ಒಡಲ ಕಿಚ್ಚು ವಿಷಾದವಾಗಿ ಹರಿದ ಪರಿ ಅನನ್ಯ

Update: 2019-11-10 11:25 GMT

ಕಾವ್ಯಾನುಸಂಧಾನಕ್ಕೆ ನಿಂತಾಗ ನನಗೆ ಕಾವ್ಯ ಎಷ್ಟು ಮುಖ್ಯವೋ ಕವಿಯೂ ಅಷ್ಟೇ ಮುಖ್ಯ ವಾಗುತ್ತಾನೆ. ಕವಿಯ ಬದುಕು, ಅನುಭವ, ದೃಷ್ಟಿ, ಅಭಿಲಾಷೆಗಳೇ ಕಾವ್ಯದ ಜೀವವಾಗಿ ಮಿಡಿಯುತ್ತವೆ. ಈ ಹಿನ್ನೆಲೆಯಲ್ಲಿ ಕವಿ ಮನದ ಸ್ಥಾಯಿಭಾವ ಏನು ಎಂಬುದೇ ಅವನ ಕಾವ್ಯ ಸ್ವರೂಪ ಎಂತಹದು ಎಂಬುದನ್ನು ನಿರ್ಧರಿ ಸುತ್ತದೆ. ಈ ನಿಟ್ಟಿನಲ್ಲಿ ‘ಒಡಲ ಕಿಚ್ಚಿನ ಹಿಲಾಲು ಹಿಡಿದು’ ಸಂಕಲನದ ಕವಿ ನಾಗೇಶ್ ನಾಯಕ ಅವರು ನನಗೆ ಮುಖ್ಯವೆನಿಸುವುದು, ಅವರು ಕೆಳವರ್ಗದಿಂದ ಬಂದು ಹೋರಾಟದ ಬದುಕು ಕಂಡವರು ಎಂಬುದಕ್ಕೆ. ಮತ್ತು ಬದುಕನ್ನು ಪ್ರಗತಿಶೀಲ ಪಥದಲ್ಲಿ ರೂಪಿಸಿಕೊಳ್ಳುತ್ತ, ಬಂದ ಕಷ್ಟ ನೋವುಗಳನ್ನು ಗೆದ್ದು ಪಕ್ವತೆಯ ಮಾರ್ಗದಲ್ಲಿ ಸಾಗುತ್ತಿರುವುದು ಈ ಸಂದರ್ಭದಲ್ಲಿ ಬಹುಮುಖ್ಯವಾದ ಅಂಶ. ಇಲ್ಲಿ ‘ಒಡಲ ಕಿಚ್ಚಿನ ಹಿಲಾಲು ಹಿಡಿದು ಎನ್ನುವ ಶೀರ್ಷಿಕೆಯೇ ಹೇಳುವಂತೆ, ಅವರ ಬದುಕು-ಬರಹದಲ್ಲಿ ನೋವು, ದುಃಖ, ತುಳಿತಕ್ಕೊಳಗಾ ದವರ ಅಹಾಯಕತೆ, ಸಾಮಾಜಿಕ ಅವ್ಯವಸ್ಥೆಯ ವಿರುದ್ಧದ ವಿಷಾದ ಮನಮಿಡಿಸುತ್ತವೆ. ಹಾಗಾಗಿ ಇದೀಗ ಈ ಕಾವ್ಯಗುಚ್ಚವನ್ನು ಪ್ರಕಟಿಸಿರುವ ನಾಗೇಶ್ ನಾಯಕ ಅವರು ನಮ್ಮ ನಡುವಿನ ಮಹತ್ವದ ಕವಿಯಾಗಿ ನಿಲ್ಲುತ್ತಾರೆ.

