ್ಮರಣೆ ಮಾಡಿಸುವುದು ಕೂಡಾ ಒಳಧ್ವನಿಯನ್ನು ಗಟ್ಟಿೊಳಿಸುವಂತಹ ಪ್ರಯೋಗವೇ ಆಗಿದೆ.

ಸ್ಮರಣ ಕೇಂದ್ರಿತ ಆಟಗಳು: ಸ್ಟ್ಯಾಂಡ್ಫಾರ್ಡ್ ವಿಶ್ವವಿದ್ಯಾನಿಲಯ ಮತ್ತು ನೆದರ್ಲೆಂಡಿನ ಮ್ಯಾಸ್ಟ್ರಿಶ್ ವಿಶ್ವವಿದ್ಯಾನಿಲಯವು ನೆನಪಿನ ಶಕ್ತಿಯನ್ನು ಜಾಗೃತಗೊಳಿಸುವಂತಹ ಅಥವಾ ನೆನಪಿನ ರೂಢಿಗೆ ಪೂರಕವಾಗಿರುವಂತಹ ಆಟಗಳನ್ನು ಆಡಿಸುವುದರಿಂದ ಹಠಾತ್ ಪ್ರವೃತ್ತಿಯ ಶಮನ ಸಾಧ್ಯವೆನ್ನುತ್ತಾರೆ. ಕೆಟ್ಟದಾಗಿ ನಡೆದುಕೊಳ್ಳಬಾರದು, ಒರಟಾಗಿ ಮಾತಾಡಬಾರದು ಮತ್ತು ಅತಿರೇಕವಾಗಿ ವರ್ತಿಸಬಾರದು ಎಂದು ಗೊತ್ತಿದ್ದರೂ ಹಠಾತ್ ಪ್ರವೃತ್ತಿಯ ಸಮಸ್ಯೆ ಇರುವವರು ಆ ಸಂದರ್ಭಗಳಲ್ಲಿ ಮರೆತು ಹೋಗುತ್ತಾರೆ. ಈ ನೆನಪಿನ ಆಟಗಳು ಅಥವಾ ಮೆಮೋರಿ ಗೇಮ್‌ಗಳನ್ನು ಆಡಿಸುವುದರಿಂದ ಅವರಿಗೆ ಒಂದು ರೀತಿಯಲ್ಲಿ ಪ್ರಯೋಜನವಾಗುತ್ತದೆ.

ಹಿರಿಯರ ಮಾದರಿಗಳು: ಯಾರೇ ಯಾವುದಾದರೂ ತಪ್ಪು ಮಾಡಿದಾಗ ಹಿರಿಯರಾದವರಿಗೆ ತಟ್ಟನೆ ಕೋಪ ಬಂದರೆ, ಹಠಾತ್ತಾಗಿ ಪ್ರತಿಕ್ರಿಯಿಸದೆ, ನಿಟ್ಟುಸಿರು ಬಿಟ್ಟು, ನಿಧಾನವಾಗಿ ಉಸಿರಾಡಬೇಕು. ಟೇಬಲ್‌ನ ಮೇಲೆ ನೀರಿನ ಲೋಟವನ್ನು ಉರುಳಿಸಿದ್ದಕ್ಕೆ ಕೋಪ ಬಂತು. ಆದರೆ, ಕೋಪ ಮಾಡಿಕೊಂಡರೆ ಏನೂ ಪ್ರಯೋಜನವಾಗುವುದಿಲ್ಲ, ಕೋಪದಿಂದ ವರ್ತಿಸಿದರೆ ಈಗ ಇರುವ ವಾತಾವರಣ ಹಾಳಾಗುತ್ತದೆ. ನಾನು ನಿಧಾನವಾಗಿ ಉಸಿರಾಡುತ್ತೇನೆ. ಕೋಪವನ್ನು ಶಮನ ಮಾಡಿಕೊಳ್ಳುತ್ತೇನೆ. ನನ್ನನ್ನು ನಾನು ನಿಯಂತ್ರಿಸಿಕೊಳ್ಳುತ್ತೇನೆ ಎಂದು ಹೇಳುವುದು ಮಾತ್ರವಲ್ಲದೆ ಅಂತೆಯೇ ವರ್ತಿಸಬೇಕು. ಈ ಬಗೆಯ ಜೀವಂತ ಉದಾಹರಣೆಗಳು ಹಠಾತ್ ಪ್ರವೃತ್ತಿಯ ಮಕ್ಕಳಿಗೂ ಕೂಡಾ ಒಂದು ರೀತಿಯ ಮಾರ್ಗದರ್ಶನವಾಗುತ್ತದೆ.

