ಸರೋಜಿನಿ ಮಹಿಷಿ ವರದಿ ಜಾರಿಗೆ ಪ್ರಾಮಾಣಿಕ ಪ್ರಯತ್ನ: ಸಿಎಂ ಯಡಿಯೂರಪ್ಪ

Update: 2019-11-13 16:53 GMT

ಬೆಂಗಳೂರು, ನ.13: ನನ್ನ ಆಡಳಿತಾವಧಿಯಲ್ಲಿ ಸರೋಜಿನಿ ಮಹಿಷಿ ವರದಿಯ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ 2018ನೇ ಸಾಲಿನ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಸರೋಜಿನಿ ಮಹಿಷಿ ವರದಿ ಜಾರಿ ಕುರಿತಂತೆ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿದ್ದಾರೆ. ಅವರ ಆಶಯದಂತೆ ಕನ್ನಡಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.

ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಉಳಿವು ಕೇವಲ ಸರಕಾರದ ಕೆಲಸವಾಗಬಾರದು. ಇದು ಪ್ರತಿಯೊಬ್ಬ ಕನ್ನಡಿಗನ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ನಾಡಿನ ಜನತೆ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ನಾಡನ್ನು ಕಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಂಕಣಬದ್ಧರಾಗಬೇಕೆಂದು ಅವರು ಹೇಳಿದರು.

ಜ್ಞಾನ ವೃದ್ಧಿಗೆ, ಸಂವಹನಕ್ಕಾಗಿ ಇಂಗ್ಲಿಷ್ ಅಗತ್ಯವಾಗಿದೆ. ಆದರೆ, ಮನೆಯ ಭಾಷೆಯಾಗಿ, ಆಡಳಿತದ ಭಾಷೆಯಾಗಿ, ಬದುಕಿನ ಭಾಷೆಯಾಗಿ ಕನ್ನಡವನ್ನು ಬಳಸಿ. ಬೆಳೆಸುವ ನಿಟ್ಟಿನಲ್ಲಿ ಸರಕಾರ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಹಾಗೂ ನಾಡಿನ ಕಲೆ, ಸಂಸ್ಕೃತಿಯ ಬೆಳೆವಣಿಗೆಗೆ ಅಪಾರ ಕಾಣ್ಕೆ ನೀಡಿದ ಸಾಧಕರು ನಾಡಿನ ಆಸ್ತಿಯಾಗಿದ್ದಾರೆ. ಅವರ ಆಶಯದಂತೆ ರಾಜ್ಯವನ್ನು ಮುನ್ನಡೆಸಲಾಗುವುದು ಎಂದು ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಮಾತನಾಡಿ, ಪ್ರತಿ ಗ್ರಾಮದ ಇತಿಹಾಸವನ್ನು ದಾಖಲಿಸುವ ನಿಟ್ಟಿನಲ್ಲಿ ನಿಮ್ಮ ಊರು ನಿಮ್ಮಗೆಷ್ಟು ಗೊತ್ತು ಎಂಬ ಶೀರ್ಷಿಕೆಯಡಿ ಶಿಕ್ಷಣ ಇಲಾಖೆಯ ಜೊತೆಗೂಡಿ ವಿದ್ಯಾರ್ಥಿಗಳಿಂದಲೇ ಪ್ರತಿ ಊರಿನ ವೈಶಿಷ್ಟತೆಯನ್ನು ದಾಖಲಿಸುವಂತಹ ಕಾರ್ಯಕ್ಕೆ ಸಂಸ್ಕೃತಿ ಇಲಾಖೆ ಮುಂದಾಗಿದೆ ಎಂದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಸ್ಥಳೀಯರಿಗೆ ಶೇ.80ರಷ್ಟು ಉದ್ಯೋಗವನ್ನು ಮೀಸಲಿಡುವಂತಹ ಕ್ರಾಂತಿಕಾರಕ ನಿರ್ಣಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಸಾಧಕರಿಗೆ ಬಸವ ಪುರಸ್ಕಾರ, ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ, ಡಾ.ಗುಬ್ಬಿವೀರಣ್ಣ ಪ್ರಶಸ್ತಿ, ಜಾನಪದ ಶ್ರೀ, ಪಂಪ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಆರ್.ಆರ್.ಜನ್ನು, ನಿರ್ದೇಶಕ ರಂಗಪ್ಪ ಉಪಸ್ಥಿತರಿದ್ದರು.

ಕೆಟ್ಟಪದ ಬಳಸಬೇಡಿ

ಸಿ.ಟಿ.ರವಿಗೆ ಸ್ನೇಹಿತನಾಗಿ ಒಂದು ಮಾತು ಹೇಳುತ್ತೇನೆ. ಕೆಟ್ಟ ಪದ ಬಳಸಬೇಡಿ. ನೀವು ಸಂಸ್ಕೃತಿ ಇಲಾಖೆಯವರು. ನಿಮ್ಮ ಬಾಯಲ್ಲಿ ‘ಮನೆಹಾಳರು’ ಎಂಬ ಮಾತು ಬರಬಾರದು. ನಿಮ್ಮಲ್ಲಿ ಉತ್ತಮ ಶಬ್ದ ಸಂಪತ್ತು ಇದೆ. ಒಳ್ಳೆಯದನ್ನು ಮಾತನಾಡಿ.

-ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರ ಹೋರಾಟಗಾರ

ಮನೆಹಾಳರು ಹೇಳಿಕೆಗೆ ಬದ್ಧ

ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮನೆಹಾಳರು ಎಂಬ ಪದ ಬಳಸಿದ್ದೆ. ಈ ಪದವನ್ನು ಸಂಘಟನೆ ಹಾಗೂ ವ್ಯಕ್ತಿಯನ್ನು ಉದ್ದೇಶಿಸಿ ಹೇಳಿಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುವ ಕೆಲಸ ಮಾಡುವವರನ್ನು ಮನೆಹಾಳರು ಎಂದು ಹೇಳಿದ್ದೆ. ಸತ್ಯ ಹೇಳುವುದಕ್ಕೆ ವಿವಾದವಾಗುವುದಾದರೆ ಅದನ್ನೇ ಮತ್ತೆ ಮತ್ತೆ ಹೇಳುತ್ತೇನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದೆ ಸ್ಪಷ್ಟನೆ ನೀಡಲೇಬೇಕಿದೆ. ಹೀಗಾಗಿ ಮನೆಹಾಳರು ಹೇಳಿಕೆಗೆ ಬದ್ಧನಾಗಿದ್ದೇನೆ.

-ಸಿ.ಟಿ.ರವಿ ಸಚಿವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News