ಭಾರತಕ್ಕೆ ಇಂದು ಅಫ್ಘಾನಿಸ್ತಾನ ವಿರುದ್ಧ ನಿರ್ಣಾಯಕ ಪಂದ್ಯ

Update: 2019-11-14 02:16 GMT

ಡುಶಾನ್‌ಬೆ(ತಜಿಕಿಸ್ತಾನ), ನ.13: ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯ ಅಭಿಯಾನದಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಾ ಗೆಲುವು ಸಾಧಿಸಲು ವಿಫಲವಾಗಿರುವ ಭಾರತೀಯ ಫುಟ್ಬಾಲ್ ತಂಡ ಅಫ್ಘಾನಿಸ್ತಾನ ವಿರುದ್ಧ ಮಂಗಳವಾರ ಮಹತ್ವದ ಪಂದ್ಯವನ್ನು ಆಡಲು ಸಜ್ಜಾಗಿದೆ.

ತನಗಿಂತ ಗರಿಷ್ಠ ರ್ಯಾಂಕಿನ ಒಮಾನ್ ವಿರುದ್ಧ 1-2 ಅಂತರದಿಂದ ಸೋಲನುಭವಿಸಿ ದ್ವಿತೀಯ ಸುತ್ತಿನ ಕ್ವಾಲಿಫೈಯರ್ ಟೂರ್ನಿಯನ್ನು ಆರಂಭಿಸಿದ್ದ ಭಾರತ ಸೆಪ್ಟಂಬರ್‌ನಲ್ಲಿ ದೋಹಾದಲ್ಲಿ ಏಶ್ಯನ್ ಚಾಂಪಿಯನ್ ಖತರ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿತ್ತು.

ಮೊದಲೆರಡು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಭಾರತ ಮೂರನೇ ಸುತ್ತಿನಲ್ಲಿ ಸ್ಥಾನ ಪಡೆಯುವ ವಿಶ್ವಾಸವನ್ನು ಮೂಡಿಸಿತ್ತು. ಆದರೆ, ಅಕ್ಟೋಬರ್ 15ರಂದು ಕೋಲ್ಕತಾದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಪಂದ್ಯವನ್ನು 1-1ರಿಂದ ಡ್ರಾಗೊಳಿಸಿ ಹಿನ್ನಡೆ ಕಂಡಿತು.

ಕೊನೆಯ ಕ್ಷಣದಲ್ಲಿ(88ನೇ ನಿಮಿಷ)ಹೆಡರ್‌ನ ಮೂಲಕ ಗೋಲು ಗಳಿಸಿದ ಆದಿಲ್ ಖಾನ್ ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ ಭಾರತವನ್ನು ಸೋಲುವ ಆತಂಕದಿಂದ ಪಾರಾಗಿಸಿ 1-1 ರಿಂದ ಡ್ರಾಗೆ ತೃಪ್ತಿಪಡಲು ನೆರವಾದರು. ಮೂರು ಪಂದ್ಯಗಳಲ್ಲಿ ಎರಡು ಅಂಕ ಪಡೆದಿರುವ ಭಾರತ ‘ಇ’ ಗುಂಪಿನ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಐದು ತಂಡಗಳ ಗುಂಪಿನಲ್ಲಿ ರನ್ನರ್-ಅಪ್ ಆದರೂ ಮೂರನೇ ಸುತ್ತಿಗೆ ಸ್ಥಾನ ಪಡೆಯುವ ಖಚಿತತೆ ಇಲ್ಲ. ಹೀಗಾಗಿ ಭಾರತಕ್ಕೆ ಅಫ್ಘಾನಿಸ್ತಾನ ವಿರುದ್ಧ ಗೆಲುವು ಅನಿವಾರ್ಯವಾಗಿದೆ.

 ಅಫ್ಘಾನಿಸ್ತಾನ ಫಿಫಾ ರ್ಯಾಂಕಿಂಗ್‌ನಲ್ಲಿ 149ನೇ ಸ್ಥಾನದಲ್ಲಿದ್ದರೆ, ಭಾರತ 106ನೇ ಸ್ಥಾನದಲ್ಲಿದೆ. ಒಂದರಲ್ಲಿ ಗೆಲುವು, ಎರಡರಲ್ಲಿ ಸೋತಿರುವ ಅಫ್ಘಾನ್ ಮೂರನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಫುಟ್ಬಾಲ್ ತಂಡ ತಜಿಕಿಸ್ತಾನದ ದುಶಾನ್‌ಬೆಯನ್ನು ತನ್ನ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ. ಕೊರೆಯುವ ಚಳಿಯಲ್ಲಿ ಕೃತಕ ಟರ್ಫ್‌ನಲ್ಲಿ ಪಂದ್ಯವನ್ನು ಆಡಲಾಗುತ್ತಿದೆ.

