ಚೀನಾ ಓಪನ್: 10ನೇ ಬಾರಿ ಪ್ರಶಸ್ತಿ ಜಯಿಸಿದ ಕೆಂಟೊ ಮೊಮೊಟಾ

Update: 2019-11-10 18:57 GMT

  ಶಾಂಘೈ, ನ.10: ವಿಶ್ವದ ನಂ.1 ಆಟಗಾರ ಕೆಂಟೊ ಮೊಮೊಟಾ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ರವಿವಾರ 10ನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದರು. ಜಪಾನ್ ಆಟಗಾರ ಮೊಮೊಟಾ ರವಿವಾರ ನಡೆದ ಪುರುಷರ ಸಿಂಗಲ್ಸ್ ನ ಫೈನಲ್‌ನಲ್ಲಿ ತೈವಾನ್‌ನ ವಿಶ್ವದ ನಂ.2ನೇ ಆಟಗಾರ ಚೌ ಟಿಯೆನ್-ಚೆನ್‌ರನ್ನು 21-15, 17-21, 21-18 ಗೇಮ್‌ಗಳ ಅಂತರದಿಂದ ಮಣಿಸಿದರು. ಎರಡು ಬಾರಿಯ ವಿಶ್ವ ಚಾಂಪಿಯನ್ ಮೊಮೊಟಾ ಕಳೆದ ವರ್ಷದ ಫೈನಲ್ ಪಂದ್ಯದಲ್ಲಿ ತೋರಿದ್ದ ಪ್ರದರ್ಶನವನ್ನು ಪುನರಾವರ್ತಿಸಿದರು.

25ರ ಹರೆಯದ ಮೊಮೊಟಾ ಪಾಲಿಗೆ 2019 ಯಶಸ್ವಿ ವರ್ಷವಾಗಿ ಪರಿಣಮಿಸಿದೆ. ಈ ವರ್ಷ ಅವರು ವಿಶ್ವ ಚಾಂಪಿಯನ್ ಕಿರೀಟದ ಜೊತೆಗೆ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.

ಇದೇ ವೇಳೆ ಮಹಿಳೆಯರ ಸಿಂಗಲ್ಸ್ ಪಂದ್ಯದ ಫೈನಲ್‌ನಲ್ಲಿ ಜಪಾನ್‌ನ ನೊರೊಮಿ ಒಕುಹರಾರನ್ನು ಮಣಿಸಿದ ಚೀನಾದ ಚೆನ್ ಯುಫೈ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಂಡರು. ಚೆನ್ ಮೊದಲ ಗೇಮ್‌ನ್ನು 9-21 ಅಂತರದಿಂದ ಸೋತಿದ್ದರು. ಆ ಬಳಿಕ ಚೇತರಿಸಿಕೊಂಡ ಚೆನ್ ಮುಂದಿನ ಎರಡು ಗೇಮ್‌ಗಳನ್ನು 21-12, 21-18 ಅಂತರದಿಂದ ಗೆದ್ದುಕೊಂಡರು.

ಒಕುಹರಾ ಈ ಸೋಲಿನೊಂದಿಗೆ ಭಾರೀ ನಿರಾಸೆ ಅನುಭವಿಸಿದರು. ಅವರು ಈ ವರ್ಷ ಆಡಿರುವ ಎಲ್ಲ 6 ಫೈನಲ್ ಪಂದ್ಯಗಳನ್ನು ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News