‘ಒಡಲ ಕಿಚ್ಚಿನ ಹಿಲಾಲು ಹಿಡಿದು’ ಕೃತಿ ಕುರಿತು ಮೊದಲ ಮಾತು ಹೇಳುವುದಾದರೆ, ಈ ಪುಸ್ತಕವನ್ನು ವಿನ್ಯಾಸಗೊಳಿಸಿರುವ ರೀತಿ ಅತ್ಯಂತ ಖುಷಿ ಕೊಡುವಂತಹದು. ಮುಖಪುಟದಿಂದ ಹಿಡಿದು, ಒಳಪುಟಗಳಲ್ಲಿ ಬಳಸಿರುವ ಚಿತ್ರಗಳು, ಅವುಗಳನ್ನು ಅಳವಡಿಸಿರುವ ರೀತಿಯೇ ಪುಸ್ತಕದ ತೂಕ ಮತ್ತು ಮೌಲ್ಯವನ್ನು ಹೆಚ್ಚಿಸಿವೆ. ಅಲ್ಲದೇ ನಾಗೇಶ್ ನಾಯಕ ಅವರಿಗೆ ತಮ್ಮ ಕೃತಿ ಕುರಿತಾದ ಆಸ್ಥೆ, ಪ್ರೀತಿಯನ್ನು ಇದು ಸೂಚಿಸುತ್ತದೆ. ಪುಸ್ತಕ ತೆರೆದರೆ ಅಲ್ಲಿರುವ ಚಿತ್ರಗಳು ಓದಿಗೆ ಪ್ರೇರೇಪಿಸುವಂತಿವೆ. ಹಾಗಾಗಿ ಇಂಹವೊಂದು ಅಂದವಾದ ಕಾವ್ಯಕೃತಿಯನ್ನು ಕೈಗಿಟ್ಟ ಅವರನ್ನು ಅಭಿನಂದಿಸಲೇ ಬೇಕು.

ಕನ್ನಡ ಕಾವ್ಯಪರಂಪರೆ ಎಂಬುದು ಮಹಾಸಾಗರಕ್ಕೆ ಸಮ. ಕಾವ್ಯಯಾನದೊಂದಿಗೆ ನದಿಯಾಗಿ ಈ ಸಾಗರ ಸೇರಲು ಹೊರಟ ನಾಗೇಶ್ ನಾಯಕ ಅವರ ಕವಿತೆಗಳು ಯಾವಸ್ತರದಲ್ಲಿ ನಿಲ್ಲುತ್ತವೆ ಎಂಬುದರ ನಿಕಷಕ್ಕೆ ನಿಂತಾಗ, ಅವರಲ್ಲಿ ಗೋಚರಿಸುವ ಪ್ರಮುಖ ಲಕ್ಷಣ, ಪ್ರತಿಭಟನೆಯ ದನಿ ಮತ್ತು ವಿಷಾದದ ನೋವು. ಈ ಭಾವಕ್ಕೆ ಹೊರತಾದ ರಚನೆಗಳನ್ನೂ ಅವರು ಮಾಡಿದ್ದಾರೆ. ಆದರೆ ಅವರ ಒಟ್ಟು ಅಭಿವ್ಯಕ್ತಿಯ ಸ್ಥಾಯಿ ಭಾವವನ್ನು ಗಮನಿಸಿದಾಗ ಪ್ರತಿಭಟನೆಯ ದನಿ ಮತ್ತು ವಿಷಾದದ ನೋವು ಗಟ್ಟಿಯಾಗಿರುವುದು ಗೋಚರಿಸುತ್ತದೆ. ಈ ಹಿನ್ನೆಲೆಯಲ್ಲಿ ಒಂದು ಕಾಲಘಟ್ಟದಲ್ಲಿ ಚಳವಳಿಯ ಸ್ವರೂಪದಲ್ಲಿ ಜೀವಂತವಾಗಿದ್ದ ಬಂಡಾಯ ಮತ್ತು ದಲಿತ ಸಂವೇದನೆಯ ರಚನೆಗಳು ಇಲ್ಲಿ ಅದರ ವಿಕಸಿತ ಸ್ವರೂಪ ಪಡೆದಿರುವುದು ಗಮನಕ್ಕೆ ಬರುತ್ತದೆ. ಇಂದು ಸಾಹಿತ್ಯದಲ್ಲಿ ಯಾವುದೇ ಒಂದು ಚಳವಳಿ ಕೇಂದ್ರಿತ ಸಂವೇದನೆಯ ರಚನೆಗಳು ಇಲ್ಲವೆಂದು ಹೇಳಬಹುದಾದರೂ, ಪರಂಪರೆಯ ಆ ಮಾರ್ಗದ ವಿಕಸಿತ ಹಾಗೂ ಪಕ್ವವಾದ ಸಂವೇದನೆಗಳು ಇಂದು ಕಾಣಸಿಗುತ್ತವೆ ಎಂಬುದಕ್ಕೆ ಈ ಸಂಕಲನದ ಹಲವಾರು ಕವಿತೆಗಳು ನಿದರ್ಶನವಾಗುತ್ತವೆ. ಈ ನಿಟ್ಟಿನಲ್ಲಿ ನಾಗೇಶ್ ನಾಯಕ ಅವರ ಈ ಕೃತಿಯ ಒಟ್ಟು ಕವಿತೆಗಳಲ್ಲಿ ಅತಿ ಮಹತ್ವದ ಎನ್ನಬಹುದಾದ ಕೆಲವು ಕವಿತೆಗಳನ್ನು ಕೇಂದ್ರೀಕರಿಸಿ ನನ್ನ ರಸಗ್ರಹಣ ಅಥವಾ ಅವಲೋಕನವನ್ನು ದಾಖಲಿಸಲು ಬಯಸುತ್ತೇನೆ.

