ಪುಸ್ತಕಗಳು ಉತ್ತಮ ಸಂಗಾತಿ: ಪೊಲೀಸ್ ಆಯುಕ್ತ ಭಾಸ್ಕರ್ ರಾವ್

Update: 2019-11-13 18:29 GMT

ಬೆಂಗಳೂರು, ನ.13: ಪುಸ್ತಕಗಳು ಉತ್ತಮ ಸಂಗಾತಿಯಾಗಿದ್ದು, ನಿರಂತರ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.

ಬುಧವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪೊಲೀಸ್ ಆಯುಕ್ತ ಅಭಿಮಾನಿಗಳ ಬಳಗ, ಕನ್ನಡ ಅಭಿವೃದ್ಧಿ ಬಳಗ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ, 500 ಕನ್ನಡ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.

ಕನ್ನಡ ಪುಸ್ತಕಗಳನ್ನು ಓದುವ ಪ್ರೇಮ ನಮ್ಮಲ್ಲಿ ಹೆಚ್ಚಾಗಬೇಕು. ಅಲ್ಲದೆ, ಕನ್ನಡ ಭಾಷೆಯಲ್ಲಿ ಓದಿದವರೂ ದೇಶದಲ್ಲಿ ಒಳ್ಳೆಯ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕಲಿಯುವ ಛಲವಿದ್ದರೆ ಭಾಷೆ ಅಡ್ಡಿಯಾಗಲಾರದು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ನಮ್ಮಿಂದಲೇ ಆಗಬೇಕಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲ ಸಂಪನ್ನ ಕುಮಾರ್ ಮಾತನಾಡಿ, ನಾವೆಲ್ಲ ಯಾವುದೇ ಕನ್ನಡ ಕಾರ್ಯಕ್ರಮದಲ್ಲಿರಲಿ, ಕನ್ನಡಕ್ಕಾಗಿ ದುಡಿದ, ನಮ್ಮ ಸ್ಥಳೀಯ ಪರಿಸರದಲ್ಲಿಯೇ ಪ್ರಾತಸ್ಮರಣೀಯರಾದ ಬಹಳಷ್ಟು ಮಹನೀಯರು ಬದುಕಿ ಹೋಗಿದ್ದಾರೆ. ಅವರನ್ನೆಲ್ಲ ಸ್ಮರಿಸಿಕೊಳ್ಳುವ ಜತೆಗೆ ಅವರ ಕುರಿತಾಗಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಕನ್ನಡ ಪುಸ್ತಕ ಹಂಚಿಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News