ಖ್ಯಾತ ಹೃದ್ರೋಗ ತಜ್ಞರ ಮನೆಯಲ್ಲಿ ಚಿನ್ನಾಭರಣ ಕಳವು ಪ್ರಕರಣ: ಮಹಿಳೆಯರಿಬ್ಬರ ಬಂಧನ

Update: 2019-11-12 16:28 GMT

ಬೆಂಗಳೂರು, ನ.12: ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಪ್ರಸಾದ್ ಶೆಟ್ಟಿ ಅವರ ಮನೆಯಲ್ಲಿ ಚಿನ್ನಾಭರಣ ಕಳವು ಪ್ರಕರಣ ಸಂಬಂಧ ಇಬ್ಬರು ಮಹಿಳೆಯರನ್ನು ಇಲ್ಲಿನ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ದಿವ್ಯಾ, ಗಿರಿಜಮ್ಮ ಯಾನೆ ಅನುಪಮಾ ಬಂಧಿತ ಆರೋಪಿಗಳಾಗಿದ್ದು, ಇವರು ಮನೆಗೆಲಸಗಾರರು ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಕೋರಮಂಗಲದಲ್ಲಿರುವ ಡಾ.ದೇವಿ ಪ್ರಸಾದ್ ಶೆಟ್ಟಿ ಅವರ ಪುತ್ರ ಅನೀಶ್ ಶೆಟ್ಟಿ ವಾಸವಿರುವ ನಿವಾಸದಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಗಳ ಮೇಲೆ ಶಂಕೆ ಹಿನ್ನೆಲೆ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸಿಕ್ಕಿದ್ದು ಹೇಗೆ?: ಆರೋಪಿಗಳಿಬ್ಬರು, ಒಂದೇ ದಿನದಂದು ಮನೆ ಕೆಲಸಕ್ಕೆ ಬರುವುದಿಲ್ಲ ಎಂದಿದ್ದರು. ಅಲ್ಲದೆ, ಅಂದು, ಅನೀಶ್ ಶೆಟ್ಟಿ ಅವರ ಕೊಠಡಿಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಏನೇನು ಕಳವು?: ಶಾಜನ್ ಜೋಸೆಫ್ ಎಂಬುವರು ಅ.26ರಂದು ಬೆಳಗ್ಗೆ 9 ಗಂಟೆಗೆ ಮಾಲಕರ (ಡಾ.ದೇವಿ ಪ್ರಸಾದ್ ಶೆಟ್ಟಿ) ಪುತ್ರ ಅನೀಶ್ ಶೆಟ್ಟಿ ಅವರ ಕೊಠಡಿಯಲ್ಲಿದ್ದ ಗೋಲ್ಡ್ ಪೆಂಡೆಂಟ್, ಕೊಲಂಬಿಯಾದ ಸ್ಮಾಲ್ ಎಮೆರಾಲ್ಡ್ ಸ್ಟೋನ್, ಆ್ಯಂಕ್ಲೆಟ್ ವೆಡ್ಡಿಂಗ್, ಬ್ರಾಸ್‌ಲೆಟ್ ವಿತ್ ರೂಬಿ ಆ್ಯಂಡ್ ಎಮೆರಾಲ್ಡ್, ಕ್ಲಾ ಪೆಂಡೆಂಟ್ ವಿತ್ ಚೈನ್, ಗಂಜಂ ಬ್ರಾಸ್‌ಲೆಟ್, ಮೂರು ಉಂಗುರ, ಬಂಗಾರದ ಕಿವಿಯೋಲೆ, ನೆಕ್ಲೆಸ್ ಮತ್ತು ಕಿವಿಯೋಲೆ ಸೆಟ್, ಬಂಗಾರದ ಕಿವಿಯೋಲೆಗಳು, ಪೆಂಡೆಂಟ್ ಹೊಂದಿದ್ದ ಚೈನ್ ಹಾಗೂ ವಜ್ರದ ಬ್ರಾಸ್‌ಲೆಟ್ ಸೇರಿದಂತೆ ಚಿನ್ನದ ಮತ್ತು ವಜ್ರದ ಆಭರಣಗಳು ಕಾಣೆಯಾಗಿದೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News