ಯುರೋಪಿಯನ್ ಯೂನಿಯನ್ ಸಂಸದರ ಕಾಶ್ಮೀರ ಭೇಟಿಗೆ ಭಾರತ ಮೂಲದ ಸುಳ್ಳು ಸುದ್ದಿ ಸಂಸ್ಥೆಯ ಪ್ರಾಯೋಜಕತ್ವ: ಎನ್‌ಜಿಒ ವರದಿ

Update: 2019-11-14 14:38 GMT
PTI 

ಹೊಸದಿಲ್ಲಿ, ನ.14: ಕಳೆದ ತಿಂಗಳು ಯುರೋಪಿಯನ್ ಸಂಸದರು ಜಮ್ಮು ಮತ್ತು ಕಾಶ್ಮೀರಕ್ಕೆ ಅನಧಿಕೃತವಾಗಿ ಭೇಟಿ ನೀಡಿದ ಕಾರ್ಯಕ್ರಮವನ್ನು ಭಾರತ ಮೂಲದ ಅಂತರಾಷ್ಟ್ರೀಯ ಸುಳ್ಳು ಸುದ್ದಿ ಜಾಲ ಪ್ರಾಯೋಜಿಸಿದೆ ಎಂದು ಇಯು ಡಿಸಿನ್‌ಫೊಲ್ಯಾಬ್ ಎಂಬ ಸರಕಾರೇತರ ಸಂಘಟನೆ ವರದಿ ಮಾಡಿದೆ. ಭಾರತದ ಪ್ರಭಾವೀ ಸಂಸ್ಥೆಯು 65 ದೇಶದಲ್ಲಿ 265 ಸುಳ್ಳು ಸುದ್ದಿಯ ವೆಬ್‌ಸೈಟ್‌ಗಳನ್ನು ಹೊಂದಿದ್ದು ಭಾರತ ಸರಕಾರದ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಡಿಸ್ ಇನ್ ಫೊ ಲ್ಯಾಬ್ ತಿಳಿಸಿದೆ. ಡಿಸ್ ಇನ್ ಫೊ ಲ್ಯಾಬ್ ಯುರೋಪಿಯನ್ ಯೂನಿಯನ್ ಮೂಲದ ಸರಕಾರೇತರ ಸಂಘಟನೆಯಾಗಿದೆ. ಸಾರ್ವಜನಿಕರ ಗ್ರಹಿಕೆಯನ್ನು ಪಾಕಿಸ್ತಾನದ ವಿರುದ್ಧ ಪರಿವರ್ತಿಸಲು ಅಂತರಾಷ್ಟ್ರೀಯ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಪ್ರಭಾವ ಬೀರುವುದು ಈ ವೆಬ್‌ಸೈಟ್‌ಗಳ ಗುರಿಯಾಗಿದೆ . ಇವುಗಳಲ್ಲಿ ಹೆಚ್ಚಿನವು ಸ್ಥಳೀಯ ನಿಷ್ಕ್ರಿಯ ಸುದ್ದಿಪತ್ರಿಕೆಯ ಹೆಸರನ್ನು ಹೊಂದಿವೆ ಅಥವಾ ನೈಜ ಮಾಧ್ಯಮ ಸಂಸ್ಥೆಯೆಂದು ಜನರನ್ನು ವಂಚಿಸುತ್ತಿವೆ ಎಂದು ಸಂಸ್ಥೆ ತಿಳಿಸಿದೆ.

