ಮೊದಲ ಟ್ವೆಂಟಿ-20: ವಿಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2019-11-10 18:59 GMT

 ಗ್ರೊಸ್ ಐಲೆಟ್, ನ.10: ಆರಂಭಿಕ ಆಟಗಾರ್ತಿಯರಾದ ಶೆಫಾಲಿ ವರ್ಮಾ ಹಾಗೂ ಸ್ಮತಿ ಮಂಧಾನ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ವಿಂಡೀಸ್ ವಿರುದ್ಧ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 84 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಹರ್ಯಾಣದ ಕಿರಿಯ ಆಟಗಾರ್ತಿ ಶೆಫಾಲಿ ಮೊದಲ ವಿಕೆಟ್‌ನಲ್ಲಿ ಸ್ಮತಿ ಮಂಧಾನ ಅವರೊಂದಿಗೆ ದಾಖಲೆಯ 143 ರನ್ ಸೇರಿಸಿದರು. ಇದು ಮೊದಲ ವಿಕೆಟ್‌ಗೆ ಭಾರತ ಗಳಿಸಿದ ಗರಿಷ್ಠ ಮೊತ್ತದ ಜೊತೆಯಾಟವಾಗಿದೆ. 2013ರಲ್ಲಿ ಬಾಂಗ್ಲಾದೇಶ ವಿರುದ್ಧ 130 ರನ್ ಜೊತೆಯಾಟ ನಡೆಸಿದ್ದ ತಿರುಶ್ ಕಮಿನಿ ಹಾಗೂ ಪೂನಂ ರಾವತ್ ದಾಖಲೆಯನ್ನು ಮುರಿದರು.

ಶಫಾಲಿಗೆ ಉತ್ತಮ ಸಾಥ್ ನೀಡಿದ ಮಂಧಾನ 46 ಎಸೆತಗಳ ಇನಿಂಗ್ಸ್‌ನಲ್ಲಿ 11 ಬೌಂಡರಿ ಬಾರಿಸಿದರು. ಶಫಾಲಿ-ಸ್ಮತಿ ಸಾಹಸದಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 185 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದಿದ್ದ ವಿಂಡೀಸ್‌ನ್ನು 9 ವಿಕೆಟ್‌ಗೆ 101 ರನ್‌ಗೆ ನಿಯಂತ್ರಿಸಿದ ಭಾರತ 84 ರನ್‌ಗಳ ಜಯ ದಾಖಲಿಸಿತು.

ವಿಂಡೀಸ್ ಪರ ಶೆರ್ಮೈನ್ ಕ್ಯಾಂಪ್‌ಬೆಲ್(34 ಎಸೆತ, 33 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ಇನಿಂಗ್ಸ್ ನುದ್ದಕ್ಕೂ ಆತಿಥೇಯರು ದೊಡ್ಡ ಜೊತೆ ಯಾಟ ನಡೆಸಲು ಪರದಾಟ ನಡೆಸಿದರು.

ಭಾರತದ ಪರ ಶಿಖಾ ಪಾಂಡೆ(2-22), ಸ್ಪಿನ್ನರ್‌ಗಳಾದ ರಾಧಾ ಯಾದವ್(2-10) ಹಾಗೂ ಪೂನಂ ಯಾದವ್(2-24)ತಲಾ ಎರಡು ವಿಕೆಟ್‌ಗಳನ್ನು ಪಡೆದರು. ದೀಪ್ತಿ ಶರ್ಮಾ(1-15)ಹಾಗೂ ಪೂಜಾ ವಸ್ತ್ರಕರ್(1-21)ತಲಾ ಒಂದು ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News