ಬಾಬರಿ ಮಸೀದಿ ಧ್ವಂಸ ತನಿಖೆಯಲ್ಲಿ ಯಾವ ಸರಕಾರವೂ ನನಗೆ ನೆರವಾಗಲಿಲ್ಲ: ನ್ಯಾ.ಲಿಬರ್ಹಾನ್

Update: 2019-11-10 15:24 GMT
Photo: indianexpress.com

ನಿವೃತ್ತ ನ್ಯಾಯಾಧೀಶ ಎಂ.ಎಸ್. ಲಿಬರ್ಹಾನ್ ಅವರು ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣದ ತನಿಖೆಯ ನೇತೃತ್ವವನ್ನು ವಹಿಸಿದ್ದರು. ಡಿಸೆಂಬರ್ 1992ರಲ್ಲಿ, ಐತಿಹಾಸಿಕ ಕಟ್ಟಡವು ನೆಲಸಮಗೊಂಡ ಕೆಲವೇ ದಿನಗಳಲ್ಲಿ ಅಂದಿನ ಪಿ.ವಿ.ನರಸಿಂಹರಾವ್ ನೇತೃತ್ವದ ಕೇಂದ್ರ ಸರಕಾರವು ಲಿಬರ್ಹಾನ್ ಆಯೋಗವನ್ನು ರಚಿಸಿತ್ತು. ಸಮಿತಿಯು ಜೂನ್ 2009ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಮಸೀದಿಯು ಧ್ವಂಸಗೊಳ್ಳಲು ಕಾರಣವಾಗಿದ್ದ ಕೋಮು ಉದ್ವಿಗ್ನತೆಗೆ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ, ಕಲ್ಯಾಣ್ ಸಿಂಗ್ ಮತ್ತಿತರರು ಹೊಣೆಗಾರರು ಎನ್ನುವುದನ್ನು ವರದಿಯು ಎತ್ತಿ ಹಿಡಿದಿತ್ತು. 81ರ ಹರೆಯದ ನ್ಯಾ.ಲಿಬರ್ಹಾನ್ ಅಯೋಧ್ಯೆ ವಿವಾದ ಮತ್ತು ನಿರ್ದಿಷ್ಟವಾಗಿ ಬಾಬರಿ ಮಸೀದಿ ಧ್ವಂಸದ ವಿವಿಧ ಮಗ್ಗಲುಗಳ ಕುರಿತು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ತೀರ್ಪು ಶನಿವಾರ ಪ್ರಕಟಗೊಂಡಿದೆ. ತೀರ್ಪಿನ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?

ನ್ಯಾ.ಲಿಬರ್ಹಾನ್: ತೀರ್ಪನ್ನು ನಾನು ಓದಿಲ್ಲ, ಆದರೆ ಅದರ ಕೆಲವು ಅಂಶಗಳನ್ನು ಟಿವಿಯಲ್ಲಿ ನೋಡಿದ್ದೇನೆ. ಸರ್ವೋಚ್ಚ ನ್ಯಾಯಾಲಯವು ಯಾವಾಗಲೂ ತನ್ನ ಮನಸ್ಸಾಕ್ಷಿಯಂತೆ ಪ್ರಕರಣಗಳನ್ನು ನಿರ್ಧರಿಸುತ್ತದೆ. ಪರಮೋಚ್ಛ ನ್ಯಾಯಾಲಯದ ತೀರ್ಪಿನ ಬಗ್ಗೆ ಯಾರೂ ಟೀಕಿಸಕೂಡದು.

1992ರಲ್ಲಿ ಬಾಬರಿ ಮಸೀದಿ ಧ್ವಂಸವು ಅಕ್ರಮವಾಗಿತ್ತು ಮತ್ತು 1949ರಲ್ಲಿ ವಿಗ್ರಹಗಳನ್ನು ಸ್ಥಾಪಿಸುವ ಮೂಲಕ ಮಸೀದಿಯ ಆಚಾರಗಳನ್ನು ಉಲ್ಲಂಘಿಸಲಾಗಿತ್ತು ಎಂದು ತೀರ್ಪು ಹೇಳಿದೆ. ಆದರೂ ಅದು ವಿವಾದಿತ ನಿವೇಶನದ ಹಕ್ಕನ್ನು ಹಿಂದು ಕಕ್ಷಿದಾರರಿಗೆ ನೀಡಿದೆ.

