ನೈತಿಕತೆ ಇದ್ದರೆ ಅನರ್ಹರಿಗೆ ಬಿಜೆಪಿ ಟಿಕೆಟ್ ನೀಡಬಾರದು: ದಿನೇಶ್ ಗುಂಡೂರಾವ್

Update: 2019-11-13 12:48 GMT

ಬೆಂಗಳೂರು, ನ. 13: ‘ಅನರ್ಹತೆ ಎನ್ನುವುದೇ ಒಂದು ಕಳಂಕ. ಸ್ಪೀಕರ್ ರಮೇಶ್ ಕುಮಾರ್ ಅವರು 17 ಶಾಸಕರು ತಪ್ಪಿತಸ್ಥರು ಎಂದು ಹೇಳಿ ಅನರ್ಹತೆಗೊಳಿಸಿದ್ದರು. ಈಗ ಸುಪ್ರೀಂ ಕೋರ್ಟ್ ಅವರನ್ನು ತಪ್ಪಿತಸ್ಥರು ಎಂದು ಹೇಳಿ ಅನರ್ಹತೆಯನ್ನು ಎತ್ತಿ ಹಿಡಿದಿದೆ. ಬಿಜೆಪಿಗೆ ನೈತಿಕತೆ ಇದ್ದರೆ ಈ ಅನರ್ಹರಿಗೆ ಟಿಕೆಟ್ ನೀಡಬಾರದು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೋರಿದ್ದಾರೆ.

‘ಸ್ಪೀಕರ್ ಅವರು ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ‘ಅನರ್ಹ ಶಾಸಕರು ಪ್ರಸಕ್ತ ವಿಧಾನಸಭೆಯ ಅವಧಿ ಮುಗಿಯುವವರೆಗೂ ಚುನಾವಣೆಗೆ ಸ್ಪರ್ಧಿಸುವಂತಿಲ್ಲ’ ಎಂದು ತೀರ್ಪು ನೀಡಿದ್ದರು. ಅನರ್ಹರು ಪಕ್ಷಕ್ಕೆ, ಕಾರ್ಯಕರ್ತರಿಗೆ, ಜನಾಭಿಪ್ರಾಯಕ್ಕೆ ದ್ರೋಹ ಎಸಗಿದ್ದಾರೆ, ಅವರೆಲ್ಲಾ ‘ಅನರ್ಹರು’ ಎಂದು ಈಗ ಸುಪ್ರೀಂ ಕೋರ್ಟ್ ಕೂಡ ಹೇಳಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಅನರ್ಹ ಶಾಸಕರು ಪದೇ ಪದೇ ಹೇಳುತ್ತಿದ್ದರು. ಸ್ಪೀಕರ್ ಆದೇಶ ಸರಿಯಿಲ್ಲ, ನಾವು ಅನರ್ಹರಲ್ಲ, ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದೇವೆ, ನಮ್ಮ ಮೇಲೆ ಯಾವುದೇ ಒತ್ತಡ ಇರಲಿಲ್ಲ, ಯಾರೂ ಆಮಿಷ ಒಡ್ಡಿರಲಿಲ್ಲ ಎಂದು. ಆದರೆ, ಇಷ್ಟು ದಿನ ಅವರು ಸುಳ್ಳು ಹೇಳಿದರು ಎನ್ನುವುದು ಸುಪ್ರೀಂ ಕೋರ್ಟ್ ಆದೇಶದಿಂದ ಸಾಬೀತಾಗಿದೆ’ ಎಂದು ಟ್ವಿಟ್ಟರ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

‘17 ಮಂದಿ ಶಾಸಕರು ದುರುದ್ದೇಶದಿಂದ ಸರಕಾರ ಬೀಳಿಸಲು ಷಡ್ಯಂತ್ರ ರೂಪಿಸಿದ್ದರು. ಅವರ ನಡವಳಿಕೆ ಸರಿಯಿರಲಿಲ್ಲ. ಸಂವಿಧಾನ ಬಾಹಿರವಾಗಿತ್ತು. ಸಂವಿಧಾನದ 10ನೆ ಶೆಡ್ಯೂಲ್ ಪ್ರಕಾರ ಅವರು ನಡೆದುಕೊಂಡಿಲ್ಲ. ಈ ಕಾರಣಕ್ಕೆ 17 ಮಂದಿ ಶಾಸಕರನ್ನು ಅನರ್ಹಗೊಳಿಸಿರುವುದು ಸರಿ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ಶಾಸಕರ ಅನರ್ಹತೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಅತೃಪ್ತರು ಈಗ ಅನರ್ಹರಾಗಿದ್ದಾರೆ. ಅನರ್ಹತೆಗೆ ಸಂಬಂಧಿಸಿದಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿದ್ದ ತೀರ್ಪನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಅಂದರೆ 17 ಮಂದಿ ಶಾಸಕರು ಅನರ್ಹರಾಗಿದ್ದಾರೆ’ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

‘ರಾಜ್ಯದಲ್ಲಿ ಬಿಎಸ್‌ವೈ ಅವರ ಅನೈತಿಕ ಸರಕಾರವನ್ನು ಸ್ಥಾಪಿಸಲು ಸಂಚು ರೂಪಿಸಿದ್ದ 17 ಶಾಸಕರು ಅನರ್ಹರೆಂದು ಆಗಿನ ಸ್ಪೀಕರ್ ಹೇಳಿದ್ದರು. ಇಂದು ಸುಪ್ರೀಂ ಕೋರ್ಟ್ ಹೇಳಿದೆ. ಜನತಾ ನ್ಯಾಯಾಲಯ ಇವರು ಅನರ್ಹರೆಂದು ತೀರ್ಮಾನಿಸಿ ಅವರಿಗೆ ಮರು ಆಯ್ಕೆಯ ಅವಕಾಶವನ್ನು ಕೊಡದೆ ಶಿಕ್ಷಿಸಬೇಕಿದೆ’ ಎಂದು ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News