ನ.14ರಿಂದ 17ರವರೆಗೆ ಮೆಟ್ರೋ ಸಂಚಾರ ಸ್ಥಗಿತ: ಕಾರಣವೇನು ಗೊತ್ತೇ ?

Update: 2019-11-10 17:32 GMT

ಬೆಂಗಳೂರು, ನ.10: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಸಂಚಾರ ನಡೆಸುವವರಿಗೆ ಬಿಎಂಆರ್‌ಸಿಎಲ್ ಸೂಚನೆಯೊಂದನ್ನು ನೀಡಿದ್ದು, ಆರ್. ವಿ. ರಸ್ತೆ-ಯಲಚೇನಹಳ್ಳಿ ನಡುವೆ ನ.14ರ ಗುರುವಾರ ಬೆಳಗ್ಗೆ 5 ಗಂಟೆಯಿಂದ ನ.17ರ ಭಾನುವಾರದ ತನಕ ಮೂರು ದಿನಗಳ ಕಾಲ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ತಿಳಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್), ಬೊಮ್ಮಸಂದ್ರ ಸಂಪರ್ಕಿಸುವ ಹೊಸ ನಮ್ಮ ಮೆಟ್ರೋ ರೈಲು ಮಾರ್ಗದಲ್ಲಿನ ವಿದ್ಯುತ್ ಪೂರೈಕೆ ಲೈನ್ ಕಾಮಗಾರಿ ಹಿನ್ನೆಲೆಯಲ್ಲಿ ಆರ್.ವಿ. ರಸ್ತೆ-ಯೆಲಚೇನಹಳ್ಳಿ ನಡುವಿನ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ರದ್ದುಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.

ಆರ್.ವಿ. ರಸ್ತೆ-ಯಲಚೇನಹಳ್ಳಿ ನಡುವಿನ ರೈಲು ಸಂಪರ್ಕಕ್ಕೆ ಮಾತ್ರ ತೊಂದರೆಯಾಗಲಿದೆ. ಆರ್.ವಿ. ರಸ್ತೆ- ನಾಗಸಂದ್ರ ನಡುವಿನ ರೈಲು ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

ಮೆಟ್ರೋ ಸೇವೆ ಸ್ಥಗಿತಗೊಳ್ಳುವ ಕಾರಣ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಿದೆ. ಆರ್.ವಿ. ರಸ್ತೆ-ಯಲಚೇನಹಳ್ಳಿ ನಡುವೆ ಬಸ್ ಸಂಚಾರ ನಡೆಸಲಿದೆ. ಬೆಳಗ್ಗೆ 5.30 ರಿಂದ ರಾತ್ರಿ 11.45ರ ತನಕ ಆರ್. ವಿ. ರಸ್ತೆ ನಿಲ್ದಾಣದಲ್ಲಿ, 4.45 ರಿಂದ ರಾತ್ರಿ 10.30ರ ತನಕ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಬಸ್ ಸಂಚಾರ ನಡೆಸಲಿದೆ. ನೇರಳೆ ಮಾರ್ಗದಲ್ಲಿನ ಸಂಚಾರಕ್ಕೆ ಯಾವುದೇ ಅಡಚಣೆ ಇಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News