ನ್ಯಾ.ಲಿಬರ್ಹಾನ್: ಮಸೀದಿ ಧ್ವಂಸವು ಕಾನೂನುಬಾಹಿರವಾಗಿತ್ತು, ತಪ್ಪಾಗಿತ್ತು ಎನ್ನುವುದನ್ನು ನನ್ನ ಆಯೋಗವು ಕಂಡುಕೊಂಡಿತ್ತು. ವಾಸ್ತವದಲ್ಲಿ ಅದು ಒಂದು ಅಭಿಪ್ರಾಯವಾಗಿತ್ತೇ ಹೊರತು ಆಯೋಗದ ಕಾರ್ಯದ ಭಾಗವಾಗಿರಲಿಲ್ಲ. ಮಸೀದಿಯನ್ನು ಧ್ವಂಸಗೊಳಿಸಿದ್ದು ಯಾರು ಮತ್ತು ಯಾವ ಸಂದರ್ಭಗಳಲ್ಲಿ ಅದು ಸಂಭವಿಸಿತ್ತು ಎನ್ನುವುದು ಮಾತ್ರ ಆಯೋಗದ ವ್ಯಾಪ್ತಿಗೊಳಪಟ್ಟಿತ್ತು.

ಹಕ್ಕು ವ್ಯಾಜ್ಯವು ಶತಮಾನಗಳಷ್ಟು ಇತಿಹಾಸ ಹೊಂದಿದೆ ಮತ್ತು ಹಕ್ಕು ಕೋರಿಕೆಗಳು ಹೆಚ್ಚಾಗಿ ಸಂಘರ್ಷಾತ್ಮಕ ದಾಖಲೆಗಳನ್ನು ಆಧರಿಸಿದ್ದವು. ಇದನ್ನು ಧ್ವಂಸ ಪ್ರಕರಣದ ತನಿಖೆಗೆ ಹೋಲಿಸಿದರೆ ಅಲ್ಲಿ ದಾಖಲೆಗಳು ಹೆಚ್ಚು ಖಚಿತವಾಗಿದ್ದವು. ಆದರೆ ಪ್ರಕರಣವು ಅಂತ್ಯದ ಸಮೀಪಕ್ಕೂ ಬಂದಿಲ್ಲ. ಇಲ್ಲಿ ನ್ಯಾಯದಾನದಲ್ಲಿ ಲೋಪ ಉಂಟಾಗಿದೆಯೇ?

ನ್ಯಾ.ಲಿಬರ್ಹಾನ್: ಇಲ್ಲ, ನ್ಯಾಯದಾನದಲ್ಲಿ ಯಾವುದೇ ಲೋಪವಾಗಿಲ್ಲ. ನ್ಯಾಯವು ನಿಧಾನವಾಗಿ ಬರುತ್ತದೆ ಮತ್ತು ವಿಶ್ವಾದ್ಯಂತ ಇದು ಒಂದೇ ಆಗಿದೆ. ಅಮೆರಿಕದಲ್ಲಿ ಜಾನ್ ಎಫ್. ಕೆನಡಿ ಅವರನ್ನು ಕೊಂದವರು ಯಾರು ಮತ್ತು ಹೇಗೆ ಎನ್ನುವುದನ್ನು ನಿರ್ಧರಿಸಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ.

ಸತ್ಯ ಶೋಧನೆ ಕೆಲಸವನ್ನು ಪೂರ್ಣಗೊಳಿಸಲು 17 ವರ್ಷಗಳನ್ನು ತೆಗೆದುಕೊಂಡಿದ್ದಕ್ಕೆ ನಿಮ್ಮ ಆಯೋಗವು ಟೀಕೆಗಳಿಗೆ ಗುರಿಯಾಗಿತ್ತು. ಟೀಕೆ ನ್ಯಾಯೋಚಿತವಾಗಿತ್ತು ಎಂದು ನೀವು ಭಾವಿಸಿದ್ದೀರಾ?

