ಸ್ಪೇನ್ ನ ಸ್ಟಾರ್ ಸ್ಟ್ರೈಕರ್ ಡೇವಿಡ್ ವಿಲ್ಲಾ ಫುಟ್ಬಾಲ್‌ಗೆ ವಿದಾಯ

Update: 2019-11-14 02:01 GMT

ಟೋಕಿಯೊ, ನ.13: ಸ್ಪೇನ್‌ನ ಸ್ಟಾರ್ ಸ್ಟ್ರೈಕರ್ ಹಾಗೂ ಅಗ್ರಮಾನ್ಯ ಗೋಲ್‌ಸ್ಕೋರರ್ ಡೇವಿಡ್ ವಿಲ್ಲಾ ಈ ಋತುವಿನ ಅಂತ್ಯಕ್ಕೆ ವೃತ್ತಿಪರ ಫುಟ್ಬಾಲ್‌ನಿಂದ ನಿವೃತ್ತಿಯಾಗುವುದಾಗಿ ಬುಧವಾರ ಘೋಷಿಸಿದರು.

 ಸ್ಪೇನ್‌ನ ಪರ ಅಂತರ್‌ರಾಷ್ಟ್ರೀಯ ಹಾಗೂ ಬಾರ್ಸಿಲೋನ, ಅಟ್ಲೆಟಿಕೊ ಮ್ಯಾಡ್ರಿಡ್ ಹಾಗೂ ವೆಲೆನ್ಸಿಯಾ ಸಹಿತ ಹಲವು ಕ್ಲಬ್‌ಗಳ ಪರವಾಗಿ ಆಡಿದ ಬಳಿಕ 37ರ ಹರೆಯದ ವಿಲ್ಲಾ ಪ್ರಸ್ತುತ ಜಪಾನ್‌ನ ವಿಸ್ಸೆಲ್ ಕೋಬೆ ಫುಟ್ಬಾಲ್ ಕ್ಲಬ್ ಪರ ಆಡುತ್ತಿದ್ದಾರೆ. ‘‘ವೃತ್ತಿಪರ ವೃತ್ತಿಜೀವನಕ್ಕೆ ತೆರೆ ಎಳೆದು ಫುಟ್ಬಾಲ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. ನಾನು ದೀರ್ಘ ಸಮಯದಿಂದ ನಿವೃತ್ತಿಯ ಕುರಿತು ಯೋಚಿಸುತ್ತಿದ್ದೆ. ನನ್ನ ಕುಟುಂಬ ಹಾಗೂ ಹಿತೈಷಿಗಳೊಂದಿಗೆ ಚರ್ಚಿಸಿದ ಬಳಿಕ ನಿವೃತ್ತಿ ನಿರ್ಧಾರಕ್ಕೆ ಬಂದಿರುವೆ. ನಾನು ಫುಟ್ಬಾಲ್‌ನಿಂದ ನಿವೃತ್ತಿಯಾಗಲು ಬಯಸಿದ್ದೇನೆ. ನನ್ನದು ಬಲವಂತದ ನಿವೃತ್ತಿಯಲ್ಲ’’ ಎಂದು ಕೋಬೆಯಲ್ಲಿ ಸುದ್ದಿಗಾರರಿಗೆ ವಿಲ್ಲಾ ತಿಳಿಸಿದರು. ಸ್ಪೇನ್ ಪರವಾಗಿ ವಿಲ್ಲಾ ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದಾರೆ. 2010ರಲ್ಲಿ ವಿಶ್ವಕಪ್ ಜಯಿಸಿದ ಸ್ಪೇನ್ ತಂಡದ ಸದಸ್ಯರಾಗಿದ್ದರು. 2008ರಲ್ಲಿ ಯುರೋಪಿಯನ್ ಚಾಂಪಿಯನ್‌ಶಿಪ್‌ನ್ನು ಜಯಿಸಿದ್ದರು. ಸ್ಪೇನ್‌ನ ಪರವಾಗಿ 59 ಗೋಲುಗಳನ್ನು ಗಳಿಸಿದ್ದು ಇದೊಂದು ರಾಷ್ಟ್ರೀಯ ದಾಖಲೆಯಾಗಿದೆ. ವಿಲ್ಲಾ ಬಾರ್ಸಿಲೋನದ ಪರ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಹಾಗೂ ಎರಡು ಬಾರಿ ಲಾ ಲಿಗಾ ಹಾಗೂ ವಿಶ್ವ ಕ್ಲಬ್ ಕಪ್ ಪದಕವನ್ನು ಗೆದ್ದುಕೊಂಡಿದ್ದಾರೆ. ಜಪಾನ್‌ನ ವಿಸ್ಸೆಲ್ ಕೋಬೆ ತಂಡದಲ್ಲಿ ಸ್ಪೇನ್‌ನ ದಂತಕತೆ ಆ್ಯಂಡ್ರಿಸ್ ಇನಿಯೆಸ್ಟಾ ಹಾಗೂ ಜರ್ಮನಿ ಸ್ಟ್ರೈಕರ್ ಲುಕಾ ಪೊಡೊಲ್‌ಸ್ಕಿ ಅವರೊಂದಿಗೆ ಆಡಿದ್ದಾರೆ. ವಿದೇಶಿ ಆಟಗಾರರ ಉಪಸ್ಥಿತಿಯಲ್ಲೂ ಜಪಾನ್ ಫುಟ್ಬಾಲ್ ಕ್ಲಬ್ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ವಿಸ್ಸೆಲ್ ಕೋಬೆ ಜೇ-ಲೀಗ್‌ನಲ್ಲಿ 10ನೇ ಸ್ಥಾನದಲ್ಲಿದ್ದು, ವಿಲ್ಲಾ 26 ಪಂದ್ಯಗಳಲ್ಲಿ ಆಡಿ 26 ಗೋಲುಗಳನ್ನು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News