ಸೆಂಟ್ರಲ್ ಡಿಫೆಂಡರ್ ಅನಾಸ್ ಎಡ್ತೊಡಿಕಾ ದುಬೈನಿಂದ ಸ್ವದೇಶಕ್ಕೆ ವಾಪಸಾಗಿರುವುದು ಭಾರತಕ್ಕೆ ಹಿನ್ನಡೆಯಾಗಿದೆ. ಅನಾಸ್ ತಾಯಿ ಮೃತಪಟ್ಟ ಕಾರಣ ಅವರು ತಾಯ್ನೆಡಿಗೆ ವಾಪಸಾಗಿದ್ದಾರೆ. ತಂಡದಲ್ಲಿ ಪ್ರಮುಖ ಮಿಡ್‌ಫೀಲ್ಡರ್ ರೊವ್ಲಿನ್ ಬೊರ್ಗೆಸ್ ಅನುಪಸ್ಥಿತಿಯಿದೆ. ರೊವ್ಲಿನ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ.

  ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಉತ್ತಮ ದಾಖಲೆ ಹೊಂದಿದ್ದು, ಉಭಯ ತಂಡಗಳು 8 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಆರು ಬಾರಿ ಜಯ ದಾಖಲಿಸಿದೆ. ಒಂದು ಬಾರಿ ಡ್ರಾ ಸಾಧಿಸಿದ್ದು, ಮತ್ತೊಂದು ಸಲ ಸೋಲುಂಡಿದೆ. 2013ರ ಸ್ಯಾಫ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಎರಡೂ ತಂಡಗಳು ಕೊನೆಯ ಬಾರಿ ಮುಖಾಮುಖಿಯಾಗಿದ್ದು, ಅಫ್ಘಾನಿಸ್ತಾನ 2-0 ಅಂತರದಿಂದ ಜಯ ಸಾಧಿಸಿತ್ತು.

ಅಫ್ಘಾನಿಸ್ತಾನ ಈಗಾಗಲೇ ಬಾಂಗ್ಲಾದೇಶ ವಿರುದ್ಧ 1-0 ಅಂತರದಿಂದ ಗೆಲುವು ಸಾಧಿಸಿದರೆ, ಒಮಾನ್ ವಿರುದ್ಧ 0-3 ಹಾಗೂ ಖತರ್ ವಿರುದ್ಧ 0-6 ಅಂತರದಿಂದ ಸೋತಿತ್ತು. ಅಫ್ಘಾನಿಸ್ತಾನದ ಪರ ಹೆಚ್ಚು ಪಂದ್ಯಗಳನ್ನು ಆಡಿರುವ ಹರೂನ್ ಅಮಿರಿ ಭಾರತೀಯ ಆಟಗಾರರಿಗೆ ಪರಿಚಿತರಾಗಿದ್ದಾರೆ. ಅಮಿರಿ 2011ರಿಂದ ಅಫ್ಘಾನ್ ಪರ ಆಡುತ್ತಿದ್ದಾರೆ. 2014ರಲ್ಲಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಗೋವಾ ಎಫ್‌ಸಿ ತಂಡವನ್ನು ಪ್ರತಿನಿಧಿಸಿದ್ದರು. ಈ ಋತುವಿನಲ್ಲಿ ಐ-ಲೀಗ್ ತಂಡ ಗೋಕುಲಂ ಕೇರಳ ಎಫ್‌ಸಿಯನ್ನು ಸೇರ್ಪಡೆಯಾಗಿದ್ದರು.

 ಅಮಿರಿ ಅಫ್ಘಾನ್ ಪರವಾಗಿ ಈ ತನಕ 48 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 25ರ ಹರೆಯದ ಅಮಿರಿ ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿ ಏಕೈಕ ಗೋಲು ಗಳಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ಏಕೈಕ ಗೋಲು ಬಾರಿಸಿದ್ದಾರೆ.

ಪಂದ್ಯದ ಸಮಯ: ರಾತ್ರಿ 7:30 ಗಂಟೆಗೆ

ಭಾರತೀಯ ಕಾಲಮಾನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News