‘ಅನರ್ಹತೆ’ಯನ್ನೇ ಬಿರುದಾಗಿಸಿಕೊಂಡವರು!

Update: 2019-11-14 04:32 GMT

ಆಪರೇಷನ್ ಕಮಲಕ್ಕೆ ಬಲಿಯಾಗಿ ಅನರ್ಹಗೊಂಡ ಕಾಂಗ್ರೆಸ್-ಜೆಡಿಎಸ್‌ನ 17 ಶಾಸಕರ ‘ಅನರ್ಹತೆ’ಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಸ್ಪೀಕರ್ ಆಗಿ ರಮೇಶ್ ಕುಮಾರ್ ತೆಗೆದುಕೊಂಡ ನಿರ್ಧಾರಕ್ಕೆ ಮಾನ್ಯತೆ ದೊರಕಿದಂತಾಗಿದೆ. ಈವರೆಗೆ ‘ಹುತಾತ್ಮ’ರಂತೆ ಹೇಳಿಕೆ ನೀಡುತ್ತಿದ್ದ 17 ಶಾಸಕರಿಗೆ ಮಾತ್ರವಲ್ಲ, ಈ ಶಾಸಕರ ಮೂಲಕ ಅಧಿಕಾರ ಹಿಡಿದ ಯಡಿಯೂರಪ್ಪ ಸರಕಾರಕ್ಕೂ ಈ ತೀರ್ಪು ಒಂದು ದೊಡ್ಡ ಮುಖಭಂಗವಾಗಿದೆ. 17 ಶಾಸಕರು ಅನರ್ಹರು ಎಂದಾದರೆ ಅವರ ಮೂಲಕ ಬಿಜೆಪಿ ರಚಿಸಿದ ಸರಕಾರ ‘ಅರ್ಹ’ವಾಗುವುದು ಹೇಗೆ? ಎನ್ನುವ ಪ್ರಶ್ನೆ ತೀರ್ಪಿನಿಂದಾಗಿ ಉದ್ಭವಿಸುತ್ತದೆ. ಒಂದು ರೀತಿಯಲ್ಲಿ ಈ ತೀರ್ಪನ್ನು ಗೌರವಿಸಿ, ಯಡಿಯೂರಪ್ಪ ರಾಜೀನಾಮೆಯನ್ನು ನೀಡಬೇಕಾಗುತ್ತದೆ. ಆದರೆ ರಾಜಕೀಯದಲ್ಲಿ ಅಷ್ಟರಮಟ್ಟಿನ ನೈತಿಕತೆಯನ್ನು ಇಂದಿನ ದಿನಗಳಲ್ಲಿ ನಿರೀಕ್ಷಿಸುವುದು ಕಷ್ಟ. ಆದರೆ ಅನರ್ಹತೆಯ ಕಳಂಕ ಈ ಶಾಸಕರನ್ನು ಜೀವನದುದ್ದಕ್ಕೂ ಕಾಡಲಿದೆ. ಎಚ್. ವಿಶ್ವನಾಥ್‌ರಂತಹ ಮುತ್ಸದ್ದಿ ರಾಜಕಾರಣಿಗಂತೂ ಈ ತೀರ್ಪು ಚಾಟಿ ಏಟಿನಂತಿದೆ.