ಸಕಾರಾತ್ಮಕವಾಗಿರುವುದು: ಹಿರಿಯರ ಕಟುವಾದ ವಿಮರ್ಶೆ ಮತ್ತು ಕಠೋರವಾದ ವರ್ತನೆಗಳು ಮಕ್ಕಳ ಹಠಾತ್ ಪ್ರವೃತ್ತಿಯನ್ನು ಉದ್ರೇಕಿಸುತ್ತದೆ. ಮಗುವನ್ನು ಕೆರಳಿಸುವುದರಿಂದ ನಿಜಕ್ಕೂ ಯಾವ ರೀತಿಯಲ್ಲಿಯೂ ಪ್ರಯೋಜನವಾಗುವುದಿಲ್ಲ. ಅದಕ್ಕೆ ಸಕಾರಾತ್ಮಕವಾಗಿ ಅಥವಾ ಧನಾತ್ಮಕವಾಗಿ ಯಾವ ಪ್ರಭಾವವನ್ನೂ ಬೀರಲಾಗುವುದಿಲ್ಲ. ಮಗುವು ಒಳ್ಳೆಯ ಕೆಲಸ ಮಾಡಿದಾಗ ಧನಾತ್ಮಕವಾಗಿ ಹೇಗೆ ಪ್ರಶಂಸೆ ನೀಡುವೆವೋ ಹಾಗೆಯೇ ಮಗುವು ತಪ್ಪು ಕೆಲಸ ಮಾಡಿದಾಗ ಋಣಾತ್ಮಕವಾಗಿ ವರ್ತಿಸದೆ, ನೀನು ಹೀಗೆ ವರ್ತಿಸಿದ್ದರೆ ಇಂತಹ ಪ್ರಶಂಸೆ ಸಿಗುತ್ತಿತ್ತು. ಸಂತೋಷವಾಗುತ್ತಿತ್ತು. ಇಲ್ಲದಿದ್ದರೆ ನೋವಾಗುತ್ತದೆ. ಬೇಸರವಾಗುತ್ತದೆ ಎಂದು ಸಾತ್ವಿಕವಾಗಿಯೇ ಸೂಚಿಸಬೇಕು.