ನ್ಯಾ.ಲಿಬರ್ಹಾನ್: ಇಲ್ಲ. ಟೀಕಾಕಾರರು ನ್ಯಾಯಾಲಯಗಳು ಆಗಿಂದಾಗ್ಗೆ ನೀಡಿದ್ದ ತಡೆಯಾಜ್ಞೆಗಳು ಅಥವಾ ವಿಚಾರಣೆಗೆ ಸಂಬಂಧಿಸಿದ ಸಾಕ್ಷಿಗಳ ಗೈರುಹಾಜರಾತಿಯನ್ನು ಪರಿಗಣಿಸಿರಲಿಲ್ಲ. ವಾಜಪೇಯಿಯವರು ಕೊನೆಯವರೆಗೂ ವಿಚಾರಣೆಗೆ ಹಾಜರಾಗಿರಲಿಲ್ಲ. ಎಂದೂ ವಿಚಾರಣೆಗೆ ಹಾಜರಾಗದ ಇತರ ಸಾಕ್ಷಿಗಳೂ ಇದ್ದರು. ಜೊತೆಗೆ ದಾಖಲೆಗಳನ್ನು ಆಯೋಗದ ಮುಂದೆ ಸಲ್ಲಿಸಲು ಬಯಸದ ಕೆ.ಎಸ್.ಸುದರ್ಶನ ಅವರಂತಹ ಸಾಕ್ಷಿಗಳೂ ಇದ್ದರು.

ಆಯೋಗದ ಕಾರ್ಯ ನಿರ್ವಹಣೆಯಲ್ಲಿ ಪ್ರಮುಖ ಸವಾಲುಗಳು ಏನಾಗಿದ್ದವು?

ನ್ಯಾ.ಲಿಬರ್ಹಾನ್: ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವುದು. ಪ್ರಮುಖ ಸಾಕ್ಷಿಗಳ ಗೈರು ಹಾಜರಿ. ಹೆಜ್ಜೆಹೆಜ್ಜೆಗೂ ಉಚ್ಚ ನ್ಯಾಯಾಲಯಗಳು ಹೊರಡಿಸುತ್ತಿದ್ದ ತಡೆಯಾಜ್ಞೆಗಳು. ಒಂದು ತಡೆಯಾಜ್ಞೆ ಈಗಲೂ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಬಾಕಿಯಿತ್ತು. ಅದು ಇತ್ಯರ್ಥಗೊಂಡಿದೆಯೇ ಇಲ್ಲವೇ ಎನ್ನುವುದು ನನಗೆ ಗೊತ್ತಿಲ್ಲ.

ಕಾಂಗ್ರೆಸ್, ಸಂಯುಕ್ತ ರಂಗ ಮತ್ತು ಬಿಜೆಪಿ ನೇತೃತ್ವದ ಸರಕಾರಗಳ ಅಧಿಕಾರಾವಧಿಗಳಲ್ಲಿ ನಿಮ್ಮ ಆಯೋಗವು ಕಾರ್ಯ ನಿರ್ವಹಿಸುತ್ತಿತ್ತು. ತನಿಖೆಯನ್ನು ದುರ್ಬಲಗೊಳಿಸುವಂತೆ ಅಥವಾ ಯಾರ ಮೇಲಾದರೂ ತಪ್ಪು ಹೊರಿಸುವಂತೆ ನಿಮ್ಮ ಮೇಲೆ ಯಾವುದೇ ರೀತಿಯ ಒತ್ತಡವಿತ್ತೇ?

ನ್ಯಾ.ಲಿಬರ್ಹಾನ್: ಪ್ರಭಾವ ಬೀರಲು ಅವರು ಬಯಸಿದ್ದಿರಬಹುದು. ಆದರೆ ನನ್ನನ್ನು ಸಂಪರ್ಕಿಸಲು ಯಾರಿಗೂ ಧೈರ್ಯವಿರಲಿಲ್ಲ

ಆಯೋಗದ ತನಿಖೆಯು ನಿರ್ದಿಷ್ಟ ಮಾರ್ಗದಲ್ಲಿ ಸಾಗಬೇಕೆಂದು ನಿಮಗೆ ಪರೋಕ್ಷವಾಗಿ ತಿಳಿಸಲು ಅವರು ಪ್ರಯತ್ನಿಸಿದ್ದರೇ?

ನ್ಯಾ.ಲಿಬರ್ಹಾನ್: ಯಾವಾಗಲೂ

ನೀವು ವಿಚಾರಣೆಯನ್ನು ನಡೆಸುತ್ತಿದ್ದಾಗ ಉತ್ತರ ಪ್ರದೇಶದಲ್ಲಿಯ ಎಸ್‌ಪಿ ಮತ್ತು ಬಿಎಸ್‌ಪಿ ಸರಕಾರಗಳು ನಿಮಗೆ ಸಕ್ರಿಯವಾಗಿ ನೆರವಾಗಿದ್ದವೇ?