ಇದೇ ಸಂದರ್ಭದಲ್ಲಿ, ಸುಪ್ರೀಂಕೋರ್ಟ್ ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದೂ ಹೇಳಿದೆ. ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸಮಯ ವಿಧಿಸಿರುವುದು ಸರಿಯಲ್ಲ ಎಂದು ಸ್ಪೀಕರ್ ನಡೆಯನ್ನು ಟೀಕಿಸಿದೆ. ಒಂದೆಡೆ ಶಾಸಕರನ್ನು ಅನರ್ಹರು ಎಂದು ಕರೆಯುತ್ತಾ, ಮಗದೊಂದೆಡೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ತೀರ್ಪು ವಿರೋಧಾಭಾಸಗಳಿಂದ ಕೂಡಿದೆ. ಹಾಗಾದರೆ ‘ಅನರ್ಹತೆ’ಯ ಮೂಲಕ ಈ ಶಾಸಕರು ಕಳೆದುಕೊಂಡಿರುವುದು ಏನನ್ನು? ಮತ್ತೆ ಚುನಾವಣೆಯಲ್ಲಿ ನಿಂತು ಗೆಲ್ಲಬಹುದು ಎನ್ನುವ ಭರವಸೆಯಿಂದಲೇ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ‘ಅನರ್ಹ’ ಎಂದು ಕರೆಯುತ್ತಲೇ ಮತ್ತೆ ಚುನಾವಣೆಗೆ ನಿಲ್ಲುವುದಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಚುನಾವಣೆಯಲ್ಲಿ ಗೆದ್ದರೆ ಸಚಿವರಾಗುವ ಅವಕಾಶ ಅಭ್ಯರ್ಥಿಗಳಿಗಿದೆ ಎಂದು ನ್ಯಾಯಾಲಯ ಹೇಳುತ್ತದೆ. ಒಂದೆಡೆ ಒಬ್ಬನನ್ನು ಕಳ್ಳ ಎಂದು ಹೇಳುತ್ತಾ, ಆದರೆ ಜೈಲು ಶಿಕ್ಷೆ ನೀಡುವಂತಿಲ್ಲ ಎಂದು ಹೇಳಿದಂತಾಗಿದೆ. ಬಾಬರಿ ಮಸೀದಿ ತೀರ್ಪನ್ನೇ ಇದು ಹೋಲುತ್ತದೆ. ಒಂದೆಡೆ ಬಾಬರಿ ಮಸೀದಿ ಧ್ವಂಸವನ್ನು ಅಪರಾಧ ಎಂದು ಹೇಳುತ್ತಲೇ, ಅಪರಾಧಿಗಳ ಕೈಗೇ ಮಸೀದಿಯ ಸ್ಥಳದ ಹಕ್ಕನ್ನು ನ್ಯಾಯಾಲಯ ನೀಡಿತು. ಇಷ್ಟಾದರೂ ಈ ತೀರ್ಪಿನಿಂದ ಚುನಾವಣೆಗೆ ಸಂಬಂಧಿಸಿದ ಬಿಜೆಪಿಯ ಸಮಸ್ಯೆಗಳು ಇತ್ಯರ್ಥವಾಗಿಲ್ಲ. ಬದಲಾಗಿ ಬಿಗಡಾಯಿಸಿದೆ. ಒಂದು ವೇಳೆ, ಅನರ್ಹರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದ್ದಿದ್ದರೆ, ಯಡಿಯೂರಪ್ಪ ಸುಪ್ರೀಂಕೋರ್ಟ್ ಕಡೆಗೆ ಕೈ ತೋರಿಸಿ ಅನರ್ಹರ ಬಳಿ ತನ್ನ ಅಸಹಾಯಕತೆಯನ್ನು ತೋಡಿಕೊಳ್ಳುವ ಅವಕಾಶವಿತ್ತು. ಇದೀಗ ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎನ್ನುವ ತೀರ್ಪು ಬಿಜೆಪಿ ಅದರಲ್ಲೂ ಮುಖ್ಯವಾಗಿ ಯಡಿಯೂರಪ್ಪ ಪಾಲಿಗೆ ಗಂಟಲಲ್ಲಿ ಸಿಕ್ಕಿಕೊಂಡ ಮುಳ್ಳು.