ಚಲನಶೀಲ ಚಟುವಟಿಕೆಗಳು: ನಿತ್ಯವೂ ಮಾಡುವಂತಹ ವ್ಯಾಯಾಮಗಳು, ಆಶಯ ಮತ್ತು ಉದ್ದೇಶ ಕೇಂದ್ರಿತ ಭೌತಿಕ ಮತ್ತು ಬೌದ್ಧಿಕ ಚಟುವಟಿಕೆಗಳು ಅಂದರೆ, ಸಂಗೀತವನ್ನು ಕಲಿಯುವುದೋ, ನೃತ್ಯ ಮಾಡುವುದೋ, ನಿರ್ದಿಷ್ಟ ಅವಧಿಯಲ್ಲಿ ಚಿತ್ರವನ್ನು ಬಿಡಿಸಿ ಮುಗಿಸುವುದೋ, ಕವನ, ಕತೆ ಅಥವಾ ಇನ್ನೇನಾದರೂ ಮನಸ್ಸಿಗೆ ಮುದ ಕೊಡುವಂತಹದ್ದನ್ನು ಮಾಡುವುದೋ; ಇಂತಹ ಕೂಡಾ ಹಠಾತ್ ಪ್ರವೃತ್ತಿಯ ಶಮನಕ್ಕೆ ನೆರವಾಗುತ್ತವೆ. ವ್ಯಾಯಾಮ, ಯೋಗ, ನೃತ್ಯ, ಈಜು, ಪ್ರಾಣಾಯಾಮ, ಧ್ಯಾನ ಇತ್ಯಾದಿಗಳನ್ನು ದಿನದ ನಿರ್ದಿಷ್ಟ ಕಾಲದಲ್ಲಿ ಸತತವಾಗಿ ಮಾಡುತ್ತಲೇ ಇರುವ ರೂಢಿಯು ಕೂಡಾ ಹಠಾತ್ ಪ್ರವೃತ್ತಿಯ ಶಮನಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ನೆರವಾಗುತ್ತದೆ.

ಪರಿಣಾಮವನ್ನು ಶಮನಗೊಳಿಸಲಾಗದು

ಅನಿಯಂತ್ರಿತ ಹಠಾತ್ ಪ್ರವೃತ್ತಿ ಸಮಸ್ಯೆಯ ಪರಿಣಾಮಗಳು ಮುಜುಗರವನ್ನೂ ಮತ್ತು ನಕಾರಾತ್ಮಕ ವಾದ ಅನುಭವವನ್ನೂ ಉಂಟು ಮಾಡಿದ ಮೇಲೆ ತಮ್ಮ ಈ ಪ್ರವೃತ್ತಿಯನ್ನು ಶಾಶ್ವತವಾಗಿ ದಮನ ಮಾಡಬೇಕು ಎಂದು ಯತ್ನಿಸುವುದು ಬೆಟ್ಟಕ್ಕೆ ಕಲ್ಲು ಹೊತ್ತಂತೆ. ಆದರೂ ಒಂದು ಹಂತಕ್ಕೆ ಸಾಧ್ಯವಿದೆ. ಆದರೆ ಮಗುವಿನಲ್ಲಿಯೇ ಅದಕ್ಕೆ ಸೂಕ್ತ ಚಿಕಿತ್ಸಕಾ ತರಬೇತಿ ಕೊಟ್ಟರೆ ಮುಂದೆ ಸಮಸ್ಯೆ ಇರದು. ಕೆಲವು ವಯಸ್ಕರಲ್ಲಿ ಕಂಡು ಬರುವ ಈ ಸಮಸ್ಯೆಯು ದಮನವಾಗುವ ಯಾವ ಲಕ್ಷಣಗಳೂ ಕಾಣದು. ಅವರಿಗೆ ಅದನ್ನು ದಮನಿಸಬೇಕು ಅಥವಾ ಶಮನಗೊಳಿಸಬೇಕು ಎಂಬ ಆಸೆ ಇದ್ದರೂ, ದೀರ್ಘ ಕಾಲದ ರೂಢಿಯು ಬಲವಾಗಿ ಅವರನ್ನು ತ್ನ ನಿಯಂತ್ರಣದಲ್ಲಿಟ್ಟುಕೊಳ್ಳುತ್ತದೆ.