ಗರಿ ಮುದುರಿಕೊಂಡ ರೆಕ್ಕೆಗಳ/ ಇನ್ನಾದರೂ ಬಿಚ್ಚಬೇಕಿದೆ/ ಕುಕ್ಕಿ ತಿನ್ನುವ ರಣಹದ್ದುಗಳ/ ರಕ್ತ ಹೀರಬೇಕಿದೆ/ ಬಚ್ಚಿಟ್ಟ ಒಡಲ ಕಿಚ್ಚಿನ/ ಹಿಲಾಲು ಹಿಡಿದು/ ಹಲಾಲುಕೋರರ ಮಹಲಿಗೆ/ ಮುತ್ತಿಗೆ ಹಾಕಬೇಕಿದೆ.

‘ಒಡಲ ಕಿಚ್ಚಿನ ಹಿಲಾಲು ಹಿಡಿದು ಕವಿತೆಯ ಈ ಸಾಲುಗಳು ಥಟ್ಟನೇ ಸೆಳೆದು, ಕವಿಯ ನೋವು, ಆಕ್ರೋಶ, ನ್ಯಾಯಕ್ಕಾಗಿ ಹಂಬಲಿಸುವ ಪ್ರಜ್ಞೆಯನ್ನು ಹೇಳುತ್ತವೆ. ಇದು ಕವಿಯ ಆಶಯ ಮಾತ್ರವಲ್ಲ ಬದುಕಿನಲ್ಲಿ ಅನ್ಯಾಯ, ಅಸಹಾಯಕತೆಯಿಂದ ನೋವುಂಡ ಪ್ರತಿಯೊಬ್ಬರ ಅಂತರಂಗ ದನಿಯಾಗಿದೆ. ಕಾವ್ಯವೊಂದು ಯಶಸ್ವೀಯಾಗುವುದು ಕೂಡ ಇದೇ ಸ್ವರೂಪದಲ್ಲಿ. ಯಾವಾಗ ಕವಿಯ ಅಂತರಂಗದ ಧ್ವನಿ ಓದುಗನ ಅಂತರಂಗದ ಧ್ವನಿಯಾಗುತ್ತದೊ ಆಗ ಅದು ಓದುಗನ ಸಂವೇದನೆಯೂ ಆಗುತ್ತದೆ. ಹೀಗೆ ಇಲ್ಲಿರುವ ಅನೇಕ ಕವಿತೆಯಲ್ಲಿನ ಸಾಲುಗಳು ಕಾವ್ಯರಸಿರಕರನ್ನು ಹಿಡಿದಿಟ್ಟುಕೊಳ್ಳುತ್ತವೆ. ಈ ವಿಚಾರವಾಗಿ ಬೆಳಕುಚೆಲ್ಲುವುದಾದರೆ, ನಾಗೇಶ್ ನಾಯಕ ಅವರು ತಮ್ಮ ಕಾವ್ಯದಲ್ಲಿ ಕಲ್ಪಕತೆಗೆ ಹಾಗೂ ಭಾವುಕತೆಗೆ ಹೆಚ್ಚು ಸ್ಥಾನ ನೀಡದೇ ವಾಸ್ತವ ಬದುಕಿನ ಕಟು ಸತ್ಯಗಳನ್ನು, ವಾಸ್ತವೀಕತೆಯ ಮೌಲ್ಯವನ್ನು ಕಾವ್ಯಕ್ಕೆ ಸಾವಯವವಾಗಿಸಿದ್ದಾರೆ. ಇದು ಅವರ ಕಾವ್ಯಶಕ್ತಿ ಮತ್ತು ಗಟ್ಟಿ ದನಿಗೆ ಆಧಾರವಾಗಿ ನಿಂತಿದೆ. ಅನುಭವಿಸಿದ್ದನ್ನು ಹೇಳುವಾಗ ಇರುವ ಧೈರ್ಯ ಮತ್ತು ನೈತಿಕತೆ ಸುಳ್ಳು ಹೇಳುವಾಗ ಇರಲಾರದು. ಹಾಗಾಗಿ ನಾಗೇಶ್ ನಾಯಕ ಅವರ ಕಾವ್ಯದ ದನಿ ವಾಸ್ತವಿಕ ನೆಲೆಗಟ್ಟಿನ ಗಟ್ಟಿದನಿಯಾಗಿದೆ.

ಊರ ಬೀದಿಯಲ್ಲಿ/ ನನ್ನವರು ತಲೆ ಎತ್ತ ತಿರುಗಿದ್ದಕ್ಕೆ/ ಚರ್ಮ ಎಬ್ಬಿದರು, ರಕ್ತ ಹರಿಸಿದರು/ ಹಾಗಾದರೆ ಮರ್ಯಾದೆಯಿಂದ/ ಬದುಕಿದ್ದೇ ಕಂಟಕವಾಯಿತೆ..?

‘ನಿತ್ಯ ನರಕದ ನಾಯಕರು’ ಕವಿತೆಯ ಈ ಸಾಲುಗಳು ಮೇಲಿನ ಮಾತಿಗೆ ನಿದರ್ಶನವಾಗಿವೆ. ಒಂದು ಕಾಲದಲ್ಲಿ ಕೆಳವರ್ಗದವರ ಶೋಷಣೆ ಎಂಬುದು ಸಾರ್ವತ್ರಿಕ ಅಟ್ಟಹಾಸವಾಗಿತ್ತು. ನೆಲೆ ಇಲ್ಲದವರು ಗುಲಾಮರಾಗಿ ಜೀವಿಸುವ ಅನಿವಾರ್ಯತೆಯೇ ಇತ್ತು. ಆದರೆ ಇಂದು ಕಾಲ ಬದಲಾಗಿದ್ದರೂ ಶೋಷಣೆಯ ಮುಖಗಳು, ತುಳಿಯುವ ಸ್ವರೂಪ ಮಾರ್ಗಗಳಷ್ಟೇ ಬದಲಾಗಿವೆ ಎಂಬುದನ್ನು ಈ ಕವಿತೆ ಸೂಚ್ಯವಾಗಿ ದನಿಸುತ್ತದೆ. ಆದರೆ ಇಲ್ಲಿ ಆಕ್ರೋಶದ ದನಿಗಿಂತ ತಣ್ಣನೇಯ ವಿಷಾದದ ದನಿ ಇರುವುದು ಕವಿಯ ಪಕ್ವತೆಯ ಲಕ್ಷಣ.

