ದೀಪಕ್ ಚಹಾರ್‌ಗೆ ಭಡ್ತಿ

Update: 2019-11-11 19:08 GMT

ದುಬೈ, ನ.11: ಬಾಂಗ್ಲಾದೇಶ ವಿರುದ್ಧ ರವಿವಾರ ಟ್ವೆಂಟಿ-20 ಇತಿಹಾಸದಲ್ಲಿ ಶ್ರೇಷ್ಠ ಬೌಲಿಂಗ್(6-7)ಪ್ರದರ್ಶನ ನೀಡಿದ್ದ ವೇಗದ ಬೌಲರ್ ದೀಪಕ್ ಚಹಾರ್ ಸೋಮವಾರ ಬಿಡುಗಡೆಯಾದ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ 88 ಸ್ಥಾನ ಭಡ್ತಿ ಪಡೆದು ಬೌಲರ್‌ಗಳ ಪಟ್ಟಿಯಲ್ಲಿ 42ನೇ ಸ್ಥಾನ ತಲುಪಿದ್ದಾರೆ.

ನಾಗ್ಪುರದಲ್ಲಿ ನಡೆದ ಸರಣಿ ನಿರ್ಣಾಯಕ 3ನೇ ಟ್ವೆಂಟಿ-20 ಪಂದ್ಯದಲ್ಲಿ ರಾಜಸ್ಥಾನದ ವೇಗದ ಬೌಲರ್ ಚಹಾರ್ ಬಾಂಗ್ಲಾದೇಶದ ಬ್ಯಾಟಿಂಗ್ ಸರದಿಯನ್ನು ಭೇದಿಸಿ ಭಾರತಕ್ಕೆ 30 ರನ್‌ಗಳ ರೋಚಕ ಜಯ ತಂದಿದ್ದರು.

 ಬೌಲರ್‌ಗಳ ರ್ಯಾಂಕಿನ ಅಗ್ರ-5 ಸ್ಥಾನದಲ್ಲಿ ಸ್ಪಿನ್ ಬೌಲರ್‌ಗಳಿದ್ದಾರೆ. ಅಫ್ಘಾನಿಸ್ತಾನದ ರಶೀದ್ ಖಾನ್ ಮೊದಲ ಸ್ಥಾನದಲ್ಲಿದ್ದರೆ, ಕಿವೀಸ್‌ನ ಮಿಚೆಲ್ ಸ್ಯಾಂಟ್ನರ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಇದೇ ವೇಳೆ ರೋಹಿತ್ ಶರ್ಮಾ ಟ್ವೆಂಟಿ-20ಯಲ್ಲಿ ತನ್ನ ಪ್ರಾಬಲ್ಯ ಕಾಯ್ದುಕೊಂಡಿದ್ದು, ದಾಂಡಿಗರ ರ್ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಕೆಎಲ್ ರಾಹುಲ್ ರವಿವಾರ ಆರನೇ ಟ್ವೆಂಟಿ-20 ಅರ್ಧಶತಕದೊಂದಿಗೆ 8ನೇ ಸ್ಥಾನಕ್ಕೇರಿದರು. ನ್ಯೂಝಿಲ್ಯಾಂಡ್ ವಿರುದ್ಧ ಇಂಗ್ಲೆಂಡ್‌ನ ಪರ ವೇಗದ ಶತಕ ಸಿಡಿಸಿದ್ದ ಡೇವಿಡ್ ಮಲಾನ್ 3ನೇ ಸ್ಥಾನ ಬಾಚಿಕೊಂಡಿದ್ದಾರೆ. ಟೀಮ್ ರ್ಯಾಂಕಿಂಗ್‌ನಲ್ಲಿ 270 ಅಂಕ ಗಳಿಸಿರುವ ಪಾಕಿಸ್ತಾನ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಇಂಗ್ಲೆಂಡ್, ದ.ಆಫ್ರಿಕಾ ಹಾಗೂ ಭಾರತ ಬಳಿಕದ ಸ್ಥಾನದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News