ಈಗಾಗಲೇ ಆಯಾ ಕ್ಷೇತ್ರದ ಬಿಜೆಪಿಯ ಹಿಂದಿನ ಅಭ್ಯರ್ಥಿಗಳು ತಮಗೇ ಟಿಕೆಟ್ ನೀಡಬೇಕು ಎಂದು ಹಟ ಹಿಡಿದು ಕೂತಿದ್ದಾರೆ. ಇದೇ ಸಂದರ್ಭದಲ್ಲಿ ‘ಅನರ್ಹ’ರಿಗೆ ಟಿಕೆಟ್ ನೀಡಲೇ ಬೇಕು ಎಂದು ಯಡಿಯೂರಪ್ಪ ವರಿಷ್ಠರ ಮುಂದೆ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಅನರ್ಹರಿಗೆ ಟಿಕೆಟ್ ನೀಡಿದ್ದೇ ಆದರೆ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಯೊಳಗೆ ಬಂಡಾಯವೇಳುತ್ತದೆ ಅಥವಾ ಒಳಗೊಳಗೆ ಅನರ್ಹ ಅಭ್ಯರ್ಥಿಗಳನ್ನು ಸೋಲಿಸುವುದಕ್ಕೆ ಹುನ್ನಾರ ನಡೆಯುತ್ತದೆ. ಒಂದು ವೇಳೆ ಅಷ್ಟೂ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡದ್ದೇ ಆದರೆ ಸರಕಾರ ಉರುಳುವ ಅಪಾಯವಿದೆ. ಒಂದು ವೇಳೆ ಅನರ್ಹರಿಗೆ ಟಿಕೆಟ್ ನೀಡದೇ ಇದ್ದರೂ ಯಡಿಯೂರಪ್ಪ ಮುಜುಗರವನ್ನು ಅನುಭವಿಸಬೇಕಾಗುತ್ತದೆ. ಅನರ್ಹ ಶಾಸಕರು ಆಪರೇಷನ್ ಕಮಲದ ಕುರಿತ ವಿವರಗಳನ್ನು ಬಹಿರಂಗಪಡಿಸಬಹುದು. ಇನ್ನಷ್ಟು ರಾಜಕೀಯ ತಿಕ್ಕಾಟಗಳಿಗೆ ಅದು ಕಾರಣವಾಗಬಹುದು. ಒಟ್ಟಿನಲ್ಲಿ ಇವೆಲ್ಲದರ ಗುರಿ, ಯಡಿಯೂರಪ್ಪ ಅವರೇ ಆಗಿದ್ದಾರೆ.

 ಒಂದು ವೇಳೆ ಅನರ್ಹರಿಗೆ ಟಿಕೆಟ್ ನೀಡಲಾಯಿತು ಎಂದೇ ಇಟ್ಟುಕೊಳ್ಳೋಣ. ಆದರೆ ಸುಪ್ರೀಂಕೋರ್ಟ್ ನೀಡಿದ ಅನರ್ಹತೆಯ ಬಿರುದನ್ನು ಹೊತ್ತುಕೊಂಡೇ ಅವರು ಮತ ಯಾಚಿಸಬೇಕಾಗುತ್ತದೆ. ಸಕಾರಣವಿಲ್ಲದೆ ರಾಜೀನಾಮೆ ನೀಡಿ, ಇದೀಗ ಮತ್ತೆ ಬಂದು ಮತಯಾಚಿಸುತ್ತಿರುವ ಅಭ್ಯರ್ಥಿಗಳನ್ನು ಮತದಾರರು ಸ್ವೀಕರಿಸುವುದು ಸುಲಭವಿಲ್ಲ. ಜೊತೆಗೆ ಎದುರಾಳಿಗಳು ಸುಪ್ರೀಂಕೋರ್ಟ್‌ನ ತೀರ್ಪನ್ನು ಮುಂದಿಟ್ಟುಕೊಂಡೇ ಈ ಅಭ್ಯರ್ಥಿಗಳನ್ನು ಹಣಿಯಲು ಮುಂದಾಗಬಹುದು. ಸುಪ್ರೀಂಕೋರ್ಟ್‌ನಿಂದಲೇ ‘ಅನರ್ಹರು’ ಎಂದು ಬಿಂಬಿತರಾದ ಬಳಿಕ, ಯಾವ ‘ಅರ್ಹತೆ’ಯನ್ನು ಮುಂದಿಟ್ಟು ಅಭ್ಯರ್ಥಿಗಳು ಮತ ಯಾಚಿಸುತ್ತಾರೆ? ಈ ಪ್ರಶ್ನೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಲಾಭವಾಗಲಿದೆ. ‘ಅನರ್ಹ’ರಿಗೆ ಟಿಕೆಟ್ ನೀಡುವ ವಿಷಯ ಬಿಜೆಪಿಯೊಳಗೆ ಮತ್ತೆ ಒಡಕನ್ನು ಸೃಷ್ಟಿಸುವ ಸೂಚನೆಗಳು ಕಾಣುತ್ತಿವೆ. ಯಡಿಯೂರಪ್ಪರಿಗೆ ಮುಜುಗರವುಂಟು ಮಾಡಬೇಕು ಎನ್ನುವ ಉದ್ದೇಶದಿಂದಲೇ ಅನರ್ಹರಿಗೆ ಟಿಕೆಟ್ ನೀಡಲು ಕೆಲವು ನಾಯಕರು ಆಕ್ಷೇಪಿಸುತ್ತಿದ್ದಾರೆ. ಬಹಿರಂಗವಾಗಿಯೇ ‘ಅನರ್ಹರಿಗೆ ಟಿಕೆಟ್ ಭರವಸೆ ನೀಡಿಲ್ಲ’ ಎಂದು ಹಲವರು ಹೇಳಿಕೆಗಳನ್ನು ನೀಡಿದ್ದಾರೆ. ಯಡಿಯೂರಪ್ಪ ಇದನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡದ್ದೇ ಆದಲ್ಲಿ, ಸರಕಾರಕ್ಕೆ ಧಕ್ಕೆಯುಂಟಾಗಲಿದೆ.