ನ್ಯಾ.ಲಿಬರ್ಹಾನ್: ಸರಕಾರವಾಗಲಿ, ಆಡಳಿತವಾಗಲಿ ಯಾರೂ ನನಗೆ ಸಕ್ರಿಯವಾಗಿ ನೆರವಾಗಿರಲಿಲ್ಲ

ಮಸೀದಿ ಧ್ವಂಸಕ್ಕೆ ಕಾರಣರಾಗಿದ್ದವರನ್ನು ಕಾನೂನು ಕ್ರಮಕ್ಕೊಳಪಡಿಸುವ ಬಗ್ಗೆ ಎಸ್‌ಪಿ ಮತ್ತು ಬಿಎಸ್‌ಪಿ ಏನಾದರೂ ಉತ್ಸುಕತೆಯನ್ನು ತೋರಿಸಿದ್ದವೇ?

ನ್ಯಾ.ಲಿಬರ್ಹಾನ್: ಇಲ್ಲ, ಅಂತಹ ಉತ್ಸುಕತೆಯನ್ನು ಯಾರೂ ತೋರಿಸಿರಲಿಲ್ಲ

ತನಿಖೆಯಲ್ಲಿ ವಾಜಪೇಯಿ, ಆಡ್ವಾಣಿ ಮತ್ತು ಮುರಳಿಮನೋಹರ ಜೋಶಿ ಅವರ ವಿರುದ್ಧದ ಅಂಶಗಳನ್ನು ದುರ್ಬಲಗೊಳಿಸುವಂತೆ ನಿಮ್ಮ ಮೇಲೆ ಒತ್ತಡವಿದ್ದರಿಂದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಅಧಿಕಾರಾಧಿಯಲ್ಲಿ ಆಯೋಗದ ಕಾರ್ಯ ನಿರ್ವಹಣೆ ನಿಧಾನವಾಗಿತ್ತು ಎಂಬ ಆರೋಪಗಳಿದ್ದವು. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ನ್ಯಾ.ಲಿಬರ್ಹಾನ್: ಅಂತಹ ಯಾವುದೇ ಒತ್ತಡವಿರಲಿಲ್ಲ. ಕಾರ್ಯವಿಧಾನ ಮಾರ್ಗಗಳ ಮೂಲಕ ಅವರು ತಾವೇನು ಮಾಡಲು ಸಾಧ್ಯವಿತ್ತೋ ಅದನ್ನು ಮಾಡಿದ್ದರು.

ಕಾಂಗ್ರೆಸ್ ನೇತೃತ್ವದ ಸರಕಾರದ ಅವಧಿಯಲ್ಲಿ ಆಯೋಗವು ತನ್ನ ನಿಲುವನ್ನು ಮೃದುಗೊಳಿಸಿತ್ತು ಎಂಬ ಇಂತಹುದೇ ಆರೋಪಗಳು ಮತ್ತೊಮ್ಮೆ ಕೇಳಿಬಂದಿದ್ದವು. ಆ ಬಗ್ಗೆ ನೀವೇನು ಹೇಳುತ್ತೀರಿ?

ನ್ಯಾ.ಲಿಬರ್ಹಾನ್: ಇಲ್ಲ ,ಅದು ಸತ್ಯವಲ್ಲ

ಧ್ವಂಸಕ್ಕೆ ಮೊದಲಿನ ಘಟನಾವಳಿಗಳ ವಿವರಗಳು, ಜೊತೆಗೆ ಸಾಕ್ಷ್ಯಗಳನ್ನೂ ಆಯೋಗದ ವರದಿಯು ಒಳಗೊಂಡಿತ್ತು. ಮಸೀದಿ ಧ್ವಂಸ ಪ್ರಕರಣದಲ್ಲಿ ಸರಕಾರಿ ಅಭಿಯೋಜಕರು ನಿಮ್ಮ ವರದಿಯನ್ನು ಬಳಸಬೇಕಿತ್ತು ಎಂದು ನೀವು ಭಾವಿಸಿದ್ದೀರಾ?

ನ್ಯಾ.ಲಿಬರ್ಹಾನ್: ಹೌದು,ಅವರು ಅದನ್ನು ಬಳಸಿಕೊಳ್ಳಬೇಕಿತ್ತು

ಅವರು ಆಗ ಅದನ್ನೇಕೆ ಬಳಸಿಕೊಂಡಿರಲಿಲ್ಲ?