ಕಳೆದ ತಿಂಗಳು ‘ಇಪಿ ಟುಡೆ’ ಎಂಬ ವೆಬ್‌ಸೈಟ್ ‘ರಶ್ಯ ಟುಡೆ’ ಮತ್ತು ‘ವಾಯ್ಸ್’ ಆಫ್ ಅಮೆರಿಕದಲ್ಲಿ ಪ್ರಕಟವಾದ ಹಲವು ಲೇಖನಗಳನ್ನು ನೇರವಾಗಿ ಮರುಪ್ರಕಟಿಸಿದ್ದು ಇದರಲ್ಲಿ ಹೆಚ್ಚಿನವು ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ಮತ್ತು ಭಾರತಕ್ಕೆ ಸಂಬಂಧಿಸಿದ ಲೇಖನಗಳಾಗಿತ್ತು. ಈ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕಿದಾಗ , ಇಪಿ ಟುಡೆ ಎಂಬುದು ಭಾರತದ ಪಾಲುದಾರರ ಸಂಸ್ಥೆಯಾಗಿದೆ ಎಂಬುದು ತಿಳಿದುಬಂದಿದೆ. ಇದು ಚಿಂತಕರು, ಎನ್‌ಜಿಒಗಳು ಹಾಗೂ ಶ್ರೀವಾಸ್ತವ ಸಮೂಹಸಂಸ್ಥೆಗಳ ಪ್ರತಿನಿಧಿಗಳ ಬೃಹತ್ ಜಾಲಬಂಧದೊಡನೆ ಸಂಪರ್ಕ ಹೊಂದಿದೆ. ಹೊಸದಿಲ್ಲಿ ಮೂಲದ ಈ ಸಂಸ್ಥೆ ತನ್ನ ಆಸ್ತಿಯ ಪಟ್ಟಿಯಲ್ಲಿ ‘ನ್ಯೂ ಡಿಲ್ಲಿ ಟೈಮ್ಸ್’ನ ಹೆಸರನ್ನೂ ಹೊಂದಿದೆ ಮತ್ತು ‘ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನಾನ್ ಅಲೈನ್ಡ್ ಸ್ಟಡೀಸ್’(ಐಐಎನ್‌ಎಎಸ್) ಎಂಬ ಚಿಂತಕರ ಚಾವಡಿಯನ್ನೂ ನಿರ್ವಹಿಸುತ್ತಿದೆ ಎಂಬುದು ತಿಳಿದುಬಂದಿದೆ. ಶ್ರೀನಗರಕ್ಕೆ ಅಕ್ಟೋಬರ್ 30ರಂದು ಭೇಟಿ ನೀಡಿದ ಯುರೋಪಿಯನ್ ಸಂಸದರ ನಿಯೋಗದ ಪ್ರಯಾಣ ವೆಚ್ಚ, ವಾಸ್ತವ್ಯ ವೆಚ್ಚವನ್ನು ಐಐಎನ್‌ಎಎಸ್ ಪಾವತಿಸಿದೆ ಎನ್ನಲಾಗಿದೆ. ತಾನು ಅಂತರಾಷ್ಟ್ರೀಯ ವ್ಯಾಪಾರ ದಲ್ಲಾಳಿ ಎಂದು ಹೇಳಿಕೊಳ್ಳುತ್ತಿರುವ ಮದಿ ಶರ್ಮ ಎಂಬ ಮಹಿಳೆ ಯುರೋಪಿಯನ್ ಸಂಸದರ ಪ್ರವಾಸವನ್ನು ವ್ಯವಸ್ಥೆ ಮಾಡಿದ್ದಾರೆ.

ಕಳೆದ ವಾರ ಟೈಮ್ಸ್ ಆಫ್ ಜಿನೇವ ಎಂಬ ಆನ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಕಾಶ್ಮೀರ ಸಮಸ್ಯೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ವೀಡಿಯೊ ಸಾಕ್ಷಿ ಸಹಿತ ವಿವರಿಸಲಾಗಿತ್ತು. ಈ ಆನ್‌ಲೈನ್ ಪತ್ರಿಕೆಯೂ ಶ್ರೀವಾಸ್ತವ ಸಮೂಹ ಸಂಸ್ಥೆಗಳ ಸಂಪರ್ಕ ಜಾಲದ ಒಂದು ಭಾಗವಾಗಿದೆ ಎಂಬ ಮಾಹಿತಿಯನ್ನೂ ಕಲೆಹಾಕಲಾಗಿದೆ.

ಈ ಎನ್‌ಜಿಒಗಳ ಹಾಗೂ ಚಿಂತಕರ ಚಾವಡಿಯ ವೆಬ್‌ಸೈಟ್‌ಗಳು ಒಂದೇ ಸರ್ವರ್‌ಗೆ ಸಂಬಂಧಿಸಿವೆ. ಅಲ್ಲದೆ ವೆಬ್‌ಸೈಟ್ ನೋಂದಣಿ ವಿಳಾಸ, ಇಮೇಲ್ ವಿಳಾಸ ಮತ್ತು ಡೊಮೈನ್ ಹೆಸರಿನ ಮಧ್ಯೆ ಸಂಪರ್ಕವಿದೆ. ಅಲ್ಲದೆ ಇಪಿ ಟುಡೆ ಮತ್ತು ಟೈಮ್ಸ್ ಆಫ್ ಜಿನೆವಾ ಹಾಗೂ ‘4ನ್ಯೂಸ್‌ಏಜೆನ್ಸಿ.ಕಾಮ್’ ಎಂಬ ಸುಳ್ಳು ಸುದ್ದಿ ವೆಬ್‌ಸೈಟ್‌ಗಳ ನಡುವಿನ ಸಂಬಂಧವೂ ಬಹಿರಂಗಗೊಂಡಿದೆ. ತನ್ನನ್ನು ಲಾಭಕ್ಕಾಗಿ ಕಾರ್ಯ ನಿರ್ವಹಿಸದ ಎನ್‌ಜಿಒ ಸಂಸ್ಥೆಯೆಂದು ಹೇಳಿಕೊಳ್ಳುತ್ತಿರುವ 4ನ್ಯೂಸ್‌ಏಜೆನ್ಸಿ.ಕಾಮ್‌ನ ಟ್ವೀಟ್‌ಗಳು ಹಾಗೂ ಯೂ ಟ್ಯೂಬ್ ವೀಡಿಯೊಗಳಲ್ಲಿ ಹೆಚ್ಚಿನವು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸ್ಥಿತಿಗತಿ, ಅಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಎತ್ತಿ ತೋರುವುದಕ್ಕೇ ಆದ್ಯತೆ ನೀಡುತ್ತವೆ ಎಂದು ಇಯು ಡಿಸ್ ಇನ್ ಫೊ ಲ್ಯಾಬ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News