ಇನ್ಫೋಸಿಸ್ ಮುಖ್ಯಸ್ಥೆ ಡಾ. ಸುಧಾ ಮೂರ್ತಿಗೆ 'ದುಬೈ ಕನ್ನಡ ರತ್ನ ಪ್ರಶಸ್ತಿ-2019'

Update: 2019-11-13 18:37 GMT

ದುಬೈ: ಕನ್ನಡಿಗರು ದುಬೈ ವತಿಯಿಂದ 64ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಕನ್ನಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಾದಲ್ ಶೀಬಾದಲ್ಲಿರುವ ಹಾರ್ಟ್ ಲ್ಯಾಂಡ್ ಅಂತರಾಷ್ಟ್ರೀಯ ಶಾಲಾ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತ್ತು.

ಕಾರ್ಯಕ್ರಮಕ್ಕೆ ಸಂಯುಕ್ತ ಅರಬ್ ಸಂಸ್ಥಾನದ ವಿವಿಧ ಭಾಗಗಳಿಂದ ಸಾವಿರಾರು ಕನ್ನಡಿಗರು ಆಗಮಿಸಿದ್ದರು. ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ  ಪದ್ಮಶ್ರೀ ಪುರಸ್ಕೃತೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ. ಸುಧಾ ಮೂರ್ತಿ ಅವರು ಮುಖ್ಯ ಭಾಷಣ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡಿಗರು ದುಬೈ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಅವರು ನೆರವೇರಿಸಿದರು, ಭಾರತೀಯ ದುಬೈ ದೂತಾವಾಸ ಕೇಂದ್ರದ ಕಾನ್ಸುಲರ್ ಜನರಲ್  ವಿಪುಲ್  ಅವರು ಕನ್ನಡಲ್ಲೇ ರಾಜ್ಯೋತ್ಸವದ ಶುಭಕೋರುತ್ತಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು.

ಈ ಕಾರ್ಯಕ್ರಮದ ಪ್ರಮುಖ ಭಾಗವಾದ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಕಾರ್ಯವನ್ನು ಅತಿಥಿಗಳಾಗಿ ಆಗಮಿಸಿದ ಕನ್ನಡ ಕಾರ್ಯಕ್ರಮಗಳ ಪೋಷಕ ಮೊಹಮ್ಮದ್ ಮುಸ್ತಫಾ, ಕ್ಯಾಪ್ಟನ್ ನವೀನ್ ನಾಗಪ್ಪ,  ರವೀಶ್ ಗೌಡ, ಶೇಖರ್ ರೆಡ್ಡಿ, ಪ್ರವೀಣ್ ಶೆಟ್ಟಿ, ಮನೆಗಾರ್ ಮೀರನ್, ಮತ್ತು ಕನ್ನಡಿಗರು ದುಬೈ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಸದನ್ ದಾಸ್(ಮಾಜಿ ಅಧ್ಯಕ್ಷರು), ಉಮಾ ವಿದ್ಯಾಧರ್( ಮಾಜಿ ಅಧ್ಯಕ್ಷೆ), ವೀರೇಂದ್ರ ಬಾಬು (ಮಾಜಿ ಅಧ್ಯಕ್ಷರು), ಹಾಗು ಕನ್ನಡಿಗರು ದುಬೈ ಸಮಿತಿ ಸದಸ್ಯರುಗಳಾದ ಅರುಣ್ ಕುಮಾರ್, ದೀಪಕ್ ಸೋಮಶೇಖರ್, ವಿಜಯ ಶಿವರುದ್ರಪ್ಪ, ಮಮತಾ ರಾಘವೇಂದ್ರ, ಮಲ್ಲಿಕಾರ್ಜುನ ಅಂಗಡಿ, ಶ್ರೀನಿವಾಸ್ ಅರಸ್, ವೆಂಕಟರಮಣ ಕಾಮತ್, ವಿನೀತ್ ರಾಜ್, ಮಧು ಗೌಡರ್, ರಫೀಕಲಿ ಕೊಡಗು, ಮುಂತಾದವರು ಸೇರಿ ಡಾ.ಸುಧಾ ಮೂರ್ತಿ ಅವರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.

ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡು ತನ್ನ ಒಂದು ಕಾಲಿನ ಸ್ಥಿರತೆಯನ್ನು ಕಳೆದುಕೊಂಡ ಕ್ಯಾಪ್ಟನ್ ನವೀನ್ ನಾಗಪ್ಪ ಅವರನ್ನು ಕನ್ನಡಿಗರು ದುಬೈ ವತಿಯಿಂದ ವೀರ ಯೋಧ ಪ್ರಶಸ್ತಿ ನೀಡಿ  ಸನ್ಮಾನಿಸಲಾಯಿತು.  ದುಬೈ ಕನ್ನಡಿಗರ ಕಾರ್ಯಕ್ರಮಗಳ ಸದಾ ಬೆಂಬಲ ನೀಡುವ ಮೊಹಮ್ಮದ್ ಮುಸ್ತಫಾ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತ್ತು. ಬೆಂಗಳೂರಿನಿಂದ ಆಗಮಿಸಿದ ನೃತ್ಯ ದಿಶಾ ಟ್ರಸ್ಟ್ ತಂಡದಿಂದ ನೃತ್ಯ ಪ್ರದರ್ಶನ ಮತ್ತು ದುಬೈಯಲ್ಲಿ ನೆಲಸಿರುವ ಶಾಲಾ ಮಕ್ಕಳಿಂದ ಹಾಗು ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತ್ತು.

ಆರ್ ಜೆ ಸಿರಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ಗೌಡ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News