ನ್ಯಾ.ಲಿಬರ್ಹಾನ್: ಅದು ಅವರ ಆಯ್ಕೆಯಾಗಿತ್ತು, ಅದು ಅವರ ವಕೀಲರ ಸಲಹೆಯಾಗಿತ್ತು. ನನ್ನದು ಸತ್ಯಶೋಧನಾ ಆಯೋಗವಾಗಿತ್ತು. ಅದರ ನಂತರ ತಮ್ಮ ಕೆಲಸವನ್ನು ಮಾಡುವುದು ಪೊಲೀಸರ ಕರ್ತವ್ಯವಾಗಿತ್ತು. ನನ್ನ ವರದಿಯನ್ನು ಸಂಸತ್ತು ಅಂಗೀಕರಿಸಿತ್ತು.

ಧ್ವಂಸ ಪ್ರಕರಣದ ವಿಚಾರಣೆ 27 ವರ್ಷಗಳಿಂದಲೂ ನಡೆಯುತ್ತಲೇ ಇದೆ ಮತ್ತು ಸಾಕ್ಷಿಗಳ/ಆರೋಪಿಗಳ ಹಾಜರಾತಿಗಾಗಿ ಒಂದೇ ಒಂದು ವಾರಂಟನ್ನೂ ಪ್ರಾಸಿಕ್ಯೂಟರ್‌ ಗಳು ಕೋರಿಲ್ಲ ಅಥವಾ ವಿಚಾರಣಾ ನ್ಯಾಯಾಲಯವು ಹೊರಡಿಸಿಲ್ಲ. ಇಲ್ಲಿ ಪ್ರಾಸಿಕ್ಯೂಷನ್ ಅಥವಾ ನ್ಯಾಯಾಂಗದಿಂದ ಪ್ರಾಮಾಣಿಕತೆಯ ಕೊರತೆಯಿದೆಯೇ?

ನ್ಯಾ.ಲಿಬರ್ಹಾನ್: ನ್ಯಾಯಾಂಗದ್ದಲ್ಲ, ಆದರೆ ಪ್ರಾಸಿಕ್ಯೂಷನ್ ಏಜೆನ್ಸಿಗಳು ಮತ್ತು ಅವುಗಳ ವಕೀಲರಲ್ಲಿ ಪ್ರಾಮಾಣಿಕತೆಯ ಕೊರತೆಯಿದೆ.

ರಾಜಕೀಯ ಮತ್ತು ಧರ್ಮದ ಮಧ್ಯೆ ಗೆರೆಯೆಳೆಯಲು ಶಾಸಕಾಂಗ ವ್ಯವಸ್ಥೆಯನ್ನು ರೂಪಿಸಬೇಕು ಎನ್ನುವುದು ನಿಮ್ಮ ವರದಿಯಲ್ಲಿನ ಪ್ರಮುಖ ಶಿಫಾರಸುಗಳಲ್ಲೊಂದಾಗಿತ್ತು. ಆದರೆ ಅದಕ್ಕಾಗಿ ಕಾಂಗ್ರೆಸ್ ಅಥವಾ ಬಿಜೆಪಿ ತಲೆಕೆಡಿಸಿಕೊಂಡಿರಲಿಲ್ಲ. ಏಕೆ?

ನ್ಯಾ.ಲಿಬರ್ಹಾನ್: ಹಾಗೆ ಮಾಡದಿರುವುದು ರಾಜಕೀಯವಾಗಿ ಅವುಗಳಿಗೆ ಸೂಕ್ತವಾಗಿದೆ

ಇಂದು ಧರ್ಮವು ರಾಜಕಾರಣದ ಕೇಂದ್ರಬಿಂದುವಾಗಿದೆಯೇ?

ನ್ಯಾ.ಲಿಬರ್ಹಾನ್: ಅದು ಜೀವನದ ಭಾಗವಾಗಿದೆ. ಧರ್ಮವು ಶ್ರದ್ಧೆ ಮತ್ತು ಅಧಿಕಾರ ರಾಜಕೀಯದ ಸಂಕೀರ್ಣ ಮಿಶ್ರಣವಲ್ಲದೆ ಬೇರೇನೂ ಅಲ್ಲ.

Writer - ಸಲಿಕ್ ಅಹ್ಮದ್, outlookindia.com

contributor

Editor - ಸಲಿಕ್ ಅಹ್ಮದ್, outlookindia.com

contributor

Similar News