ಬಿಲ್ಡರ್ಸ್‌ಗಳ ಸಮಸ್ಯೆ ಬಗ್ಗೆ ಚರ್ಚಿಸಲು ಸಿಎಂ ಜೊತೆ ಸಭೆ: ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್

Update: 2019-11-15 17:01 GMT

ಬೆಂಗಳೂರು, ನ.15: ಬಿಲ್ಡರ್ಸ್‌ಗಳು ಪ್ರಸಕ್ತ ಸಂದರ್ಭದಲ್ಲಿ ಆರ್ಥಿಕವಾಗಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ನಗರ ನಿರ್ಮಾಣಕ್ಕೆ ಹಲವು ರೀತಿಯ ಕೊಡುಗೆ ನೀಡುವ ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಯೊಂದಿಗೆ ಸಭೆ ಆಯೋಜಿಸಲಾಗುವುದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.

ನಗರದ ಎನ್‌ಜಿವಿ ಕ್ಲಬ್‌ನಲ್ಲಿ ಬಿಲ್ಡಿಂಗ್ ಕ್ಷೇತ್ರದ ಎಲ್ಲ ವಿಭಾಗದ ಕಾರ್ಮಿಕರು ಹಾಗೂ ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಆಯೋಜಿಸಿದ್ದ ಬಿಲ್ಡರ್ಸ್ ಡೇ ಕಾರ್ಯಕ್ರಮದಲ್ಲಿ ಹಿರಿಯ ಬಿಲ್ಡರ್ಸ್‌ಗಳಿಗೆ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಾದ್ಯಂತ ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದ ನಂತರದ ಆರ್ಥಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಬಿಲ್ಡರ್‌ಗಳು ತಾವು ನಿರ್ಮಿಸಿದ ಫ್ಲಾಟ್‌ಗಳು ಮಾರಾಟವಾಗದೇ ಉಳಿದುಕೊಂಡಿವೆ. ಇದರ ಪರಿಣಾಮ ಬಿಲ್ಡರ್‌ಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅದರಲ್ಲಿಯೂ ಮಧ್ಯಮ ವರ್ಗದ ಬಿಲ್ಡರ್‌ಗಳು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರದಿಂದ ಆಗಬಹುದಾದ ಅನುಕೂಲಗಳ ಕುರಿತು ಸಿಎಂ ಜೊತೆ ಚರ್ಚಿಸಲು ಶೀಘ್ರದಲ್ಲಿಯೇ ಸಭೆ ಆಯೋಜಿಸಲಾಗುವುದು ಎಂದು ನುಡಿದರು.

ನಗರದ ಅಭಿವೃದ್ಧಿ ಇಂದಿನ ಸರಕಾರ ಬದ್ಧವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ. ಕೋಟ್ಯಂತರ ರೂ.ಗಳು ಹಣ ವ್ಯಯಿಸಿ, ನಗರವನ್ನು ಮತ್ತಷ್ಟು ಅಭಿವೃದ್ಧಿಗೆ ಮುಂದಾಗಿದ್ದಾರೆ. ಸರಕಾರದ ಯೋಜನೆಗಳನ್ನು ಪೂರೈಸಲು ಹಾಗೂ ಅನುಷ್ಠಾನಗೊಳಿಸಲು ಬಿಲ್ಡರ್ಸ್‌ಗಳ ಅವಶ್ಯಕತೆ ಬಹಳಷ್ಟಿದೆ. ಈ ಕ್ಷೇತ್ರದಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಬಿಲ್ಡರ್ಸ್ ಅಸೋಸಿಯೇಷನ್ ಬೆಂಗಳೂರು ಶಾಖೆ ಅಧ್ಯಕ್ಷ ಎಸ್.ಶಿವಪ್ರಕಾಶ್ ಮಾತನಾಡಿ, ನಗರದಲ್ಲಿರುವ ಬಿಲ್ಡರ್ಸ್‌ಗಳ ಸಮಸ್ಯೆಗಳನ್ನು ಸರಕಾರ ಪರಿಹರಿಸಲು ಮುಂದಾಗಬೇಕು. ಇತ್ತೀಚಿನ ದಿನಗಳಲ್ಲಿ ಬಿಲ್ಡರ್ಸ್‌ಗಳು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಹಾನರಿಂಗ್ ಆಫ್ ಆರ್ಟಿಸನ್ಸ್ ಡೇ ಪ್ರಯುಕ್ತ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ವಿವಿಧ ಕಂಪೆನಿಗಳ ಕಾರ್ಮಿಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಆಯುಕ್ತ ಕೆ.ಜಿ.ಶಾಂತಾರಾಮ್ ಬಹುಮಾನ ವಿತರಿಸಿದರು. ಇದೇ ವೇಳೆ ಹಿರಿಯ ಬಿಲ್ಡರ್ ಕೆ.ಅಪ್ಪಿರೆಡ್ಡಿಗೆ ವಿಶ್ವೇಶ್ವರಯ್ಯ ಪ್ರಶಸ್ತಿ ನೀಡಲಾಯಿತು. ಅಲ್ಲದೆ, ಕೆ.ಮುನಿಸ್ವಾಮಿ ರಾಜು, ಕೆ.ಬಸವನಗೌಡ, ಎನ್.ಕುಪೇಂದ್ರರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಬಿಲ್ಡರ್ಸ್ ಸಂಘದ ಬೆಂಗಳೂರು ಶಾಖೆ ಉಪಾಧ್ಯಕ್ಷ ಬಿ.ಎಂ.ನಟರಾಜ್, ಕಾರ್ಯದರ್ಶಿ ವಿ.ಎಲ್.ಮುನಿರಾಜ್, ಜಂಟಿ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News