ನೀವು ಮಧುಮೇಹಿಗಳಾಗಿದ್ದರೆ ಆರೋಗ್ಯ ವಿಮೆಯನ್ನು ತಪ್ಪದೇ ಮಾಡಿಸಿ

Update: 2019-11-14 13:47 GMT
ಫೋಟೋ: ttnews.com

ಇಂದಿನ ಗಡಿಬಿಡಿಯ ಜೀವನದಲ್ಲಿ ಅನಾರೋಗ್ಯಕರ ಆಹಾರ ಸೇವನೆ,ವ್ಯಾಯಾಮ ಮಾಡದಿರುವುದು ಮತ್ತು ಏಕತಾನದ ಜೀವನಶೈಲಿ ಸಾಮಾನ್ಯವಾಗಿವೆ. ಇವೆಲ್ಲ ಸೇರಿಕೊಂಡು ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತವೆ ಮತ್ತು ಮಧುಮೇಹ ಇಂತಹ ಕಾಯಿಲೆಗಳಲ್ಲೊಂದಾಗಿದೆ.

ಮಧುಮೇಹ ಕಾಯಿಲೆಗೆ ಚಿಕಿತ್ಸಾ ವೆಚ್ಚ ಇಂದು ಹಿಂದಿಗಿಂತ ಹಲವಾರು ಪಟ್ಟು ಏರಿಕೆಯಾಗಿದೆ. ಕುಟುಂಬದಲ್ಲಿ ಯಾರಾದರೂ ಮಧುಮೇಹದಿಂದ ಬಳಲುತ್ತಿದ್ದರೆ ಅದು ಆ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ಹೊರೆಯನ್ನುಂಟು ಮಾಡುತ್ತದೆ. ಮಧುಮೇಹದ ವಿರುದ್ಧ ಹೋರಾಟದಲ್ಲಿ ಸಮಗ್ರ ಆರೋಗ್ಯ ವಿಮಾ ಪಾಲಿಸಿ ನೆರವಾಗುತ್ತದೆ. ಈ ಬಗ್ಗೆ ಕೆಲವು ಮಾಹಿತಿಗಳಿಲ್ಲಿವೆ.....

ದಿನೇ ದಿನೇ ಮಾರಣಾಂತಿಕವಾಗುತ್ತಿದೆ

ಅಧಿಕೃತ ಅಂಕಿಅಂಶಗಳಂತೆ ವಿಶ್ವದಲ್ಲಿ ಪ್ರತಿ ಏಳು ಸೆಕೆಂಡಿಗೆ ಓರ್ವ ವ್ಯಕ್ತಿ ಮಧುಮೇಹಕ್ಕೆ ಬಲಿಯಾಗುತ್ತಿದ್ದಾನೆ ಮತ್ತು ಈ ಪೈಕಿ ಶೇ.50ರಷ್ಟು ಜನರು 60 ವರ್ಷಕ್ಕಿಂತ ಕಡಿಮೆ ವಯೋಮಾನದವರಾಗಿರುತ್ತಾರೆ. ಭಾರತದಲ್ಲಿ 2017ರಲ್ಲಿ ಅಂದಾಜು 7.20 ಕೋಟಿ ಮಧುಮೇಹಿಗಳಿದ್ದು,2040ರ ವೇಳೆಗೆ ಈ ಸಂಖ್ಯೆ 12.30 ಕೋಟಿಗೆ ತಲುಪುವ ನಿರೀಕ್ಷೆಯಿದೆ.

ದೇಶದಲ್ಲಿ ಶೇ.33ರಷ್ಟು ಮಧುಮೇಹಿಗಳು ತಮ್ಮ ಚಿಕಿತ್ಸೆಗಾಗಿ ಕುಟುಂಬದ ಆದಾಯದ ಶೇ.5ರಷ್ಟು ಮೊತ್ತವನ್ನು ವ್ಯಯಿಸುತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ದುರ್ಬಲ ವರ್ಗಗಳಿಗೆ ಸೇರಿದ ರೋಗಿಗಳೂ ಈ ಕಾಯಿಲೆಯ ಚಿಕಿತ್ಸೆಗಾಗಿ ವಾರ್ಷಿಕ ಸರಾಸರಿ 8,958 ರೂ.ಗಳನ್ನು ವೆಚ್ಚ ಮಾಡುತ್ತಿದ್ದಾರೆ ಎಂದು ದಿಲ್ಲಿಯ ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜು ನಡೆಸಿದ ಅಧ್ಯಯನವೊಂದು ಬೆಟ್ಟು ಮಾಡಿದೆ.

ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚ ಮಧುಮೇಹ ಚಿಕಿತ್ಸೆಗೆ ತಗಲುವ ವೆಚ್ಚ ಇತ್ತೀಚಿನ ವರ್ಷಗಳಲ್ಲಿ ಭಾರೀ ಏರಿಕೆಯನ್ನು ಕಂಡಿದೆ. ಮಧುಮೇಹವು ಜೀವನಪರ್ಯಂತ ಕಾಡುವ ರೋಗವಾಗಿರುವುದರಿಂದ ಭವಿಷ್ಯದಲ್ಲಿಯೂ ಚಿಕಿತ್ಸಾ ವೆಚ್ಚ ಹೆಚ್ಚುತ್ತಲೇ ಹೋಗುತ್ತದೆ. ಮಧುಮೇಹವು ಪಾರ್ಶ್ವವಾಯು ಮತ್ತು ಮೂತ್ರಪಿಂಡ ಕಾಯಿಲೆಗಳಂತಹ ಗಂಭೀರ ರೋಗಗಳಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಇಂತಹ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದು ದುಬಾರಿಯಾಗುತ್ತದೆ ಮತ್ತು ನೋಡನೋಡುವಷ್ಟರಲ್ಲಿ ಜೀವಮಾನದ ಉಳಿತಾಯವೆಲ್ಲ ಕರಗಿಹೋಗುತ್ತದೆ.

ದುಬಾರಿ ವೆಚ್ಚ ನಿಭಾಯಿಸಲೊಂದು ಮಾರ್ಗ

ದೀರ್ಘಕಾಲಿಕ ರೋಗವಾಗಿರುವ ಮಧುಮೇಹದ ವಿರುದ್ಧ ಹೋರಾಟದಲ್ಲಿ ಸಮಗ್ರ ಆರೋಗ್ಯ ವಿಮೆ ಪಾಲಿಸಿ ನೆರವಾಗುತ್ತದೆ. ಅದು ರೋಗಿಯು ಜೇಬಿನಿಂದ ಹಣ ಖರ್ಚು ಮಾಡುವುದನ್ನು ತಡೆಯುತ್ತದೆ ಮಾತ್ರವಲ್ಲ,ರೋಗಿಯು ತನ್ನ ಆಯ್ಕೆಯ ಆಸ್ಪತ್ರೆಯಲ್ಲಿ ನಗದುರಹಿತ ಚಿಕಿತ್ಸೆ ಪಡೆಯುವುದನ್ನೂ ಸಾಧ್ಯವಾಗಿಸುತ್ತದೆ.

ವಿಮಾ ಕಂಪನಿಯ ನೆಟ್‌ವರ್ಕ್‌ನಲ್ಲಿ ಇಲ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ,ರೋಗಿಯು ಆಸ್ಪತ್ರೆಗೆ ಪಾವತಿಸಿದ ಚಿಕಿತ್ಸಾ ವೆಚ್ಚವನ್ನು ಕಂಪನಿಯೇ ಭರಿಸುತ್ತದೆ. ಅಲ್ಲದೆ ಹೆಚ್ಚಿನ ಆರೋಗ್ಯ ವಿಮೆ ಪಾಲಿಸಿಗಳು ಆಸ್ಪತ್ರೆಗೆ ದಾಖಲಾಗುವ ಮೊದಲಿನ ಮತ್ತು ನಂತರದ ವೆಚ್ಚಗಳನ್ನೂ ಭರಿಸುತ್ತವೆ,ಹೀಗಾಗಿ ರೋಗಿಯು ಭವಿಷ್ಯಕ್ಕಾಗಿ ಕೂಡಿಟ್ಟ ಹಣಕ್ಕೆ ಕೈ ಹಚ್ಚಬೇಕಿಲ್ಲ.

ಮಧುಮೇಹದ ವಿರುದ್ಧ ಪಡೆದುಕೊಳ್ಳಬಹುದಾದ ಹಲವಾರು ಆರೋಗ್ಯ ವಿಮೆ ಯೋಜನೆಗಳಿವೆ. ಮಧುಮೇಹ ಕ್ಕಾಗಿಯೇ ನಿರ್ದಿಷ್ಟ ಪಾಲಿಸಿಯನ್ನು ಖರೀದಿಸುತ್ತಿದ್ದರೆ ಕಂಪನಿಯ ಹಕ್ಕು ಇತ್ಯರ್ಥ ಅನುಪಾತವನ್ನೂ ಪರಿಶೀಲಿಸಿ. ಹೆಚ್ಚಿನ ಅನುಪಾತವನ್ನು ಹೊಂದಿರುವ ಅಂದರೆ ಹೆಚ್ಚಿನ ಪ್ರಮಾಣದಲ್ಲಿ ಮಧುಮೇಹ ಚಿಕಿತ್ಸಾ ವೆಚ್ಚವನ್ನು ಭರಿಸಿರುವ ಕಂಪನಿಯಿಂದ ಪಾಲಿಸಿಯನ್ನು ಖರೀದಿಸಿದರೆ ಒಳ್ಳೆಯದು.