ಇಂತಹ ಸಂದರ್ಭಕ್ಕಾಗಿ ಜೆಡಿಎಸ್ ಕೂಡ ಕಾಯುತ್ತಿರುವುದು ಗಮನಾರ್ಹ. ಉಪಚುನಾವಣೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಉಂಟಾಗುವ ಗೊಂದಲಗಳ ಲಾಭವನ್ನು ತನ್ನದಾಗಿಸಲು ಈಗಾಗಲೇ ಜೆಡಿಎಸ್ ಕೈತೊಳೆದು ಕೂತಿದೆ. ‘ಸರಕಾರವನ್ನು ಬೀಳಿಸುವುದಕ್ಕೆ ಬಿಡುವುದಿಲ್ಲ’ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಈ ಹಿನ್ನೆಲೆಯಲ್ಲೇ ಹೊರ ಬಿದ್ದಿದೆ. ಸುಪ್ರೀಂಕೋರ್ಟ್‌ನ ತೀರ್ಪಿನಲ್ಲಿ ಇರುವ ವಿರೋಧಾಭಾಸಗಳು ಏನೇ ಇರಲಿ, ಆಪರೇಷನ್ ಕಮಲಕ್ಕೆ ಬಲಿಯಾದ ಶಾಸಕರನ್ನು ಅದು ‘ಅನರ್ಹರು’ ಎಂದು ಕರೆದಿರುವುದು ಸದ್ಯದ ಸಂದರ್ಭದಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಕೇಂದ್ರ ಸರಕಾರದ ಒತ್ತಡಕ್ಕೆ ಸುಪ್ರೀಂಕೋರ್ಟ್ ಪೂರ್ಣವಾಗಿ ಬಲಿಯಾಗಿಲ್ಲ ಎಂದು ನಾವು ಸಮಾಧಾನ ಪಟ್ಟುಕೊಳ್ಳಬಹುದು. ಲಜ್ಜೆಯಿದ್ದವರಿಗೆ ಸುಪ್ರೀಂಕೋರ್ಟ್‌ನ ತೀರ್ಪು ರಾಜಕೀಯ ನಿವೃತ್ತಿಯನ್ನು ಘೋಷಿಸಲು ಧಾರಾಳ ಸಾಕು. ಆದರೆ ರಾಜಕೀಯವೆಂದರೆ ಲಜ್ಞೆರಹಿತವಾದ ಕ್ಷೇತ್ರ ಎಂದು ರಾಜಕಾರಣಿಗಳು ಬಲವಾಗಿ ನಂಬಿದಂತಿದೆ. ಜೊತೆಗೆ ಜನರ ಮರೆಗುಳಿತನದ ಬಗ್ಗೆಯೂ ಅವರಿಗೆ ಪೂರ್ಣ ಪ್ರಮಾಣದ ನಂಬಿಕೆಯಿದೆ. ಇಷ್ಟಾದರೂ ಮುಂದಿನ ದಿನಗಳಲ್ಲಿ ಯಾರಾದರೂ ‘ಆಪರೇಷನ್’ ಮಾಡಿಸಿಕೊಳ್ಳಲು ಮುಂದಾಗುವಾಗ ಎರಡೆರಡು ಬಾರಿ ಯೋಚನೆ ಮಾಡುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News