ಬೆಂಗಳೂರಿನಲ್ಲಿ ನಾಳೆಯಿಂದ ಒಂದು ವಾರ ನಿಷೇಧಾಜ್ಞೆ

Update: 2019-11-10 17:27 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.10: ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿನ ನಾಲ್ಕು ಕ್ಷೇತ್ರಗಳಲ್ಲಿ ಉಪಚುನಾವಣೆ ಹಿನ್ನೆಲೆ ನಾಳೆಯಿಂದ ಒಂದು ವಾರದ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಹಿನ್ನೆಲೆ ನಾಳೆಯಿಂದ (ನ.11)ಬೆಳಗ್ಗೆ 10 ಗಂಟೆಯಿಂದ ನಾಮಪತ್ರ ಸಲ್ಲಿಕೆ ಮುಕ್ತಾಯವಾಗುವ ನ.18 ಸಂಜೆ 4 ಗಂಟೆವರೆಗೂ ನಿಷೇಧಾಜ್ಞೆ ಜಾರಿಯಲ್ಲಿದ್ದು, ಈ ನಡುವೆ ನ.15ರ ಕನಕ ಜಯಂತಿ, ನ.17ರ ರವಿವಾರದಂದು ನಿಷೇಧಾಜ್ಞೆಯನ್ನು ಸಡಿಲಗೊಳಿಸುವುದಾಗಿ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಿಷೇಧಾಜ್ಞೆ ಸಂದರ್ಭದಲ್ಲಿ ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ ಐದಕ್ಕಿಂತ ಹೆಚ್ಚು ಜನ ಗುಂಪು ಸೇರುವುದನ್ನು , ಪ್ರತಿಭಟನೆ, ಮೆರವಣಿಗೆ, ಸಭೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನಾಮ ಪತ್ರ ಸಲ್ಲಿಸುವ ಕಚೇರಿಗಳಾದ ಕೆ.ಆರ್.ಪುರ ಕ್ಷೇತ್ರದ ಕಂದಾಯ ಅಧಿಕಾರಿಗಳ ಕಚೇರಿ, ಯಶವಂತಪುರ ಕ್ಷೇತ್ರದ ಕೆಂಗೇರಿ ಉಪನಗರದ ಕರ್ನಾಟಕ ಬ್ಯಾಂಕ್ ಕಟ್ಟಡ, ಮಹಾಲಕ್ಷ್ಮೀಲೇಔಟ್ ಕ್ಷೇತ್ರದ ರಾಜಾಜಿನಗರ ಆರ್‌ಟಿಒ ಕಚೇರಿ ಸಂಕೀರ್ಣ, ಶಿವಾಜಿನಗರದ ಕ್ವೀನ್ಸ್ ರಸ್ತೆಯ ಮತದಾರರ ನೋಂದಾಣಾಧಿಕಾರಿ ಕಚೇರಿಗಳ ಸುತ್ತಮುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹಾಗೂ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News