ಮಹಿಳಾ ಸಿಬ್ಬಂದಿಗಳು ಆರೋಗ್ಯದ ಕಡೆಗೆ ಗಮನ ವಹಿಸಲಿ: ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಕಳಸದ

Update: 2019-11-12 18:02 GMT

ಬೆಂಗಳೂರು, ನ.12: ಕೆಎಸ್ಸಾರ್ಟಿಸಿ ಸಿಬ್ಬಂದಿಗಳು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಸಂಸ್ಥೆಯು ಸದೃಢವಾಗಿರಲು ಸಾಧ್ಯವೆಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅಭಿಪ್ರಾಯಿಸಿದ್ದಾರೆ. 

ಮಂಗಳವಾರ ಕೆಎಸ್ಸಾರ್ಟಿಸಿ ನಿಗಮದಲ್ಲಿ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ಮಹಿಳಾ ಸಿಬ್ಬಂದಿಗಳಿಗೆ ಉಚಿತ ಕ್ಯಾನ್ಸರ್ ತಪಾಸಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಎಸ್ಸಾರ್ಟಿಸಿ ನಿಗಮದ ಎಲ್ಲ ವಿಭಾಗಗಳಲ್ಲೂ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕೆಎಸ್ಸಾರ್ಟಿಸಿಯಲ್ಲಿ ಒಟ್ಟು 3,200 ಮಹಿಳಾ ಸಿಬ್ಬಂದಿಗಳಿದ್ದು, ನಾಲ್ಕು ನಿಗಮಗಳಿಂದ ಒಟ್ಟು 8,500 ಮಹಿಳಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳು ಕಷ್ಟಕರವಾದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಇವರ ಅರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡುವ ನಿಟ್ಟಿನಲ್ಲಿ ಸಂಸ್ಥೆಯ ವತಿಯಿಂದ ನಿಯಮಿತವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ನಮ್ಮ ಸಂಸ್ಥೆಯ ಮಹಿಳಾ ಸಿಬ್ಬಂದಿಗಳ ಕಾರ್ಯ ಮೆಚ್ಚುವಂತಹದ್ದು. ಮನೆ ಹಾಗೂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಅವರಿಗೆ ಸಹಜವಾಗಿ ಒತ್ತಡ ಇರುತ್ತದೆ. ಹೀಗಾಗಿ ಆಗಿಂದಾಗಲೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಅಗತ್ಯವಿದೆ ಎಂದು ಅವರು ಹೇಳಿದರು.

ಈ ವೇಳೆ ನಿಗಮದ ಸಿಬ್ಬಂದಿ ಪರಿಸರ ವಿಭಾಗದ ನಿರ್ದೇಶಕಿ ಕವಿತಾ ಎಸ್.ಮನ್ನಿಕೇರಿ, ಡಾ.ಮಹಾಂತೇಶ್, ಡಾ.ಸತ್ಯನಾರಾಯಣ ಹಾಗೂ ಕೇಂದ್ರೀಯ ವಿಭಾಗದ ಇನ್ನಿತರ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News