ಮುಷ್ತಾಕ್ ಅಲಿ ಟ್ರೋಫಿ: ಜಮ್ಮು-ಕಾಶ್ಮೀರಕ್ಕೆ ಶರಣಾದ ದಿಲ್ಲಿ

Update: 2019-11-15 05:06 GMT

ಸೂರತ್, ನ.14: ಈಗ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಶಿಖರ್ ಧವನ್ ಶೂನ್ಯಕ್ಕೆ ಔಟಾಗಿದ್ದಾರೆ. ಧವನ್ ವೈಫಲ್ಯದಿಂದಾಗಿ ದಿಲ್ಲಿ ತಂಡ ಜಮ್ಮು-ಕಾಶ್ಮೀರದ ವಿರುದ್ಧ 8 ವಿಕೆಟ್‌ಗಳ ಅಂತರದಿಂದ ಆಘಾತಕಾರಿ ಸೋಲುಂಡಿದೆ. ಟೂರ್ನಿಯಲ್ಲಿ ಮೊದಲ ಬಾರಿ ದಿಲ್ಲಿ ಸೋಲಿನ ಕಹಿ ಉಂಡಿದೆ.

 ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ದಿಲ್ಲಿ ತಂಡ ನಿತೀಶ್ ರಾಣಾ(55, 30 ಎಸೆತ, 6 ಸಿಕ್ಸರ್)ಅರ್ಧಶತಕದ ಕೊಡುಗೆಯ ನೆರವಿನಿಂದ 7 ವಿಕೆಟ್‌ಗಳ ನಷ್ಟಕ್ಕೆ 165 ರನ್ ಗಳಿಸಿತು. 166 ರನ್ ಗುರಿ ಬೆನ್ನಟ್ಟಿದ ಜಮ್ಮು ಹಾಗೂ ಕಾಶ್ಮೀರ ತಂಡ 2 ವಿಕೆಟ್ ಕಳೆದುಕೊಂಡು 15.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಆರಂಭಿಕ ಆಟಗಾರರಾದ ಶುಭಂ ಖಜುರಿಯಾ(49 ರನ್, 22 ಎಸೆತ) ಹಾಗೂ ಜತಿನ್ ವಧ್ವಾನ್(ಔಟಾಗದೆ 48, 33 ಎಸೆತ)ಉತ್ತಮ ಆರಂಭ ಒದಗಿಸಿದರೆ, ಮಂಝೂರ್ ದರ್(58 ರನ್,24 ಎಸೆತ)ಕಾಶ್ಮೀರವನ್ನು ಗೆಲುವಿನ ದಡ ಸೇರಿಸಿದರು. ಜಮ್ಮು-ಕಾಶ್ಮೀರ ಟೂರ್ನಿಯಲ್ಲಿ ಮೊದಲ ಬಾರಿ ಜಯಭೇರಿ ಸಾಧಿಸಿತು. ಮಂಝೂರ್ ದರ್ 2018ರ ಆವೃತ್ತಿಯಲ್ಲಿ ಐಪಿಎಲ್ ಫ್ರಾಂಚೈಸಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ, ಒಂದೂ ಪಂದ್ಯವನ್ನು ಆಡಿರಲಿಲ್ಲ. ಗುರುವಾರ ಬಿರುಸಿನ ಬ್ಯಾಟಿಂಗ್ ಮಾಡಿರುವ ದರ್ ಮುಂದಿನ ತಿಂಗಳು ನಡೆಯುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಗಮನ ಸೆಳೆಯುವುದು ನಿಶ್ಚಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News