ಬೆಂಗಳೂರು: ಭದ್ರತೆ ಮತ್ತು ಸುರಕ್ಷತೆ ಕುರಿತು ನ.14ರಿಂದ ಜಾಗತಿಕ ಸಮ್ಮೇಳನ

Update: 2019-11-12 18:04 GMT

ಬೆಂಗಳೂರು, ನ.12: ಅಂತರ್‌ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆ ನಿರ್ವಹಣಾ ಸಂಸ್ಥೆ(ಐಐಎಸ್‌ಎಸ್‌ಎಂ) ವತಿಯಿಂದ ನ.14 ರಿಂದ ಎರಡು ದಿನಗಳ ಕಾಲ ಭದ್ರತೆ ಮತ್ತು ಸುರಕ್ಷತೆ ಕುರಿತು 29ನೆ ಜಾಗತಿಕ ಸಮ್ಮೇಳನ ಹಮ್ಮಿಕೊಂಡಿದೆ.

ಮಂಗಳವಾರ ಈ ಕುರಿತು ಕಬ್ಬನ್ ಪಾರ್ಕಿನ ಸೆಂಚುರಿ ಕ್ಲಬ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯಸಭಾ ಸದಸ್ಯರೂ ಆಗಿರುವ ಐಐಎಸ್‌ಎಸ್‌ಎಂ ಕಾರ್ಯನಿರ್ವಾಹಕ ಅಧ್ಯಕ್ಷ ಆರ್.ಕೆ.ಸಿನ್ಹಾ, ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಈ ಸಮ್ಮೇಳನ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು ಎಂದು ಹೇಳಿದರು.

ಎರಡು ದಿನಗಳ ಕಾಲ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಲಾಗಿದ್ದು, ದೇಶ-ವಿದೇಶದಿಂದ ತಜ್ಞರು, ಚಿಂತಕರು ಸೇರಿದಂತೆ ಒಟ್ಟು 400 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ರಾಜ್ಯದಿಂದಲೇ ಈ ಬಾರಿ 80 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಅಂತರ್‌ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆ ಸಂಸ್ಥೆ 1990ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಅಂದಿನಿಂದಲೂ ಪ್ರತಿವರ್ಷ ವಾರ್ಷಿಕ ಸಮ್ಮೇಳನ ನಡೆಯುತ್ತಿದ್ದು, ಈ ಹಿಂದೆ 1993 ರಲ್ಲಿ ಬೆಂಗಳೂರಿನಲ್ಲಿ ಈ ಸಮಾವೇಶ ನಡೆದಿತ್ತು ಎಂದ ಅವರು, ಈ ಬಾರಿಯ ಸಮ್ಮೇಳನದಲ್ಲಿ ಸೈಬರ್ ಭದ್ರತೆಯ ವಿಚಾರದ ಬಗ್ಗೆ ಹೆಚ್ಚು ಚರ್ಚೆ ನಡೆಯಲಿದ್ದು, ದೇಶದ ಸೈಬರ್ ಭದ್ರತೆಯ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ರಾಜೇಶ್ ಪಂಥ್, ಸೈಬರ್ ಭದ್ರತೆಯ ಬಗ್ಗೆ ಮಾತನಾಡಲಿದ್ದಾರೆ ಎಂದರು.

ದೇಶದ ಕೈಗಾರಿಕಾ ಭದ್ರತೆ ಸೇರಿದಂತೆ, ವಿವಿಧ ವಿಚಾರಗಳ ಬಗ್ಗೆ ಸಂವಾದ ನಡೆಯಲಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಪಾಲ್ಗೊಳ್ಳುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಐಐಎಸ್‌ಎಸ್‌ಎಂ ಅಧ್ಯಕ್ಷ ಎಸ್.ಕೆ.ಶರ್ಮ, ಮಹಾ ನಿರ್ದೇಶಕ ರಾಜನ್ ಮೆಡ್ಕರ್, ಕೆಎಸ್‌ಎಸ್‌ಎ ಅಧ್ಯಕ್ಷ ಎಂ.ಸಿ.ಪ್ರಕಾಶ್, ಐಐಎಸ್ ಎಸ್‌ಎಂ ಬೆಂಗಳೂರು ಅಧ್ಯಕ್ಷ ಬಿ.ಎಂ.ಶಶಿಧರ್, ಎಸ್‌ಐಎಸ್‌ಸಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕಿಶೋರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News