ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ: 11ನೇ ದಿನಕ್ಕೆ ಕಾಲಿಟ್ಟ ಕನ್ನಡಪರ ಹೋರಾಟಗಾರರ ಧರಣಿ

Update: 2019-11-13 18:16 GMT

ಬೆಂಗಳೂರು, ನ.13: ಡಾ.ಸರೋಜಿನಿ ಮಹಿಷಿ ವರದಿ ಅನ್ವಯ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಬೇಡಿಕೆಗೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

ಬುಧವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಕರ್ನಾಟಕ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಧರಣೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಉಳಿಯಬೇಕು. ಇದರ ಜೊತೆಗೆ ಕನ್ನಡಿಗರು ಪ್ರಗತಿ ಸಾಧಿಸಬೇಕು. ಮೀಸಲಾತಿ ಬೇಡಿಕೆ ಸಂಬಂಧ ಈಗಾಗಲೇ ಸಿ ಮತ್ತು ಡಿ ದರ್ಜೆ ನೌಕರಿಯಲ್ಲಿ ಮೀಸಲಾತಿಯನ್ನು ಸರಕಾರ ಜಾರಿಗೊಳಿಸಿದೆ. ಶೀಘ್ರದಲ್ಲಿಯೇ ಹಂತ ಹಂತವಾಗಿ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಮುಂದಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಮುಂದುವರಿದ ಹೋರಾಟ: ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ, ಅಧಿಕೃತ ಆದೇಶ ಹೊರಡಿಸುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಒಕ್ಕೂಟದ ಅಧ್ಯಕ್ಷ ಚಳವಳಿ ನಾಗೇಶ್ ಎಚ್ಚರಿಕೆ ನೀಡಿದರು.

ಸರೋಜಿನಿ ಮಹಿಷಿ ವರದಿ ಹೊರಬಂದು 33 ವರ್ಷಗಳೇ ಕಳೆದರೂ ಅನುಷ್ಠಾನವಾಗದಿರುವುದು ಖಂಡನೀಯ. ಸರಕಾರ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು.ಉದ್ಯೋಗದ ಹಕ್ಕು ಪಡೆದುಕೊಳ್ಳಲು ಕನ್ನಡಿಗರು ಹೋರಾಟ ನಡೆಸುತ್ತಿದ್ದರೂ ಸರಕಾರ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಸ್ವಾಭಿಮಾನ ಶೂನ್ಯ ಜನಪ್ರತಿನಿಧಿಗಳು ಹಾಗೂ ಸರಕಾರದ ಅವೈಜ್ಞಾನಿಕ ನೀತಿಯಿಂದ ಕನ್ನಡಿಗರು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಾಡಿನಲ್ಲಿ ಸ್ಥಾಪನೆಯಾಗುವ ಕಂಪೆನಿಗಳಲ್ಲಿ ಶೇ. 80ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ಮೀಸಲಿಡಬೇಕು ಎಂದು ಸರೋಜಿನಿ ಮಹಿಷಿ ನೇತೃತ್ವದ ಸಮಿತಿಯು 1983ರಲ್ಲೇ ವರದಿ ನೀಡಿದೆ. ಆದರೆ, ಯಾವುದೇ ರಾಜಕೀಯ ಪಕ್ಷಗಳು ಈ ವರದಿಯನ್ನು ಅನುಷ್ಠಾನಕ್ಕೆ ತರದೆ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ನಾಗೇಶ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News