ಬೆಂಗಳೂರು: ಹೊಸಕೆರೆಹಳ್ಳಿ ಕೆರೆ ಕೋಡಿ ಒಡೆದು ಮನೆಗಳಿಗೆ ನುಗ್ಗಿದ ನೀರು

Update: 2019-11-10 17:35 GMT

ಬೆಂಗಳೂರು, ನ.10: ನಗರದಲ್ಲಿ ಶನಿವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹೊಸಕೆರೆಹಳ್ಳಿ ಕೆರೆ ಕೋಡಿ ಒಡೆದ ಪರಿಣಾಮ ಸಮೀಪದ ರಸ್ತೆಗಳು ಹಾಗೂ ಮನೆಗಳಿಗೆ ನೀರು ನುಗ್ಗಿದೆ.

ಮಳೆಯಿಂದಾಗಿ ಹೊಸಕೆರೆಹಳ್ಳಿ ಒಂದು ಬದಿ ದಿಢೀರನೆ ಕುಸಿದಿದ್ದು, ಇದರಿಂದಾಗಿ ಸುಮೀಪದ ಪ್ರಮೋದ್ ಲೇಔಟ್, ಪುಷ್ಪಗಿರಿ ಲೇಔಟ್, ಬಡಾವಣೆಗಳ ಬಹಳಷ್ಟು ಮನೆಗಳಲ್ಲಿ ನೀರು ತುಂಬಿಕೊಂಡ ಪರಿಣಾಮ ರಾತ್ರಿಯಿಡೀ ಜನರು ಜಾಗರಣೆ ಮಾಡಬೇಕಾದ ಸನ್ನಿವೇಶ ಎದುರಾಗಿತ್ತು. ಬಿಬಿಎಂಪಿ ಸಿಬ್ಬಂದಿಗಳು ಮನೆಗಳಲ್ಲಿ ತುಂಬಿದ್ದ ನೀರನ್ನು ತೆಗೆಯಲು ಶ್ರಮಿಸಿದರು.

ಮಳೆ ಅನಾಹುತ ಪ್ರದೇಶಗಳಿಗೆ ಶನಿವಾರ ರಾತ್ರಿಯೇ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತ ಅನಿಲ್‌ಕುಮಾರ್ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ನೈಸ್ ರಸ್ತೆ ನಿರ್ಮಾಣ ಸಂಬಂಧ ಬಿಡಿಎ ಹೊಸಕೆರೆಹಳ್ಳಿ ಬಳಿ ಕಾಂಪೌಂಡ್ ಹಾಕಿರುವುದರಿಂದ ಕೆರೆಯ ನೀರು ಹೊರಹೋಗಲಾಗದೆ ಕೋಡಿ ಒಡೆದು ಬಡಾವಣೆಗಳು ಜಲಾವೃತವಾಗಿವೆ. ಕೂಡಲೇ ಕಾಂಪೌಂಡ್ ತೆರವುಗೊಳಿಸುವಂತೆ ಬಿಡಿಎ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಮೇಯರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಹೊಸಕೆರೆ ಹಳ್ಳಿ ಕೆರೆ ಬದಿ ಕುಸಿದು ಕೆರೆ ನೀರು ಸಮೀಪದ ಬಡಾವಣೆಗಳಿಗೆ ನುಗ್ಗಲು ಕಾರಣವಾದ ಘಟನೆ ಮತ್ತು ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸೋಮವಾರ ಬಿಡಿಎ, ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳ ಸಭೆ ನಡೆಸಿ, ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು. ಕೆರೆ ನೀರು ಮತ್ತೇ ಪುಷ್ಪಗಿರಿ ಬಡಾವಣೆ, ಪ್ರಮೋದ್ ಲೇಔಟ್ ಪ್ರದೇಶಗಳಿಗೆ ಹರಿದು ಹೋಗ ದಂತೆ ತಾತ್ಕಾಲಿಕವಾಗಿ ತಡೆಗೋಡೆಯನ್ನು ನಿರ್ಮಿಸುವಂತೆ ಬಿಡಿಎ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿರುವುದಾಗಿ ಅವರು ತಿಳಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ನಗರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಕರೆದ ಸಭೆಯಲ್ಲಿ ಬಿಡಿಎ ಸ್ವಾಧೀನದಲ್ಲಿರುವ ಕೆಲ ಕೆರೆಗಳನ್ನು ಬಿಬಿಎಂಪಿಗೆ ಹಸ್ತಾಂತರಗೊಳಿಸುವುದಾಗಿ ತಿಳಿಸಿದ್ದಾರೆ. ಹಾಗಾಗಿ ಈ ಕೆರೆಯನ್ನು ಬಿಬಿಎಂಪಿಗೆ ವಶಕ್ಕೆ ಪಡೆದು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಮೇಯರ್ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ನಾಗರೀಕರು ಸಮಸ್ಯೆ ಮಹಾಪೂರವನ್ನೇ ಅವರ ಮುಂದಿಟ್ಟರು. ಕೆರೆ ಪ್ರದೇಶದಲ್ಲಿ ಜಲಾಮಂಡಳಿ ಸಿಬ್ಬಂದಿಗಳು ಪೈಪುಗಳನ್ನು ಅಳವಡಿಸುವಾಗ ಅಗೆದ ಪರಿಣಾಮವಾಗಿ ಕೆರೆಯ ಬದಿ ಕುಸಿದಿದೆ. ಹಾಗಾಗಿ ಮಳೆಯ ನೀರು, ರಸ್ತೆಗಳಿಗೆ, ಮನೆಗಳಿಗೆ ನುಗ್ಗಿದೆ ಎಂದು ಆರೋಪಿಸಿದರು. ಕೆರೆಯಲ್ಲಿ ಅನಗತ್ಯವಾಗಿ ಹೂಳು ತುಂಬಿದ್ದು, ಕೂಡಲೇ ಹೂಳನ್ನು ತೆರವುಗೊಳಿಸಿ, ಕೆರೆಯನ್ನು ಸ್ವಚ್ಛವಾಗಿರುವಂತೆ ಮಾಡಬೇಕು ಎಂದು ಮೇಯರ್ ಅವರನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News