ಶುಭಂ ರಂಜನೆ ಆಲ್‌ರೌಂಡ್ ಆಟ: ಬಂಗಾಳಕ್ಕೆ ಸೋಲುಣಿಸಿದ ಮುಂಬೈ

Update: 2019-11-15 05:05 GMT

ಮುಂಬೈ, ನ.14: ಆಲ್‌ರೌಂಡರ್ ಶುಭಂ ರಂಜನೆ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಮುಂಬೈ ತಂಡ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಬಂಗಾಳ ತಂಡ ವನ್ನು 3 ವಿಕೆಟ್‌ಗಳ ಅಂತರದಿಂದ ರೋಚಕವಾಗಿ ಮಣಿಸಿತು.

ಶುಭಂ ಔಟಾಗದೆ 30 ರನ್(17 ಎಸೆತ, 5 ಬೌಂಡರಿ) ಗಳಿಸಿದ್ದಲ್ಲದೆ, 17 ರನ್‌ಗೆ ಮೂರು ವಿಕೆಟ್‌ಗಳನ್ನು ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಗೆಲ್ಲಲು 154 ರನ್ ಬೆನ್ನಟ್ಟಿದ ಮುಂಬೈ ಒಂದು ಹಂತದಲ್ಲಿ 105 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು. ಆಗ ಬ್ಯಾಟಿಂಗ್‌ನಲ್ಲಿ ಸಾಹಸ ಮೆರೆದ ಶುಭಂ ಔಟಾಗದೆ 30 ರನ್ ಗಳಿಸಿ ತಂಡಕ್ಕೆ ಕೊನೆಯ ಎಸೆತದಲ್ಲಿ ಗೆಲುವು ತಂದರು. ಇದು ಮುಂಬೈಗೆ ಒಲಿದ ಐದನೇ ಗೆಲುವು. ಡಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈ ಈಗಾಗಲೇ ನಾಕೌಟ್ ಹಂತಕ್ಕೆ ತಲುಪಿದೆ.

ಆತಿಥೇಯ ಮುಂಬೈಗೆ ಕೊನೆಯ ಎಸೆತದಲ್ಲಿ ಗೆಲ್ಲಲು 4 ರನ್ ಅಗತ್ಯವಿತ್ತು. ರಂಜನೆ ರಿವರ್ಸ್ ಸ್ವೀಪ್ ಮಾಡಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದಾಗ ಮುಂಬೈ ಪಾಳಯದಲ್ಲಿ ಸಂಭ್ರಮದ ಅಲೆ ಎದ್ದಿತ್ತು.

 ಮುಂಬೈ ಮಧ್ಯಮ ಕ್ರಮಾಂಕದ ಕುಸಿತಕ್ಕೆ ಒಳಗಾಗುವ ಮೊದಲು ಆರಂಭಿಕ ಆಟಗಾರ ಜೈ ಬಿಶ್ತ್(48, 41 ಎಸೆತ)ಹಾಗೂ ಆದಿತ್ಯ ತಾರೆ(37, 27 ಎಸೆತ)ಮೊದಲ ವಿಕೆಟ್‌ಗೆ 78 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದರು. ಶ್ರೇಯಸ್ ಅಯ್ಯರ್(15), ಸಿದ್ದೇಶ್ ಲಾಡ್(0) ಹಾಗೂ ಶಿವಂ ದುಬೆ(0)ಬೇಗನೆ ಔಟಾದಾಗ ಮುಂಬೈ ದಿಡೀರ್ ಕುಸಿತ ಕಂಡಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಬಂಗಾಳ ತಂಡ ಆರಂಭಿಕ ಆಟಗಾರರಾದ ವಿವೇಕ್ ಸಿಂಗ್(56, 45 ಎಸೆತ)ಹಾಗೂ ಶ್ರೀವಾಸ್ತವ ಗೋಸ್ವಾಮಿ(43, 28 ಎಸೆತ)ಉತ್ತಮ ಆರಂಭ ಒದಗಿಸಿದ ಹೊರತಾಗಿಯೂ 4 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News