ಬಿಎಸ್‌ವೈಗೆ ಎರಡು ನಾಲಗೆ ಇವೆ: ಮಾಜಿ ಸಂಸದ ವಿ.ಎಸ್.ಉಗ್ರಪ್ಪ

Update: 2019-11-12 13:57 GMT

ಬೆಂಗಳೂರು, ನ. 12: ಅನರ್ಹರಿಗೂ ನಮಗೂ ಸಂಬಂಧವಿಲ್ಲ ಎನ್ನುತ್ತಿದ್ದ ಬಿಎಸ್‌ವೈ ಕೋರ್ ಕಮಿಟಿ ಸಭೆಯಲ್ಲಿ ಸಂಬಂಧವಿದೆ ಎಂದು ಒಪ್ಪಿಕೊಂಡಿದ್ದಾರೆ. ಅನರ್ಹ ಶಾಸಕರ ಪರ ತೀರ್ಪು ಬರಲಿದೆ ಎಂದು ಮಾತನಾಡುತ್ತಿದ್ದಾರೆಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್‌ವೈ ಅವರಿಗೆ ಎರಡು ನಾಲಿಗೆ ಇವೆ. ಹೀಗಾಗಿಯೆ ಅನರ್ಹರಿಗೂ ನಮಗೂ ಸಂಬಂಧವಿಲ್ಲ ಎನ್ನುತ್ತಲೇ ಅವರ ಕ್ಷೇತ್ರಗಳಿಗೆ ಕೋಟ್ಯಂತರ ರೂ.ಅನುದಾನ ಹಂಚಿಕೆ ಮಾಡುತ್ತಿದ್ದಾರೆಂದು ಟೀಕಿಸಿದರು.

ಅನರ್ಹ ಶಾಸಕರ ಸಭೆ-ಸಮಾರಂಭಗಳಲ್ಲಿ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಕಾಣಿಸಿಕೊಳ್ಳುತ್ತಿದ್ದು, ಅವರನ್ನೇ ಆಯ್ಕೆ ಮಾಡಬೇಕೆಂದು ಕ್ಷೇತ್ರಗಳ ಜನರಿಗೆ ಕರೆ ನೀಡುತ್ತಿದ್ದಾರೆ. ಅಲ್ಲದೆ, ಅವರಿಗಾಗಿ ಪಕ್ಷದ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ. ಇದನ್ನು ಸುಪ್ರೀಂ ಕೋರ್ಟ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಉಗ್ರಪ್ಪ ಎಚ್ಚರಿಸಿದರು.

ಆಧುನಿಕ ಭಸ್ಮಾಸುರ: ಪ್ರಧಾನಿ ಮೋದಿ ಆಧುನಿಕ ಭಸ್ಮಾಸುರ. ಇದೀಗ ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವವನ್ನೇ ಭಸ್ಮ ಮಾಡಲು ಮುಂದಾಗಿದ್ದಾರೆ. ಎರಡನೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಪಕ್ಷಕ್ಕೆ ಸರಕಾರ ರಚನೆಗೆ ಅವಕಾಶವನ್ನೇ ನೀಡುತ್ತಿಲ್ಲ ಎಂದು ಟೀಕಿಸಿದರು.

ಬಿಜೆಪಿ ಮೈತ್ರಿಕೂಟದಿಂದ ಶಿವಸೇನೆ ಹೊರಬಂದಿದೆ. ಚುನಾವಣಾ ಪೂರ್ವ ಒಪ್ಪಂದ ಉಲ್ಲಂಘಿಸಿದ್ದಾರೆಂದು ಆ ಪಕ್ಷ ಹೊರಬಂದಿದೆ. ಬಹುಮತವಿಲ್ಲದಿದ್ದರೆ ಮೈತ್ರಿ ಮೂಲಕ ಸರಕಾರ ರಚನೆ ಮಾಡಬಹುದಾಗಿದೆ. ಆದರೆ, ಅದಕ್ಕೆ ಸಮಯವನ್ನೇ ನೀಡುತ್ತಿಲ್ಲ ಎಂದು ದೂರಿದರು.

ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲರು ಶಿಫಾರಸು ಮಾಡಿರುವುದನ್ನು ಗಮನಿಸಿದರೆ ಇದೆಲ್ಲವನ್ನು ಮೋದಿ ಮತ್ತು ಅಮಿತ್ ಶಾ ತಂತ್ರಗಾರಿಕೆಯಾಗಿದೆ. ರಾಜ್ಯಪಾಲರನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಳ್ಳುವುದು ಅಕ್ಷಮ್ಯ ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News