ಬಿಎಸ್‌ವೈ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ: ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪ

Update: 2019-11-15 12:56 GMT

ಬೆಂಗಳೂರು, ನ. 15: ಅನರ್ಹ ಶಾಸಕರನ್ನು ಸಚಿವರನ್ನಾಗಿ ಮಾಡುತ್ತೇವೆಂದು ಹೇಳುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು, ಅವರ ವಿರುದ್ಧ ಚುನಾವಣಾ ಆಯೋಗ ಸ್ವಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅನರ್ಹರನ್ನು ಶಾಸಕರನ್ನಾಗಿ ಮಾಡಿ, ಅವರಿಗೆ ಸಚಿವ ಸ್ಥಾನವನ್ನು ನೀಡುತ್ತೇವೆಂದು ಹೇಳುವ ಮೂಲಕ ಮತದಾರರನ್ನು ಒಲೈಕೆ ಪ್ರಯತ್ನ ಮಾಡಿದ್ದು, ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಒಂದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ ಎಂದರು.

ವಿಶ್ವಾಸದ್ರೋಹ: ಅನರ್ಹ ಶಾಸಕರಾದ ಶಂಕರ್ ಮತ್ತು ರೋಷನ್ ಬೇಗ್ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಬಿಎಸ್‌ವೈ ವಿಶ್ವಾಸದ್ರೋಹ ಮಾಡಿದ್ದಾರೆ. ಇವರನ್ನು ನಂಬಿ ರಾಜೀನಾಮೆ ನೀಡಿದವರು ಇದೀಗ ಬೀದಿಗೆ ಬಿದ್ದಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ 15 ಮಂದಿಗೂ ಇದೇ ಶಿಕ್ಷೆಯಾಗಲಿದೆ ಎಂದು ಎಚ್ಚರಿಸಿದರು.

ಕ್ಷಮೆಯಾಚಿಸಿ: ಅನರ್ಹರನ್ನು ಸೇರಿಸಿಕೊಳ್ಳುವ ಮೂಲಕ ಬಿಜೆಪಿ ನೈತಿಕವಾಗಿ ಬೆತ್ತಲಾಗಿದೆ. ರಾಜೀನಾಮೆ ನೀಡಿದ ಶಾಸಕರಿಗೂ ನಮಗೂ ಸಂಬಂಧವಿಲ್ಲ ಎನ್ನುತ್ತಿದ್ದ ಬಿಎಸ್‌ವೈ, ಅನರ್ಹರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ ಆಪರೇಷನ್ ಕಮಲ ಮಾಡಿದ್ದನ್ನು ಒಪ್ಪಿಕೊಂಡಂತೆ ಆಗಿದೆ. ಅನರ್ಹರಿಗೆ ಕೊಟ್ಟ ಭರವಸೆ ಈಡೇರಿಸುತ್ತೇವೆ ಎಂದು ಹೇಳಿದ್ದು, ಬಿಎಸ್‌ವೈ ಕೂಡಲೇ ರಾಜ್ಯದ ಜನತೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಸರಕಾರಕ್ಕೆ ಕಪಾಳ ಮೋಕ್ಷ:

‘ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆದ 418 ಸ್ಥಾನಗಳ ಪೈಕಿ 151ರಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಆಡಳಿತಾರೂಢ ಬಿಜೆಪಿಗೆ ಮುಖಭಂಗವಾಗಿದೆ. ನಗರದ ಮತದಾರರು ಬಿಜೆಪಿ ತಿರಸ್ಕರಿಸಿ, ಬಿಎಸ್‌ವೈ ಸರಕಾರಕ್ಕೆ ಕಪಾಳ ಮೋಕ್ಷ ಮಾಡಿದ್ದಾರೆ’

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News