ಟಿಬೆಟ್‌ನಲ್ಲಿ ಹಸ್ತಕ್ಷೇಪ ನಡೆಸಲು ಅಮೆರಿಕದಿಂದ ವಿಶ್ವಸಂಸ್ಥೆಯ ಬಳಕೆ

Update: 2019-11-11 17:24 GMT

ಬೀಜೀಂಗ್, ನ. 11: ಅಮೆರಿಕವು ಟಿಬೆಟ್‌ನಲ್ಲಿ ಹಸ್ತಕ್ಷೇಪ ನಡೆಸಲು ವಿಶ್ವಸಂಸ್ಥೆಯನ್ನು ಬಳಸುತ್ತಿದೆ ಎಂದು ಚೀನಾ ಸೋಮವಾರ ಆರೋಪಿಸಿದೆ. ಟಿಬೆಟ್‌ನ ಆಧ್ಯಾತ್ಮಿಕ ಗುರು ದಲಾಯಿ ಲಾಮಾರ ಉತ್ತರಾಧಿಕಾರಿಯನ್ನು ಆರಿಸುವುದರಿಂದ ಚೀನಾವನ್ನು ತಡೆಯುವ ತನ್ನ ಪ್ರಯತ್ನಗಳನ್ನು ಅಮೆರಿಕ ತೀವ್ರಗೊಳಿಸಿರುವಂತೆಯೇ ಚೀನಾ ಈ ಆರೋಪ ಮಾಡಿದೆ.

ಟಿಬೆಟ್ ಆಧ್ಯಾತ್ಮಿಕ ನಾಯಕನ ಉತ್ತರಾಧಿಕಾರ ವಿಷಯವನ್ನು ವಿಶ್ವಸಂಸ್ಥೆ ಕೈಗೆತ್ತಿಕೊಳ್ಳಬೇಕೆಂದು ಅಮೆರಿಕ ಬಯಸುತ್ತದೆ ಎಂದು ಕಳೆದ ವಾರ ಅಮೆರಿಕದ ಅಂತರ್‌ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರದ ರಾಯಭಾರಿ ಸ್ಯಾಮ್ ಬ್ರೌನ್‌ಬ್ಯಾಕ್ ಹೇಳಿದ್ದರು.

ದಲಾಯಿ ಲಾಮಾರ ಉತ್ತರಾಧಿಕಾರಿಯ ಆಯ್ಕೆಯು ಟಿಬೆಟ್‌ನ ಬೌದ್ಧರಿಗೆ ಸೇರಿದ ವಿಷಯವಾಗಿದೆ, ಚೀನಾ ಸರಕಾರಕ್ಕಲ್ಲ ಎಂದು ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಬ್ರೌನ್‌ಬ್ಯಾಕ್ ಹೇಳಿದ್ದರು.

ಇದಕ್ಕೆ ಕೋಪದಿಂದ ಪ್ರತಿಕ್ರಿಯಿಸಿರುವ ಚೀನಾ, ‘‘ಅಮೆರಿಕವು ಧಾರ್ಮಿಕ ಸ್ವಾತಂತ್ರದ ಹೆಸರಿನಲ್ಲಿ ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಲು ಪ್ರಯತ್ನಿಸುತ್ತಿದೆ’’ ಎಂದು ಹೇಳಿದೆ.

ಒಂದು ಕಾಲದಲ್ಲಿ ನಿರಂತರವಾಗಿ ಪ್ರಯಾಣಿಸುತ್ತಿದ್ದ 84 ವರ್ಷದ ದಲಾಯಿ ಲಾಮಾ, ಈಗ ತನ್ನ ಚಟುವಟಿಕೆಗಳನ್ನು ಕಡಿಮೆ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಎದೆಯ ಸೋಂಕಿಗೂ ಒಳಗಾಗಿದ್ದರು. ಆದರೆ, ಅವರು ಯಾವುದೇ ಗಂಭೀರ ಕಾಯಿಲೆಯನ್ನು ಹೊಂದಿಲ್ಲ ಎನ್ನಲಾಗಿದೆ.

ಟಿಬೆಟ್‌ನ ಹೆಚ್ಚಿನ ಸ್ವಾಯತ್ತೆಗಾಗಿ ದಲಾಯಿ ಲಾಮಾ ಹೋರಾಡುತ್ತಿದ್ದಾರೆ. ಅವರ ಹೋರಾಟವು ಅವರೊಂದಿಗೇ ಕೊನೆಗೊಳ್ಳಲು ತಾನು ಕಾಯುತ್ತಿದ್ದೇನೆ ಎನ್ನುವ ಇಂಗಿತವನ್ನು ಚೀನಾ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News