ರೆಗ್ಯುಲರ್ ಆರೋಗ್ಯ ವಿಮೆ ಯೋಜನೆಗಳು ನಿರ್ದಿಷ್ಟ ಸಮಯದ ನಂತರ ರಕ್ಷಣೆಯನ್ನು ಒದಗಿಸುತ್ತವೆ. ಮಧುಮೇಹಿಗಳಿಗೆ ತಕ್ಷಣದಿಂದ ವಿಮಾ ರಕ್ಷಣೆ ಬೇಕಿದ್ದರೆ ಹೆಚ್ಚುವರಿ ಪ್ರೀಮಿಯಂ ಅನ್ನು ಪಾವತಿಸಿದರೆ ಅದಕ್ಕೆ ಅವಕಾಶವಿದೆಯೇ ಎನ್ನುವುದನ್ನು ಪಾಲಿಸಿಯನ್ನು ಖರೀದಿಸುವ ವೇಳೆ ಖಚಿತಪಡಿಸಿಕೊಳ್ಳಬಹುದು. ಮಧುಮೇಹಕ್ಕೆಂದೇ ನಿರ್ದಿಷ್ಟ ಆರೋಗ್ಯ ವಿಮೆಗಳೂ ಇವೆ ಮತ್ತು ಖರೀದಿಸಿದ ದಿನದಂದಲೇ ವಿಮಾ ರಕ್ಷಣೆಯನ್ನು ಒದಗಿಸುತ್ತವೆ. ಮಧುಮೇಹ ಮಾತ್ರವಲ್ಲ, ಅದು ಉಂಟು ಮಾಡುವ ಇತರ ಗಂಭೀರ ಕಾಯಿಲೆಗಳೂ ಇಂತಹ ಪಾಲಿಸಿಗಳ ವ್ಯಾಪ್ತಿಯಲ್ಲಿ ಸೇರಿರುತ್ತವೆ.

ಗಮನಿಸಬೇಕಾದ ಅಗತ್ಯ ಅಂಶಗಳು

ಆರೋಗ್ಯ ವಿಮೆ ಪಾಲಿಸಿಯನ್ನು ಖರೀದಿಸುವ ಮುನ್ನ ಇನ್ಶೂರನ್ಸ್ ಅಗ್ರಿಗೇಟರ್ ಪೋರ್ಟಲ್‌ಗಳಲ್ಲಿ ವಿವಿಧ ಪಾಲಿಸಿಗಳನ್ನು ಹೋಲಿಸಿ ನೋಡುವುದು ಒಳ್ಳೆಯದು. ಆಫ್‌ಲೈನ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ ಪಾಲಿಸಿಯನ್ನು ಖರೀದಿಸಬಹುದು,ಆದರೆ ನಿಗದಿತ ನಮೂನೆಯಲ್ಲಿ ವಿವರಗಳನ್ನು ಸರಿಯಾಗಿ ತುಂಬಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಪಾಲಿಸಿ ಖರೀದಿಸುವಾಗ ಹಾಲಿ ಆರೋಗ್ಯ ಸ್ಥಿತಿಯ ಕುರಿತು ನಿಖರವಾದ ಮಾಹಿತಿಗಳನ್ನು ಒದಗಿಸಬೇಕಾಗುತ್ತದೆ,ಇಲ್ಲದಿದ್ದರೆ ಹಕ್ಕು ಕೋರಿಕೆ ತಿರಸ್ಕೃತಗೊಳ್ಳುವ ಸಾಧ್ಯತೆಗಳಿರುತ್ತವೆ.

ಪಾಲಿಸಿಯ ನಿಬಂಧನೆಗಳನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳುವುದು ಮಹತ್ವದ್ದಾಗಿದೆ. ಹೆಚ್ಚಿನ ವಿಮೆ ಮೊತ್ತದ ಪಾಲಿಸಿಯನ್ನು ಮಾಡಿಸುವುದು ಒಳ್ಳೆಯದು. ನಿಬಂಧನೆಗಳಲ್ಲಿ ಕೋ-ಪೇ ಅಥವಾ ಸಬ್-ಲಿಮಿಟ್‌ನಂತಹ ಉಪವಾಕ್ಯಗಳು ಸೇರಿಕೊಂಡಿವೆಯೇ ಎನ್ನುವುದನ್ನು ಪರಿಶೀಲಿಸಬೇಕು. ಕೋ-ಪೇ ಅಂತಿದ್ದರೆ ಚಿಕಿತ್ಸಾ ವೆಚ್ಚದ ಭಾಗಶಃ ಮೊತ್ತವನ್ನು ರೋಗಿಯು ತನ್ನ ಜೇಬಿನಿಂದ ಪಾವತಿಸಬೇಕಾಗುತ್ತದೆ ಮತ್ತು ಉಳಿದ ಹಣವನ್ನು ಕಂಪನಿಯು ಭರಿಸುತ್ತದೆ. ಸಬ್-ಲಿಮಿಟ್ ರೂಮಿನ ಬಾಡಿಗೆ ಮತ್ತು ವೈದ್ಯರ ಶುಲ್ಕದಂತಹ ವೆಚ್ಚಗಳ ಮೇಲೆ ಮಿತಿಯನ್ನು ಹೇರುತ್ತದೆ. ಕೋ-ಪೇ ಮತ್ತು ಸಬ್-ಲಿಮಿಟ್ ಷರತ್ತುಗಳಿಲ್ಲದ ಪಾಲಿಸಿಗಳಿಗಾಗಿ ಸಹಜವಾಗಿಯೇ ಹೆಚ್ಚಿನ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News