ಚೈತನ್ಯವು ಒಳಿತಿಗಾಗಿ ಹಾತೊರೆದರೂ ದುರ್ಬಲ ಶರೀರವು ಅದಕ್ಕೆ ಅವಕಾಶಕೊಡದು. ಪುನರಾವರ್ತಿತವಾಗುವಂತಹ ಸಮಯ ಬಂದಾಗ ಮಾದಕ ವಸ್ತುಗಳ ಅಥವಾ ಕುಡಿತದ ವ್ಯಸನಿಗಳು ಹೇಗೆ ಅದನ್ನು ಹೊಂದಲು ಹಾತೊರೆಯುತ್ತಿರುತ್ತಾರೋ, ಹಾಗೆಯೇ ಕೆಲವು ವರ್ತನೆಗಳ ವ್ಯಸನಿಗಳು ಆಂತರಿಕವಾಗಿ ಆ ವರ್ತನೆಗಳನ್ನು ತೋರಲು ಹಾತೊರೆಯುತ್ತಿರುತ್ತಾರೆ. ಅವರಿಗೆ ಕೋಪ ಮಾಡಿಕೊಂಡು ಕಿರುಚಾಡಾದಿದ್ದರೆ, ವಸ್ತುಗಳನ್ನು ಎಸೆದು, ಮುರಿದು ಹಾಕದಿದ್ದರೆ, ತಾನು ಕೂಗಾಡುವುದು ಮನೆಯಿಂದ ಹೊರಗೆ ಎಲ್ಲರಿಗೂ ಕೇಳುತ್ತದೆ ಎಂದು ತಿಳಿದಿದ್ದರೂ ಕೂಗಾಡದಿದ್ದರೆ ಅವರ ತುರಿಕೆಗೆ ಸಮಾಧಾನ ಇರುವುದಿಲ್ಲ. ಕಾಮಾತುರಾಣಂ ನ ಭಯಂ, ನ ಲಜ್ಜಾ ಎನ್ನುವಂತೆ ಈ ವರ್ತನೆಗಳ ತೋರುವಿಕೆಯ ಆತುರದಲ್ಲಿ ಅವರಿಗೆ ಭಯವೂ, ಸಂಕೋಚವೂ, ಯಾವ ಹಿಂಜರಿಕೆಯೂ ಇರುವುದಿಲ್ಲ. ಕೋಪವನ್ನು ತೋರಿಸಿಕೊಂಡು ಅದನ್ನು ವ್ಯಗ್ರವಾಗಿ ಪ್ರದರ್ಶಿಸುವ ಉನ್ಮತ್ತತೆ ಇರುವ ವ್ಯಕ್ತಿಗಳನ್ನು ಗಮನಿಸಿ. ಮಾದಕ ವಸ್ತುವನ್ನು ತೆಗೆದುಕೊಂಡು ಆಡುವವರಂತೆ ಹೆಚ್ಚುಹೆಚ್ಚು ಉನ್ಮತ್ತರಾಗುತ್ತಾ ಹೋಗುತ್ತಾರೆ. ಸುಳ್ಳು ಹೇಳುವ, ಕದಿಯುವ, ಕೋಪಗೊಳ್ಳುವ, ಕಿರುಚಾಡುವ ವರ್ತನೆಗಳ ಉನ್ಮತ್ತತೆಯ ತುರಿಕೆಯನ್ನು ಹೊಂದಿರುವವರನ್ನು ಗಮನಿಸಿ. ಅಗತ್ಯಕ್ಕಿಂತ ಹೆಚ್ಚಾಗಿ ಅವರ ಪ್ರತಿಕ್ರಿಯೆ ಇರುತ್ತದೆ. ದೊಡ್ಡ ಪ್ರದರ್ಶಕ ಕಲೆಯೊಂದನ್ನು ಪ್ರಸ್ತುತಪಡಿಸುತ್ತಿರುವವರಂತೆ ಅದೆಂಥದ್ದೋ ಒಂದು ಉಗ್ರ ಆನಂದದಲ್ಲಿರುತ್ತಾರೆ.

ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಸಾಮಾನ್ಯವಾಗಿರುವ ಇಂತಹ ವರ್ತನೆಗಳ ವ್ಯಸನಗಳು ಯಾವ ರೀತಿಯ ಪರಿಣಾಮಗಳನ್ನು ಬೀರುತ್ತೆ ಎಂಬುದನ್ನು ಮುಂದೆ ನೋಡೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News