ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೆ ಎಚ್ಚೆತ್ತ ಬಿಬಿಎಂಪಿ: ಭರದಿಂದ ಸಾಗಿದ ಗುಂಡಿ ಮುಚ್ಚುವ ಕಾರ್ಯ

Update: 2019-11-10 17:46 GMT

ಬೆಂಗಳೂರು, ನ10: ರಸ್ತೆ ಗುಂಡಿಗಳನ್ನು ಮುಚ್ಚಲು ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೆ ಬಿಬಿಎಂಪಿಯು ಸಮರೋಪಾದಿಯಲ್ಲಿ ನಗರದೆಲ್ಲೆಡೆ ಗುಂಡಿ ದುರಸ್ತಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಅಧಿಕ ಯಂತ್ರಗಳು ಮತ್ತು ಕಾರ್ಮಿಕರನ್ನು ಬಳಸಿಕೊಂಡು ದಿನವಿಡಿ ಗುಂಡಿ ಮುಚ್ಚುವ ಮತ್ತು ತೇಪೆ ಹಾಕುವ ಕಾಮಗಾರಿ ಭರದಿಂದ ಸಾಗಿದೆ. 

ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ನ.10ರೊಳಗೆ ನಗರದಲ್ಲಿರುವ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚುವುದಾಗಿ ಭರವಸೆ ನೀಡಿದ್ದರು. ಅದರಂತೆ ನಗರದಲ್ಲಿ ಗುರುತಿಸಲಾಗಿರುವ 10,656 ಗುಂಡಿಗಳ ಪೈಕಿ 9,319 ಗುಂಡಿಗಳನ್ನು ಮುಚ್ಚಲಾಗಿದ್ದು, 1337 ಗುಂಡಿಗಳು ಬಾಕಿ ಇರುವುದಾಗಿ ಬಿಬಿಎಂಪಿ ತಿಳಿಸಿದೆ.

ಬಿಬಿಎಂಪಿ ಅಧಿಕಾರಿಗಳು ನೀಡಿರುವ ಅಂಕಿ-ಅಂಶಗಳ ಪ್ರಕಾರ ನಗರದ ಬೆಂಗಳೂರು ಪೂರ್ವ ವಲಯದಲ್ಲಿ 1063 ಗುಂಡಿ ಪೈಕಿ 986, ಬೆಂಗಳೂರು ಪಶ್ಚಿಮದಲ್ಲಿ 2688 ಗುಂಡಿಗಳ ಪೈಕಿ 2367, ಬೆಂಗಳೂರು ದಕ್ಷಿಣದಲ್ಲಿ 1476 ಗುಂಡಿ ಪೈಕಿ 1343, ಬೊಮ್ಮನಹಳ್ಳಿಯಲ್ಲಿ 2079 ಗುಂಡಿಗಳ ಪೈಕಿ 1800, ಯಲಹಂಕದಲ್ಲಿ 720 ಗುಂಡಿಗಳ ಪೈಕಿ 634, ಮಹದೇವಪುರದಲ್ಲಿ 1742 ಗುಂಡಿಗಳ ಪೈಕಿ 1535 ಮತ್ತು ರಾಜರಾಜೇಶ್ವರಿ ನಗರದಲ್ಲಿ 392 ಗುಂಡಿಗಳ ಪೈಕಿ 232 ಗುಂಡಿಗಳನ್ನು ಮುಚ್ಚಿರುವುದಾಗಿ ತಿಳಿಸಿದ್ದು, ಒಟ್ಟಾರೆ 105665 ಗುಂಡಿಗಳ ಪೈಕಿ 9319 ಗುಂಡಿಗಳನ್ನು ಮುಚ್ಚಿರುವುದಾಗಿ ತಿಳಿಸಿದ್ದಾರೆ.

ಆದರೆ ವಾಸ್ತವವಾಗಿ ಅಧಿಕಾರಿಗಳು ನೀಡುವ ಲೆಕ್ಕಕ್ಕಿಂತ ಅಧಿಕ ಗುಂಡಿಗಳು ನಗರದಲ್ಲಿವೆ. ಇದರಿಂದ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ನಗರದ ಪ್ರಮುಖ ರಸ್ತೆಗಳು, ಮೇಲ್ಸೆತುವೆಗಳು, ವಾರ್ಡ್ ರಸ್ತೆಗಳು ಗುಂಡಿಮಯವಾಗಿವೆ. ಪ್ರತಿ ವರ್ಷ ರಸ್ತೆಗಳ ಅಭಿವೃದ್ಧಿ, ಗುಂಡಿ ದುರಸ್ತಿಗಾಗಿ ಕೋಟ್ಯಂತರ ರೂ. ವ್ಯಯಿಸಲಾಗುತ್ತಿದೆ. ಆದರೆ, ಗುಂಡಿ ದುರಸ್ತಿಗೊಳಿಸಿ ವರ್ಷ ಕಳೆಯುವುದರೊಳಗೆ ಡಾಂಬರು ಕಿತ್ತು ಬರುತ್ತಿದೆ. ಕಳಪೆ ಕಾಮಗಾರಿಯಿಂದ ಗುಂಡಿಗಳು ಸೃಷ್ಟಿಯಾಗುತ್ತಲೇ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News