ಸೌರಭ್ ಚೌಧರಿಗೆ ಬೆಳ್ಳಿ

Update: 2019-11-11 19:03 GMT

  ದೋಹಾ, ನ.11: ಯುವ ಶೂಟರ್ ಸೌರಭ್ ಚೌಧರಿ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದು, ಈ ಮೂಲಕ ಇಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ಮುಂದುವರಿಸಿದೆ.

ವಿಶ್ವಕಪ್ ಹಾಗೂ ಏಶ್ಯನ್ ಗೇಮ್ಸ್ ಚಾಂಪಿಯನ್ 17ರ ಹರೆಯದ ಸೌರಭ್ 244.5 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು. ಉತ್ತರ ಕೊರಿಯಾದ ಕಿಮ್ ಸಾಂಗ್ ಗುಕ್ ವಿಶ್ವ ದಾಖಲೆ 246.5 ಅಂಕ ಗಳಿಸಿ ಚಿನ್ನ ಜಯಿಸಿದರು. ಇರಾನ್‌ನ ಜಾವೇದ್(221.8)ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

583 ಅಂಕ ಗಳಿಸಿದ್ದ ಚೌಧರಿ ಹಾಗೂ ಅಭಿಷೇಕ್ ವರ್ಮಾ ಕ್ರಮವಾಗಿ ಏಳನೇ ಹಾಗೂ ಆರನೇ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದರು.

ಅಭಿಷೇಕ್ ವರ್ಮಾ 8 ಸ್ಪರ್ಧಿಗಳಿದ್ದ ಫೈನಲ್‌ನಲ್ಲಿ 181.5 ಅಂಕ ಗಳಿಸಲಷ್ಟೇ ಶಕ್ತವಾಗಿ ಐದನೇ ಸ್ಥಾನ ಪಡೆದರು.

 ಚೌಧರಿ ಹಾಗೂ ವರ್ಮಾ ಈ ಹಿಂದಿನ ಟೂರ್ನಿಯಲ್ಲಿ ಒಲಿಂಪಿಕ್ಸ್ ಕೋಟಾವನ್ನು ಭರ್ತಿ ಮಾಡಿದ್ದರು. ಈ ಸ್ಪರ್ಧೆಯಲ್ಲಿ ಏರ್ ಪಿಸ್ತೂಲ್ ಕೋಟಾಗಳು ಇರಾನ್, ಉತ್ತರ ಕೊರಿಯಾ ಹಾಗೂ ಪಾಕಿಸ್ತಾನದ ಪಾಲಾಗಿದೆ. ಭಾರತ ಹಾಗೂ ಚೀನಾ ಈಗಾಗಲೇ ಒಲಿಂಪಿಕ್ಸ್‌ನಲ್ಲಿ ಗರಿಷ್ಠ ತಲಾ ಎರಡು ಸ್ಥಾನವನ್ನು ಬಾಚಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News