ಇನ್ನು ನಾಗೇಶ್ ನಾಯಕ ಅವರ ಕಾವ್ಯಭಾಷೆ ಮತ್ತು ಶಿಲ್ಪದ ವಿಚಾರವಾಗಿ ಮಾತನಾಡುವುದಾರೆ, ಇಲ್ಲಿ ಸರಳತೆ ಮತ್ತು ಸಮತೂಕದ ಕೌಶಲ್ಯವಿದೆ ಎಂದು ಹೇಳಬಹುದು. ಪ್ರಾಸಕ್ಕಾಗಿ ತ್ರಾಸು ಅನುಭವಿಸದೇ, ನವಿರಾದ ಅಂತರ್ಲಯ ಹಾಗೂ ಶಬ್ದಆಡಂಬರವನ್ನು ಮೀರಿದ ಕುಸೂರಿ ಇದು. ಇದ್ದಿದ್ದನ್ನು ಇರುವಂತೆಯೇ ದರ್ಶಿಸುವ ನಿರಾಭರಣ ಸುಂದರಿ ಈ ಕವಿಯ ಕಾವ್ಯಕನ್ನಿಕೆ. ಹಾಗಾಗಿ ಇಲ್ಲಿ ಯಾವುದೂ ಅಪ್ರಸ್ತುತ ಅಥವಾ ಸಂಗತ ಅನ್ನಿಸುವುದಿಲ್ಲ. ಒತ್ತಾಯಕ್ಕೆ ಪದಗಳನ್ನು ಪೋಣಿಸಿರುವುದಂತೂ ಎಲ್ಲೂ ಗೋಚರಿಸುವುದಿಲ್ಲ. ಇದು ಕವಿಯ ಅಧ್ಯಯನಶೀಲತೆ ಮತ್ತು ಪೂರ್ಣತೆಯ ಲಕ್ಷಣವಾಗಿದೆ. ಅಲ್ಲದೇ ಇವರ ಕಾವ್ಯಶಿಲ್ಪ ಕೂಡ ವೈಭವೀಕರಣವನ್ನು ಅಳವಡಿಸಕೊಂಡಿಲ್ಲ. ತಾನು ನಂಬಿದ ಅರ್ಥವ್ಯಾಪ್ತಿಯನ್ನು ಮೀರುವುದಿಲ್ಲ. ಆಕೃತಿ ಚಿಕ್ಕದೇ ಆಗಿದ್ದರೂ ಆಶಯವನ್ನು ಸಮತೂಕವಾಗಿ, ವಿಕಾರವಾಗದ ರೀತಿ ಅಭಿವ್ಯಕ್ತಗೊಳಿಸುವುದು, ಕಿರಿದಾದುದರಲ್ಲಿ ಹಿರಿದಾದುದನ್ನು ಹಿಡಿದಿಡುವ ಯತ್ನ ಎಂದು ಹೇಳಬಹುದು. ಈ ಎಲ್ಲ ಅಂಶಗಳು ನಾಗೇಶ್ ನಾಯಕ ಅವರ ಅಖಂಡ ಕಾವ್ಯ ಪ್ರೀತಿಗೆ ನಿದರ್ಶನಗಳೇ ಆಗಿವೆ. ಅವರೇ ಹೇಳಿಕೊಂಡಿರುವಂತೆ ಇತರ ಪ್ರಕಾರಗಳಲ್ಲಿ ಅವರು ರಚನೆ ಮಾಡಿದ್ದರೂ, ಅವರ ಮೂಲ ತುಡಿತ ಇರುವುದು ಕಾವ್ಯದಲ್ಲೇ. ಇಂತಹ ಉತ್ಕೃಷ್ಟ ಕಾವ್ಯಕೃತಿಯನ್ನು ಪ್ರಕಟಿಸಿದ ಅವರಿಗೆ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

Writer - ಅನುಪಮ ಕುಮಾರ್

contributor

Editor - ಅನುಪಮ ಕುಮಾರ್

contributor

Similar News