ಗರ್ವದಿಂದ ಹೇಳು ನಾನು ವೀರಶೈವ-ಲಿಂಗಾಯತ ಎಂದು: ಮಹದೇವ ಪ್ರಕಾಶ್

Update: 2019-11-13 17:28 GMT

ಬೆಂಗಳೂರು, ನ. 13: ಗರ್ವದಿಂದ ಮತ್ತು ಹೆಮ್ಮೆಯಿಂದ ನಾನು ವೀರಶೈವ ಲಿಂಗಾಯತನೆಂದು ಹೇಳಿಕೊಳ್ಳಿ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ಇಂದಿಲ್ಲಿ ಕರೆ ನೀಡಿದ್ದಾರೆ.

ಬುಧವಾರ ಇಲ್ಲಿನ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಏರ್ಪಡಿಸಿದ್ದ ವೀರಭದ್ರೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೀರಶೈವ ಮತ್ತು ಲಿಂಗಾಯತ ಒಂದು ನಾಣ್ಯದ ಎರಡು ಮುಖಗಳು ಎಂದರು.

ವೀರಶೈವ ಲಿಂಗಾಯತ ಧರ್ಮ ಮನುಕುಲಕ್ಕೆ ದಾರಿಯನ್ನ ತೋರಿಸುವ ಧರ್ಮವಾಗಿದೆ. ರೇಣುಕಾಚಾರ್ಯರು ಮಾನವಧರ್ಮಕ್ಕೆ ಜಯವಾಗಲಿ ಎಂದು ಹೇಳಿದರೆ, ಬಸವಣ್ಣನವರು ಅರಿವು ಮತ್ತು ಆಚಾರದ ಬಗ್ಗೆ 12ನೆ ಶತಮಾನದಲ್ಲೆ ತಿಳಿಸಿದ್ದಾರೆ. ಈ ಧರ್ಮಕ್ಕೆ ವಿಶಾಲವಾದ ಮನಭೂಮಿಕೆ ಇದೆ ಎಂದು ಮಹದೇವ ಪ್ರಕಾಶ್ ಹೇಳಿದರು.

ವೀರಶೈವ-ಲಿಂಗಾಯತ ಧರ್ಮದ ಸಂಘಟನೆಗೆ ರಾಜಕಾರಣಿಗಳನ್ನ, ಜನನಾಯಕರನ್ನ ನಂಬಿಕೊಳ್ಳದೆ ಸದಸ್ಯರು ತಳಮಟ್ಟದಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತವಾಗಿ ಸಿಗಲಿದೆ ಎಂದು ಮಹದೇವ ಪ್ರಕಾಶ್ ವೇದಿಕೆಯಲ್ಲಿದ್ದ ಮುಖಂಡರಿಗೆ ಸಲಹೆ ನೀಡಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮಿ ಮಾತನಾಡಿ, ನಮ್ಮ ಮೂಲವನ್ನ ಮರೆತರೆ ನಮ್ಮ ತಲೆಯ ಮೇಲೆ ಕಲ್ಲು ಹಾಕಿಕೊಂಡಂತೆ. ವಿಶ್ವದೆಲ್ಲಡೆ ಹರಿದು ಹಂಚಿ ಹೋಗಿರುವ ವೀರಶೈವ-ಲಿಂಗಾಯತ ಧರ್ಮದ ಜನರನ್ನ ವೀರಭದ್ರೇಶ್ವರ ಜಯಂತಿ ಆಚರಣೆಯ ಮೂಲಕ ಒಗ್ಗೂಡಿಸಬೇಕು ಎಂದರು.

ಜೀವನ ನಿರ್ವಹಣೆಗೆ ಜಗತ್ತಿನ ಯಾವುದೇ ಮೂಲೆಗೆ ಹೋದರು ನಮ್ಮ ಮೂಲ ಬೇರನ್ನು ಮರೆಯಬಾರದು ಎಂದ ಅವರು, ವೀರಭದ್ರೇಶ್ವರ ಜಯಂತಿ ಆಚರಣೆಗೆ ಸರಕಾರದ ಮನ್ನಣೆ ನೀಡಬೇಕು. ಮುಂದಿನ ವರ್ಷದಿಂದ ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಯನ್ನ ಗುರುತಿಸಿ ವೀರಭದ್ರೇಶ್ವರ ಜಯಂತಿಯಂದು 1ಲಕ್ಷ ರೂ. ಒಳಗೊಂಡ ಪ್ರಶಸ್ತಿ ನೀಡಲು ಆರಂಭಿಸಲು ಮಠದಿಂದ 51 ಸಾವಿರ ರೂ.ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ರಾಯದುರ್ಗ ಕ್ಷೇತ್ರದ ಶಾಸಕ ರಾಮಚಂದ್ರ ರೆಡ್ಡಿ, ಮಾಜಿ ಶಾಸಕ ಡಾ.ವಿಶ್ವನಾಥ್ ಪಾಟೀಲ್, ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ ಬಣಕಾರ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯಾಧ್ಯಕ್ಷ ಪ್ರದೀಪ ಕಂಕಣವಾಡಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News