ಎಂಟು ಸದಸ್ಯರ ಭಾರತ ತಂಡ ಪ್ರಕಟಿಸಿದ ಎಐಟಿಎ

Update: 2019-11-15 04:58 GMT

ಹೊಸದಿಲ್ಲಿ, ನ.14: ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್ ಪಂದ್ಯಕ್ಕೆ ಭಾರತ ತಂಡ ಗುರುವಾರ 8 ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ. ಪಾಕಿಸ್ತಾನಕ್ಕೆ ತೆರಳಲು ಹಿಂಜರಿಯುತ್ತಿರುವ ಸ್ಟಾರ್ ಆಟಗಾರರ ಜೊತೆಗೆ ಯಾವುದೇ ಸ್ಥಳದಲ್ಲೂ ಪಂದ್ಯ ನಡೆದರೂ ಆಡಲು ಸಿದ್ಧವಿರುವ ಆಟಗಾರರಿಗೆ ತಂಡದಲ್ಲಿ ಮಣೆ ಹಾಕಲಾಗಿದೆ.

ಹಿರಿಯ ಟೆನಿಸ್ ಪಟು ಲಿಯಾಂಡರ್ ಪೇಸ್ ಒಂದು ವರ್ಷದ ಬಳಿಕ ಭಾರತೀಯ ಟೆನಿಸ್ ತಂಡಕ್ಕೆ ವಾಪಸಾಗಿದ್ದಾರೆ. ಸ್ಟಾರ್ ಆಟಗಾರರಾದ ಸುಮಿತ್ ನಗಾಲ್, ರಾಮಕುಮಾರ್ ರಾಮನಾಥನ್, ಶಶಿ ಕುಮಾರ್ ಮುಕುಂದ್ ಹಾಗೂ ರೋಹನ್ ಬೋಪಣ್ಣ ನ.29-30ರ ತನಕ ನಡೆಯುವ ಡೇವಿಸ್ ಕಪ್‌ಗೆ ಆಯ್ಕೆಯಾಗಿದ್ದಾರೆ. ಡೇವಿಸ್ ಕಪ್ ನಡೆಯುವ ಸ್ಥಳ ಇನ್ನೂ ಅಂತಿಮವಾಗಿಲ್ಲ.

 ನಗಾಲ್, ಬೋಪಣ್ಣ ,ರಾಮನಾಥನ್ ಹಾಗೂ ಮುಕುಂದ್ ಭದ್ರತೆಯ ಭೀತಿಯಿಂದಾಗಿ ಪಾಕಿಸ್ತಾನಕ್ಕೆ ತೆರಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ಪ್ರಕಟಿಸಿರುವ ತಂಡದಲ್ಲಿ ಜೀವನ್ ನೆಡುನ್‌ಚೆಝಿಯನ್, ಸಾಕೇತ್ ಮೈನೇನಿ ಹಾಗೂ ಸಿದ್ದಾರ್ಥ್ ರಾವತ್ ಸ್ಥಾನ ಪಡೆದಿದ್ದಾರೆ. ಪ್ರಮುಖ ಆಟಗಾರರು ಪಾಕ್‌ಗೆ ತೆರಳಲು ನಿರಾಕರಿಸಿದರೆ ಈ ಮೂವರು ಆಟಗಾರರು ಪಾಕ್‌ಗೆ ತೆರಳಲು ಬಯಸಿದ್ದಾರೆ.

ಎಐಟಿಎ ಐದು ಸದಸ್ಯರ ಮುಖ್ಯ ತಂಡಗಳ ಜೊತೆಗೆ ಒಂದು ಅಥವಾ ಎರಡು ಮೀಸಲು ಆಟಗಾರರನ್ನು ಆಯ್ಕೆ ಮಾಡಿದೆ. ಇಸ್ಲಾಮಾಬಾದ್‌ನಿಂದ ಡೇವಿಸ್ ಕಪ್‌ನ್ನು ತಟಸ್ಥ ತಾಣಕ್ಕೆ ಸ್ಥಳಾಂತರಿಸುವುದನ್ನು ಪ್ರಶ್ನಿಸಿ ಪಾಕಿಸ್ತಾನ ಟೆನಿಸ್ ಒಕ್ಕೂಟ ಸಲ್ಲಿಸಿರುವ ಮೇಲ್ಮನವಿಯನ್ನು ಐಟಿಎಫ್ ಇನ್ನೂ ಪರಿಗಣನೆಗೆ ತೆಗೆದುಕೊಂಡಿಲ್ಲ. ‘‘ಆಟಗಾರರು ಮಾನಸಿಕವಾಗಿ ಸಿದ್ಧವಾಗಿರಲು ನಾವು ಬಯಸಿದ್ದೇವೆ. ನಮ್ಮನ್ನು ಆಯ್ಕೆ ಮಾಡುತ್ತಾರೋ, ಇಲ್ಲವೋ? ಎಂದು ಆಟಗಾರರು ಹೆಚ್ಚು ಸಮಯ ಕಾಯುವಂತೆ ಮಾಡುವ ಉದ್ದೇಶ ನಮಗಿಲ್ಲ. ಡೇವಿಸ್ ಕಪ್ ಎಲ್ಲೇ ನಡೆಯಲಿ. ಇಂದು ಆಯ್ಕೆ ಮಾಡಿರುವ ಆಟಗಾರರೇ ಇದರಲ್ಲಿ ಭಾಗವಹಿಸಲಿದ್ದಾರೆ’’ ಎಂದು ಆಟವಾಟದ ನಾಯಕ ರೋಹಿತ್ ರಾಜ್‌ಪಾಲ್ ಹೇಳಿದ್ದಾರೆ.

ಅಗ್ರಮಾನ್ಯ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಅನುಪಸ್ಥಿತಿಯಲ್ಲಿ ಭಾರತದ ಸಿಂಗಲ್ಸ್ ಸವಾಲನ್ನು ಫಾರ್ಮ್‌ನಲ್ಲಿರುವ ನಗಾಲ್(127ನೇ ರ್ಯಾಂಕ್) ಹಾಗೂ ರಾಮನಾಥನ್ (190) ಮುನ್ನಡೆಸಲಿದ್ದಾರೆ. ಮುಕುಂದ್(250) ಹಾಗೂ ಮೈನೇನಿ(267)ಮೀಸಲು ಸಿಂಗಲ್ಸ್ ಆಟಗಾರರಾಗಿದ್ದಾರೆ.

ಇದೇ ಮೊದಲ ಬಾರಿ ಮೂವರು ಡಬಲ್ ಸ್ಪೆಷಲಿಸ್ಟ್‌ಗಳಾದ ಬೋಪಣ್ಣ, ಪೇಸ್ ಹಾಗೂ ಜೀವನ್ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News