ಅಪಹರಣ ಯತ್ನ ಪ್ರಕರಣ: ಆರೋಪಿಗಳಿಗೆ ಗುಂಡೇಟು

Update: 2019-11-12 12:26 GMT

ಬೆಂಗಳೂರು, ನ.12: ಯುವಕನನ್ನು ಅಪಹರಣ ಮಾಡಲು ಯತ್ನಿಸಿದ ಆರೋಪದಡಿ ಇಬ್ಬರ ಮೇಲೆ ಇಲ್ಲಿನ ಸೋಲದೇವನಹಳ್ಳಿ ಠಾಣಾ ಪೊಲೀಸರು ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸಿದ್ದಾರೆ.

ತಮಿಳುನಾಡು ಮೂಲದ ರಿಯಾಝ್(21) ಹಾಗೂ ಬಾಸಿತ್(23) ಎಂಬುವರು ಪಿಸ್ತೂಲಿನ ಗುಂಡೇಟಿನಿಂದ ಗಾಯಗೊಂಡಿದ್ದು, ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದಾಸರಹಳ್ಳಿಯ ನೀಲಂಮಹೇಶ್ವರಂ ರಸ್ತೆಯ ಶುದ್ಧ ನೀರಿನ ಪೂರೈಕೆ ಘಟಕದ ಮಾಲಕ ಶ್ರೀನಿವಾಸ್ ಅವರ ಪುತ್ರ ಶರತ್ ಪಿಯುಸಿ ಮುಗಿಸಿದ ನಂತರ ತಂದೆಯ ಜತೆಯಲ್ಲೇ ವ್ಯವಹಾರದಲ್ಲಿ ತೊಡಗಿದ್ದ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶರತ್ ದುಬಾರಿ ಬೈಕ್‌ಗಳು, ಕಾರಿನ ಜತೆಗಿರುವ ಫೋಟೊಗಳನ್ನು ಪ್ರಕಟಿಸುತ್ತಿದ್ದ. ಇದನ್ನು ಕಂಡು ಆರೋಪಿಗಳು, ಶರತ್ ಬಳಿ ಹಣ ಇರಬಹುದೆಂದು ಶಂಕಿಸಿ, ಶ್ರೀನಿವಾಸ್ ಅವರಿಗೆ ಮೊಬೈಲ್ ಕರೆ ಮೂಲಕ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.

ಹಣ ನೀಡಲು ಒಪ್ಪದಿದ್ದರಿಂದ ಆಕ್ರೋಶಗೊಂಡ ಆರೋಪಿಗಳು, ಸೋಮವಾರ ರಾತ್ರಿ ನೀಲಂ ಮಹೇಶ್ವರಂ ರಸ್ತೆಯ ಶ್ರೀನಿವಾಸ್ ಅವರ ಮನೆಯ ಬಳಿ ಬಂದು ಮುಂಭಾಗ ನಿಲ್ಲಿಸಿದ್ದ 4 ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಈ ಬಗ್ಗೆ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಾಗಲಗುಂಟೆ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು.

ಆರೋಪಿಗಳು ಸೋಲದೇವನಹಳ್ಳಿಯ ಆಚಾರ್ಯ ಕಾಲೇಜಿನ ಹಿಂಭಾಗದ ನೀಲಗಿರಿ ತೋಪಿನಲ್ಲಿರುವ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡ ಸೋಲದೇವನಹಳ್ಳಿ ಠಾಣಾ ಪೊಲೀಸರು, ಅಲ್ಲಿಗೆ ಧಾವಿಸಿದ್ದಾರೆ. ಪೊಲೀಸರನ್ನು ನೋಡಿದ ಕೂಡಲೇ ಪರಾರಿಯಾಗಲು ಯತ್ನಿಸಿದ ರಿಯಾಝ್ ಹಾಗೂ ಬಾಸಿತ್ ಬೆನ್ನಟ್ಟಿ ಬಂದ ಪೊಲೀಸ್ ಪೇದೆ ಹಲ್ಲೆ ನಡೆಸಿದಾಗ, ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News