ಕರ್ತಾರಪುರಕ್ಕೆ ಹೋಗಲು ನಮ್ಮಲ್ಲಿ ಹಣವಿಲ್ಲ: ಪಿಎಂಸಿ ಬ್ಯಾಂಕ್ ಬಿಕ್ಕಟ್ಟಿನಿಂದ ಕಂಗಾಲಾದ ಸಿಕ್ಖರ ಅಳಲು

Update: 2019-11-11 13:33 GMT

ಮುಂಬೈ,ನ.11: ಕರ್ತಾರಪುರ ಕಾರಿಡಾರ್‌ಯಾತ್ರಿಗಳಿಗೆ ತೆರೆದುಕೊಂಡಿದ್ದರೂ ಪಿಎಂಸಿ ಬ್ಯಾಂಕ್ ಹಗರಣದಿಂದಾಗಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಮಹಾರಾಷ್ಟ್ರದ ಕನಿಷ್ಠ 1,950 ಸಿಕ್ಖರಿಗೆ ಪಾಕಿಸ್ತಾನದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸಮುದಾಯದ ಹಿರಿಯ ನಾಯಕರೋರ್ವರು ಹೇಳಿದ್ದಾರೆ.

ಮುಂಬೈ, ನಾಸಿಕ್, ನಾಂದೇಡ್, ನವಿ ಮುಂಬೈ ಮತ್ತು ಥಾಣೆಗಳಿಂದ ಸುಮಾರು 2,000 ಸಿಕ್ಖರು ನಿರ್ಮಾಣ ಸೇವಕ ಜಥ್ಥಾ ಆಯೋಜಿಸಿದ ಪ್ರವಾಸದಲ್ಲಿ ಕರ್ತಾರಪುರ ಗುರುದ್ವಾರಾಕ್ಕೆ ತೆರಳಲು ಬಯಸಿದ್ದರು. ಈ ಪೈಕಿ ಹೆಚ್ಚಿನವರು ಪಿಎಂಸಿ ಬ್ಯಾಂಕಿನಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಉದ್ದೇಶಿತ ಯಾತ್ರಿಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ಅಗತ್ಯ ವೆಬ್‌ಸೈಟ್‌ಗೆ ಸಲ್ಲಿಸುವ ಪ್ರಕ್ರಿಯೆಯಲ್ಲಿ ನಾವು ತೊಡಗಿದ್ದಾಗಲೇ ಪಿಎಂಸಿ ಬ್ಯಾಂಕ್ ಬಿಕ್ಕಟ್ಟಿನಿಂದಾಗಿ ಹಲವಾರು ಯಾತ್ರಿಗಳು ದಿಢೀರ್ ಆಗಿ ಯಾತ್ರೆಯಿಂದ ಹಿಂದೆ ಸರಿದಿದ್ದಾರೆ. ಈ 2,000 ಜನರ ಪೈಕಿ ಅಂತಿಮವಾಗಿ ಕೇವಲ 50 ಜನರಿಗೆ ಮಾತ್ರ ಕರ್ತಾರಪುರಕ್ಕೆ ಹೋಗಲು ಸಾಧ್ಯವಾಗಿದೆ. ಇತರರು ಅಗತ್ಯ ಹಣವಿಲ್ಲದೆ ಯಾತ್ರೆಯ ಯೋಚನೆಯನ್ನು ಕೈಬಿಟ್ಟಿದ್ದಾರೆ ಎಂದು ಕುರ್ಲಾ ಗುರುದ್ವಾರಾ ಸಮಿತಿಯ ಸದಸ್ಯ ಹರದೇವ ಸಿಂಗ್ ಸೈನಿ ಅವರು ಇಲ್ಲಿ ತಿಳಿಸಿದರು.

ಐತಿಹಾಸಿಕ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ್ದಕ್ಕಾಗಿ ನಿರಾಶೆಯಾಗಿದೆ ಎಂದು ಪಿಎಂಸಿ ಬ್ಯಾಂಕಿನಲ್ಲಿ ಮೂರು ಖಾತೆಗಳನ್ನು ಹೊಂದಿರುವ ರವೀಂದ್ರ ಕೌರ್ ಸೈನಿ ಹೇಳಿದರು.

ಯಾತ್ರೆ ಕೈಗೊಳ್ಳುವ ಸುವರ್ಣಾವಕಾಶವನ್ನು ತಾನೂ ಕಳೆದುಕೊಂಡಿದ್ದೇನೆ. ಪಿಎಂಸಿ ಬ್ಯಾಂಕಿನ ಸುಮಾರು ಶೇ.80ರಷ್ಟು ಖಾತೆದಾರರು ಸಿಖ್ ಸಮುದಾಯದವರೇ ಆಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಹೆಚ್ಚಿನವರು ಪರಸ್ಪರ ನೆರವಾಗುತ್ತಾರೆ. ಆದರೆ ಈ ಸಲ ಎಲ್ಲರೂ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದಾರೆ ಎಂದು ಕುರ್ಲಾ ಗುರುದ್ವಾರಾ ಸಮಿತಿಯ ಇನ್ನೋರ್ವ ಸದಸ್ಯ ಪ್ರೀತಿಪಾಲ್ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News