ಕುದುರೆ ರೇಸ್ ದಿಢೀರ್ ಸ್ಥಗಿತ: ಆಕ್ರೋಶಿತರಿಂದ ಗಲಾಟೆ; ಟಿವಿ, ಕುರ್ಚಿಗಳು ಜಖಂ

Update: 2019-11-15 16:13 GMT

ಬೆಂಗಳೂರು, ನ.15: ಏಕಾಏಕಿ ಕುದುರೆ ರೇಸ್ ಸ್ಥಗಿತಗೊಳಿಸಿದ ಪರಿಣಾಮ, ಹಣ ಕಟ್ಟಿದ್ದ ಹಲವರು ಗಲಾಟೆ ನಡೆಸಿ, ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಇಲ್ಲಿನ ರೇಸ್‌ಕೋರ್ಸ್ ಬಳಿ ನಡೆದಿದೆ.

ನಗರದ ರೇಸ್ ಕೋರ್ಸ್‌ನಲ್ಲಿ ರೇಸಿಂಗ್ ವೇಳೆಯಲ್ಲಿ ಮೂರು ಕುದುರೆ ಮತ್ತು ಮೂವರು ಜಾಕಿಗಳು ಗಾಯಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ಒಟ್ಟು ಆರು ಕುದುರೆ ರೇಸ್‌ಗಳನ್ನು ದಿಢೀರ್ ಸ್ಥಗಿತಗೊಳಿಸಲಾಗಿತ್ತು.

ಇದರಿಂದ ಆಕ್ರೋಶಗೊಂಡ ಅನೇಕರು, ಸ್ಥಳದಲ್ಲಿದ್ದ ಟಿವಿ, ಕುರ್ಚಿಗಳನ್ನು ಜಖಂಗೊಳಿಸಿ, ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದರು. ರೇರ್ಸ್‌ನಲ್ಲಿ ಹಣ ಕಳೆದುಕೊಂಡಿದ್ದವರು ಉಳಿದ ಆರು ರೇಸ್‌ಗಳನ್ನು ನಿಲ್ಲಿಸಿದ್ದಕ್ಕೆ ಹೀಗೆ ಮಾಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಘಟನೆಗೆ ಟರ್ಫ್ ಕ್ಲಬ್ ಆಡಳಿತ ಮಂಡಳಿಯ ನಿರ್ಲಕ್ಷವೇ ಕಾರಣ ಎನ್ನುವ ಗಂಭೀರ ಆರೋಪ ಕೇಳಿಬಂದಿದ್ದು, ಐದು ದಿನಗಳ ಹಿಂದೆಯೂ, ಜಾಕಿಗಳು ಟ್ರಾಕ್ ಸರಿಯಿಲ್ಲ ಎಂದು ಮಾಹಿತಿ ನೀಡಿದ್ದಲ್ಲದೆ, ಕುದುರೆಗಳು ಗಾಯಗೊಳ್ಳಲಿವೆ ಎಂದು ದೂರು ನೀಡಿದ್ದರು ಎನ್ನಲಾಗಿದೆ.

ದೂರನ್ನು ಲೆಕ್ಕಿಸದೆ, ರೇಸ್ ನಡೆಸಿರುವ ಪರಿಣಾಮದಿಂದಾಗಿ ‘ವಿಲ್‌ಟುವಿನ್’ಎಂಬ ಕುದುರೆ ಬಿದ್ದು ಕಾಲು ಮುರಿದುಕೊಂಡಿದೆ. ಈ ಕುದುರೆ ಹಿಂದೆ ಬರುತ್ತಿದ್ದ ಮತ್ತೆರಡು ಕುದುರೆಗಳೂ ಬಿದ್ದು ಗಾಯಗೊಂಡಿವೆ ಹಾಗೂ ಜಾಕಿಗಳಿಗೂ ಗಾಯಗಳಾಗಿವೆ ಆರೋಪಿಸಲಾಗಿದೆ. ಹೀಗಾಗಿ, ಈ ಕುದುರೆ ಮೇಲೆ ಹಣ ಕಟ್ಟಿದವರು ಗಲಾಟೆ ನಡೆಸಿದರು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ರೇಸ್‌ಕೋರ್ಸ್ ವ್ಯಾಪ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News